ಶೀಘ್ರವೇ ಗುಲಾಂ ನಬೀ ಆಜಾದ್ ಸೇರಿ ಜಿ-23 ನಾಯಕರು ಸೋನಿಯಾ-ರಾಹುಲ್ ಗಾಂಧಿ ಭೇಟಿ

ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲುಂಡಿರುವ ಬಗ್ಗೆ ಗಂಭೀರ ವಿಚಾರ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯುಸಿ) ಅಭಿಪ್ರಾಯಪಟ್ಟಿದೆ. ಇದೆ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬೀ ಆಜಾದ್ ಸೇರಿದಂತೆ ಪಕ್ಷದ ಜಿ-23 ಗುಂಪಿನ ಕೆಲವು ಸದಸ್ಯರು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಹೈಕಮಾಂಡ್‌ನೊಂದಿಗೆ ಭೇಟಿ-ಮಾತುಕತೆ ಯಾವಾಗ ಎಂದು ಸಮಯ ಮತ್ತು ದಿನ ಇನ್ನೂ ನಿಗದಿಯಾಗಿಲ್ಲ. ಸೋನಿಯಾ ಗಾಂಧಿಯವರ ಜೊತೆ ಮಾತನಾಡಿ ಜಿ-23 ನಾಯಕರ ಭೇಟಿಯ ಸಮಯ ನಿಗದಿಪಡಿಸಲಾಗುವುದು ಎಂದು ರಾಹುಲ್ ಗಾಂಧಿಯವರು ಹೇಳಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ಇದನ್ನು ಓದಿ: ಚುನಾವಣೆಯಲ್ಲಿ ಸತತ ಸೋಲು: ಜಿ-23 ಕಾಂಗ್ರೆಸ್ ನಾಯಕತ್ವದಿಂದ ಮುಂದಿನ ನಡೆ ಬಗ್ಗೆ ಸಭೆ

ಇದಕ್ಕೂ ಮುನ್ನ ಗುಲಾಂ ನಬೀ ಆಜಾದ್ ಮಾತ್ರ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗುತ್ತಿತ್ತು. ಕಾಂಗ್ರೆಸ್ ಪಕ್ಷದಲ್ಲಿ ವ್ಯಾಪಕವಾದ ಸುಧಾರಣೆಗಳಿಗೆ ಜಿ – 23 ನಾಯಕರು ಆಗ್ರಹಿಸುತ್ತಿದ್ದಾರೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ವಿಚಾರವಾಗಿ ಕಳೆದ ಬುಧವಾರದಂದು ಸಭೆ ನಡೆಸಿ, ಚರ್ಚಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದ ನಾಯಕರಾದ ಕಪಿಲ್ ಸಿಬಲ್, ಭೂಪಿಂದರ್ ಸಿಂಗ್ ಹೂಡಾ, ಆನಂದ್ ಶರ್ಮಾ, ಮನೀಶ್ ತಿವಾರಿ, ಶಶಿ ತರೂರ್, ಮಣಿಶಂಕರ್ ಅಯ್ಯರ್, ಪಿಜೆ ಕುರಿಯನ್, ಪ್ರೀನೀತ್ ಕೌರ್, ಸಂದೀಪ್ ದೀಕ್ಷಿತ್ ಮತ್ತು ರಾಜ್ ಬಬ್ಬರ್ ಸೇರಿದಂತೆ ಹಲವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಹರಿಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ನಿನ್ನೆ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದರು. ಅವರು, ದೆಹಲಿಯಲ್ಲಿ ಗುಲಾಂ ನಬಿ  ಆಜಾದ್ ಅವರ ನಿವಾಸದಲ್ಲಿ ಚುನಾವಣಾ ಸೋಲಿನ ಕುರಿತು ಜಿ-23 ಬಣದ ಸಭೆಯ ನಂತರ ಕಾಂಗ್ರೆಸ್ ಹೈಕಮಾಂಡ್ ನ್ನು ಭೇಟಿ ಮಾಡಿದ್ದರು.

ಜಿ-23 ನಾಯಕರ ಸಭೆ ಮತ್ತು ಅವರ ನಿರ್ಣಯದ ಬಗ್ಗೆ ರಾಹುಲ್ ಗಾಂಧಿ ಅವರ ಗಮನಕ್ಕೆ ಭೂಪಿಂದರ್‌ ಸಿಂಗ್ ಹೂಡಾ‌ ತಂದಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಚುನಾವಣೆಗಳು ಮತ್ತು ಭವಿಷ್ಯದ ನಿರ್ಧಾರಗಳನ್ನು ಸಿಡಬ್ಲ್ಯೂಸಿಯಲ್ಲಿ ಮಾತ್ರ ಚರ್ಚಿಸುವ ಮೂಲಕ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ: ಉತ್ತರ ಪ್ರದೇಶ: ಶೇಕಡ 97ರಷ್ಟು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಠೇವಣಿ ನಷ್ಟ!

ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರನ್ನು ಹುದ್ದೆಯಿಂದ ವಜಾಗೊಳಿಸಿದ ನಂತರ ಭೂಪಿಂದರ್‌ ಸಿಂಗ್‌ ಹೂಡಾ ಅವರು ರಾಹುಲ್ ಗಾಂಧಿ ಅವರೊಂದಿಗಿನ ಸಭೆಯಲ್ಲಿ ಉತ್ತರ ಭಾರತದ ರಾಜಕೀಯವನ್ನು ಅರ್ಥಮಾಡಿಕೊಳ್ಳುವ ಮತ್ತು ಹಿಂದಿಯನ್ನು ಚೆನ್ನಾಗಿ ತಿಳಿದಿರುವ ಅನುಭವಿ ವ್ಯಕ್ತಿಯನ್ನು ನೇಮಿಸುವಂತೆ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಹುಲ್ ಗಾಂಧಿಯವರ ನಾಯಕತ್ವವನ್ನು ಶಂಕರಸಿನ್ಹ್ ವಘೇಲಾ ಮತ್ತು ಕಪಿಲ್ ಸಿಬಲ್ ಹೇಳಿದ ಎಲ್ಲವನ್ನು ನಾವು ಒಪ್ಪುವುದಿಲ್ಲ ಎಂದು ಹೂಡಾ ಹೇಳಿದ್ದು, ಸೋನಿಯಾ ಗಾಂಧಿಯವರ ನಾಯಕತ್ವದಲ್ಲಿ ನಂಬಿಕೆ ಇರುವುದಾಗಿಯೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿತ್ತು.

ಸೋನಿಯಾ ಗಾಂಧಿ ಕಳೆದ ಮಂಗಳವಾರದಂದು ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯಗಳ ಪಕ್ಷದ ಮುಖ್ಯಸ್ಥರಿಗೆ ರಾಜೀನಾಮೆ ಕೇಳಿದ್ದರು. 2024ರ ಲೋಕಸಭೆ ಚುನಾವಣೆಗೆ ತನ್ನ ಭವಿಷ್ಯವನ್ನು ಪುನರುಜ್ಜೀವನಗೊಳಿಸಲು, ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ತೃಣಮೂಲ ಕಾಂಗ್ರೆಸ್‌ನಿಂದ ಸವಾಲನ್ನು ಹಿಮ್ಮೆಟ್ಟಿಸಲು ಕಾಂಗ್ರೆಸ್‌ಗೆ ಐದು ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಆಘಾತವನ್ನುಂಟು ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *