ದೇವದುರ್ಗ: ಸಿಐಟಿಯು ಸಂಯೋಜಿತ ಅಂಗನವಾಡಿ ನೌಕರರು ಹೆಚ್ಚುವರಿ ಗೌರವಧನ ಕೊಡಬೇಕು. ಪೋಷಣ ಅಭಿಯಾನ ಹಣ ಕೊಡಬೇಕು ಎಂಬ ಇತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕೆಂದು ತಾಲೂಕು ಪಂಚಾಯತಿ ಮುಂಭಾಗ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು)ದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಅಂಗನವಾಡಿ ನೌಕರರು, ಮಾತೃವಂದನ, ಅಡುಗೆ ಸಾಮಗ್ರಿಗಳು, ತರಕಾರಿ ಹಣ ಕೊಡಬೇಕು. ಖಾಲಿ ಇರುವ ಕೇಂದ್ರಗಳಿಗೆ ವರ್ಗಾವಣೆ ಮಾಡಬೇಕು ಮತ್ತು ನೌಕರರನ್ನು ನೇಮಕಾತಿ ಮಾಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಉಚ್ಚ ನ್ಯಾಯಾಲಯದ ಆದೇಶದಂತೆ ಪಾರ್ವತಿ ಕಾರ್ಯಕರ್ತೆಗೆ ಉದ್ಯೋಗ ಕೊಡಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಗೆ ಸ್ಪಂದಿಸಿ ತಾಲೂಕು ಪಂಚಾಯತಿ ಇಒ ಪಂಪಾಪತಿ ಹಿರಿಮಠ, ಎಸಿಡಿಪಿಒ ನಾಗರತ್ನ ಹಾಗೂ ಹಿರಿಯ ಮೇಲ್ವಿಚಾರಕಿ ಗಂಗಮ್ಮ ಅವರು ಮಾತುಕತೆ ನಡೆಸಿ ಎಲ್ಲಾ ಸಮಸ್ಯೆ ಒಂದು ತಿಂಗಳಿನಲ್ಲಿ ಬಗೆಹರಿಸುತ್ತೇವೆ ಎಂದು ಲಿಖಿತ ಭರವಸೆ ಕೊಟ್ಟರು.
ಪ್ರತಿಭಟನೆಯ ನೇತೃತ್ವವನ್ನು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ರಂಗಮ್ಮ ಅನ್ವರ್, ಕಾರ್ಯದರ್ಶಿ ರಮಾದೇವಿ, ಖಜಾಂಚಿ ಈಶಮ್ಮ ಊಟಿ, ಮುಖಂಡರಾದ ಚಂದ್ರಕಲಾ, ಶಕೀಲಾ ಬೇಗಂ, ರಾಧಿಕಾ, ಲಕ್ಷ್ಮೀ, ನಿರ್ಮಲ, ಲೀಲಾವತಿ, ಸಿಐಟಿಯು ತಾಲೂಕು ಸಂಚಾಲಕ ಗಿರಿಯಪ್ಪ ಪೂಜಾರಿ ವಹಿಸಿದ್ದರು.