“ಜರ್ಮನ್ ರೈತ ಯುದ್ಧ” – ಪುಸ್ತಕ ಬಿಡುಗಡೆ, ಉಪನ್ಯಾಸ, ಸಂವಾದ

1524-25ರ ಜರ್ಮನ್ ರೈತ ಯುದ್ಧ 1789ರ ಫ್ರೆಂಚ್ ಕ್ರಾಂತಿಯ ಮೊದಲು ನಡೆದ ಅತ್ಯಂತ ದೊಡ್ಡ ಕ್ರಾಂತಿಕಾರಿ ಹೋರಾಟ. ಇತರ ಹಲವು ಅಂಶಗಳ ಜತೆಗೆ ಲೂಥರ್ ಮಂಡಿಸಿದ ಧಾರ್ಮಿಕ ಸುಧಾರಣೆಗಳ ಹಿನ್ನೆಲೆಯಲ್ಲಿ ಬೆಳೆದು ಬಂದ ಇದು, ಹಲವು ತಿಂಗಳ ಕಾಲ ಮಧ್ಯ ಯುರೋಪಿನ ಈಗಿನ ಜರ್ಮನಿ, ನೆದರ್ ಲ್ಯಾಂಡ್ಸ್ ಗಳ ಬಹುಭಾಗಗಳನ್ನು ಆವರಿಸಿ ಬೃಹತ್ ರೈತ ಯುದ್ಧವಾಗಿತ್ತು.

ಈ ಚಳುವಳಿಯ ಆರಂಭದಲ್ಲೇ ರೂಪಿತವಾಗಿದ್ದ “ರೈತರ ಹನ್ನೆರಡು ಕಟ್ಟಳೆಗಳ” ಜಾರಿಗಾಗಿ ಈ ಯುದ್ಧ ಸಾರಲಾಯಿತು. ಇದು ರೈತ ಯುದ್ಧ ಹೂಡಿದ ರೈತ ಸಂಘಟನೆಗಳ ಒಕ್ಕೂಟದ ಪ್ರಣಾಳಿಕೆ, ಸಂವಿಧಾನ, ಹಕ್ಕೊತ್ತಾಯಗಳ ಪಟ್ಟಿ, ಗೆದ್ದರೆ ಮುಂಬರುವ ಆಡಳಿತದ ಕಾರ್ಯಸೂಚಿ – ಇವೆಲ್ಲವೂ ಆಗಿತ್ತು. ಇದನ್ನು ಮೊದಲ ಮಾನವ ಹಕ್ಕುಗಳ ಘೋಷಣೆ ಎಂದೂ ಪರಿಗಣಿಸಲಾಗಿದೆ..

ಈ ಯುದ್ಧದಲ್ಲಿ ಸಶಸ್ತ್ರವಾಗಿ ಭಾಗವಹಿಸಿದ ರೈತರ ಸಂಖ್ಯೆ 3 ಲಕ್ಷವನ್ನು ಮೀರಿತ್ತು. ಈ ಯುದ್ಧದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರೈತರು ಬಲಿಯಾದರು. ಈ ಚಾರಿತ್ರಿಕ ರೈತರ ಯುದ್ಧ ಸೋತರೂ  ಯುರೋಪಿನಲ್ಲೂ ಜಾಗತಿಕವಾಗಿಯೂ ಹಲವು ಸ್ಥಿತ್ಯಂತರಗಳ ಮುನ್ನುಡಿ ಬರೆಯಿತು. ಇಂದಿನವರೆಗೂ ಎಲ್ಲ ರೈತ ಯುದ್ಧಗಳಿಗೆ ಸ್ಫೂರ್ತಿಯ ಚಿಲುಮೆಯಾಗಿದೆ. ಪಾಳೆಯಗಾರಿ ವ್ಯವಸ್ಥೆಯ ವಿರುದ್ಧ ಬಂಡಾಯದ ಪ್ರತೀಕವಾಗಿದೆ.

ಹೆಚ್ಚಿನ ರೈತ ಸಂಬಂಧಿ ಪ್ರಶ್ನೆಗಳನ್ನು ಮೊದಲ ಬಾರಿಗೆ ಅಂದಿನ ಸಂದರ್ಭದಲ್ಲಿ ಎತ್ತಿ ಉತ್ತರಿಸಲು ಪ್ರಯತ್ನಿಸಿದ, ಈ ಕೃತಿ ಇಂದಿಗೂ ಅತ್ಯಂತ ಪ್ರಸ್ತುತ. ಇದು ಏಂಗೆಲ್ಸ್ ಅವರು ಗತಿತಾರ್ಕಿಕ ಭೌತವಾದವನ್ನು ಚರಿತ್ರೆಗೆ ಅನ್ವಯಿಸಿದ ಆರಂಭಿಕ ಪ್ರಯತ್ನಗಳಲ್ಲಿ ಒಂದಾಗಿದ್ದು, ಈ ವಿಧಾನ ಇತರ ಚಾರಿತ್ರಿಕ ವಿದ್ಯಮಾನಗಳ ಸಮಗ್ರ ಅರ್ಥೈಸುವಿಕೆಗೆ ಒಂದು ಮಾದರಿಯನ್ನು ಒದಗಿಸುತ್ತದೆ.

ಕ್ರಿಯಾ ಮಾಧ್ಯಮ ಮತ್ತು ನವಕರ್ನಾಟಕ ಜಂಟಿಯಾಗಿ ಹಮ್ಮಿಕೊಂಡಿರುವ ಏಂಗೆಲ್ಸ್-200 ಮಾಲಿಕೆಯ ಈ ಪುಸ್ತಕದ ಬಿಡುಗಡೆಯನ್ನು ಸೆಪ್ಟೆಂಬರ್ 21(ಬುಧವಾರ) ಸಂಜೆ 5 ಗಂಟೆಗೆ ಬಸವನಗುಡಿಯ ಹೊಸ ಕ್ರಿಯಾ ಮಾಧ್ಯಮ ಪುಸ್ತಕ ಮಳಿಗೆ ಯಲ್ಲಿ ಹಮ್ಮಿಕೊಂಡಿದೆ. ಚಿಂತಕ ಜಿ.ಎನ್.ನಾಗರಾಜ್ ಈ ಪುಸ್ತಕವನ್ನು ಬಿಡುಗಡೆ ಮಾಡಿ, “ಜರ್ಮನ್ ರೈತ ಯುದ್ಧ ದ ಮರು-ಓದು : ಜನರ ಸಂಕಟಗಳು, ಚಳುವಳಿಗಳು ಮತ್ತು ಧಾರ್ಮಿಕ ರೂಪಗಳು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಸಂವಾದಕ್ಕೆ ಚಾಲನೆ ನೀಡಲಿದ್ದಾರೆ. ಆ ನಂತರ ಇದೇ ವಿಷಯದ ಮೇಲೆ ನಡೆಯಲಿರುವ ಸಂವಾದದಲ್ಲಿ. ರಾಘವೇಂದ್ರ ಕುಷ್ಟಗಿ ಮತ್ತು ಡಾ.ಬಂಜಗೆರೆ ಜಯಪ್ರಕಾಶ್ ಭಾಗವಹಿಸಲಿದ್ದಾರೆ. ರೈತ ನಾಯಕ ನವೀನ್ ಕುಮಾರ್ ಎಚ್.ಆರ್ ಪುಸ್ತಕ ಪರಿಚಯವೂ ಮಾಡಲಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *