ಬಿಜೆಪಿಗೆ ಗೋವುಗಳ ಬಗ್ಗೆ ಕಾಳಜಿ ಇಲ್ಲ. ರಾಜಕೀಯ ಲಾಭಕ್ಕಾಗಿ ಕಾಯ್ದೆ ಜಾರಿ
ಬೆಂಗಳೂರು ಜ 17 : ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ (ಗೋಹತ್ಯೆ ನಿಷೇಧ ಕಾಯ್ದೆ) ಮತ್ತು ಸಂರಕ್ಷಣಾ ಕಾಯ್ದೆಯು ಸೋಮವಾರದಿಂದ ರಾಜ್ಯದಲ್ಲಿ ಜಾರಿಯಾಗಲಿದೆ. ಪಶುಸಂಗೋಪನಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಬಿ.ಎನ್ ಪ್ರವೀಣ್ ಆದೇಶ ಹೊರಡಿಸಿದ್ದು, ರಾಜ್ಯಪತ್ರವನ್ನು ಪ್ರಕಟಿಸಲಾಗಿದೆ.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜನವರಿ 18 ರಿಂದ ಜಾರಿಗೆ ಬರಲಿದ್ದು, ನಿಯಮಗಳನ್ನು ರೂಪಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಜಾನುವಾರು ಸಾಗಾಣಿಕೆ ಸಂಬಂಧಿಸಿದಂತೆ ಕೂಡಲೇ ನಿಯಮಗಳನ್ನು ರೂಪಿಸಿ ಜಾರಿಗೊಳಿಸಲಾಗುವುದು. ರಾಜ್ಯದಲ್ಲಿ ರೈತರು, ಕೃಷಿ ಉದ್ದೇಶಕ್ಕಾಗಿ ಜಾನುವಾರು ಸಾಗಣೆ ಮಾಡುವವರು ಯಾವುದೇ ಕಾರಣಕ್ಕೂ ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೃಷಿ ಉದ್ದೇಶಕ್ಕಾಗಿ ಜಾನುವಾರು ಸಾಗಾಣೆ ಮಾಡುವವರು ತಮ್ಮ ಸಂಪೂರ್ಣ ವಿಳಾಸ, ಆಧಾರ್ ಸಂಖ್ಯೆ, ಮೊಬೈಲ್ಸಂಖ್ಯೆ, ಸಾಗಾಣೆ ಉದ್ದೇಶ, ಜಾನುವಾರುಗಳ ವಯಸ್ಸು ಸೇರಿದಂತೆ ದೃಢೀಕರಣ ನೀಡಬೇಕು ಎಂದು ಸೂಚಿಸಲಾಗಿದೆ.
ಪೊಲೀಸ್ ಇಲಾಖೆಯು ಗೋವುಗಳ ಸಂರಕ್ಷಣೆಯಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆಗಳು(ಎನ್ಜಿಒ) ಹಾಗೂ ಪ್ರಾಣಿ ಕಲ್ಯಾಣ ಮಂಡಳಿಯ ಜೊತೆಗೆ ಕೈಜೋಡಿಸಲು ಹಾಗೂ ಎಲ್ಲ ಹಂತಗಳಲ್ಲಿ ಕಾಯ್ದೆಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಅಲ್ಲದೆ, ಗೋಹತ್ಯೆ, ಅಕ್ರಮ ಸಾಗಾಟದ ಮೇಲೆ ಪೊಲೀಸ್ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆ ಹೆಚ್ಚು ನಿಗಾವಹಿಸಬೇಕು ಎಂದು ಅವರು ತಿಳಿಸಿದ್ದಾರೆ.
ಗೋವುಗಳ ಹತ್ಯೆ ಹಾಗೂ ಅಕ್ರಮ ಸಾಗಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಕ್ರಮ ಗೋವುಗಳ ಸಾಗಾಟ ಮತ್ತು ವಧೆ ಆಗುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆ ಅಥವಾ ಆ ಜಿಲ್ಲೆ ಅಥವಾ ತಾಲೂಕಿನ ವ್ಯಾಪ್ತಿಯ ಪಶುಪಾಲನಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲು ಸಾರ್ವಜನಿಕರಿಗೆ ಮನವಿ ಮಾಡುತ್ತೇನೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಅವರು ಮನವಿ ಮಾಡಿಕೊಂಡಿದ್ದಾರೆ.
ಇದು ಗೋವುಗಳ ಬಗ್ಗೆ ಕಾಳಜಿ ತೀರುತ್ತಿರುವುದು ಅಲ್ಲ, ಭಾವನಾತ್ಮಕವಾಗಿ ರಾಜಕೀಯ ಲಾಭ ಪಡೆಯುವ ಉದ್ದೇಶ ಇದಾಗಿದೆ ಎಂದು ಪ್ರಗತಿಪರ ಸಂಘಟನೆಗಳು ಆರೋಪಿಸುತ್ತಿವೆ. ವಯಸ್ಸಾದ, ಇಲ್ಲವೇ ಊನಾದ ಕರು ಹಾಗೂ ಆಕಳನ್ನು ರೈತರು ಸಾಕಲು ಸಾಧ್ಯವಿಲ್ಲ. ನಾವು ಕಳೆದ ಒಂದು ವಾರದಿಂದ ಇಂತಹ ಗೋವುಗಳನ್ನು ಮಾರಾಟ ಮಾಡಲು ಆಗುತ್ತಿಲ್ಲ, ಕಾನೂನಿನ ಭಯಕ್ಕೆ ಹೆದರು ಮಾರಾಟ ಸ್ಥಗಿತಗೊಂಡಿದೆ. ಇವುಗಳನ್ನು ಸಾಕಲು ನಮಗೆ ಕಷ್ಟ ಹಾಗಾಗಿ ಇವುಗಳನ್ನು ವಿಧಾನಸೌಧಕ್ಕೆ ಸಾಗಿಸುತ್ತೇವೆ ಎಂದು ದೇವದುರ್ಗದ ರೈತ ಲಿಂಗಣ್ಣ ಎಚ್ಚರಿಸಿದ್ದಾರೆ.
ಬಿಜೆಪಿ ಆಹಾರದ ಹಕ್ಕಿನ ಮೇಲೆ ದಾಳಿ ಮುಂದುವರೆಸಿದೆ. ಇದರಿಂದ ಚರ್ಮೋಧ್ಯೋಗ ಸೇರಿದಂತೆ ಇನ್ನಿತರ ವ್ಯಾಪಾರಗಳಿಗೆ ಹೊಡೆತ ಬೀಳಲಿದೆ. ಉದ್ಯಮಕ್ಕೆ ಧಕ್ಕೆ ಆದ್ರೆ ಸಹಜವಾಗಿ ನಿರುದ್ಯೋಗ ಸೃಷ್ಠಿಯಾಗುತ್ತದೆ. ಹೈನುಗಾರಿಕೆಗೂ ಈ ಕಾಯ್ದೆ ಮಾರಕವಾಗಲಿದೆ ಎಂದು ರೈತ ಸಂಘಟನೆಗಳು ಆಗ್ರಹಿಸಿವೆ.