ಹೆಣ್ಣು ಕನಿಷ್ಠ, ಗಂಡು ಶ್ರೇಷ್ಠ ಧೋರಣೆ ತೊಲಗಿಸಿ – ಕೆ.ನೀಲಾ

ಬಳ್ಳಾರಿ :ಸಮಾಜದಲ್ಲಿ ಹೆಣ್ಣು ಕನಿಷ್ಠ, ಗಂಡು ಶ್ರೇಷ್ಠ ಎಂಬ ಧೋರಣೆಯನ್ನು ತೊಲಗಿಸಬೇಕು. ಮಹಿಳೆಯರಿಗೆ ಸ್ಥಾನಮಾನ, ಮೀಸಲಾತಿಗಳು ನೀಡಬೇಕು ಎಂದು ಅಖಿಲ ಭಾರತೀಯ ಜನವಾದಿ ಮಹಿಳಾ ಸಂಘಟನೆಯ ಹೋರಾಟಗಾರ್ತಿ ಕೆ.ನೀಲಾ ಅವರು ಹೇಳಿದರು.

ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಗುರುವಾರ ಸಸ್ಯಶಾಸ್ತ್ರ ಅಧ್ಯಯನ ವಿಭಾಗ ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಜಂಟಿ ಸಹÀಭಾಗಿತ್ವದಲ್ಲಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಗೌರವಾನ್ವಿತ ಬದುಕು ಕಟ್ಟಿಕೊಳ್ಳುವ ವೈಜ್ಞಾನಿಕ ತಳಹದಿಯ ಮಾದರಿಗಳನ್ನು ರೂಪಿಸುವ ಚಿಂತನೆ ದೇಶದಲ್ಲಿ ನಡೆಯಬೇಕಿದೆ. ಗ್ಲೋರಿಯಾ ಸ್ಟಿನೇಮ್ ಹೇಳಿದಂತೆ ಮಾನವ ಹಾಗೂ ಮಹಿಳಾ ಹಕ್ಕುಗಳ ಬಗ್ಗೆ ಕಾಳಜಿ ವಹಿಸುವುದು ಅತಿ ಮುಖ್ಯವಾಗಿದೆ. ಸ್ತ್ರೀ ಸಮಾನತೆಗೆ ಪ್ರಾತಿನಿಧ್ಯತೆ ದೊರಕಿಸಲು ವಿಶ್ವವಿದ್ಯಾಲಯಗಳು ಪೂರಕವಾಗಿ ಕಾರ್ಯ ನಿರ್ವಹಿಸಬೇಕು ಎಂದು ಅಭಿಪ್ರಾಯ ಪಟ್ಟರು.

ವಿಜ್ಞಾನ-ತಂತ್ರಜ್ಞಾನದ ಉತ್ತುಂಗ ಯುಗದಲ್ಲೂ ದೇಶದಲ್ಲಿ ಪ್ರತಿ 20 ನಿಮಿಷದಲ್ಲಿ ಒಂದು ಅತ್ಯಾಚಾರ ನಡೆಯುತ್ತಿದ್ದು, ಮಹಿಳೆಯರ ಶೋಷಣೆ, ದೌರ್ಜನ್ಯ ನಿರಂತರವಾಗಿ ಘಟಿಸುತ್ತಿರುವುದು ವಿಷಾದನೀಯ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ಹೆಣ್ಣು ಕನಿಷ್ಠ, ಗಂಡು ಶ್ರೇಷ್ಠ ಎನ್ನುವುದು ಅವೈಜ್ಞಾನಿಕ ವಿಚಾರ ತಲ-ತಲಾಂತರದಿಂದ ಬೇರೂರಿದೆ. ಸಂಪ್ರದಾಯದ ಹೆಸರಲ್ಲಿ ಹೆಣ್ಣು ಮಕ್ಕಳಿಗೆ ಹುಟ್ಟಿನಿಂದಲೇ ಅಬಲೆ ಎಂಬ ಪಟ್ಟ ಕಟ್ಟಿ ತಲೆ ತಗ್ಗಿಸಿ ನಡೆಯುವಂತೆ ಪ್ರಚೋದಿಸುವ ವೈಖರಿ ಖೇದಕರ. ತಾಯಿಯಾಗಿ, ಮಡದಿಯಾಗಿ, ಮಗಳಾಗಿ, ಕುಟುಂಬದ ಆಧಾರ ಸ್ತಂಭವಾದ ಹೆಣ್ಣನ್ನು ದೇಹವಾಗಿ ನೋಡದೆ ಸಹಜೀವಿಯಾಗಿ ಕಾಣಬೇಕು ಎಂದು ತಿಳಿಸಿದರು.

ಮಹಿಳಾ ಸಬಲೀಕರಣಕ್ಕೆ ವಿಶ್ವವಿದ್ಯಾಲಯಲದಲ್ಲಿ ಆಂತರಿಕ ದೂರು ಸಮಿತಿ ರಚನೆ ಮಾಡುವುದು, ಮಹಿಳಾ ಸಿಬ್ಬಂದಿ ಸಂಘ ರಚಿಸಿ ಅದರ ಅಡಿಯಲ್ಲಿ ಈ ಪ್ರದೇಶದಲ್ಲಿರುವ ಪ್ರಗತಿಪರ ಮಹಿಳಾ ಸಂಘಟನೆಗಳೊಂದಿಗೆ ವೈಜ್ಞಾನಿಕ ವಿಚಾರಧಾರೆಗಳನ್ನು ಬಿತ್ತರಿಸುವ ಕಾರ್ಯಕ್ರಮ ಆಯೋಜಿಸಬೇಕು ಎಂದು ಸಲಹೆ ನೀಡಿದರು. ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹಿಸಿದ ಜ್ಯೋತಿಬಾ ಫುಲೆ, ಸಂವಿಧಾನದ ಹರಿಕಾರ ಬಾಬಾ ಸಾಹೇಬ್ ಅಂಬೇಡ್ಕರ್, ಬುದ್ಧ, ಬಸವಾದಿ ಮಾದರಿಯ ಪುರುಷರಂತೆ ಈ ಸಮಾಜದಲ್ಲಿರುವ ಎಲ್ಲ ಪುರುಷರು ಮಹಿಳೆಯರ ಹಿತಚಿಂತನೆಗೆ ಮುಂದಾಗಬೇಕು ಎಂದರು.

ಇದನ್ನೂ ಓದಿ : ರಾಜ್ಯದಲ್ಲಿ ಹೆಚ್ಚಿದ ಹೆಣ್ಣು ಭ್ರೂಣಹತ್ಯೆ | ಲಿಂಗಾನುಪಾತ ಗಣನೀಯ ಇಳಿಕೆ

ವಿಶ್ವವಿದ್ಯಾಲಯದ ಕುಲಸಚಿವರಾದ ಎಸ್.ಎನ್.ರುದ್ರೇಶ್ ಅವರು ಮಾತನಾಡಿ, ಮಹಿಳೆಯರು ಇಂದು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ಗೃಹ ಬಂಧಿಯಾಗಿಸದೆ ಸ್ವಾತಂತ್ರ್ಯ ನೀಡಿದಲ್ಲಿ ಅವರು ಸಹ ಸಮಾಜಮುಖಿ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ. 12 ಶತಮಾನದಲ್ಲೇ ಬಸವಣ್ಣನವರ ಅನುಭವ ಮಂಟಪದಲ್ಲಿ ಮಹಿಳಾ ಸಮಾನತೆ ಕುರಿತು ಚರ್ಚೆಗಳಾಗಿದ್ದನ್ನು ಉದಾಹರಣೆಗಳೊಂದಿಗೆ ವಿವರಿಸಿದರು.

ಜಗಜ್ಯೋತಿ ಬಸವೇಶ್ವರರು, ದೇವರ ದಾಸಿಮಯ್ಯ, ಅಕ್ಕಮಹಾದೇವಿಯಂತಹ ಮಹಾನ್ ಜೀವಿಗಳು ತಮ್ಮ ವಚನಗಳ ಮೂಲಕÀ ಲಿಂಗಸಮಾನತೆ ಬಗ್ಗೆ ಜಾಗೃತಿ ಮೂಡಿಸಿದ್ದರು ಎಂದರು. ಮಹಿಳಾ ಸಿಬ್ಬಂದಿ ಸಬಲೀಕರಣಕ್ಕೆ ವಿಶ್ವವಿದ್ಯಾಲಯವು ಪೂರಕ ಕಾಯಕ್ರಮಗಳನ್ನು ರೂಪಿಸಿದೆ ಎಂದು ಹೇಳಿದರು.

ವಿವಿಯ ಕುಲಸಚಿವರು (ಮೌಲ್ಯಮಾಪನ) ಪ್ರೊ. ರಮೇಶ್ ಓಲೇಕಾರ್ ಮಾತನಾಡಿ, ಮಹಿಳೆಯರಲ್ಲಿ ಇತ್ತೀಚಿನ ಪ್ರವೃತ್ತಿಯಲ್ಲಿ ಹಿಂಜರಿಕೆ ಕಡಿಮೆಯಾಗಿದೆ. ಮಹಿಳಾ ಹೋರಾಟಗಳು ಇನ್ನೂ ಹೆಚ್ಚಾಗಬೇಕಿದೆ. ಮಹಿಳಾ ಪ್ರಾತಿನಿಧಿಕತ್ವದ ಭಾಗವಾಗಿ ವಿಶ್ವವಿದ್ಯಾಲಯದ ಪರೀಕ್ಷಾ ಕಾರ್ಯಚಟುವಟಿಕೆಗಳ ಎಲ್ಲ ಸಮಿತಿಗಳಲ್ಲಿ ಒಬ್ಬ ಮಹಿಳಾ ಪ್ರತಿನಿಧಿಯನ್ನು ನೇಮಕ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಕೆ.ಎಂ.ಮೇತ್ರಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಅನಾದಿ ಕಾಲದಿಂದಲೂ ಪುರುಷರಿಗಿಂತ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೆಚ್ಚು ಹೋರಾಡುತ್ತಾ ಸಾಗಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ತಮಗಾಗಿ ನಿರ್ದಿಷ್ಟ ಮೀಸಲಾತಿ ಬಯಸದೆ, ಸಮಾನ ಪ್ರಾಶಸ್ತ್ಯ ನೀಡುವಂತೆ ಹಕ್ಕೊತ್ತಾಯ ಮಾಡಬೇಕು. ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿರುವ ಮಹಿಳಾ ಹೋರಾಟಗಾರರು ಮುಂದಾಗಬೇಕು ಎಂದು ತಿಳಿಸಿದರು.

ತಳ ಸಮುದಾಯಗಳಲ್ಲಿ ಇಂದಿಗೂ ಬುಡಕಟ್ಟು ಜನಾಂಗದಲ್ಲಿ ಹೆಣ್ಣು ಮಗು ಜನಿಸಿದರೆ ಸಂಭ್ರಮಿಸುತ್ತಾರೆ. ಕೆಲವು ಸಮುದಾಯಗಳಲ್ಲಿ ಮುಟ್ಟಾದ ಮಹಿಳೆ ಅಥವಾ ಬಾಣಂತಿಯನ್ನು ಪ್ರತ್ಯೇಕವಾಗಿ ಗುಡಿಸಲುಗಳಲ್ಲಿ ಇರಿಸುತ್ತಾರೆ. ಕೆಲವರು ಇದನ್ನು ಮಹಿಳಾ ಶೋಷಣೆ ಎಂದು ಬಿಂಬಿಸಿದ್ದಾರೆ. ಆದರೆ ಪ್ರಾಚೀನ ಕಾಲದಲ್ಲಿ ಪದ್ಧತಿಯಂತೆ ಗುಡಿಸಲನ್ನು ಆಯುರ್ವೇದಿಕ ಬೇರು, ಸೊಪ್ಪುಗಳಿಂದ, ಮರಗಿಡಗಳ ಬಳಸಿ ನಿರ್ಮಿಸಿ ಅದರಲ್ಲಿ ಇಂತಹ ಮಹಿಳೆಯರನ್ನು ಕೆಲಕಾಲ ವಾಸಿಸಲು ಬಿಡುತ್ತಿದ್ದರು. ಇದರಿಂದ ಅವರಿಗೆ ಸೋಂಕುಗಳಿಂದ ರಕ್ಷಣೆ ನೀಡಿ ಆರೋಗ್ಯ ಕಾಪಾಡಿಕೊಳ್ಳಲು, ಇನ್ನಿತರ ಮನೆಗೆಲಸಗಳಿಂದ ಮುಕ್ತಿ ನೀಡಲು, ಮಗುವಿನ ಆರೈಕೆ ಮಾಡಲು ಸಹಾಯವಾಗುತ್ತಿತ್ತು. ಈ ಪದ್ಧತಿ ವೈದ್ಯಕೀಯ ಕ್ಷೇತ್ರ ಮುನ್ನೆಲೆಗೆ ಬರುವ ಪೂರ್ವ ಹಂತದಿಂದಲೇ ಜಾರಿಯಲ್ಲಿತ್ತು ಎಂದರು.

ಭಿಕ್ಷಾಟನೆ ನಿಷೇಧ ಕಾಯ್ದೆ, ಅಲೆಮಾರಿ ಪುನರ್ವಸತಿ ಮುಂತಾದ ಯೋಜನೆಗಳಿಂದ ಬುಡಕಟ್ಟು ಜನಾಂಗದ ಹೆಣ್ಣು ಮಕ್ಕಳು ಹೆಚ್ಚಾಗಿ ಶೋಷಣೆಗೆ ಒಳಗಾಗಿದ್ದಾರೆ. ಕುಟುಂಬ ನಿರ್ವಹಣೆಗೆ ಅನೇಕ ಮಹಿಳೆಯರು ಒಲ್ಲದ ಮನಸ್ಸಿನಿಂದ ಲೈಂಗಿಕ ಕಾರ್ಯಕರ್ತರಾಗುತ್ತಾರೆ. ಇದನ್ನು ತಡೆಯಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಮಾನವ ಜನಾಂಗ ಮುಂದಾಗಬೇಕು ಎಂದು ಕರೆ ನೀಡಿದರು.

ಇತ್ತೀಚೆಗೆ ವಿಶ್ವವಿದ್ಯಾಲಯದ ಮಹಿಳೆಯರಿಗಾಗಿ ಆಯೋಜಿಸಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಪಶಸ್ತಿ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಿದರು.

ಹಾಸ್ಯ ಕಲಾವಿದ ಕೂಡ್ಲಿಗಿ ಕೊಟ್ರೇಶ್ ಅವರಿಂದ ಹಾಸ್ಯಸಂಜೆ ಏರ್ಪಡಿಸಲಾಗಿತ್ತು. ಬಳಿಕ ಹಿರಿಯ ರಂಗ ಕಲಾವಿದ ಗಣೇಶ ಅಮೀನಗಡ ಅವರ ತಂಡದಿಂದ ‘ಕೌದಿ’ ನಾಟಕ ಪ್ರದರ್ಶನಗೊಂಡಿತು.

ಕಾರ್ಯಕ್ರಮವನ್ನು ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸಿದ್ದೇಶ್ವರಿ ನಿರೂಪಿಸಿದರು. ಡಾ. ಕೃಷ್ಣವೇಣಿ ಅತಿಥಿಗಳನ್ನು ಸ್ವಾಗತಿಸಿದರು. ಡಾ.ಕವಿತಾ ಸಾಗರ ಅತಿಥಿ ಪರಿಚಯ ಮಾಡಿದರು. ಕಾರ್ಯಕ್ರಮದ ಸಂಯೋಜಕರಾದ ಡಾ. ಉಮಾರೆಡ್ಡಿ, ಡಾ. ಶಶಿಧರ್ ಕೆಲ್ಲೂರ್ ವಂದಿಸಿದರು. ಈ ವೇಳೆ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

 

Donate Janashakthi Media

Leave a Reply

Your email address will not be published. Required fields are marked *