ಬೆಂಗಳೂರು: “ರಾಜ್ಯದಲ್ಲಿ ಬರ ಇರುವುದು ನಿಜ ಅದರ ನಡುವೆಯೂ ಸಾಮರ್ಥ್ಯಕ್ಕೆ ತಕ್ಕಷ್ಟು ವಿದ್ಯುತ್ ಉತ್ಪಾದನೆ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ” ಎಂದು ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ವಿದ್ಯುತ್ ಕೊರತೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಹೇಳಿಕೆ ಪ್ರಕಾರವೇ ಕೊರತೆ ಇರುವುದು 3 ಕೋಟಿ ಯುನಿಟ್ ಅಷ್ಟೇ. ಕೃತಕ ಅಭಾವ ಸೃಷ್ಟಿ ಮಾಡಿರುವುದು ಸರ್ಕಾರ. ವಿದ್ಯುತ್ ಉತ್ಪಾದನೆ ಬಗ್ಗೆ ಗಮನವನ್ನೇ ಕೊಡಲಿಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿ-ಜೆಡಿಎಸ್ ಮೈತ್ರಿಗೆ ಟಕ್ಕರ್ ಕೊಡಲು ಮುಂದಾದ ಸಿ.ಎಂ. ಇಬ್ರಾಹಿಂ
ನಾನು ಎರಡು ಬಾರಿ ಸಿಎಂ ಆಗಿದ್ದೆ , ನನ್ನ ಕಾಲದಲ್ಲಿ ಕೃತಕ ಅಭಾವ ಸೃಷ್ಟಿ ಮಾಡಿದ್ದೀವಾ? ದಾಖಲೆ ತೆಗೆಯಿರಿ ಎಂದು ಅವರು ಸವಾಲೆಸೆದರು. ನವರಾತ್ರಿಯ ಸಮಯದಲ್ಲಿ ನಾನು ಹೇಳುತ್ತಿದ್ದೇನೆ, ನನ್ನ ಕಾಲದಲ್ಲಿ ಯಾವುದೇ ಕೆಲಸಕ್ಕೆ ನಾನು ಪರ್ಸಂಟೇಜ್ ಫಿಕ್ಸ್ ಮಾಡಿರಲಿಲ್ಲ, ಮುಂದೆಯೂ ಮಾಡುವವನಲ್ಲ. ನನಗೆ ಗೊತ್ತಿರುವ ಹಾಗೆ ಇಂಧನ ಸಚಿವ ಜಾರ್ಜ್ಗೆ ದುಡ್ಡಿಗೆ ಏನೂ ಕೊರತೆ ಇಲ್ಲ. ಜಾರ್ಜ್ಗೆ ಹೈಕಮಾಂಡ್ ನವರು ಏನಾದರೂ ಫಿಕ್ಸ್ ಮಾಡಿದ್ದಾರೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಹಿಂದಿನ ಸರ್ಕಾರದ ಪಾಪದ ಫಲ ಎಂದು ಸದಾ ಟೀಕೆ ಮಾಡುತ್ತಾರೆ. ಹಿಂದಿನ ಸರ್ಕಾರದವರದ್ದು ಹಾಗಿರಲಿ, 135 ಸೀಟ್ ಗೆದ್ದು ಅಧಿಕಾರಕ್ಕೆ ಬಂದ ಇವರೇನು ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು, ಕಾಂಗ್ರೆಸ್ನವರು ಕೇವಲ ಗ್ಯಾರಂಟಿ ಜಾರಿಯ ಹೆಸರಿನಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಗ್ಯಾರಂಟಿ ಜಾರಿ ಮಾಡಿದ್ದೇವೆ, ನುಡಿದಂತೆ ನಡೆದಿದ್ದೇವೆ ಎಂದು ಕಾಂಗ್ರೆಸ್ನವರು ಹೇಳಿಕೊಂಡು ತಿರುಗುತ್ತಿದ್ದಾರೆ. ಅದರ ಪ್ರಚಾರಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಅದಕ್ಕೊದಿಷ್ಟು ದುಡ್ಡು ಖರ್ಚು ಮಾಡುತ್ತಿದ್ದಾರೆ. ಬರೀ ಇಷ್ಟರಲ್ಲೇ ಸಮಯ ಕಳೆಯುತ್ತಿದ್ದಾರೆಯೇ ವಿನಃ ವಿದ್ಯುತ್ ಉತ್ಪಾದನೆ ಸೇರಿದಂತೆ ರಾಜ್ಯ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಲೇ ಇಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ವಿಡಿಯೋ ನೋಡಿ:ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನಲ್ಲಿ ಶಾಂತಿ ನೆಲೆಸಲಿ ಎಂದವರನ್ನು ಬಂಧಿಸಿದ ಸರ್ಕಾರ! Janashakthi Media