ದೊಡ್ಡಿಪಾಳ್ಯ ನರಸಿಂಹಮೂರ್ತಿ
ಕೆಲವು ಸರಳ ಸತ್ಯಗಳನ್ನು ಆಗಾಗ್ಗೆ ನೆನಪಿಸಬೇಕು. ಗೋದಿ ಮೀಡಿಯಾ ಪ್ರಚಾರದ ಅಬ್ಬರ ಎಷ್ಟಿದೆಯೆಂದರೆ ಕಣ್ಣೆದುರಿಗಿನ ಕಟು ಸತ್ಯಗಳನ್ನು ನಂಬುವುದೂ ಕಷ್ಟ ಆಗಿದೆ.
ಕಟು ಸತ್ಯ 1: ಮೊನ್ನೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ BJP ಗಳಿಸಿದ್ದು 57 ರಲ್ಲಿ 22 ಸ್ಥಾನಗಳು ಮಾತ್ರ (ನಾನಾ ಗೋಲ್ ಮಾಲ್ ಗಳ ನಂತರವೂ). ಹಿಂದಿನ ಅವಧಿಯಲ್ಲಿದ್ದ 3 ಸ್ಥಾನಗಳನ್ನು ಕಳೆದುಕೊಂಡಿದೆ. ಒಟ್ಟು 245 ಸದಸ್ಯ ಬಲದ ರಾಜ್ಯಸಭೆಯಲ್ಲಿ BJPಯ ಬಲ ಹಾಲಿ 92 ಮಾತ್ರ. NDA ಮಿತ್ರ ಪಕ್ಷಗಳನ್ನು ಸೇರಿಸಿಯೂ ಅವರಿಗೆ ರಾಜ್ಯಸಭೆಯಲ್ಲಿ ಬಹುಮತ ಇಲ್ಲ. ಬಹುಮತಕ್ಕಾಗಿ BJP ಇತರೆ ಪಕ್ಷಗಳಾದ BJD, YSRCP ಯಂತಹ ಪಕ್ಷಗಳಿಗೆ ದುಂಬಾಲು ಬೀಳಬೇಕು.
ಕಟು ಸತ್ಯ 2: ಕಳೆದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿದ್ದರೂ BJP ಗಳಿಸಿದ ಶೇಕಡಾವಾರು ಮತಗಳ ಪ್ರಮಾಣ ಕೇವಲ 37% ಮಾತ್ರ. 63% ಮತದಾರರನ್ನು ಮರುಳು ಮಾಡುವಲ್ಲಿ ಇವರ ಜಾದೂ ವಿಫಲವಾಗಿದೆ ಎಂಬುದು ಬಹುದೊಡ್ಡ ಭರವಸೆ.
ಕಟು ಸತ್ಯ 3: ಹಲವು ರಾಜ್ಯಗಳಲ್ಲಿ ಮೋದಿಯ ಮಕ್ಮಲ್ ಟೋಪಿಗೆ ಮತದಾರರು ಮರುಳಾಗಿಲ್ಲ. BJP ಭಾರೀ ಆರ್ಭಟ ನಡೆಸಿದರೂ ಪ.ಬಂಗಾಳದಲ್ಲಿ ಅಂತಿಮವಾಗಿ ಮಣ್ಣು ಮುಕ್ಕಿದೆ. ರಾಜಸ್ಥಾನದಲ್ಲಿ ದಶಕಗಟ್ಟಲೆ ಗದ್ದುಗೆಯಲ್ಲಿದ್ದ BJP ಇದೀಗ ಮಕಾಡೆ ಬಿದ್ದಿದೆ.
ಕೇರಳದಲ್ಲಿ ಶಬರಿಮಲೆ ರಾದ್ದಾಂತ, ಮತೀಯ ಹಿಂಸಾಚಾರ ಏನೆಲ್ಲಾ ತಿಪ್ಪರಲಾಗ ಹಾಕಿದರೂ ತಲೆಯೆತ್ತುತ್ತಿಲ್ಲ. ತೆಲಂಗಾಣದಲ್ಲಿ ಅಲ್ಪಸ್ವಲ್ಪ ಜಾಗ ಮಾಡಿಕೊಂಡಿದ್ದರೂ ಇನ್ನೂ ತೆವಳುತ್ತಿದೆ. ತಮಿಳುನಾಡಿನಲ್ಲಿ ದ್ರಾವಿಡ ರಾಜಕೀಯದ ಹೊಡೆತಕ್ಕೆ ತತ್ತರಿಸಿದೆ.
ಛತ್ತಿಸಗಡದಲ್ಲಿ ಚಿಂದಿಯಾಗಿದೆ. ಜಾರ್ಖಂಡ್ ನಲ್ಲಿ ಜಾರಿಬಿದ್ದಿದೆ. ಮಹಾರಾಷ್ಟ್ರದಲ್ಲಿ ಮುಗ್ಗರಿಸಿದೆ. ಪಂಜಾಬ್ ನಲ್ಲಿ ಇವರ ಪತ್ತೆಯೇ ಇಲ್ಲ ಎಂಬಂತಾಗಿದೆ. ಇನ್ನು ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿಗಳನ್ನು ಎದುರು ದಂಗುಬಡಿದು ಕೂತಿದೆ. ಕರ್ನಾಟಕ, ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿ BJP ಗದ್ದುಗೆ ಹಿಡಿಯಲು ಎಂಥೆಂಥಾ ನೀಚ ತಂತ್ರಗಳನ್ನು ಪ್ರಯೋಗಿಸಿದೆ ಎಂಬುದು ನಮ್ಮ ಕಣ್ಣೆದುರಿಗಿದೆ. ಹೀಗಿದ್ದರೂ ಗೋದಿ ಮೀಡಿಯಾ & ಅಂಧ ಭಕ್ತರ ಪ್ರಕಾರ ಮೋದಿ ಅಜೇಯ! ವಿಪರ್ಯಾಸವೆಂದರೆ ಗೋದಿ ಮೀಡಿಯಾದ ಏಕಮುಖ ಪ್ರಚಾರವನ್ನೇ ಸತ್ಯ ಎಂದು ವಿರೋಧ ಪಕ್ಷಗಳು ಕೂಡ ನಂಬಿಕೊಳ್ಳುತ್ತಿವೆ !! ಇದು ವಿಚಿತ್ರ ಸತ್ಯ!!!