ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ)ನಿಂದ ಬಂಧನಕ್ಕೆ ಒಳಗಾಗಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್ ನ್ಯಾಯಪೀಠ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.
ಇಂದು(ಫೆಬ್ರವರಿ 28) ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರ ಪೀಠವು, ದೆಹಲಿ ಅಬಕಾರಿ ಹಗರಣ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಅಲ್ಲದೆ, ಈ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು 5 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನೀವು ಹೈಕೋರ್ಟಿನಲ್ಲಿ ಪ್ರಶ್ನಿಸಬೇಕಿತ್ತು. ಹೀಗೆ ನೇರವಾಗಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಏಕೆ ಕೇಳುತ್ತಿದ್ದೀರಿ’ ಎಂದು ಪ್ರಶ್ನಿಸಿದರು. ಮೊದಲು ಜಾಮೀನಿಗಾಗಿ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಿ ಎಂದು ಸಲಹೆ ನೀಡಿದರು.
ಮನೀಶ್ ಸಿಸೋಡಿಯಾ ಪರ ಕಾಂಗ್ರೆಸ್ ನಾಯಕ ಮತ್ತು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಸುಪ್ರೀಂ ಕೋರ್ಟ್ ನಲ್ಲಿ ಸಿಬಿಐ ಬಂಧಿಸಿರುವ ಕ್ರಮದ ವಿರುದ್ಧ ಅರ್ಜಿ ಸಲ್ಲಿಸಿದ್ದರು.
ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ‘ನನಗೆ ಕೇವಲ 3 ನಿಮಿಷ ಮಾತನಾಡಲು ಅವಕಾಶ ನೀಡಿ. ಸಿಸೋಡಿಯಾರನ್ನು ಎರಡು ಬಾರಿ ಮಾತ್ರ ವಿಚಾರಣೆಗೆ ಕರೆಯಲಾಗಿತ್ತು. ಬಂಧನಕ್ಕೂ ಮುನ್ನ ಅರ್ನೇಶ್ ಕುಮಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಪಾಲಿಸಿಲ್ಲ. ಸಿಸೋಡಿಯಾ ಮೇಲೆ ಸಾಕ್ಷ್ಯಾಧಾರಗಳನ್ನು ತಿರುಚಿರುವ ಆರೋಪವೂ ಇಲ್ಲ, ಹೀಗಾಗಿ ಅವರು ತಪ್ಪಿಸಿಕೊಳ್ಳುವ ಸಾಧ್ಯತೆ ಇಲ್ಲ ಎಂದು ವಾದಿಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ