-ಹರೀಶ್ ಗಂಗಾಧರ
“ನನಗೊಂದು ವಿಷಯ ಸ್ಪಷ್ಟವಾಗಿ ತಿಳಿದಿದೆ, ಅದೇನೆಂದರೆ ನಾಳೆ ಇಂದಿಗಿಂತ ಭಿನ್ನವಾಗೇನೂ ಇರುವುದಿಲ್ಲ ಎಂಬುದು. ನಾವು ನದಿಯ ದಡದಲ್ಲಿ ಬಾರದ ದೋಣಿಗಾಗಿ ಹಾತೊರೆಯುತ್ತಾ ಕುಳಿತವರು. ಎಲ್ಲದರಿಂದ ನಮ್ಮನ್ನು ಪ್ರತ್ಯೇಕಿಸಿ ಕಠಿಣ ಶಿಕ್ಷೆ ವಿಧಿಸಲಾಗಿದೆ. ಪ್ರತ್ಯೇಕಿಸದೆ ಬಿಟ್ಟದ್ದು ನಮ್ಮ ವಿನಾಶ ಒಂದರಿಂದ ಮಾತ್ರ.” ಕನ್ನಡ
ಇವು 1960ರಲ್ಲಿ ಪ್ಯಾಲೆಸ್ತೀನಿ ಕಥೆಗಾರ, ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ ಘಸ್ಸಾನ್ ಕನಫಾನಿ ತನ್ನ ಡೈರಿಯಲ್ಲಿ ಬರೆದುಕೊಂಡ ಸಾಲುಗಳು. ಅಂದು ಪ್ಯಾಲೆಸ್ತೀನಿ ಜನರ ಕರುಣಾಜನಕ ಪರಿಸ್ಥಿತಿಯ ಕುರಿತು ಕನಫಾನಿ ಬರೆದ ಸಾಲುಗಳು ಇಂದಿಗೂ ಪ್ರಸ್ತುತ. ವರುಷಗಳು ಉರುಳಿದಂತೆ ಪ್ಯಾಲೆಸ್ತೀನಿ ಜನರಿಗೆ ಮತ್ತಷ್ಟು ಘನಘೋರ ನರಕದ ದರ್ಶನ ಮಾಡಿಸಲಾಗುತ್ತಿದೆ. ಜಗತ್ತು ಮೂಕ ಪ್ರೇಕ್ಷಕನಾಗಿಯೇ ಕುಳಿತಿದೆ. ಕನ್ನಡ
ಅದು 1948ರ ಒಂದು ದಿನ, ಘಸ್ಸಾನ್ ಕನಫಾನಿಯ ಹನ್ನೆರಡನೇ ಹುಟ್ಟುಹಬ್ಬದ ಸುದಿನ. ಆದರಂದು ದಿಯರ್ ಯಾಸಿನ್ ಎಂಬ ಅರಬ್ ಹಳ್ಳಿಯಲ್ಲಿ ಅರಬ್ಬರ ನರಮೇಧವೆ ನಡೆದುಹೋಗಿತ್ತು. ಅಂದಿನಿಂದ ಘಸ್ಸಾನ್ ಕನಫಾನಿ ತನ್ನ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳುವುದು ಬಿಟ್ಟುಬಿಟ್ಟ. ಕನ್ನಡ
ಇದನ್ನೂ ಓದಿ: ಮಂಡ್ಯ ಸಾಹಿತ್ಯ ಸಮ್ಮೇಳನ|ಮನೆಗೊಂದು ಕೋಳಿ ಸಂಗ್ರಹ ಅಭಿಯಾನ: ಬಾಡೂಟ ಬಳಗದ ಸಿದ್ಧತೆ
ಪ್ಯಾಲೆಸ್ತೀನಿನಲ್ಲಿ ಜನಿಸಿದ ಕನಫಾನಿ ಓದಿದ್ದು ಫ್ರೆಂಚ್ ಮಿಷಿನರಿ ಶಾಲೆಗಳಲ್ಲಿ. ಫ್ರೆಂಚ್ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಕನಫಾನಿಯಗೆ ಅರಬ್ ಭಾಷೆಯೇ ಬಾರದಿರುವ ಹಾಗಾಗಿಹೋಗಿತ್ತು. ನಂತರದ ದಿನಗಳಲ್ಲಿ ಕನಫಾನಿಯ ಅರಬ್ ಭಾಷೆಯ ಮೇಲೆ ಹಿಡಿತ ಸಾಧಿಸಿ ಅದ್ಭುತ ಪತ್ರಕರ್ತ ಮತ್ತು ಕಥೆಗಾರನಾದ. ಭೂಮಿಯನ್ನು ಕಳೆದುಕೊಂಡ ಕನಫಾನಿಗೆ ಶಿಕ್ಷಣದ ಹೆಸರಲ್ಲಿ ತನ್ನ ಭಾಷೆ ಮತ್ತು ನೆಲದ ಸಂಸ್ಕೃತಿಯನ್ನು ಕೂಡ ಮರೆಯುವುದು ಇಷ್ಟವಿರಲಿಲ್ಲ. ಕನ್ನಡ
ಆಕ್ರೆ ಎಂಬ ಊರು ಘಸ್ಸಾನ್ ಕನಫಾನಿಯ ಹುಟ್ಟೂರು. ಹುಟ್ಟೂರು ಜೋಯನಿಸ್ಟರ ದಾಳಿಗೆ ನಲುಗಿ ಅವರ ಕೈವಶವಾದ ಮೇಲೆ ಕನಫಾನಿಯ ಕುಟುಂಬ ದಕ್ಷಿಣ ಲೆಬನಾನ್ ಪ್ರಾಂತ್ಯಕ್ಕೆ ಓಡಿಹೋಗಬೇಕಾಯಿತು. ನಂತರ ಸಿರಿಯಾದ ಡಮಾಸ್ಕಸ್ ಹೊರವಲಯದ ನಿರಾಶ್ರಿತರ ಶಿಬಿರದಲ್ಲಿ ಬಾಳಬೇಕಾಯಿತು. ಆ ಕೊಳಗೇರಿಯಿಂದ ಬಹುಬೇಗ ಮುಕ್ತಿ ಸಿಗಲಿದೆ, ನಾವು ಮತ್ತೆ ನಮ್ಮೂರಿಗೆ ಹೋಗಬಹುದು ಎಂದು ಅಂದು ಕನಫಾನಿ ಕನಸು ಕಂಡಿದ್ದ. ಆ ಕನಸು ನನಸಾಗಲೇ ಇಲ್ಲ. ಇಂದು ಪ್ಯಾಲೆಸ್ತೀನ್ ಎಂದರೆ ಜಗತ್ತಿನ ಅತಿದೊಡ್ಡ ಬಂದೀಖಾನೆ ಎನ್ನಬಹುದು. ಅಲ್ಲಿನ ಜನರು ತಮ್ಮ ದೇಶದಲ್ಲೇ ನಿರಾಶ್ರಿತರಾದವರು. ಮಾರಣಹೋಮ ಅಡೆತಡೆಯಿಲ್ಲದೆ ಸಾಗಿದೆ.
ಹೀಗೆ ಪಕ್ಕ ಪ್ಯಾಲೆಸ್ತೀನಿ ಅನುಭವ ಎನ್ನಬಹುದಾದಂತಹ ಕಹಿ ಅನುಭವಗಳನ್ನೇ ಪ್ರತಿನಿತ್ಯ ಎದುರಿಸುತ್ತಲೇ ಬೆಳೆದವ ಕನಫಾನಿ. ಕನಫಾನಿ ಮುಂದುವರೆದು ನಿರಾಶ್ರಿತರ ಕೊಳೆಗೇರಿಯಲ್ಲಿ ವಿಶ್ವ ಸಂಸ್ಥೆ (UNRWA) ನಡೆಸುವ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸಕ್ಕೆ ಸೇರಿಕೊಂಡ. ಅಲ್ಲಿ ಅಲ್ಪಸ್ವಲ್ಪ ದುಡಿಯುತ್ತಾ ತನ್ನ ಶಿಕ್ಷಣ ಮುಂದುವರೆಸುವ ಇರಾದೆ ಅವನದಾಗಿತ್ತು. ಕನಫಾನಿ ತರಗತಿಯ ವಿದ್ಯಾರ್ಥಿಗಳು ತೂಕಡಿಸುತ್ತಿದ್ದನಂತೆ. ತೂಕಡಿಕೆಗೆ ವಿದ್ಯಾರ್ಥಿಗಳ ಅನಾಸಕ್ತಿ ಅಥವಾ ಅಸಮರ್ಥ ಬೋಧನೆಯಾಗಲಿ ಕಾರಣವಲ್ಲ, ಬದಲಾಗಿ ಅದೊಂದು ರಾಜಕೀಯ ಬಿಕ್ಕಟ್ಟಿನ ಪ್ರತಿಫಲನವಾಗಿತ್ತು ಎಂಬುದನ್ನು ಕನಫಾನಿ ಅರಿಯಲು ಬಹಳದಿನವಿಡಿಯಲಿಲ್ಲ. ಕೊಳೆಗೇರಿಯ ಭೀಕರ ಬಡತನದಲ್ಲಿ ಬದುಕು ಸಾಗಿಸಲು ಮಕ್ಕಳು ಇರುಳಲ್ಲಿ ನಿದ್ದೆ ಇಲ್ಲದೆ ದುಡಿಯಬೇಕಿತ್ತು. ಆಕ್ರಮಣಕ್ಕೆ ನೆಲ ಕಳೆದುಕೊಂಡವರ ಗೋಳು, ಯಾತನೆ, ಬವಣೆಯ ಬದುಕಿನ ಸೂಚಕ ವಿದ್ಯಾರ್ಥಿಗಳ ಆ ತೂಕಡಿಕೆಯಾಗಿತ್ತು.
ಅಧಿಕೃತ ಪಠ್ಯದಲ್ಲಿ ವಿದ್ಯಾರ್ಥಿಗಳಿಗೆ ಕರಿಯ ಹಲಗೆಯ ಮೇಲೆ ಸೇಬು ಮತ್ತು ಬಾಳೆಹಣ್ಣು ಬಿಡಿಸುವುದನ್ನು ಹೇಳಿಕೊಂಡುವಂತೆ ಸೂಚಿಸಲಾಗಿತ್ತು. ಎಂದೆಂದೂ ಸೇಬು, ಬಾಳೆ ಹಣ್ಣನ್ನು ನೋಡದ ಆ ನಿರಾಶ್ರಿತ ಮಕ್ಕಳಿಗೆ ಹಣ್ಣಿನ ಚಿತ್ರ ಬಿಡಿಸಲು ಹೇಳುವುದು ಅಸಹಜವೆನಿಸಿತು. ಅದರ ಬದಲಾಗಿ ಕನಫಾನಿ ಕೊಳೆಗೇರಿಯ ದೈನಂದಿನ ಬದುಕನ್ನು ಚಿತ್ರಸುವಂತೆ ಹೇಳಿದ. ಆ ಘಟನೆ ಅವನ ಬದುಕಿಗೆ ಬಹುಮುಖ್ಯ ತಿರುವು ಮತ್ತು ತಿಳಿವು ನೀಡಿತೆಂದು ಕನಫಾನಿ ತನ್ನ ಬರಹಗಳಲ್ಲಿ ಹೇಳಿಕೊಂಡಿದ್ದಾನೆ.
ಸಿರಿಯಾದ ಡಮಾಸ್ಕಸ್ ವಿಶ್ವವಿದ್ಯಾಲಯದಲ್ಲಿ ಅರಬ್ ಸಾಹಿತ್ಯ ವ್ಯಾಸಂಗ ಮಾಡಿದ ಕನಫಾನಿ, 1962ರಲ್ಲಿ ಬರೆದ MEN IN THE SUN ಕಥಾ ಸಂಕಲನಕ್ಕೆ ಮಾರು ಹೋಗದವರಿಲ್ಲ. ಈ ಕಥಾ ಸಂಕಲನ ಕನಫಾನಿಗೆ ಖ್ಯಾತಿಯನ್ನು ತಂದುಕೊಟ್ಟಿತ್ತು. MEN IN THE SUN ಎಂಬ ಕಥೆಯಲ್ಲಿ ಮೂವರು ಪ್ಯಾಲೆಸ್ತೀನ್ ಪ್ರಜೆಗಳು ಇರಾಕ್ ದೇಶದಿಂದ ಕದ್ದು ನುಸುಳಿ ಕುವೈಟ್ ತಲುಪಲು ಪ್ರಯತ್ನಿಸುತ್ತಾರೆ. ಕುವೈಟ್ ನಲ್ಲಿರುವ ಉದ್ಯೋಗಾವಕಾಶಗಳು ಅವರನ್ನು ಆಕರ್ಷಿಸಿ ಅಪಾಯಕಾರಿ ಪಯಣ ಬೆಳೆಸುವಂತೆ ಪ್ರೇರೇಪಿಸುತ್ತದೆ.
ಖಾಲಿ ನೀರಿನ ಟ್ಯಾಂಕರ್ ಒಳಗೆ ಅವಿತು ಮೂವರು ಪ್ಯಾಲೆಸ್ತೀನರು ಆ ಪಯಣ ಬೆಳೆಸುತ್ತಾರೆ. ಗಡಿಯಲ್ಲಿ ಟ್ಯಾಂಕರ್ ಚಾಲಕ ಬಂಧಿಯಾಗುತ್ತಾನೆ. ಟ್ಯಾಂಕರ್ ಒಳಗೆ ಅವಿತ ಮೂವರು ಯಾವ ಸದ್ದು ಮಾಡದೆ ಮರುಭೂಮಿಯ ಬಿಸಿಲಿನ ಬೇಗೆಗೆ ಒಳಗೆ ಕೊನೆಯುಸಿರೆಳೆಯುತ್ತಾರೆ. ಕಥೆಯ ಅಂತ್ಯದಲ್ಲಿ ಟ್ಯಾಂಕರ್ ಚಾಲಕ ಕೇಳುವ ಪ್ರಶ್ನೆಗಳು- ಒಳಗಿದ್ದವರು ಸದ್ದೇಕೆ ಮಾಡಲಿಲ್ಲ? ಯಾಕೆ ಅರಚಲಿಲ್ಲ? ಗದ್ದಲವನ್ನೇಕೆ ಮಾಡಲಿಲ್ಲ? ಮೌನದಿ ಮರಣಕ್ಕೇಕೆ ಶರಣಾದಿರಿ? ಎಂಬ ಪ್ರಶ್ನೆಗಳು ಇಂದಿಗೂ ಪ್ರಸ್ತುತ. ಟ್ಯಾಂಕರ್ ಚಾಲಕ ಕೇಳುವ ಪ್ರಶ್ನೆಗಳು ಏಕಕಾಲಕ್ಕೆ ಗಾಜಾ ಪಟ್ಟಿಯಲ್ಲಿ ನಡೆದಿರುವ ನರಮೇಧವನ್ನು ಮೌನದಿ ನೋಡುತ್ತಾ ಕುಳಿತಿರುವ ಜಗದ ಸಮುದಾಯಕ್ಕೆ, ಎಲ್ಲವನ್ನೂ ಸಹಿಸುತ್ತ ಬಸವಳಿದ ಪ್ಯಾಲೆಸ್ತೀನರಿಗೆ ಕೇಳಿದ ಪ್ರಶ್ನೆಗಳಾಗಿಬಿಡುತ್ತವೆ!
ಡಯಾಬಿಟಿಸ್ ರೋಗದಿಂದ ನರಳುತ್ತಿದ್ದ ಕನಫಾನಿ ಸಾಮಾಜಿಕ ಬದ್ಧತೆಯಿದ್ದ ಪತ್ರಕರ್ತನಾಗಿದ್ದ. ಕನಫಾನಿ ಬರೆಯುತ್ತಿದ್ದ ಅಂಕಣಗಳು ದಮನಿತರನ್ನು ಶೋಷಣೆಯ ವಿರುದ್ಧ ಬಡಿದೆಬ್ಬಿಸುವಂತಿರುತ್ತಿದ್ದವು. ಹೀಗೆ ಪತ್ರಿಕೆಗಳಲ್ಲಿ ಅಂಕಣ ಬರೆಯುತ್ತಿದ್ದ ಘಸ್ಸಾನ್ ಕನಫಾನಿಗೆ “ನೀನು ಅದ್ಭುತ ಕಥೆಗಾರ, ಪತ್ರಿಕೆಯ ನಿನ್ನ ಬರವಣಿಗೆಗಳು ನಿನ್ನೊಳಗಿನ ಕಥೆಗಾರನನ್ನು ಕೊಲ್ಲುತ್ತಿದೆ. ಕಥೆಗಾರನಾಗು” ಎಂದು ಹಲವರು ಕನಫಾನಿಗೆ ಸಲಹೆ ನೀಡಿದ್ದು ಇದೆ. MEN IN THE SUN ಕಥಾ ಸಂಕಲನದ ಖ್ಯಾತಿಯೇ ಹಾಗಿತ್ತು.
“ನನಗೆ ಈ ಲಾಜಿಕ್ ಅರ್ಥವೇ ಆಗಲ್ಲ. ರಾಜಕೀಯ ಬಿಡು ಓದಿನ ಬಗ್ಗೆ ಗಮನ ಹರಿಸು ಎಂದು ನನ್ನ ವಿದ್ಯಾರ್ಥಿ ದಿನಗಳಲ್ಲಿ ಸಲಹೆ ನೀಡುತ್ತಿದ್ದರು. ಓದು ಬಿಡು ಆರೋಗ್ಯದ ಬಗ್ಗೆ ಗಮನ ಹರಿಸು ಎಂದು ಡಯಾಬಿಟಿಸ್ ಬಂದಾಗ ಹಲವರು ಹೇಳಿದರು. ಕಾಲಂ ಬರೆಯೋದು ನಿಲ್ಲಿಸಿ ಕಥೆ ಬರೆ ಅಂತ ಈಗ ಹೇಳುತ್ತಿದ್ದಾರೆ. ಒಬ್ಬ ಪ್ಯಾಲೆಸ್ತೀನ್ ಪ್ರಜೆಯಾಗಿ ನನ್ನದೇ ಆದ ಆಯ್ಕೆ ಸ್ವಾತಂತ್ರ್ಯ ಇದೆಯೇ?” ಎಂದು ಮಾರ್ಮಿಕವಾಗಿ ಸವಾಲು ಮಾಡಿದ್ದ ಕನಫಾನಿ.
ಇಸವಿ 1965ರಲ್ಲಿ ಪೀಎಲ್ ಓ ಅಸ್ತಿತ್ವಕ್ಕೆ ಬಂದ ಮೇಲೆ ಕನಫಾನಿಯ ಮನದಲ್ಲಿ ಮಾತೃಭೂಮಿಯನ್ನು ಮರಳಿ ಪಡೆಯುವ ಹುಮ್ಮಸ್ಸು ಮೂಡಿತ್ತು. ಅಲ್- ಅನ್ವರ್, ಅಲ್ – ಹದಫ್, ಅಲ್ – ಮೊಹರೇರ್, ಅಲ್- ಅನ್ವರ್ ಪ್ರತಿಷ್ಠಿತ ಪತ್ರಿಕೆಗಳ ಸಂಪಾದಕನಾಗಿ ಬರೆದ. “ರಿಟರ್ನಿಂಗ್ ಟು ಹೈಫ” ಎಂಬ ಕಥಾ ಸಂಕಲನವನ್ನೂ ಹೊರತಂದ.
ಈ ನಡುವೆ 1967ರ ಅರಬ್ ಇಸ್ರೇಲಿ ಯುದ್ಧದಲ್ಲಿ ಅರಬ್ ಬಣ ಅನುಭವಿಸಿದ ಹೀನಾಯ ಸೋಲು ಕನಫಾನಿಯನ್ನು ಕುಗ್ಗಿಸಿಬಿಟ್ಟಿತ್ತು. ಆತನ ಜೀವನದಲ್ಲಿ ಮೊದಲ ಬಾರಿ ಏನು ಬರೆಯಲಾಗದ ಸ್ಥಿತಿ ತಲುಪಿದ್ದ. ಬಹು ಬೇಗ ಆಘಾತದಿಂದ ಚೇತರಿಸಿಕೊಂಡ ಕನಫಾನಿ ಮತ್ತೆ ಬರೆಯಲು ಶುರು ಮಾಡಿಕೊಂಡ. ಹೋರಾಟ ಮುಂದುವರೆಸಲು ಕರೆ ನೀಡಿದ. ಆಶಾವಾದ ಬಿಡಲು ಆತ ಸಿದ್ಧನಿರಲಿಲ್ಲ.
1970ರ ದಶಕದಲ್ಲಿ ಮಾರ್ಕ್ಸಿಸ್ಟ್ ಸಿದ್ಧಾಂತದ “ಪಾಪ್ಯುಲರ್ ಫ್ರಂಟ್ ಫಾರ್ ದ ಲಿಬರೇಷನ್ ಆಫ್ ಪ್ಯಾಲೆಸ್ತೀನ್” ಮಾತೃಭೂಮಿಯನ್ನು ಮರಳಿ ಪಡೆಯಲು ಸಾಮಾಜಿಕ ಸುಧಾರಣೆ ಮಾಡಲು ಹೋರಾಟ ನಡೆಸುತ್ತಿತ್ತು. ಕನಫಾನಿ ಈ ಬಳಗದ ಜೊತೆಗೆ ಸಖ್ಯ ಬೆಳೆಸಿಕೊಂಡ. ಬೆಂಕಿಯಂತಹ ಬರಹವನ್ನು ಮುಂದುವರೆಸಿದ. ಇದೇ ದಶಕದಲ್ಲಿ ಪಿಎಲ್ಒ ಲೆಬನಾನ್ ಮತ್ತು ಜೋರ್ಡಾನ್ ನೆಲದಿಂದ ಇಸ್ರೇಲ್ ವಿರುದ್ಧ ಹತ್ತಾರು ದಾಳಿ ನಡೆಸಿತು. ಇಸ್ರೇಲ್ ಪ್ರತಿದಾಳಿ ಮಾಡದೆ ಸುಮ್ಮನಿದ್ದೀತೆ? ಅಂದಿನಿಂದ ಇಂದಿನವರೆಗೆ ದಾಳಿ ಪ್ರತಿದಾಳಿಗಳ ನೆಪದಲ್ಲಿ ನೆತ್ತರ ನದಿ ಹರಿಯುತ್ತಲೇ ಇದೆಯಲ್ಲವೇ?
ಜುಲೈ 8, 1972. ಎಂದಿನಂತೆ ತನ್ನ ಕಾರ್ ಏರಿದ ಘಸ್ಸಾನ್ ಕನಫಾನಿ ವಾಹನ ಸ್ಟಾರ್ಟ್ ಮಾಡುತ್ತಲೇ ಭೂಮಿ ಕಂಪಿಸಿತ್ತು. ಸುತ್ತಮುತ್ತಲಿನ ಕಿಟಿಕಿ ಗಾಜುಗಳು ಪುಡಿ ಪುಡಿಯಾಗಿದ್ದವು, ವಾಹನ ಸ್ಫೋಟಗೊಂಡು ಅಗ್ನಿಯುಂಡೆ ಅಣಬೆಯಂತೆ ಆಗಸಕ್ಕೆ ಏರಿತ್ತು. ಕೊನೆಗೆ ಘಸ್ಸಾನ್ ಕನಫಾನಿಯ ಮಡದಿಗೆ ಸಿಕ್ಕಿದ್ದು ಆತನ ಎಡಗಾಲು ಮಾತ್ರ. ಘಸ್ಸಾನ್ ಕನಫಾನಿ ಎಂಬ ಅದ್ಭುತ ಕತೆಗಾರನ ಘೋರ ಅಂತ್ಯಕ್ಕೆ ಸೇಡು, ಪ್ರತ್ಯುತ್ತರದ ಕಾರಣ ನೀಡಲಾಗಿತ್ತು.
ಘಸ್ಸಾನ್ ಕನಫಾನಿ MEN IN THE SUN ಮತ್ತು RETURN TO HAIFA ಕಥಾಸಂಕಲನವನ್ನು ಬಹಳ ಹಿಂದೆ ಓದಿದ್ದೆ. ಘಸ್ಸಾನ್ ಕನಫಾನಿಯಷ್ಟು ನೇರವಾಗಿ, ನಿಷ್ಠುರವಾಗಿ ನಮ್ಮ ಕಥೆಗಾರರು ಏಕೆ ಬರೆಯುವುದಿಲ್ಲ. ಅವನ ಕಥೆಯಲ್ಲಿನ ತೀವ್ರತೆ, ಸಾಮಾಜಿಕ ಕಾಳಜಿ, ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ, ದಮನಿತರಿಗೆ ದನಿಯಾಗುವ ಮಾನವ ಸಹಜ ತುಡಿತ ನಮ್ಮ ಕತೆಗಾರರಿಗೆ ಏಕಿಲ್ಲ ಎಂದು ಯೋಚಿಸಿದ್ದೆ. ಅವಾಸ್ತವಿಕ ಕನಸುಗಳನ್ನೇಕೆ ಬಿಕರಿ ಮಾಡುತ್ತಾರೆ ಎಂದು ಗೊಂದಲಕ್ಕೆ ಒಳಗಾಗಿದ್ದೆ. ಅದೇನೇ ಇರಲಿ ಘಸ್ಸಾನ್ ಕನಫಾನಿ ಕಥೆಗಳೀಗ ಕನ್ನಡಕ್ಕೆ ಬಂದಿದೆ. ಸಂಕಥನ ಪ್ರಕಟಿಸಿರುವ ಈ ಕಥಾಸಂಕಲನ ಕನ್ನಡದ ಕತೆಗಾರರಿಗೆ ಒಳ್ಳೆಯ ಮಾದರಿಯಾಗಲಿ ಎಂದು ಆಶಿಸುತ್ತೇನೆ.
ಇದನ್ನೂ ನೋಡಿ: Karnataka legislative assembly Day 01 Live. 16ನೇ ವಿಧಾನಸಭೆಯ ಚಳಿಗಾಲದ ಅಧಿವೇಶನದ ನೇರ ಪ್ರಸಾರ