ನವದೆಹಲಿ: ವಕೀಲ ಹಾಗೂ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ವಂದೇ ಮಾತರಂ ಗೀತೆಗೆ ಜನ ಗಣ ಮನ ರಾಷ್ಟ್ರಗೀತೆಯಷ್ಟೇ ಸ್ಥಾನ ನೀಡಬೇಕು ಎಂದು ಕೋರಿದ್ದರು.
ಅರ್ಜಿದಾರರ ವಿರುದ್ಧ ಗರಂ ಆದ ದೆಹಲಿ ಹೈಕೋರ್ಟ್ ಅರ್ಜಿ ಸಲ್ಲಿಸಿದ ಕೂಡಲೇ ಮಾಧ್ಯಮಗಳಿಗೆ ದಾಖಲೆ ಬಿಡುಗಡೆ ಮಾಡಿರುವುದು ನಿಮ್ಮದು ಪ್ರಚಾರದ ತಂತ್ರವಲ್ಲದೇ ಇನ್ನೇನು ಎಂದು ಛೀಮಾರಿ ಹಾಕಿದೆ.
ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾ. ವಿಪಿನ್ ಸಂಘಿ ನೇತೃತ್ವದ ತ್ರಿಸದಸ್ಯ ಪೀಠ ನಡೆಸಿತು. ವಿಚಾರಣೆ ವೇಳೆ ಅರ್ಜಿ ಸಲ್ಲಿಕೆ ಬೆನ್ನಲ್ಲೇ ಮಾಧ್ಯಮಗಳಿಗೆ ದಾಖಲೆಗಳನ್ನು ಬಿಡುಗಡೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಪೀಠ ಪ್ರಚಾರದ ಕಾರಣಕ್ಕೆ ಇಂತಹ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸುತ್ತಾರೆಯೇ ಎಂದು ಪ್ರಶ್ನಿಸಿತು.
ಅಶ್ವಿನಿ ಉಪಾಧ್ಯಾಯ ವಾದ ಮಂಡಿಸಿ ವಂದೇ ಮಾತರಂ ಗೀತೆಯನ್ನು ನಿಯಂತ್ರಿಸುವ ಯಾವುದೇ ಕಾನೂನುಗಳಿಲ್ಲ, ರಾಷ್ಟ್ರೀಯ ಗೌರವ ಕಾಯಿದೆಯಲ್ಲಿ ಉಲ್ಲೇಖಿಸಲ್ಪಟ್ಟಿಲ್ಲ. ಇದರಿಂದಾಗಿ ಸಿನಿಮಾ, ಧಾರವಾಹಿ ಹಾಗೂ ರಾಕ್ ಬ್ಯಾಂಡ್‍ಗಳಲ್ಲೂ ಈ ಗೀತೆ ತೋಚಿದಂತೆ ಬಳಕೆಯಾಗುತ್ತಿವೆ ಎಂದರು.
ವಂದೇ ಮಾತರಂ ಗೀತೆಯನ್ನು ನಾಟಕೀಯವಾಗಿ ಬಳಕೆ ಮಾಡಬಾರದು. ರಾಷ್ಟ್ರಗೀತೆಯಷ್ಟೇ ಗೌರವ ನೀಡಬೇಕು ಮತ್ತು ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡಬಾರದು. ಶಾಲೆ ಕಾಲೇಜುಗಳಲ್ಲಿ ಕಡ್ಡಾಯವಾಗಿ ಹಾಡಲು ಸೂಚಿಸಬೇಕು ಎಂದು ಮನವಿ ಮಾಡಿದರು.
ವಾದ ಆಲಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆ ನಡೆಸಲು ಅನುಮತಿ ನೀಡಿದೆ. ಅಲ್ಲದೇ ಎಲ್ಲ ಪ್ರತಿವಾದಿಗಳಿಗೆ ಪ್ರಕರಣ ಸಂಬಂಧ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಿದ್ದು, ಆರು ವಾರಗಳ ಸಮಾಯವಕಾಶ ನೀಡಿದೆ. ನವೆಂಬರ್ 9 ರಂದು ಮತ್ತೆ ವಿಚಾರಣೆ ನಡೆಯಲಿದೆ.