- ಜಾಗತಿಕ ಹಸಿವು ಸೂಚ್ಯಂಕ ಪ್ರಕಾರ ಭಾರತದ ಪರಿಸ್ಥಿತಿ ಅಪಾಯಕಾರಿ
- ಕಳೆದ ವರ್ಷ 94ನೇ ಸ್ಥಾನದಲ್ಲಿದ್ದ ಭಾರತಕ್ಕೆ ಈ ವರ್ಷ 101ನೇ ಸ್ಥಾನ
- ಚೀನಾ, ಬ್ರೆಜಿಲ್, ಕುವೈತ್ ಸೇರಿ 18 ದೇಶಗಳಲ್ಲಿ ಅತ್ಯುತ್ತಮ ಸಾಧನೆ
- ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳಕ್ಕಿಂತಲೂ ಕಳಪೆ ಸಾಧನೆ
- ಐರಿಷ್ ಸಂಸ್ಥೆ ಹಾಗೂ ಜರ್ಮನ್ ಸಂಘಟನೆ ಸೇರಿ ನಡೆಸಿರುವ ಸಮೀಕ್ಷೆ
ಗುರುವಾರ ಬಿಡುಗಡೆಯಾದ ಜಾಗತಿಕ ಹಸಿವಿನ ಸೂಚ್ಯಂಕ (Global Hunger Index 2021) ವರದಿಯಲ್ಲಿ ಭಾರತವು 135 ರಾಷ್ಟ್ರಗಳ ಪೈಕಿ 101 ನೇ ಸ್ಥಾನಕ್ಕೆ ಕುಸಿದಿದೆ. ಅಂದರೆ ಭಾರತ ಈಗ ಪಾಕಿಸ್ತಾನ (92), ಬಾಂಗ್ಲಾದೇಶ (76) ಮತ್ತು ನೇಪಾಳ (76) ಕ್ಕಿಂತ ಹಿಂದೆ ಇದೆ. ಭಾರತ ಕಳೆದ ವರ್ಷ 94 ನೇ ಸ್ಥಾನದಲ್ಲಿತ್ತು. ಐರಿಶ್ ನೆರವು ಸಂಸ್ಥೆ ಕನ್ಸರ್ನ್ ವರ್ಲ್ಡ್ ವೈಡ್ ಮತ್ತು ಜರ್ಮನಿಯ ಸಂಸ್ಥೆಯಾದ ವೆಲ್ಟ್ ಹಂಗರ್ ಹಿಲ್ಫೆ ಜಂಟಿಯಾಗಿ ತಯಾರಿಸಿದ ಈ ವರದಿ ಪ್ರಕಾರ ಭಾರತದ ಹಸಿವಿನ ಮಟ್ಟವನ್ನು “ಆತಂಕಕಾರಿ” ಎಂದು ಹೇಳುತ್ತದೆ. ಏಕೆಂದರೆ ಭಾರತದ ಜಾಗತಿಕ ಹಸಿವು ಸೂಚ್ಯಂಕದ ಸ್ಕೋರ್ ವರ್ಷಗಳಲ್ಲಿ ಕಡಿಮೆಯಾಗುತ್ತಿದೆ. 2000 ರಲ್ಲಿ ಭಾರತದ ಜಿಎಚ್ಐ ಸ್ಕೋರ್ 38.8 ಆಗಿದ್ದು, 2021 ರಲ್ಲಿ 27.5 ಕ್ಕೆ ಇಳಿದಿದೆ.
ನವದೆಹಲಿ : ಜಾಗತಿಕ ಹಸಿವು ಸೂಚ್ಯಂಕ 2021 ಪಟ್ಟಿ ಪ್ರಕಟವಾಗಿದೆ. ಜಾಗತಿಕ ಹಸಿವು ಸೂಚ್ಯಂಕ 2021ರಲ್ಲಿ 116 ರಾಷ್ಟ್ರಗಳ ಪೈಕಿಯಲ್ಲಿ ಭಾರತ 94 ರಿಂದ 101ನೇ ಸ್ಥಾನಕ್ಕೆ ಇಳಿದಿದ್ದು, ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ರಾಷ್ಟ್ರಗಳಿಗಿಂತ ಕೆಳಸ್ಥಾನದಲ್ಲಿದೆ. ಕಳೆದ ವರ್ಷ 107 ರಾಷ್ಟ್ರಗಳ ಪೈಕಿಯಲ್ಲಿ ಭಾರತ 94 ನೇ ಸ್ಥಾನದಲ್ಲಿತ್ತು. ಇದೀಗ 116 ರಾಷ್ಟ್ರಗಳ ಪೈಕಿಯಲ್ಲಿ 101ನೇ ಸ್ಥಾನಕ್ಕೆ ಕುಸಿದಿದೆ. ಭಾರತದ ಜಾಗತಿಕ ಹಸಿವು ಸೂಚ್ಯಂಕ ಸ್ಕೋರ್ 2012 ಮತ್ತು 2021 ರ ನಡುವೆ ಶೇ 28.5 ರಿಂದ ಶೇ. 27. 5ಕ್ಕೆ ಕುಸಿದಿದೆ.
ಪಾಕಿಸ್ತಾನ ಈ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿದೆ. ಪಾಕಿಸ್ತಾನ 92ನೇ ಸ್ಥಾನದಲಿದ್ದರೆ, ನೇಪಾಳ (76) ಬಾಂಗ್ಲಾದೇಶ (76) ಮತ್ತು ಮಾನ್ಮಾರ್ 71ನೇ ಸ್ಥಾನದಲ್ಲಿದೆ. ಆದರೆ, ಈ ರಾಷ್ಟ್ರಗಳಲ್ಲಿ ಭಾರತಕ್ಕಿಂತ ಕಡಿಮೆ ಪ್ರಮಾಣದ ಹಸಿವಿನ ಸಮಸ್ಯೆಯಿದೆ. ಚೀನಾ, ಭ್ರಜಿಲ್ ಮತ್ತು ಕುವೈತ್ ಸೇರಿದಂತೆ 18 ರಾಷ್ಟ್ರಗಳು ಐದಕ್ಕಿಂತ ಕಡಿಮೆ ಅಂಕಗಳೊಂದಿಗೆ ಅಗ್ರ ಸ್ಥಾನವನ್ನು ಹಂಚಿಕೊಂಡಿವೆ ಎಂದು ಗ್ಲೋಬಲ್ ಹಂಗರ್ ಇಂಡೆಕ್ಸ್ ( ಜಿಹೆಚ್ ಐ) ವೆಬ್ ಸೈಟ್ ಗುರುವಾರ ಹೇಳಿದೆ.
ಕಳೆದ ವರ್ಷ ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 107 ದೇಶಗಳ ಪೈಕಿ 94ನೇ ಸ್ಥಾನದಲ್ಲಿತ್ತು. ವಿಶ್ವದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಎತ್ತರಕ್ಕೆ ಸಮಾನಾದ ತೂಕವನ್ನು ಹೊಂದಿರದ ಮಕ್ಕಳು ಭಾರತದಲ್ಲಿದ್ದಾರೆ. 2016-2020ರ ನಡುವೆ ಎತ್ತರಕ್ಕೆ ಸರಿಯಾದ ತೂಕ ಹೊಂದಿರದ ಮಕ್ಕಳ ಪ್ರಮಾಣ ಶೇ.17.3ರಷ್ಟಿದೆ. 1998-2002ರ ನಡುವೆ ಈ ಪ್ರಮಾಣ ಶೇ. 17.1ರಷ್ಟಿತ್ತು ಎಂದು ಜಿಎಚ್‌ಐ ವರದಿ ಹೇಳಿದೆ. ಜಾಗತಿಕ ಹಸಿವು ಸೂಚ್ಯಂಕ ರಾಷ್ಟ್ರಗಳಲ್ಲಿನ ಹಸಿವಿನ ಹಾಗೂ ಅಪೌಷ್ಟಿಕತೆಯ ಪ್ರಮಾಣವನ್ನು ಅಧ್ಯಯನ ಮಾಡಿ ಅಂಕ ನೀಡುತ್ತದೆ. ಐರ್ಲೆಂಡ್‌ನ ಧನಸಹಾಯ ಹೊಂದಿರುವ ಏಜೆನ್ಸಿ ಕನ್ಸರ್ನ್ ವರ್ಲ್ಡ್‌ವೈಡ್ ಮತ್ತು ಜಮನಿಯ ಸಂಸ್ಥೆ ವೆಲ್ಟ್ ಹಂಗರ್ ಹೆಲ್ಪ್ ಸಹಯೋಗದಲ್ಲಿ ಈ ಪಟ್ಟಿ ಸಿದ್ಧಪಡಿಸಲಾಗಿದೆ.
ಏನಿದು ಜಿಎಚ್‌ಐ : ಜಿಎಚ್‌ಐ ಎನ್ನುವುದು ಜಾಗತಿಕ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಹಸಿವಿನ ಮಟ್ಟವನ್ನು ಅಳೆಯಲು ಮತ್ತು ಟ್ರ್ಯಾಕ್ ಮಾಡಲು ವಿನ್ಯಾಸಗೊಳಿಸಲಾದ ಸಾಧನವಾಗಿದೆ. ಸ್ಕೋರ್‌ಗಳನ್ನು ಪ್ರತಿ ವರ್ಷವೂ ಲೆಕ್ಕಹಾಕಲಾಗುತ್ತದೆ. ಹಸಿವು ನಿವಾರಣೆ, ಹಸಿವು ನಿವಾರಣೆ ಮಾಡುವುದಕ್ಕೆ ಬೇಕಾಗುವ ಹೆಚ್ಚುವರಿ ಪ್ರಯತ್ನಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಜಿಎಚ್‌ಐ ಮತ್ತು ಈ ಸೂಚ್ಯಂಕ ಭಾರತದ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ.
ಸೂಚ್ಯಂಕ ಯಾವೆಲ್ಲ ಮಾಹಿತಿಯನ್ನು ಆಧರಿಸಿರುತ್ತದೆ? :
ಭಾರತದ 2021 ಜಿಎಚ್ಐ ಸ್ಕೋರ್ ಈ ನಾಲ್ಕು ಘಟಕ ಸೂಚಕಗಳ ಅಂಕಿ ಅಂಶಗಳನ್ನು ಬಳಸುತ್ತದೆ.
1. ಅಪೌಷ್ಟಿಕತೆಯ ಮೌಲ್ಯಗಳು ಎಫ್‌ಎಒ ಆಹಾರ ಭದ್ರತಾ ಸೂಚಕಗಳ 2021 ರ ಆವೃತ್ತಿಯಿಂದ (ಜುಲೈ 12, 2021 ರಂದು ಪ್ರಕಟಿಸಲಾಗಿದೆ)
2. 2. ಮಕ್ಕಳ ಕುಂಠಿತ ಬೆಳವಣಿಗೆ ಮತ್ತು ಅಪೌಷ್ಟಿಕತೆ ಬಗ್ಗೆ ಯುನಿಸೆಫ್, ಡಬ್ಲ್ಯುಎಚ್‌ಒ ಮತ್ತು ವಿಶ್ವಬ್ಯಾಂಕ್ ಜಂಟಿ ಮಕ್ಕಳ ಅಪೌಷ್ಟಿಕತೆಯ ಅಂದಾಜುಗಳ 2021 ರ ಆವೃತ್ತಿಯಿಂದ (ಏಪ್ರಿಲ್ 2021 ರಂದು ಪ್ರಕಟಿಸಲಾಗಿದೆ), ಭಾರತದ ಸಮಗ್ರ ರಾಷ್ಟ್ರೀಯ ಪೌಷ್ಟಿಕಾಂಶ ಸಮೀಕ್ಷೆ 2016–2018 (ಸಿಎನ್‌ಎನ್‌ಎಸ್) ದತ್ತಾಂಶ, ರಾಷ್ಟ್ರೀಯ ವರದಿ (2019 ರಲ್ಲಿ ಪ್ರಕಟಿಸಲಾಗಿದೆ)ಯನ್ನೊಳಗೊಂಡಿದೆ.
3. ಯುಎನ್ ಐಜಿಎಂಇ (ಮಕ್ಕಳ ಏರಿಳಿತದ ಅಂದಾಜುಗಾಗಿ ಇಂಟರ್-ಏಜೆನ್ಸಿ ಗ್ರೂಪ್) 2020 ರ ಆವೃತ್ತಿಯಿಂದ ಐದು ವರ್ಷದೊಳಗಿನ ಮರಣ ಪ್ರಮಾಣವನ್ನು ತೆಗೆದುಕೊಳ್ಳಲಾಗಿದೆ ಮಕ್ಕಳ ಮರಣದ ಅಂದಾಜುಗಳು (ಸೆಪ್ಟೆಂಬರ್ 9, 2020 ಪ್ರಕಟಿತ). ದೇಶದ ಮಟ್ಟದಲ್ಲಿ ಮಕ್ಕಳ ಮರಣದ ದತ್ತಾಂಶದ ಗುಣಮಟ್ಟ ಮತ್ತು ಲಭ್ಯತೆಯ ವಿಶಾಲ ವ್ಯಾಪ್ತಿಯನ್ನು ಗಮನಿಸಿದರೆ, ಯುಎನ್ ಐಜಿಎಂಇ ಇಂದ ಎಲ್ಲಾ ದೇಶಗಳಿಗೆ ಮೌಲ್ಯಗಳನ್ನು ಸರಿಯಾಗಿ ಪರಿಶೀಲಿಸಲಾಗಿದೆಯೆ ಎಂದು ಜಿಎಚ್ಐ ಖಚಿತಪಡಿಸಿಕೊಳ್ಳುತ್ತದೆ.
ಜಿಎಚ್ಐ ಸೂಚಕಗಳ ಆಯ್ಕೆಗೆ ಕಾರಣ? : ಹಸಿವಿನ ಸಮಸ್ಯೆ ಸಂಕೀರ್ಣವಾಗಿದೆ. ಹಸಿವಿನ ಬಹು ಆಯಾಮದ ಸ್ವಭಾವವನ್ನು ಪ್ರತಿಬಿಂಬಿಸಲು ಜಿಎಚ್ಐ ನಾಲ್ಕು ಸೂಚಕಗಳನ್ನು ಒಳಗೊಂಡಿದೆ. ಒಟ್ಟಾಗಿ, ಅವು ಕ್ಯಾಲೋರಿ ಹಾಗೂ ಮೈಕ್ರೋನ್ಯೂಟ್ರಿಯಂಟ್‌ಗಳ ಕೊರತೆಯನ್ನು ಪ್ರತಿಬಿಂಬಿಸುತ್ತವೆ. ಜನಸಂಖ್ಯೆಯಲ್ಲಿ ಅಪೌಷ್ಟಿಕತೆಯ ಪ್ರಮಾಣವನ್ನು (GHI ಅಂಕದ 1/3) ಐದು ವರ್ಷದೊಳಗಿನ ಮಕ್ಕಳಿಗೆ (GHI ಅಂಕದ 2/3) ಸಂಬಂಧಿಸಿದ ಸೂಚಕಗಳೊಂದಿಗೆ ಸಂಯೋಜಿಸುವ ಮೂಲಕ, ಜಿಎಚ್ಐ ಜನಸಂಖ್ಯೆಯ ಆಹಾರ ಪೂರೈಕೆ ಪರಿಸ್ಥಿತಿ ಎರಡನ್ನೂ ಖಚಿತಪಡಿಸುತ್ತದೆ. ಸಂಪೂರ್ಣ ಮತ್ತು ಅಸಮರ್ಪಕ ಪೋಷಣೆಯ ಪರಿಣಾಮಗಳನ್ನೂ ಇಲ್ಲಿ ಉಲ್ಲೇಖಿಸಲಾಗಿದೆ. ಮಕ್ಕಳ ದೈಹಿಕ ಯೋಗಕ್ಷೇಮದ ಮೇಲೆ ನಂತರದ ಪರಿಣಾಮವನ್ನು ಪ್ರತಿಬಿಂಬಿಸಲು ಮನೆಗಳ ನಡುವೆ ಮತ್ತು ಮನೆಯೊಳಗಿನ ಅಸಮವಾದ ಸಂಪನ್ಮೂಲ ಹಂಚಿಕೆಗಳನ್ನು ಸಹ ಪರಿಗಣಿಸಲಾಗುತ್ತದೆ.
ʻಇದು ಅವೈಜ್ಷಾನಿಕʼ ಕೇಂದ್ರ ಸರಕಾರ : ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿತ ಆಘಾತಕಾರಿ. ಆದರೆ ಇದಕ್ಕೆ ಬಳಸಿರುವ ವಿಧಾನ ಅವೈಜ್ಞಾನಿಕ ಎಂದು ಕೇಂದ್ರ ಸರ್ಕಾರ ಹೇಳಿದೆ. ವಾರ್ಷಿಕ ವರದಿ ತಯಾರಿಸಲು ಮತ್ತು ಲೆಕ್ಕಿಸಲು ಬಳಸಿರುವ ವಿಧಾನ ಅವೈಜ್ಞಾನಿಕವಾಗಿದೆ. ಇದು ಎಫ್‌ಎಒ (ಯುಎನ್ನ ಆಹಾರ ಮತ್ತು ಕೃಷಿ ಸಂಸ್ಥೆ) ವರದಿ ತಯಾರಿಸಲು ಬಳಸಿರುವ ವಿಧಾನ ಅವೈಜ್ಞಾನಿಕವಾಗಿದೆ. ಅವರು ನಾಲ್ಕು ಪ್ರಶ್ನೆಯ ಒಪಿನಿಯನ್ ಪೋಲ್ ಮೂಲಕ ಈ ವರದಿ ತಯಾರಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಜಿಎಚ್‌ಐ ಇದನ್ನು ನಿರಾಕರಿಸಿದ್ದು, ಭಾರತದ ಸರಕಾರ ಸುಳ್ಳು ಹೇಳುತ್ತಿದೆ. ಸರಿಯಾದ ಅಂಕಿ ಅಂಶಗಳ ಆಧಾರದಲ್ಲಿ ಸರ್ವೆಯನ್ನು ನಡೆಸಲಾಗಿದೆ ಎಂದು ತಿಳಿಸಿದೆ.
ಕಾಂಗ್ರೆಸ್ ಟೀಕೆ : ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ ಮತ್ತಷ್ಟು ಕುಸಿದಿರುವುದಕ್ಕೆ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶುಕ್ರವಾರ ಹರಿಹಾಯ್ದಿದ್ದಾರೆ. ಬಡತನ, ಹಸಿವುಗಳನ್ನು ನಿರ್ಮೂಲನೆ ಮಾಡಿ ಭಾರತವನ್ನು ಜಾಗತಿಕ ಶಕ್ತಿಯನ್ನಾಗಿ ಮಾಡುವುದಾಗಿ ಸರ್ಕಾರ ನೀಡುತ್ತಿರುವ ಹೇಳಿಕೆಗಳನ್ನು ಕಟುವಾಗಿ ಟೀಕಿಸಿರುವ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ಪ್ರಧಾನಿ ಮೋದಿ ಅವರನ್ನು ವ್ಯಂಗ್ಯ ಮಾಡಿದ್ದಾರೆ. ಮೋದಿ ಅವರಿಗೆ ಇವುಗಳ ನಿರ್ಮೂಲನೆಗಾಗಿ ಅಭಿನಂದನೆಗಳು: 1) ಬಡತನ 2) ಹಸಿವು 3) ಭಾರತವನ್ನು ಜಾಗತಿಕ ಶಕ್ತಿಯನ್ನಾಗಿ ಮಾಡಿದ್ದಕ್ಕೆ 4) ನಮ್ಮ ಡಿಜಿಟಲ್ ಆರ್ಥಿಕತೆಗಾಗಿ 5)…. ಇನ್ನೂ ಅನೇಕ ವಿಚಾರಗಳಿಗೆ ಎಂದು ಟ್ವೀಟ್ ಮಾಡಿದ್ದಾರೆ.
ನಾಚಿಕೆಗೇಡಿನ ಸಂಗತಿ : ಭಾರತದಲ್ಲಿ ಹಸಿವಿನಿಂದ ನರಳುತ್ತಿರುವವರ ಸಂಖ್ಯೆ ದೊಡ್ಡದಿದೆ, ಆದರೆ ಕೇಂದ್ರ ಗೋದಾಮುಗಳಲ್ಲಿ ಆಹಾರ ಧಾನ್ಯಗಳು ಕೊಳೆಯುತ್ತಿವೆ. ಇದಕ್ಕೆ ಯಾರು ಹೊಣೆ ಎಂದು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಪ್ರಶ್ನಿಸಿದ್ದಾರೆ. 2014 ಮೋದಿ ಪ್ರಧಾನಿಯಾಗುವ ಮೊದಲು ಭಾರತ 55 ನೇ ಸ್ಥಾನದಲ್ಲಿತ್ತು, 2020 ರಲ್ಲಿ ನಾವು 94 ನೇ ಸ್ಥಾನಕ್ಕೆ ಕುಸಿದೆವು. ಈಗ ನಾವು 101/116 ದೇಶಗಳ ಸ್ಥಾನದಲ್ಲಿದ್ದೇವೆ ಇದು ನಾಚಿಕೆಗೇಡಿನ ಸಂಗತಿಯಾಗಿದೆ. ಕೋವಿಡ್ ಸಮಯದಲ್ಲೂಂತ ಜನರು ಹಸಿವಿನಿಮದ ಬಳಲಿ ನಿತ್ರಾಣ ಗೊಂಡಿದ್ದಾರೆ. ಹಸಿದ ಎಲ್ಲರಿಗೂ ಉಚಿತ ಆಹಾರ ಕಿಟ್‌ಗಳನ್ನು ನೀಡಿಬೇಕು ಎಂದು ಯೆಚೂರಿ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.