ಹಿಂದಿನ‌ ಅತಿಥಿ ಉಪನ್ಯಾಕರನ್ನು ಮುಂದುವರೆಸಲು ಆಗ್ರಹ

ಬಳ್ಳಾರಿ: ಈ ಹಿಂದೆ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ ಉಪನ್ಯಾಸಕರನ್ನು ಸೇವೆಗೆ ಸೇರಿಸಿಕೊಳ್ಳುವಂತೆ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಕೋವಿಡ್ ಲಾಕ್‌ಡೌನ್ ಹಾಗೂ ಹಿಂದಿನ ಸೆಮಿಸ್ಟರ್‌ನಲ್ಲಿ ಕಡಿಮೆ ಅವಧಿಗೆ ಅತಿಥಿ ಉಪನ್ಯಾಸಕರನ್ನು ಸೇವೆಗೆ ನಿಯೋಜಿಸಿದ್ದರಿಂದ, ಸರಿಯಾದ ವೇತನ ಸಿಗದೇ ಅತಿಥಿ ಉಪನ್ಯಾಸಕರ ಸಮಸ್ಯೆಗಳು ಹಲವು ಪಟ್ಟು ಉಲ್ಬಣಗೊಂಡಿವೆ. ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ, ಹಲವಾರು ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡು ಮತ್ತು ಗಂಭೀರ ಖಾಯಿಲೆಗಳಿಂದಲೂ ನರಳಿ ಸಾವಿಗೀಡಾಗಿದ್ದಾರೆ. ಎಷ್ಟೋ ಅತಿಥಿ ಉಪನ್ಯಾಸಕರು ಹಣ್ಣು-ಹಂಪಲು, ತರಕಾರಿ ಮಾರುತ್ತ ಜೀವನ ಸಾಗಿಸುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ.

ಆರ್ಥಿಕ ಹೊರೆಯ ಜೊತೆಯಲ್ಲಿ ಮಾನಸಿಕ ಒತ್ತಡವೂ ಅವರನ್ನು ತೀವ್ರವಾಗಿ ಕುಗ್ಗಿಸಿದೆ. ಸತತವಾಗಿ ನಡೆದ ಹೋರಾಟದ ಫಲವಾಗಿ, ಕಳೆದ ವರ್ಷ ರಾಜ್ಯಸರ್ಕಾರವು ಅವರ 5 ತಿಂಗಳ ಬಾಕಿ ವೇತನವನ್ನು ಬಿಡುಗಡೆ ಮಾಡಿತ್ತು. ಅದಾದ ನಂತರ 2020-21ನೇ ಸಾಲಿನ ಪದವಿ ತರಗತಿಗಳು ಪ್ರಾರಂಭವಾದಾಗ ಇಲಾಖೆ ಕೇವಲ ಶೇ.50ರಷ್ಟು ಅತಿಥಿ ಉಪನ್ಯಾಸಕರನ್ನು ಸೇವೆಗೆ ನಿಯೋಜನೆಗೊಳಿಸಿತ್ತು. ಆಗ ಹೋರಾಟಗಳನ್ನು ನಡೆಸಿದ ಮೇಲೆ ಎಲ್ಲರನ್ನೂ ಸೇವೆಗೆ ಸೇರಿಸಿಕೊಂಡಿದ್ದನ್ನು ನೆನಪಿಸಿಕೊಳ್ಳಬಹುದು. ಒಟ್ಟಾರೆ ಅತಿಥಿ ಉಪನ್ಯಾಸಕರ ಬದುಕು ಅತಂತ್ರವಾಗಿದೆ, ತೀವ್ರ ಸಂಕಷ್ಟದಲ್ಲಿದೆ ಎಂದು ಅತಿಥಿ ಉಪನ್ಯಾಸರಕ ಸಂಘ ಆರೋಪಿಸಿದೆ.

ಇದೀಗ 2020-21 ನೇ ಸಾಲಿನ ಸಮ ಸೆಮಿಸ್ಟರ್‌ಗಳಿಗೆ ಅತಿಥಿ ಉಪನ್ಯಾಸಕರನ್ನು ಸೇವೆಗೆ ಸೇರಿಸಿಕೊಳ್ಳಲು ಕಾಲೇಜು ಶಿಕ್ಷಣ ಇಲಾಖೆ ದಿ:07-05-2021 ರಂದು ಸುತ್ತೋಲೆ ಹೊರಡಿಸಿದೆ (ಸುತ್ತೋಲೆ ಸಂಖ್ಯೆ: ಕಾಶಿಇ/ನೇವಿ-1/ಅಉಆ/13/2020-21). ಆದರೆ ಇದುವರೆಗೂ ಎಲ್ಲಿಯೂ ಅತಿಥಿ ಉಪನ್ಯಾಸಕರನ್ನು ಸೇವೆಗೆ ಸೇರಿಸಿಕೊಂಡಿಲ್ಲ. ಆದ್ದರಿಂದ ಹಿಂದೆ ಕಾರ್ಯ ನಿರ್ವಹಿಸಿದ ಎಲ್ಲಾ ಅತಿಥಿ ಉಪನ್ಯಾಸಕರನ್ನು 2020-21 ಸಾಲಿನ ಸಮ ಸೆಮಿಸ್ಟರ್‌ಗಳಿಗೆ ಈ ಕೂಡಲೇ ಸೇವೆಗೆ ನಿಯೋಜಿಸಬೇಕು. ಸಮ ಸೆಮಿಸ್ಟರ್‌ಗಳ ಆಫ್‌ಲೈನ್ ತರಗತಿಗಳು ಪ್ರಾರಂಭವಾಗುವವರೆಗೂ ಸೂಕ್ತ ವೇತನ ನೀಡಿ ಆನ್‌ಲೈನ್ ತರಗತಿಗಳಿಗೆ ಅತಿಥಿ ಉಪನ್ಯಾಸಕರ ಸೇವೆಯನ್ನು ಬಳಸಿಕೊಳ್ಳಬೇಕು ಹಾಗೂ ಈ ರೀತಿ ಪ್ರತೀಬಾರಿ ಅತಿಥಿ ಉಪನ್ಯಾಸಕರನ್ನು ಆತಂಕಕ್ಕೀಡುಮಾಡದೆ, ಅವರ ಬದುಕನ್ನು ಅತಂತ್ರ ಮಾಡದೇ ಅವರಿಗೆ ಸೇವಾ ಭದ್ರತೆಯನ್ನು ಒದಗಿಸಬೇಕು ಎಂದು ಅತಿಥಿ ಉಪನ್ಯಾಸಕರ ಸಂಘ ಆಗ್ರಹಿಸಿದೆ.

ವರದಿ.ಪಂಪನಗೌಡ.ಬಿ.ಬಳ್ಳಾರಿ

Donate Janashakthi Media

Leave a Reply

Your email address will not be published. Required fields are marked *