ಮಾಜಿ ಐಪಿಎಸ್ ಸಂಜೀವ್ ಭಟ್ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಲು ನಿರಾಕರಿಸಿದ ಗುಜರಾತ್ ಹೈಕೋರ್ಟ್

 27 ವರ್ಷಗಳ ಹಳೆಯ ಪ್ರಕರಣ ಸಂಜೀವ್ ಭಟ್

ಅಹ್ಮದಾಬಾದ್: ವೈಯಕ್ತಿಕ ದ್ವೇಷದ ಹಿನ್ನೆಲೆ ಡ್ರಗ್ ಇಟ್ಟು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾದ 27 ವರ್ಷಗಳ ಹಳೆಯ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ವಿರುದ್ಧ ದಾಖಲಿಸಲಾದ ಎಫ್‌ಐಆರ್ ಅನ್ನು  ರದ್ದುಪಡಿಸಲು ಗುಜರಾತ್ ಹೈಕೋರ್ಟ್‌ ಆಗಸ್ಟ್ 24ರ ಗುರುವಾರ ನಿರಾಕರಿಸಿದೆ.

ಸಂಜೀವ್‌ ಭಟ್ ಅವರ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಸಮೀರ್ ದವೆ ಅವರು, ಎಫ್‌ಐಆರ್ ಅನ್ನು ರದ್ದುಗೊಳಿಸಲು ಮತ್ತು ತಕ್ಷಣದ ಆದೇಶದ ಪರಿಣಾಮವನ್ನು ತಡೆಹಿಡಿಯಲು ಅಥವಾ ಒಂದು ತಿಂಗಳ ಕಾಲ ವಿಚಾರಣೆಯ ಪ್ರಕ್ರಿಯೆಗಳನ್ನು ನಿಲ್ಲಿಸಲು ಸಂಜೀವ ಭಟ್ ಅವರ ವಕೀಲರ ಕೋರಿಕೆಯನ್ನು ನಿರಾಕರಿಸಿದ್ದಾರೆ.

ಇದನ್ನೂ ಓದಿ: ರಾಜ್ಯ ಶಿಕ್ಷಣ ನೀತಿ ಬಂದ ತಕ್ಷಣ ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆ ನಿಲ್ಲುವುದಿಲ್ಲ: ಬಿ. ಶ್ರೀಪಾದ ಭಟ್

1996 ರಲ್ಲಿ ರಾಜಸ್ಥಾನದ ಪಾಲನ್‌ಪುರ್‌ನ ಹೋಟೆಲ್ ಕೊಠಡಿಯಿಂದ ಡ್ರಗ್ಸ್ ವಶಕ್ಕೆ ಪಡೆದು ಅಲ್ಲಿದ್ದ ರಾಜಸ್ಥಾನ ಮೂಲದ ವಕೀಲರನ್ನು ಬನಸ್ಕಾಂತ ಪೊಲೀಸರು ಬಂಧಿಸಿದ್ದರು. ಈ ಅವಧಿಯಲ್ಲಿ ಸಂಜೀವ ಭಟ್ ಗುಜರಾತಿನ ಬನಸ್ಕಾಂತ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು.

ಆದರೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವಕೀಲರಿಗೆ ಕಿರುಕುಳ ನೀಡಲು ಸಂಜೀವ ಭಟ್ ಅವರ ತಂಡ ಸುಳ್ಳು ಪ್ರಕರಣವನ್ನು ದಾಖಲಿಸಿತ್ತು ಎಂದು ವಕೀಲರ ಬಂಧನದ ನಂತರ ರಾಜಸ್ಥಾನ ಪೊಲೀಸರು ಆರೋಪಿಸಿದ್ದರು. ಸೆಪ್ಟೆಂಬರ್ 2018 ರಲ್ಲಿ ಈ ಪ್ರಕರಣದಲ್ಲಿ ಸಂಜೀವ ಭಟ್ ಅವರನ್ನು ಬಂಧಿಸಲಾಗಿತ್ತು ಮತ್ತು ಅಂದಿನಿಂದ ಅವರು ಕಸ್ಟಡಿಯಲ್ಲಿದ್ದಾರೆ.

ಸಂಜೀವ ಭಟ್ ಅವರು ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿರುವ ಅಧಿಕಾರಿಯಾಗಿದ್ದಾರೆ. ಅವರು ಐಪಿಎಸ್‌ನಿಂದ ವಜಾಗೊಳ್ಳುವ ಮೊದಲು, ”2002 ರ ಗುಜರಾತ್ ಗಲಭೆಯಲ್ಲಿ ಅಂದಿನ ಮೋದಿ ನೇತೃತ್ವದ ಗುಜರಾತ್ ಸರ್ಕಾರದ ಕೈವಾಡವಿದೆ” ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದರು. ಕರ್ತವ್ಯಕ್ಕೆ ಅನಧಿಕೃತವಾಗಿ ಗೈರುಹಾಜರಾದ ಕಾರಣಕ್ಕಾಗಿ ಕೇಂದ್ರ ಗೃಹ ಸಚಿವಾಲಯವು 2015ರಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಿತ್ತು.

ವಿಡಿಯೊ ನೋಡಿ: ಆ ಸರ್ವಾಧಿಕಾರಿ ಅರ್ಧಂಬರ್ಧ ಪ್ರೀತಿಯನ್ನಾದರೂ ಮಾಡಬೇಕಿತ್ತು…- ವಿಲ್ಸನ್ ಕಟೀಲ್‌ರವರ ಕವಿತೆ Janashakthi Media

Donate Janashakthi Media

Leave a Reply

Your email address will not be published. Required fields are marked *