ಗೌರವಯುತ ಬದುಕಿಗಾಗಿ ಕನಿಷ್ಠ ಸಂಬಳ, ಉದ್ಯೋಗ ಭದ್ರತೆ ಕೊಡಿ; ಮೀನಾಕ್ಷಿ ಸುಂದರಂ

ಕಲಬುರಗಿ: ‘ಬಡವರು, ಅಸಂಘಟಿತ ಕಾರ್ಮಿಕರು, ಗುತ್ತಿಗೆ ನೌಕರರು ಬದುಕುಳಿಯಲು ಕನಿಷ್ಠ ಸಂಬಳ ಮತ್ತು ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಉದ್ಯೋಗದ ಭದ್ರತೆಯಾದರೂ ಕಲ್ಪಿಸಬೇಕು’ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್‌ನ(ಸಿಐಟಿಯು) ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ರಾಜ್ಯ ಅಕ್ಷರ ದಾಸೋಹ ನೌಕರರ 5ನೇ ರಾಜ್ಯ ಸಮ್ಮೇಳನದ ಪ್ರಯುಕ್ತ ಮಾರ್ಕೆಟ್‌ ಪ್ರದೇಶದಲ್ಲಿ ಮಂಗಳವಾರ ನಡೆದ ಬಹಿರಂಗ ಸಭೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೀನಾಕ್ಷಿ ಸುಂದರಂ ಮಾತನಾಡಿದರು.

‘ಚುನಾವಣೆಗೂ ಮುನ್ನ ಆಡಳಿತರೂಢ ಪಕ್ಷವು ಸ್ವರ್ಗವನ್ನೇ ಭೂಮಿಗೆ ತರುವಂತಹ ಆಶ್ವಾಸನೆಗಳನ್ನು ನೀಡಿತ್ತು. ಗೆದ್ದ ಬಳಿಕ ಬೇಡಿಕೆಗಳು ಈಡೇರಿಸುವಂತೆ ಜನರು ಕೇಳಿದರೆ, ಅದು ನೆಹರೂ, ಬ್ರಿಟಿಷರತ್ತ ಕೈತೋರಿಸುತ್ತಿದೆ. ನಮಗೆ ಸ್ವರ್ಗ ಬೇಡ, ಬಡವರು ಗೌರವಯುತವಾಗಿ ಬದುಕವಂತಹ ಕನಿಷ್ಠ ಸೌಕರ್ಯಗಳಾದರೂ ಕೊಡಿ’ ಎಂದು ಆಗ್ರಹಿಸಿದರು.

‘ಇವತ್ತು ದೇವಸ್ಥಾನ, ದೇವರು, ಸರ್ಕಾರಗಳು ನಡೆಯುತ್ತಿರುವುದು ಬಡವರ ಹಣದಿಂದ. ಬಡವರಿಂದ ಹಣ ದೋಚಿ ಅವರಿಗೆ ಜಾತಿ, ಧರ್ಮದ ಬೋಧನೆ ಮಾಡುತ್ತಿವೆ. ಮತ ಪಡೆಯುವಾಗ ಎಲ್ಲರೂ ಒಂದೇ ಎಂದವರು, ಪರಿಹಾರ ಕೇಳಲು ಹೋದವರನ್ನು ಧರ್ಮ, ಜಾತಿ, ನಾಡು, ನುಡಿ, ಪ್ರಾದೇಶಿಕತೆ ಹೆಸರಲ್ಲಿ ವಿಭಜಿಸುತ್ತಿವೆ’ ಎಂದು ಟೀಕಿಸಿದರು.

‘ನಮ್ಮ ಬದುಕಿನ ಪ್ರತಿ ಕ್ಷಣವನ್ನು ತೆರಿಗೆ ಪಾವತಿ ರೂಪದಲ್ಲಿ ಸವೆಸುತ್ತಿದ್ದೇವೆ. ತಿನ್ನುವ ಅನ್ನ, ಕುಡಿಯುವ ಪದಾರ್ಥಗಳ ಮೇಲೆ ತೆರಿಗೆ ಕಟ್ಟುತ್ತಿದ್ದೇವೆ. ಮುಂದೊಂದು ದಿನ ಉಸಿರಾಡುವ ಗಾಳಿಗೂ ತೆರಿಗೆ ಹಾಕಿದರೆ ಅಚ್ಚರಿಯಿಲ್ಲ. ಆದರೆ, ಸಿರಿವಂತರಿಗೆ ತೆರಿಗೆಯಿಂದ ವಿನಾಯಿತಿ ಕೊಡುವುದು ಮಾತ್ರ ಸರ್ಕಾರ ನಿಲ್ಲಿಸಿಲ್ಲ’ ಎಂದು ಆರೋಪಿಸಿದರು.

‘ಸರ್ಕಾರದ ಇಂದಿನ ನೀತಿಗಳು ಹೀಗೆಯೇ ಮುಂದುವರಿದರೆ ನಾಳೆಯ ನಮ್ಮ ಮಕ್ಕಳಿಗೆ ಉದ್ಯೋಗ ಸಿಗುವುದಿಲ್ಲ. ಹೀಗಾಗಿ, ನಮ್ಮ ಮಕ್ಕಳ ಶಿಕ್ಷಣ, ಆರೋಗ್ಯ, ಉದ್ಯೋಗ, ಜೀವನ ಸುರಕ್ಷತೆಗಾಗಿ ಹೋರಾಟ ಮಾಡಬೇಕಿದೆ’ ಎಂದು ಅವರು ಹೇಳಿದರು.

ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಗೌರವ ಅಧ್ಯಕ್ಷೆ ಎಸ್. ವರಲಕ್ಷ್ಮಿ ಮಾತನಾಡಿ, ‘ಬಿಸಿಯೂಟದ ಅಡುಗೆ ಸಿಬ್ಬಂದಿ ಕನಿಷ್ಠ ವೇತನ ಇಲ್ಲದೆ ಹಲವು ವರ್ಷಗಳಿಂದ ದುಡಿಯುತ್ತಿದ್ದಾರೆ. ದಿನಕ್ಕೆ 6 ಗಂಟೆ ದುಡಿಸಿಕೊಳ್ಳುವ ಸರ್ಕಾರ, 4 ಗಂಟೆಗಳ ಲೆಕ್ಕದಲ್ಲಿ ದಿನಗೂಲಿ ಕೊಡುತ್ತಿದೆ’ ಎಂದರು.

‘ಶಾಲಾ ಪಠ್ಯಪುಸ್ತಕಗಳ ಬದಲಾವಣೆ, ತರಗತಿಗಳಲ್ಲಿ ಭಗವದ್ಗೀತೆ ಬೋಧನೆಯ ಚಿಂತನೆ, ಸನ್ಯಾಸಿಗಳಿಂದ ಸಲಹೆ ಪಡೆಯುವಲ್ಲಿ ಮುಳುಗಿರುವ ಶಿಕ್ಷಣ ಸಚಿವರಿಗೆ ಬಿಸಿಯೂಟದ ಅಡುಗೆ ಸಿಬ್ಬಂದಿಯ ಕಷ್ಟಗಳು ಕಾಣಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಧಾರ್ಮಿಕ ಸ್ಥಳಗಳಿಗೆ ತೆರಳುವ ಯಾತ್ರಿಕರ ಪ್ರಯಾಣಕ್ಕೆ, ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ಸರ್ಕಾರವೇ ಮುಂದೆ ನಿಂತು ಸಬ್ಸಿಡಿಗಳನ್ನು ಕೊಡುತ್ತಿದೆ. ತನ್ನ ಯೋಜನೆಯ ಭಾಗವಾಗಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕಕರಿಗೆ ಕನಿಷ್ಠ ವೇತನ ಕೊಡುತ್ತಿಲ್ಲ. ತನ್ನ ಅನಗತ್ಯ ಖರ್ಚುಗಳನ್ನು ಕೈಬಿಟ್ಟರೆ ಲಕ್ಷಾಂತರ ಗುತ್ತಿಗೆ ನೌಕರರು ನೆಮ್ಮದಿಯ ಬದುಕು ಕಟ್ಟಿಕೊಳ್ಳತ್ತಾರೆ’ ಎಂದರು.

ಬಹಿರಂಗ ಸಭೆಯ ಪೂರ್ವಭಾವಿಯಾಗಿ ನಗರದ ಕನ್ನಡ ಭವನದಿಂದ ಡಿಸಿ ಕಚೇರಿ, ಜಗತ್ ವೃತ್ತ ಮಾರ್ಗವಾಗಿ ಸಾವಿರಾರು ಅಕ್ಷರ ದಾಸೋಹ ನೌಕರರು ಮಾರ್ಕೆಟ್‌ ಪ್ರದೇಶದವರೆಗೆ ಮೆರವಣಿಗೆ ನಡೆಸಿದರು.

ಸಂಘದ ರಾಜ್ಯ ಸಮಿತಿ ಅಧ್ಯಕ್ಷೆ ಲಕ್ಷ್ಮಿದೇವಿ ಅಧ್ಯಕ್ಷತೆ ವಹಿಸಿದ್ದರು. ಜನವಾದಿ ಮಹಿಳಾ ಸಂಘಟನಾ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ, ಸಿಐಟಿಯು ಜಿಲ್ಲಾ ಸಮಿತಿ ಅಧ್ಯಕ್ಷೆ ಶಾಂತಾ ಎನ್.ಘಂಟೆ, ಪ್ರಧಾನ ಕಾರ್ಯದರ್ಶಿ ಎಂ.ಬಿ.ಸಜ್ಜನ್, ಸಂಚಾಲಕಿ ಎಚ್‌.ಎಸ್‌.ಸುನಂದಾ, ಸಂಘದ ಜಿಲ್ಲಾ ಅಧ್ಯಕ್ಷೆ ಗೌರಮ್ಮ ಪಾಟೀಲ, ಖಜಾಂಚಿ ಮಹಾದೇವಮ್ಮ, ಉಪಾಧ್ಯಕ್ಷೆ ಸಿದ್ದಮ್ಮ, ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ, ಮುಖಂಡಾರದ ವಿಜಯಲಕ್ಷ್ಮಿ, ಸಂಗೀತಾ ಗುತ್ತೇದಾರ, ರೇಖಾ ರಂಗನ್ ಇದ್ದರು.

 

ರಾಜ್ಯ ಸಮ್ಮೇಳನದಲ್ಲಿ ಕಂಡುಬಂದ ದೃಶ್ಯಗಳು

 

Donate Janashakthi Media

Leave a Reply

Your email address will not be published. Required fields are marked *