ಜಿಡಿಪಿಯಲ್ಲಿ 23.9ಶೇ. ಅಭೂತಪೂರ್ವ ಕುಸಿತ

ತೀವ್ರ ಹಿಂಜರಿತದಲ್ಲಿ ಭಾರತೀಯ ಅರ್ಥವ್ಯವಸ್ಥೆ 


ಆಗಸ್ಟ್ 31ರಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‍ ಎಸ್‍ ಒ) 2020-21ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ದತ್ತಾಂಶಗಳನ್ನು ಪ್ರಕಟಿಸಿದೆ. ಅವುಗಳ ಪ್ರಕಾರ ಜಿಡಿಪಿ ಬೆಳವಣಿಗೆ ದರ ಹಿಂದಿನ ವರ್ಷದ ಈ ತ್ರೈಮಾಸಿಕಕ್ಕೆ ಹೋಲಿಸಿದರೆ 23.9ಶೇ. ದಷ್ಟು ಭಾರೀ ಕುಸಿತವನ್ನು ಕಂಡಿದೆ. ಇದು ಬಹುಪಾಲು ಲಾಕ್‍ ಡೌನ್‍ ಗಳ ಆರಂಭಿಕ ಅವಧಿಯಾದ್ದರಿಂದ ಇಳಿಕೆ ಅನಿರೀಕ್ಷಿತವೇನಲ್ಲ.

2019-20ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಕೊನೆಗೆ 5.2ಶೇ. ಇದ್ದು ಜಿಡಿಪಿ ವೃದ್ಧಿ ದರ , ನಂತರದ 2ನೆ, 3ನೆ ಮತ್ತು ಕೊನೆಯ ತ್ರೈಮಾಸಿಕದಲ್ಲಿ ಅನುಕ್ರಮವಾಗಿ 4.4ಶೇ. 4.1ಶೇ. ಮತ್ತು 3.1ಶೇ.ಕ್ಕೆ ಇಳಿಯುತ್ತ ಬಂದಿತ್ತು  ಆದರೆ ಯಾರೂ ನಂತರದ ತ್ರೈಮಾಸಿಕದಲ್ಲಿ ಇಷ್ಟೊಂದು ತೀವ್ರ ಕುಸಿತ ದಾಖಲಿಸಬಹುದು ಎಂದು ನಿರೀಕ್ಷಿಸಿರಲಿಲ್ಲ.ತಯಾರಿಕಾವಲಯದಲ್ಲಿ 339ಶೇ., ಕಟ್ಟಡ ನಿಮರ್ಮಾಣ ವಲಯದಲ್ಲಿ 50ಶೇ., ವ್ಯಾಪಾರ, ಹೊಟೆಲ್‍-ಪ್ರಸೋದ್ಯಮ-ಸಂಪರ್ಕ ವಲಯದಲ್ಲಿ 47ಶೇ. ಮತ್ತು ಗಣಿಗಾರಿಕೆ ವಲಯದಲ್ಲಿ 23ಶೇ. -ಹೀಗೆ ಸುಮಾರಾಗಿ ಸರ್ವತೋಮುಖ ಕುಸಿತ ಉಂಟಾಗಿದೆ. ಸಕಾರಾತ್ಮಕ ಬೆಳವಣಿಗೆ ಕಂಡಿರುವ ಏಕೈಕ ವಲಯವೆಂದರೆ ಕೃಷಿ ಮಾತ್ರ. ಇಲ್ಲಿ ಈ ಬಾರಿಯ ದಾಖಲೆ ಬೆಳೆಗಳಿಂದಾಗಿ 3.4ಶೇ. ಏರಿಕೆ ಕಂಡಿದೆ.

ನಿಜ, ನಮ್ಮ ಹಣಕಾಸು ಮಂತ್ರಿಗಳು ಹೇಳಿರುವಂತೆ ಜಗತ್ತಿನಾದ್ಯಂತ ಕೊವಿಡ್‍ ಮಹಾಸೋಂಕಿನ ‘ದೇವರ ಆಟ’ ತೀವ್ರ   ಆರ್ಥಿಕ ದುಷ್ಪರಿಣಾಮಗಳನ್ನು ಉಂಟು ಮಾಡಿದೆ. ಕೇವಲ ಮೂರು ದೇಶಗಳು ಚೀನಾ(3.2ಶೇ.), ರಷ್ಯ(1.8ಶೇ) ಮತ್ತು ಆಸ್ಟ್ರೇಲಿಯ(1.4ಶೇ.) ಜಿಡಿಪಿ ಬೆಳವಣಿಗೆ ದರ ಇಳಿದರೂ, ಸಕಾರಾತ್ಮಕ ಬೆಳವಣಿಗೆ ದಾಖಲಿಸಿವೆ. ಜಗತ್ತಿನ ಪ್ರಮುಖ ಅರ್ಥವ್ಯವಸ್ಥೆಗಳಲ್ಲಿ,  ಅತಿ ಹೆಚ್ಚು ನಕಾರಾತ್ಮಕ ಬೆಳವಣಿಗೆಯನ್ನು, ಅಂದರೆ ಕುಸಿತವನ್ನು ದಾಖಲಿಸಿರುವುದು ಭಾರತವೇ ಎಂಬುದು ಕೂಡ ಗಮನಾರ್ಹ.

24ಶೇ. ಅವನತಿ ಒಂದು ವಿದ್ಯಮಾನಅಭೂತಪೂರ್ವ ಸಂಗತಿ

ಸರಕಾರ ಆಗಸ್ಟ್ 31ರಂದು ಪ್ರಕಟಿಸಿರುವ ದತ್ತಾಂಶಗಳು ಭಾರತದ ಅರ್ಥವ್ಯವಸ್ಥೆ ಸಂಪೂರ್ಣವಾಗಿ ತತ್ತರಗೊಂಡಿರುವುದನ್ನು ತೋರಿಸುತ್ತವೆ. ಇದು ಕೊವಿಡ್‍-19 ಮಹಾಸೋಂಕಿನ ಮೊದಲೇ ಮೂಡಿ ಬಂದಿತ್ತು. ಜಿಡಿಪಿ ಬೆಳವಣಿಗೆ ದರದಲ್ಲಿ 24ಶೇ. ಅವನತಿ ಒಂದು ವಿದ್ಯಮಾನವೇ ಸರಿ, ಇದು ಅಭೂತಪೂರ್ವ ಸಂಗತಿ. ನೋಟುರದ್ಧತಿ, ಜಿಎಸ್‍ಟಿ ಜಾರಿ ಮತ್ತು ಇದ್ದಕ್ಕಿದ್ದಂತೆ, ಯೋಜನೆಯೇನೂ ಇಲ್ಲದೆ, ಸಿದ್ಧತೆಯೇನೂ ಇಲ್ಲದೆ ಹೇರಿದ ಲಾಕ್‍ಡೌನ್ ಎಲ್ಲವೂ ಭಾರತೀಯ ಅರ್ಥವ್ಯವಸ್ಥೆ ಧ್ವಂಸಗೊಳ್ಳುವಂತೆ ಮಾಡಿವೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಇವೆಲ್ಲಕ್ಕೂ ಮೂಲಕಾರಣ ಆಂತರಿಕೆ ಬೇಡಿಕೆಯಲ್ಲಿ ಬೃಹತ್‍ ಪ್ರಮಾಣದ ಇಳಿಕೆ, ಅಂದರೆ ನಮ್ಮ ಜನಗಳ ಕೈಗಳಲ್ಲಿನ ಖರೀದಿ ಸಾಮರ್ಥ್ಯ ತೀಕ್ಷ್ಣವಾಗಿ ಕುಗ್ಗಿರುವುದು. ಈ ಪ್ರಶ್ನೆಯನ್ನು ಎದುರಿಸಲು, ನಮ್ಮ ಬಹು ಅಗತ್ಯವಾದ ಮೂಲರಚನೆಗಳನ್ನು ಕಟ್ಟಲು ಸಾರ್ವಜನಿಕ ಹೂಡಿಕೆಗಳನ್ನು ಹೆಚ್ಚಿಸಿ ಮತ್ತು ಸಾರ್ವತ್ರಿಕವಾಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ನಿರ್ಮಿಸಿ, ಆ ಮೂಲಕ ನಮ್ಮ ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯನ್ನು ಬಲಪಡಿಸಬಹುದಿತ್ತು. ಆದರೆ ಅದರ  ಬದಲು, ಮೋದಿ ಸರಕಾರ, ಖಾಸಗಿ ಕಾರ್ಪೊರೇಟ್‍ಗಳಿಗೆ ಹೂಡಿಕೆಗಳಿಗೆ ಹೆಚ್ಚು ನಿಧಿಗಳನ್ನು ಲಭ್ಯಗೊಳಿಸುವ, ಅವರಿಗೆ ಹೆಚ್ಚಿನ ತೆರಿಗೆ ರಿಯಾಯ್ತಿಗಳನ್ನು ನೀಡುವ, ಮತ್ತು ರಾಷ್ಟ್ರೀಯ ಆಸ್ತಿಗಳನ್ನು ಲೂಟಿ ಹೊಡೆಯಲು ಅವಕಾಶ ಒದಗಿಸುವ ನವ-ಉದಾರವಾದಿ ದಿಕ್ಪಥದ ಮೇಲೆಯೇ ಗಮನ ಕೇಂದ್ರೀಕರಿಸಿದೆ.

ಇದನ್ನು ಓದಿ :ನಿಮ್ಮ ಅಸಮರ್ಥತೆಗೆ “ದೈವಿಕ ಮಧ್ಯಪ್ರವೇಶ”ವನ್ನು ದೂಷಿಸಬೇಡಿ

 


ಸಾರ್ವಜನಿಕ ಖರ್ಚುಗಳನ್ನು ಏರಿಸಿ
ಆಂತರಿಕ ಬೇಡಿಕೆಯನ್ನು ಪುನಶ್ಚೇತನಗೊಳಿಸಿ

ವ್ಯಂಗ್ಯಚಿತ್ರ ಕೃಪೆ: ಸತೀಶ ಆಚಾರ್ಯ

ಆದರೆ ಖಾಸಗಿ ಹೂಡಿಕೆಗಳಿಗೆ ಎಷ್ಟೇ ಉತ್ತೇಜನೆಗಳನ್ನು ಕೊಟ್ಟರೂ ಅದು ಅರ್ಥವ್ಯವಸ್ಥೆಯನ್ನು ಪುನಶ್ಚೇತನಗೊಳಿಸಲಾರದು. ಏಕೆಂದರೆ ಇಂತಹ ಹೂಡಿಕೆಗಳಿಂದ ಉತ್ಪಾದಿಸಿದ್ದು ಮಾರುಕಟ್ಟೆಯಲ್ಲಿ ಮಾರಾಟ ಹೊಂದಬೇಕಾಗುತ್ತದೆ. ಅದನ್ನು, ಜಾಗತಿಕವಾಗಿಯೂ, ದೇಶದ ಒಳಗೂ ಖರೀದಿಸುವವರಿಲ್ಲ ಎಂದಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ , ಈ ಕಾರಣದಿಂದಲೇ ಸಿಪಿಐ(ಎಂ) ಸರಕಾರದ ಖರ್ಚುಗಳನ್ನು ಹೆಚ್ಚಿಸಬೇಕು ಎಂದು ಈ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕುತ್ತ ಬರುತ್ತಿದೆ ಎಂದು ನೆನಪಿಸಿದೆ. ಆದರೆ, ಸರಕಾರ ಇಂತಹ ಖರ್ಚುಗಳಿಗೆ ಮಿತಿ ಹಾಕುವ ಧೋರಣೆಗಳನ್ನೇ ಅನುಸರಿಸುತ್ತ ಬರುತ್ತಿದೆ. ಇದು ಆರ್ಥಿಕ ಹಿಂಜರಿತದಿಂದಾಗಿ ಸರಕಾರೀ ರೆವಿನ್ಯೂಗಳನ್ನು ತೀವ್ರವಾಗಿ ಕಡಿತಗೊಳಿಸಿದೆ.

ಇಂತಹ ಸನ್ನಿವೇಶದಲ್ಲಿ ಏನಾದರೂ ಅರ್ಥಪೂರ್ಣವಾದ ಆರ್ಥಿಕ ಪುನಶ್ಚೇತನೆ ಕಾಣಬೇಕಾದರೆ, ಸಾರ್ವಜನಿಕ ಹೂಡಿಕೆಗಳನ್ನು ಬೃಹತ್‍ ಪ್ರಮಾಣದಲ್ಲಿ ಹೆಚ್ಚಿಸಬೇಕಾಗಿದೆ, ಅದರ ಜೊತೆಗೆ ನಗದು ವರ್ಗಾವಣೆ ಮತ್ತು ಉಚಿತ ಆಹಾರ  ಪೂರೈಕೆ  ಮಾಡಬೇಕಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಪುನರುಚ್ಚರಿಸಿದೆ, ಈ ಮೂಲಕ ಮಾತ್ರವೇ ಜನಗಳಿಗೆ ತುಸು ಪರಿಹಾರ ಮತ್ತು ಜೀವನೋಪಾಯಗಳು ಸಿಗಲು ಸಾಧ್ಯ ಎಂದು ಅದು ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *