ಬೆಂಗಳೂರು : 14 ದಿನಗಳ ಲಾಕ್ ಡೌನ್
ಅವಧಿಯಲ್ಲಿ ಕಾರ್ಮಿಕರ ಸಂಬಳಕ್ಕೆ ಕತ್ತರಿ ಹಾಕದಂತೆ ಉದ್ದಿಮೆಗಳಿಗೆ ನಿರ್ದೇಶಿಸಬೇಕು ಹಾಗೂ ಆಹಾರ ಕಿಟ್‌ಗಳನ್ನು ಪೂರೈಸಲು ಸರ್ಕಾರಕ್ಕೆ ಸೂಚಿಸುವಂತೆ ಕೋರಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ (ಎಐಸಿಸಿಟಿಯು) ಹೈಕೋರ್ಟ್‌ಗೆ ಮನವಿ ಮಾಡಿದೆ.
ಎಐಸಿಸಿಟಿಯು ಪರ ವಕೀಲ ಕ್ಲಿಫ್ಟನ್ ರೋಝಾರಿಯೊ ಹೈಕೋರ್ಟ್‌ಗೆ ಮೆಮೊ ಸಲ್ಲಿಸಿ ಈ ಹಿಂದೆ ಲಾಕ್‌ಡೌನ್‌ನಿಂದ ರಾಜ್ಯದಲ್ಲಿರುವ ಬಡವರ್ಗದವರು ಆರ್ಥಿಕವಾಗಿ ನಷ್ಟ ಅನುಭವಿಸಿದ್ದಾರೆ. ಸಣ್ಣ ರೈತರು, ಕೃಷಿ ಕಾರ್ಮಿಕರು, ಮನೆಗೆಲಸದವರು, ಬೀದಿ ವ್ಯಾಪಾರಿಗಳು, ವಲಸೆ ಕಾರ್ಮಿಕರು, ಗಾರ್ಮೆಂಟ್ಸ್ ಕಾರ್ಮಿಕರು, ಪೌರ ಕಾರ್ಮಿಕರು, ಕಟ್ಟಡ ಕಾರ್ಮಿಕರು ಅಧೋಗತಿಗೆ ತಲುಪಿದ್ದಾರೆ. ಹೀಗಾಗಿ ರೈತರಿಗೆ, ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಸರ್ಕಾರಕ್ಕೆ ಸೂಚಿಸಬೇಕು ಎಂದು ಮೆಮೋನಲ್ಲಿ ಕೋರಲಾಗಿದೆ.
ಇದನ್ನೂ ಓದಿ : ಲಾಕ್ ಡೌನ್ : ಆರ್ಥಿಕ ನೆರವು ಘೋಷಿಸಲು ಸಿಐಟಿಯು ಆಗ್ರಹ
2020ರ ಮಾ.29ರ ಗೃಹ ವ್ಯವಹಾರಗಳ ಸಚಿವಾಲಯದ ನಿರ್ದೇಶನದಂತೆ ಲಾಕ್‌ಡೌನ್ ಅವಧಿಯಲ್ಲಿ ಉದ್ದಿಮೆಗಳು ಮುಚ್ಚಿವೆ ಎಂಬ ಕಾರಣಕ್ಕೆ ಕಾರ್ಮಿಕರ ಕೂಲಿ-ವೇತನ ಕಡಿತ ಮಾಡದಂತೆ ಸರಕಾರ ಕೈಗಾರಿಕೆಗಳಿಗೆ ನಿರ್ದೇಶಿಸಬೇಕು. ಒಂದು ತಿಂಗಳ ಮನೆ ಬಾಡಿಗೆ ಒತ್ತಾಯಿಸದಂತೆ, ಮನೆ ಖಾಲಿ ಮಾಡಿಸಿದರೆ ಕ್ರಮ ಕೈಗೊಳ್ಳುವ ಕುರಿತು ಆದೇಶ ಹೊರಡಿಸಬೇಕು. ಸಾಮಾನ್ಯ ಹಾಗೂ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸದಂತೆ ಕೈಗಾರಿಕೆಗಳ ಮಾಲೀಕರಿಗೆ ನಿರ್ದೇಶನ ನೀಡಬೇಕೆಂದು ಕೋರಲಾಗಿದೆ.
ಇದನ್ನೂ ಓದಿ : ವಿಜಯ ಸಂಕೇಶ್ವರ್ ಮಾತು ನಂಬಿ ಪ್ರಾಣ ಕಳೆದುಕೊಂಡ ಶಿಕ್ಷಕ
ಮೇಮೋವನ್ನು ಮುಂದಿನ ವಿಚಾರಣೆ ಸಂದರ್ಭದಲ್ಲಿ ಪರಿಗಣಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ತಿಳಿಸಿದೆ.