ಘನತೆಯ ಬದುಕಿಗಾಗಿ ಹಿಂಸೆಯ ವಿರುದ್ಧ ಧ್ವನಿ ಎತ್ತೋಣ

ವಿಮಲಾ.ಕೆ.ಎಸ್‌

ನಮ್ಮ ಸುತ್ತಲಿನ ಸಮಾಜವೊಂದು ಹೀಗೆ ಹಿಂಸ್ರಕವಾಗುತ್ತಿದೆ. ಅಭಿಪ್ರಾಯ ಬೇಧಗಳು ಜೀವಗಳ ಬಲಿಯಲ್ಲಿ ಪರ್ಯಾವಸಾನಗೊಳ್ಳುತ್ತಿವೆ. ಇಂತಹ ಘಟನೆಗಳು ನಡೆಯದಂತಹ ವಾತಾವರಣ ನಿರ್ಮಾಣ ಎಲ್ಲರ ಜವಾಬ್ದಾರಿ. ಅದರಲ್ಲಿಯೂ ಅಧಿಕಾರದ ಚುಕ್ಕಾಣಿ ಹಿಡಿದವರಿಗೆ ಸಮಾಜದ ಈ ಕ್ರೌರ್ಯಸ್ಥ ಮನಸ್ಸಿಗೆ ಮದ್ದು ಕುಡಿಸುವುದು ತಮ್ಮ ಪ್ರತಿಷ್ಟೆಯ ಪ್ರಶ್ನೆಯಾಗಬೇಕು. ಆದರೆ ವಿಪರ್ಯಾಸವೆಂದರೆ ಅಧಿಕಾರದಲ್ಲಿರುವವರೇ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಹಿಂಸೆಗೆ ಪ್ರಚೋದಿಸುತ್ತಿರುವ ಉದಾಹರಣೆಗಳಿವೆ., ಅತ್ಯಂತ ಬರ್ಭರವಾಗಿ ಅತ್ಯಾಚಾರ ಎಸಗಿ, ಹಸುಗೂಸನ್ನು ತಾಯ ಕೈಯಿಂದ ಕಿತ್ತು ಕಲ್ಲಿಗಪ್ಪಳಿಸಿ ಕೊಂದವರ ಅಪರಾಧ ಸಾಬೀತಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದವರನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಮಾಡುವ ಮತ್ತು ಹಾಗೊಂದು ಮಾಡಲು ಸಾಧ್ಯವೇ ಎಂದು ಪರಿಶೀಲನೆಗೆ ದೇಶದ ಸರ್ವೋಚ್ಚನ್ಯಾಯಾಲಯವೇ ಅನುಮತಿಸಿದ ಸಂಗತಿಗಳಿಗೆ ನಾವೆಲ್ಲರೂ ಸಾಕ್ಷಿಗಳು.

ವಿಶ್ವ ಸಂಸ್ಥೆ ಕರೆ ನೀಡಿದ; ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಹಿಂಸಾ ನಿರ್ಮೂಲನಾ ದಿನ ನವೆಂಬರ್‌ ೨೫. ಸುತ್ತಲಿನ ಸಮಾಜ ವಿಕೃತ ಸ್ವರೂಪದ ಹಿಂಸೆಗೆ ಸಾಕ್ಷಿಯಾಗುತ್ತಿದೆ. ಪ್ರತಿ ಕ್ಷಣ ವರದಿಯಾಗುತ್ತಿರುವ (ವರದಿಯಾಗದ ಅದೆಷ್ಟೋ) ಹಿಂಸೆಯ ಭಿನ್ನ ಭಿನ್ನ ಘಟನೆಗಳನ್ನು ನೋಡಿದರೆ ಬೆಚ್ಚಿ ಬೀಳುವಂತೆ ಆಗುತ್ತಿದೆ. ಮತ್ತು ಕ್ರೌರ್ಯದ ಪರಮಾವಧಿಯ ಈ ಕೃತ್ಯಗಳು ಈ ಮುಂಚಿನ ಕೃತ್ಯಗಳು ಸಹನೀಯವಿದ್ದವು ಎಂಬಂತಹ ವಾತಾವರಣ ನಿರ್ಮಿಸಿವೆ. ಅಯ್ಯೋ ಹಿಂದೆಲ್ಲ ಬರೀ ಬೈತಿದ್ರು ಈಗ ಹೊಡಿತಾರೆ ಎಂಬುದರಿಂದ ಆರಂಭವಾಗಿ ಮೊದ್ಲು ಅತ್ಯಾಚಾರ ಮಾಡ್ತಿದ್ರು ಈಗ ಅತ್ಯಾಚಾರ ಮಾಡಿ ಕೊಂದೇ ಹಾಕ್ತಿದಾರೆ ಎನ್ನುವವರೆಗೆ. ಮುಂದೆ….. ಯಾವ ಉದ್ಗಾರಕ್ಕೆ ಎಡೆ ಮಾಡಬಹುದು ಎಂಬುದಕ್ಕೆ ಈಗ ಚರ್ಚೆಯಲ್ಲಿರುವ ಕ್ರೌರ್ಯದ ಪರಮಾವಧಿಯ ಕೆಲವು ಘಟನೆಗಳ ಮೂಲಕ ಊಹಿಸಬಹುದು.

ಒಬ್ಬನ ಹೆಸರು ಅಫ್ತಾಬ್‌ ಇನ್ನೊಬ್ಬ ಅಭಿಜಿತ್‌ ಪಾಟೀದಾರ್.‌ ಇಬ್ಬರೂ ಹಿಂಸ್ರಕರು. ಮನುಷ್ಯತ್ವ ಎಂಬುದರ ಎಲ್ಲ ಎಲ್ಲೆಗಳನ್ನೂ ಮೀರಿದ ಕ್ಷುದ್ರ ಪಿಪಾಸುಗಳು. ಒಬ್ಬ ತನ್ನ ಸಹಮತದ ಸಂಗಾತಿಯನ್ನು ಕೊಂದು 32 ತುಂಡು ಮಾಡಿ ದಿಕ್ಕು ದಿಕ್ಕಿಗೆ ಎಸೆದವನು. ಮತ್ತೊಬ್ಬ, ಗೆಳತಿಯ ಕತ್ತು ಸೀಳಿ ಸಾಯಿಸಿ ಅದನ್ನು ವಿಡಿಯೋ ಮಾಡಿ ಹಂಚಿಕೊಂಡವನು. ಇವೆರಡೂ ತಕ್ಷಣ ಸುದ್ದಿಯಲ್ಲಿರುವ ಹೃದಯ ವಿದ್ರಾವಕ ಘಟನೆಗಳು. ಇನ್ನೊಂದು ಹೆಚ್ಚು ಸುದ್ದಿ ಮಾಡದ ಆದರೆ ಈಗಲಾದರೂ ನಾವು ಗಮನಿಸಬೇಕಾದ ಎದೆಯೊಡೆಯುವ ಘಟನೆ, ಪ್ರೀತಿ ಶರ್ಮಾ ಎಂಬ ೩೫ ವರ್ಷದ ಮಹಿಳೆ ತನ್ನೊಂದಿಗೆ ಸಹಜೀವನದ ಸಂಬಂಧದಲ್ಲಿದ್ದ ಮೊಹ್ಮದ್‌ ಫೈರೋಜ್‌ನನ್ನು ರೇಜರ್‌ ನಿಂದ ಕತ್ತು ಸೀಳಿ ಸಾಯಿಸಿ, ಟ್ರಾಲಿ ಬ್ಯಾಗ್‌ ನಲ್ಲಿ ತುಂಬಿ ಸಾಗಿಸುತ್ತಿದ್ದು ಸಿಕ್ಕಿ ಬಿದ್ದಳಂತೆ!

ಹಾಗೆಂದ ಮಾತ್ರಕ್ಕೆ ಇದು ಈಗ ಮಾತ್ರ ನಡೆಯುತ್ತಿರುವ ಘಟನೆಗಳಲ್ಲ.

ಅದು 1995ನೇ ಇಸವಿ. 4 ನೇ ವಿಶ್ವ ಮಹಿಳಾ ಸಮ್ಮೇಳನಕ್ಕೆ ಸಜ್ಜಾಗುತ್ತಿದ್ದ ಹೊತ್ತು. ಅಂದಿನ ಘೋಷಣೆ ʼವಿಶ್ವವನ್ನು ಮಹಿಳೆಯ ದೃಷ್ಟಿಯಿಂದ ನೋಡುʼ ಎಂದಾಗಿತ್ತು. ಆಗಸ್ಟ್‌ನಲ್ಲಿ ನಡೆಯುವ ಆ ಸಮ್ಮೇಳನದ ಭಾಗವಾಗಿ ನಡೆಯಲಿರುವ ಎನ್.ಜಿ.ಓ. ಫೋರಂ ನಲ್ಲಿ ಪಾಲ್ಗೊಳ್ಳುವ ಉತ್ಸಾಹದಲ್ಲಿ ನನ್ನಂತಹ ಕೆಲವರು ಸಿದ್ಧತೆ ನಡೆಸಿದ್ದೆವು. ಆಗ ಬೆಳಕಿಗೆ ಬಂದ ಶಾಕಿಂಗ್‌ ಘಟನೆ.ಜುಲೈ 1995 ರಲ್ಲಿ ಸುಶೀಲ್‌ ಶರ್ಮ ಎಂಬ ವ್ಯಕ್ತಿ ತನ್ನ ಹೆಂಡತಿ ನೀನಾ ಶರ್ಮಾಳನ್ನು ಕೊಂದು ತುಂಡರಿಸಿ ತಂದೂರಿ ಒಲೆಗೆ ತುರುಕಿದ್ದ. ಅವರಿಬ್ಬರೂ ರಾಜಕೀಯದಲ್ಲಿ ಸಕ್ರಿಯವಾಗಿದ್ದವರು. ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು. ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಆಕ್ರೋಶ ಮುಗಿಲು ಮುಟ್ಟಿತ್ತು. ದೂರು, ವಿಚಾರಣೆ, ಕೋರ್ಟು ಪ್ರಕರಣ ಹೀಗೆ ಎಲ್ಲವೂ ನಡೆದು ಆತನಿಗೆ ಜೀವಾವಧಿ ಶಿಕ್ಷೆಯೂ. ಆಯಿತು.

ನಂತರದ ದಿನಗಳಲ್ಲಿ ಕೂಡಾ ದೌರ್ಜನ್ಯ, ಹಿಂಸೆ ಹತ್ಯೆ ನಡೆಯುತ್ತಲೇ ಇವೆ. ಆತನಿಗೆ ಜೀವಾವಧಿ ಶಿಕ್ಷೆಯಾಯಿತೆಂದು ಅಂತಹ ದುಷ್ಕೃತ್ಯವನ್ನು ಇನ್ನೊಬ್ಬರು ಮಾಡದೇ ಉಳಿಯಲಿಲ್ಲ ಒಂದು ವರದಿಯ ಪ್ರಕಾರ 2014 ರಿಂದೀಚೆಗೆ ಪ್ರೀತಿ ಪ್ರೇಮದ ಹೆಸರಿನಲ್ಲಿ ನಡೆದ ಕೊಲೆಗಳಲ್ಲಿ 48% ಹೆಚ್ಚಳವಾಗಿದೆಯಂತೆ! (ಉದ್ದೇಶ ಪೂರ್ವಕ ಎಸಗುವ ಅಪರಾಧಗಳ ಬಗ್ಗೆ ಹೆಚ್ಚು ವಿಷದವಾಗಿ ಆ ವರ್ಷ ಪ್ರಕಟಿಸಲಾಗಿದೆ ಎಂದು ಹೇಳಲಾಗುತ್ತದೆ). ಕಳೆದ ವರ್ಷ ವರದಿಯಾದ 30000 ಕೊಲೆಗಳಲ್ಲಿ 1600 ಕೊಲೆಗಳು ಪ್ರೀತಿ ಮತ್ತು ಮೋಸಕ್ಕೆ ಸಂಬಂಧಿಸಿ ನಡೆದವುಗಳು ಎಂದು ನ್ಯಾಷನಲ್‌ ಕ್ರೈಮ್‌ ಬ್ಯುರೋ ವರದಿಯಲ್ಲಿ ಉಲ್ಲೇಖವಿದೆ ಎಂದು ವರದಿಯಾಗಿದೆ. 2021ರ ಎನ್‌.ಸಿ.ಆರ್.ಬಿ ವರದಿಯ ಪ್ರಕಾರ ಮಹಿಳೆಯರ ಮೇಲಿನ ದೌರ್ಜನ್ಯ ಹಿಂದಿನ ವರ್ಷಗಳಿಗಿಂತ ೧೫.೩% ಹೆಚ್ಚಿದೆ. ವರದಿಯಾದ ಪ್ರಕರಣಗಳಲ್ಲಿ ಗಂಡ/ಸಂಗಾತಿ ಮತ್ತವನ ಕುಟುಂಬದವರಿಂದ ನಡೆಯುವ ಕ್ರೌರ್ಯ ೩೧.೮%.

ನಮ್ಮ ಸುತ್ತಲಿನ ಸಮಾಜವೊಂದು ಹೀಗೆ ಹಿಂಸ್ರಕವಾಗುತ್ತಿದೆ. ಅಭಿಪ್ರಾಯ ಬೇಧಗಳು ಜೀವಗಳ ಬಲಿಯಲ್ಲಿ ಪರ್ಯಾವಸಾನಗೊಳ್ಳುತ್ತಿವೆ. ಇಂತಹ ಘಟನೆಗಳು ನಡೆಯದಂತಹ ವಾತಾವರಣ ನಿರ್ಮಾಣ ಎಲ್ಲರ ಜವಾಬ್ದಾರಿ. ಅದರಲ್ಲಿಯೂ ಅಧಿಕಾರದ ಚುಕ್ಕಾಣಿ ಹಿಡಿದವರಿಗೆ ಸಮಾಜದ ಈ ಕ್ರೌರ್ಯಸ್ಥ ಮನಸ್ಸಿಗೆ ಮದ್ದು ಕುಡಿಸುವುದು ತಮ್ಮ ಪ್ರತಿಷ್ಟೆಯ ಪ್ರಶ್ನೆಯಾಗಬೇಕು. ಆದರೆ ವಿಪರ್ಯಾಸವೆಂದರೆ ಅಧಿಕಾರದಲ್ಲಿರುವವರೇ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಹಿಂಸೆಗೆ ಪ್ರಚೋದಿಸುತ್ತಿರುವ ಉದಾಹರಣೆಗಳಿವೆ., ಅತ್ಯಂತ ಬರ್ಭರವಾಗಿ ಅತ್ಯಾಚಾರ ಎಸಗಿ, ಹಸುಗೂಸನ್ನು ತಾಯ ಕೈಯಿಂದ ಕಿತ್ತು ಕಲ್ಲಿಗಪ್ಪಳಿಸಿ ಕೊಂದವರ ಅಪರಾಧ ಸಾಬೀತಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದವರನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಮಾಡುವ ಮತ್ತು ಹಾಗೊಂದು ಮಾಡಲು ಸಾಧ್ಯವೇ ಎಂದು ಪರಿಶೀಲನೆಗೆ ದೇಶದ ಸರ್ವೋಚ್ಚನ್ಯಾಯಾಲಯವೇ ಅನುಮತಿಸಿದ ಸಂಗತಿಗಳಿಗೆ ನಾವೆಲ್ಲರೂ ಸಾಕ್ಷಿಗಳು.

ಆದರೆ ನಡೆದ ಘಟನೆಗಳು ಮತ್ತದರ ಹಿಂದಿರುವ ವಿಕೃತ ಸ್ವರೂಪಗಳನ್ನು ಗೌಣ ಮಾಡಿಬಿಡುವಂತೆ ಹಿಂಸ್ರಕರ ಜಾತಿ ಧರ್ಮಗಳನ್ನು ಮುಂದೆ ಮಾಡುವ ಕ್ರೌರ್ಯದ ಮತ್ತೊಂದು ಮುಖದ ಅನಾವರಣವೂ ಆಗುತ್ತಿದೆ. ಹೆಸರಿನ ಮೂಲಕ ಧರ್ಮದ ಗುರುತು ಹಚ್ಚುವ ಹೀನ ಮನಃಸ್ಥಿತಿಯನ್ನು ಸೋ ಕಾಲ್ಡ್‌ ಜನ ಪ್ರತಿನಿಧಿಗಳೇ ಮಾಡಿ ದಕ್ಕಿಸಿಕೊಂಡಿದ್ದನ್ನೂ ನೋಡುತ್ತಿದ್ದೇವೆ. ಶ್ರದ್ದಾ ವಾಲ್ಕರ್‌ ಪ್ರಕರಣದಲ್ಲಿ ಇದು ಮತ್ತೊಮ್ಮೆ ಬಹಿರಂಗವಾಯಿತು. ಧಾರ್ಮಿಕತೆ ಮತ್ತು ಧರ್ಮಾಂಧತೆ ಇವೆರಡೂ ಒಂದೇ ಅಲ್ಲ. ನಂಬಿಕೆ ಇರುವವರು ತಮ್ಮ ತಮ್ಮ ಧರ್ಮ, ಆಚರಣೆಗಳನ್ನು ತಮ್ಮಷ್ಟಕ್ಕೆ ತಾವು ಮಾಡಿಕೊಳ್ಳಲು ನಮ್ಮ ಸಂವಿಧಾನವೂ ಅವಕಾಶ ನೀಡಿದೆ. ನೆಲದ ಪರಂಪರೆಯಲ್ಲು ಅದು ಇದೆ. ಆದರೆ ಧಾರ್ಮಿಕತೆಯನ್ನು ಧರ್ಮಾಂಧತೆಯಾಗಿ ಪರಿವರ್ತಿಸುವ ಕೆಲಸವನ್ನು ಅಧಿಕಾರ ಸ್ಥಾನದಲ್ಲಿರುವವರೇ ಮಾಡುತ್ತಿರುವ ಹೊತ್ತಿದು. ಇದು ಖಂಡನೀಯ.

ಹಿಂಸೆ ಎನ್ನುವ ಒಂದು ಅನಪೇಕ್ಷಿತ, ಅಸಹನೀಯ,ಕಾನೂನಿಗೆ ವಿರುದ್ಧವಾದ ಮತ್ತು ಎಲ್ಲದಕ್ಕಿಂತ ಮುಖ್ಯವಾಗಿ ಅಮಾನವೀಯ ಕ್ರಿಯೆ ಘಟಿಸುತ್ತಲೇ ಇದೆ. ಅದರ ಸ್ವರೂಪಗಳು, ತೀವ್ರತೆಗಳು ಭಿನ್ನವಿರಬಹುದು. ಆದರೆ ಹಿಂಸ್ರಕ ಪೃವೃತ್ತಿಗೆ ಕಡಿವಾಣವಿಲ್ಲದ ರೀತಿಯಲ್ಲಿ ಮುಂದುವರೆಯುತ್ತಿವೆ. ಅಂದು ಸುಶೀಲ್‌ ಶರ್ಮಾ ತನ್ನ ಹೆಂಡತಿಯನ್ನು ಕೊಂದು ತುಂಡರಿಸಿ ತಂದೂರಿ ಒಲೆಯಲ್ಲಿ ತುರುಕಿದ ಸಂದರ್ಭಕ್ಕಿಂತ ಈಗ ಸಮಾಜದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಲಿಂಗಾಧಾರಿತ ದೌರ್ಜನ್ಯಗಳು, ವ್ಯಕ್ತಿ ಸ್ವಾತಂತ್ರ, ಘನತೆಯ ಬದುಕು, ಇವೆಲ್ಲದರ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಹಲವಾರು ಕಾನೂನುಗಳು, ಇರುವ ಕಾನೂನಿಗೆ ತಿದ್ದುಪಡಿಗಳು ಹೀಗೆಲ್ಲ ನಡೆದಿವೆ. ಜೊತೆಗೇ ಕುಖ್ಯಾತ ನಿರ್ಭಯಾ ಪ್ರಕರಣದ ನಂತರ ಈಗಿರುವ ಶಿಕ್ಷೆ ಯನ್ನು ಉಗ್ರಾತಿ ಉಗ್ರ ಶಿಕ್ಷೆಯಾಗಿ ಪರಿವರ್ತಿಸಬೇಕು ಎಂಬ ಕೂಗು ಎಬ್ಬಿಸಲಾಯಿತು. ಗಲ್ಲು ಶಿಕ್ಷೆಯನ್ನು ವಿಧಿಸುವ ತೀರ್ಮಾನವನ್ನೂ (ಅಪ್ರಾಪ್ತರ ಮೇಲಿನ ಅತ್ಯಾಚಾರದಂತಹ ಪ್ರಕರಣಗಳಲ್ಲಿ) ಕೆಲವು ರಾಜ್ಯಗಳಲ್ಲಿ ಜಾರಿಗೆ ತಂದಾಗಿದೆ. ಆದರೆ ಅಂತಹ ಉಗ್ರ ಶಿಕ್ಷೆಯ ಪ್ರಸ್ತಾಪವೂ ಅಪರಾಧಗಳನ್ನು ಕಡಿಮೆ ಮಾಡಿಲ್ಲ ಎನ್ನುವುದು ಮತ್ತೆ ಮತ್ತೆ ನಡೆಯುತ್ತಿರುವ ಘಟನೆಗಳಿಂದ ಸಾಬೀತಾಗುತ್ತಿದೆ.

ವಿಶ್ವಸಂಸ್ಥೆ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ಎಲ್ಲ ರೀತಿಯ ಹಿಂಸೆಗಳನ್ನು ಕೇವಲ ತಡೆ, ನಿಯಂತ್ರಣವಲ್ಲ ಅದರ ನಿರ್ಮೂಲನೆಯಾಗಬೇಕು ಎಂದು ನವೆಂಬರ್‌ ೨೫ ನ್ನು ಪ್ರತಿವರ್ಷ ಹಿಂಸೆ ನಿರ್ಮೂಲನಾ ದಿನವನ್ನಾಗಿ ಆಚರಿಸಲು ಮತ್ತು ಅದರ ಕ್ರಿಯಾಶೀಲತೆ ಡಿಸೆಂಬರ್‌ ೧೦ ಮಾನವ ಹಕ್ಕುಗಳ ದಿನದ ವರೆಗೆ ವಿಸ್ತರಿಸಬೇಕೆಂದು ಕರೆ ನೀಡುತ್ತದೆ. ಎಲ್ಲರೂ ಒಟ್ಟಾಗಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಹಿಂಸೆಯನ್ನು ನಿರ್ಮೂಲನೆ ಮಾಡಲು ಕ್ರಿಯಾಶೀಲರಾಗಿ ಎಂಬುದು ಅದರ ಘೋಷವಾಕ್ಯ. ಇದು ಮನುಜರೆಲ್ಲರಿಗೂ ಅನ್ವಯವಾಗುವ ಹಾಗೇ ಸರಕಾರ ನಡೆಸುವ ಎಲ್ಲರಿಗೂ ತಮ್ಮ ತಮ್ಮ ನೆಲೆಯ ಎಲ್ಲ ಹಂತಗಳ ಅಧಿಕಾರದ ಸ್ಥಾನಗಳಿಗೆ ಈ ಮಾಹಿತಿಯ ರವಾನೆ ಮತ್ತು ನಿರ್ದಿಷ್ಟ ಕಾರ್ಯಸೂಚಿ ಹಾಗೂ ಪರಿಶೀಲನೆ ಅತ್ಯಗತ್ಯವಾದ ಕ್ರಮವಾಗಬೇಕು. ಹಾಗೆಯೇ ನಾಗರಿಕ ಸಮಾಜದ ಭಾಗವಾಗಿರುವ ಎಲ್ಲ ಸಂಘ ಸಂಸ್ಥೆಗಳಲ್ಲಿ ತಮ್ಮ ತಮ್ಮ ಕಾರ್ಯ ಚಟುವಟಿಕಗೆಳ ಒಂದು ಭಾಗ ಇಂತಹ ಕ್ರಿಯಾಶೀಲತೆಗೆ ಗಮನ ಕೊಡುವುದೂ ಆಗಬೇಕಾದ ಸಂಗತಿ. ಜೊತೆ ಜೊತೆಗೇ  ಜೀವ ಸಹಜ ಕಾಮ,ಕ್ರೋಧ, ಮದ ಮತ್ಸರಗಳನ್ನು ನಿಯಂತ್ರಿಸಿಕೊಳ್ಳುವ ಮಾದರಿಗಳನ್ನು ಸಮಾಜದ ಮುಂದಿಡುವುದೂ ಅನಿವಾರ್ಯ ಅಗತ್ಯವಾದ ಸ್ಥಿತಿಗೆ ಸಮಾಜವನ್ನು ನಾವೇ ತಂದು ನಿಲ್ಲಿಸಿದ್ದೇವೆ. ಹಿಂಸೆಯ ವಿಕೃತ ವಿರಾಟ್‌ ಸ್ವರೂಪವನ್ನು ಹಿಮ್ಮೆಟ್ಟಿಸಲು ಒಟ್ಟಾಗಿ ನಡೆಸುವ ಕಾರ್ಯಾಚರಣೆಯೇ ಮದ್ದು.

Donate Janashakthi Media

Leave a Reply

Your email address will not be published. Required fields are marked *