ಜಿಡಿಪಿ ದರ: ಸ್ವಾತಂತ್ರ್ಯ ನಂತರ ಶೇಕಡಾ 7.3ರಷ್ಟು ಕುಸಿತ

ನವದೆಹಲಿ: ಕೋವಿಡ್‌ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆ ಭಾರೀ ಹಿನ್ನಡೆ ಅನುಭವಿಸಿದ್ದು 2020-2021ನೇ ಸಾಲಿನ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆಯ ದರ ಶೇ.7.3ರಷ್ಟು ಕುಸಿತ ಕಂಡಿದೆ.

2020ರ ನಂತರದ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ನಿವ್ವಳ ಉತ್ಪನ್ನ ದರ(ಜಿಡಿಪಿ) ಶೇ. 1.6ರಷ್ಟು ಬೆಳವಣಿಗೆ ದಾಖಲಿಸಿದೆ. ಆದರೆ 2021-2022ರ ಸಾಲಿನ ಆರಂಭಿಕ ಆರ್ಥಿಕ ವರ್ಷದ ದಾಖಲೆಯ ಪ್ರಕಾರ ಶೇ.7.3ರಷ್ಟು ಕುಸಿತಕ್ಕೆ ಕಾರಣವಾಗಿದೆ.

2019-20ರಲ್ಲಿ ಜಿಡಿಪಿ ಕೇವಲ ಶೇ. 4ರಷ್ಟು ಬೆಳವಣಿಗೆ ಮಾತ್ರ ಕಂಡಿತ್ತು. ಇನ್ನು ಇದು ಕಳೆದ 11 ವರ್ಷಗಳಲ್ಲೇ ಅತೀ ಕಡಿಮೆ ಬೆಳವಣಿಗೆಯಾಗಿತ್ತು. ಆನಂತರ ಜಗತ್ತಿನಲ್ಲಿ ಕೊರೊನಾದಿಂದಾಗಿ ಲಾಕ್‌ಡೌನ್ ಘೋಷಿಸಲಾಗಿತ್ತು. ಹೀಗಾಗಿ ಜಿಡಿಪಿ ದರ ಋಣಾತ್ಮಕತೆ ಕಡೆಗೆ ಸಾಗಿತ್ತು.

ಕಳೆದ ವರ್ಷ ಸಾಂಕ್ರಾಮಿಕ ರೋಗ ದೇಶದಲ್ಲಿ ವ್ಯಾಪಿಸುವ ಮೊದಲೇ ಅತ್ಯಂತ ಮಂದಗತಿಯಲ್ಲಿ ಎದುರಿಸುತ್ತಿದ್ದ ಆರ್ಥಿಕತೆಯು ಏಪ್ರಿಲ್ 2020 ರಿಂದ ಮಾರ್ಚ್ 2021ರ ಹಣಕಾಸು ಅವಧಿಯಲ್ಲಿ ಶೇಕಡಾ 7.3 ರಷ್ಟು ಕುಸಿತ ಕಂಡಿದೆ.

ಇದನ್ನು ಓದಿ: 1 ಕೋಟಿ ಉದ್ಯೋಗ ನಷ್ಟ–ಶೇ.97ರಷ್ಟು ಕುಟುಂಬಕ್ಕೆ ಕಡಿಮೆಯಾದ ಆದಾಯ: ಸಿಎಂಐಇ

ಸಮಗ್ರ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆಯ ಭಾರೀ ಕುಸಿತ ದಾಖಲಾಗಿದ್ದು ಕಳೆದ ನಾಲ್ಕು ದಶಕಗಳ ಹಿಂದೆ. ಈ ಮುನ್ನ 1979​-80ರಲ್ಲಿ ದೇಶದ ಜಿಡಿಪಿ ಪ್ರಗತಿ ದರ ಶೇ.- 5.2ರಷ್ಟುಇಳಿಕೆ ಕಂಡಿತ್ತು. ಆ ಬಳಿಕ ಮೊದಲ ಬಾರಿ ದೇಶದಲ್ಲಿ ನಕರಾರಾತ್ಮಕವಾಗಿ ಆರ್ಥಿಕ ಪ್ರಗತಿ ದರ ದಾಖಲಿಸಿದೆ.

ಕೇಂದ್ರ ಸಾಂಖ್ಯಿಕ ಇಲಾಖೆ(ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಕಳೆದ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆ ದಾಖಲೆಯ ಮಟ್ಟಕ್ಕೆ ಕುಸಿದಿರುವುದನ್ನು ಸೂಚಿಸಿದೆ. ಇದೇ ವೇಳೆ ಜನವರಿಯಿಂದ ಮಾಚ್‌ರ್‍ ವರೆಗಿನ ನಾಲ್ಕನೇ ತ್ರೈಮಾಸಿಕದ ಅವಧಿಯಲ್ಲಿ ದೇಶದ ಒಟ್ಟು ದೇಶಿಯ ಉತ್ಪನ್ನ- ಜಿಡಿಪಿ ದರ ಧನಾತ್ಮಕ ಶೇ.1.6ಕ್ಕೆ ಏರಿಕೆ ಕಂಡಿದೆ.

ಭಾರತದ ನೈಜ ಜಿಡಿಪಿ 2020ರ ಮಾರ್ಚ್ ಅಂತ್ಯದ ವೇಳೆಗೆ 145 ಲಕ್ಷ ಕೋಟಿ ರೂ.ಗಳಿಂದ 2020-21ರ ಮಾರ್ಚ್ ಅಂತ್ಯಕ್ಕೆ 135 ಲಕ್ಷ ಕೋಟಿ ರೂ.ಗೆ ಕುಸಿತ ಕಂಡಿದೆ. ಇನ್ನು 145 ಲಕ್ಷ ಕೋಟಿ ರೂ.ಗಳ ಗಾತ್ರವನ್ನು ಮರಳಿ ಪಡೆಯಲು, ಪ್ರಸಕ್ತ 2021-22ರ ಆರ್ಥಿಕ ವರ್ಷದಲ್ಲಿ ಆರ್ಥಿಕತೆಯು ಶೇಕಡಾ 10-11ರಷ್ಟು ಏರಿಕೆಯಾಗಬೇಕಿದೆ.

ಇದನ್ನು ಓದಿ: ವಿಧ್ವಂಸದ ಎರಡು ಯಾತನಾಮಯ ವರ್ಷಗಳು

ಕಳೆದ ವರ್ಷ ಕೊರೊನಾ ನಿಯಂತ್ರಣದ ನಿಟ್ಟಿನಲ್ಲಿ ಕೇಂದ್ರ ಸರಕಾರವು ಹಠಾತ್ತಾಗಿ ಮಾ.25ರಿಂದ ದೇಶವ್ಯಾಪಿ ಲಾಕ್‌ಡೌನ್‌ ಘೋಷಿಸಿದ್ದರ ಪರಿಣಾಮವಾಗಿ 2020ರ ಏಪ್ರಿಲ್‌-ಜೂನ್‌ ಅವಧಿಯಲ್ಲಿ ಜಿಡಿಪಿ ಪ್ರಗತಿ ದರ ಸಾರ್ವಕಾಲಿಕ ದಾಖಲೆಯ ಶೇ.24.4ರಷ್ಟುಇಳಿಕೆ ದಾಖಲಿಸಿತ್ತು.

ಮೇ 31ನೇ ತಾರೀಕಿನಂದು 2021ನೇ ಇಸವಿಯ ಜನವರಿಯಿಂದ ಮಾರ್ಚ್ ತ್ರೈಮಾಸಿಕ ಹಾಗೂ 2020-21ನೇ ಸಾಲಿನ ವಾರ್ಷಿಕ ಅಂಕಿ- ಅಂಶ ಬಂತು. ಅದರ ಪ್ರಕಾರ, 2019- 20ನೇ ಸಾಲಿನ ಜನವರಿಯಿಂದ -ಮಾರ್ಚ್ ಅವಧಿಗೆ ಹೋಲಿಸಿದರೆ ಈ ಬಾರಿ ಬೆಳವಣಿಗೆ ಕಂಡಿದೆ. ಆದರೆ ಆ ಪ್ರಮಾಣ ಶೇ 1.6 ಮಾತ್ರ. ಇನ್ನು ವಾರ್ಷಿಕವಾಗಿ ನೋಡಿದರೆ ಶೇ 7.3ರಷ್ಟು ಕಡಿಮೆ ಆಗಿದೆ. 2019- 20ನೇ ಸಾಲಿಗೆ ಹೋಲಿಸಿದರೆ, 2020- 21ರದಲ್ಲಿ ಜಿಡಿಪಿ ಶೇ 7.3 ಕುಗ್ಗಿದೆ.

ಕಟು ಟೀಕೆಗೆ ಗುರಿಯಾದ ಕೇಂದ್ರದ ಬಿಜೆಪಿ ಸರಕಾರ

ಜಿಡಿಪಿ ಕುಸಿತದಿಂದ ದೇಶದ ಆರ್ಥಿಕತೆಯಲ್ಲಿ ಆಗುತ್ತಿರುವ ಹಿನ್ನಡೆಗೆ ಕೇಂದ್ರದ ಬಿಜೆಪಿ ಸರಕಾರದ ನೀತಿಗಳು ಅತ್ಯಂತ ಪ್ರಮುಖವಾಗಿ ಕಾರಣವಾಗಿದೆ. ಕಳೆದ ವರ್ಷ ಯಾವುದೇ ಪೂರ್ವ ತಯಾರಿಗಳನ್ನು ಕೈಗೊಳ್ಳದೆ ಹಠತ್ತಾನೆ ಅತ್ಯಂತ ದೀರ್ಘಕಾಲಿಕವಾಗಿ ಜಾರಿಗೆ ತಂದ ಲಾಕ್‌ಡೌನ್‌ ಪರಿಣಾಮವಾಗಿ ಜನರ ಜೀವನೋಪಾಯಕ್ಕೆ ಸಂಕಷ್ಟಗಳು ಎದುರಾದವು.

ಕೋವಿಡ್‌ ಆರಂಭಕ್ಕೂ ಮೊದಲೇ ದಾಖಲೆ ಪ್ರಮಾಣದಲ್ಲಿ ಏರುತ್ತಿದ್ದ ನಿರುದ್ಯೋಗ ಪ್ರಮಾಣ, ಜೀವನೋಪಾಯ ವಸ್ತುಗಳ ಸತತ ಬೆಲೆ ಏರಿಕೆಗಳಿಂದ ದೇಶದ ಜನಸಾಮಾನ್ಯರು ಕಷ್ಟಗಳನ್ನು ಎದುರಿಸಬೇಕಾಯಿತು. ನಂತರದಲ್ಲಿ ಧಾಳಿ ಇಟ್ಟ ಕೋವಿಡ್ ಪರಿಣಾಮದಿಂದ ದೇಶದಲ್ಲ ಕೇವಲ ಲಾಕ್‌ಡೌನ್‌ ಮಾತ್ರ ಜಾರಿಗೊಳಿಸಿದ ಸರಕಾರವು ಜನತೆಗೆ ಸಮಗ್ರವಾದ ಆರ್ಥಿಕ ನೆರವನ್ನು ಘೋಷಿಸದ ಪರಿಣಾಮವಾಗಿ ಆರ್ಥಿಕತೆ ಉತ್ತೇಜನ ಸಿಗಲಿಲ್ಲ.

ಕೇಂದ್ರ ಸರಕಾರ ಘೋಷಣೆ ಮಾಡಿದ ಆರ್ಥಿಕ ಪ್ಯಾಕೇಜ್‌ಗಳು ಅದು ಕೇವಲ ಅಂಕಿಸಂಖ್ಯೆಗಳ ಆಟವಾಗಿತ್ತೇ ವಿನಃ ನಿಜವಾದ ನೆರವಾಗಿರಲಿಲ್ಲ. ತೋರಿಕೆ ಎಂಬಂತೆ ಅಲ್ಲಲ್ಲಿ ಕೆಲವು ವಿಭಾಗಗಳಿಗೆ ಮಾತ್ರ ನೆರವನ್ನು ಒದಗಿಸಿದ ಸರಕಾರ ಇಡೀ ಜನತೆಗೆ ಆರ್ಥಿಕ ನೆರವಾಗಲಿ, ಆಹಾರ ಭದ್ರತೆಯಾಗಲಿ ಜಾರಿಗೊಳಿಸಲಿಲ್ಲ.

2020ರ ಲಾಕ್‌ಡೌನ್‌ ನಂತರದಲ್ಲೂ  ಆರಂಭವಾದ ಚಟುವಟಿಕೆಗಳು ಸಹ ಕಳೆದೊಂದು ವರ್ಷದಿಂದ ಅತ್ಯಂತ ಮಂದಗತಿಯಿಂದ ಸಾಗುತ್ತಿದೆ. ಈ ನಡುವೆ ಸಾವಿರಾರು ಸಣ್ಣ ಉದ್ದಿಮೆಗಳು ಬಾಗಿಲು ಮುಚ್ಚಿದ್ದು ಲಕ್ಷಾಂತರ ಉದ್ಯೋಗಿಗಳು ಉದ್ಯೋಗವಿಲ್ಲದೆ ನಿರುದ್ಯೋಗಕ್ಕೆ ದೂಡಲ್ಪಟ್ಟರು.

ಈಗ ದೇಶದಲ್ಲಿ ಹರಡಿರುವ ಕೋವಿಡ್‌ ಎರಡನೇ ಅಲೆಯ ಪರಿಣಾಮವಾಗಿ ಒಂದು ಉದ್ಯೋಗ ನಷ್ಟ ಮತ್ತು ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಆರೋಗ್ಯ ರಕ್ಷಣೆಯನ್ನು ನಿಭಾಯಿಸುವ ಹೆಚ್ಚುವರಿ ವೆಚ್ಚಗಳ ಪರಿಣಾಮವಾಗಿ ತೀವ್ರತರವಾಗಿ ಸಂಕಷ್ಟಕ್ಕೆ ಎಡೆ ಮಾಡಿಕೊಟ್ಟಿದೆ.

ಕೋವಿಡ್‌ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಹಲವು ರಾಜ್ಯಗಳು ಲಾಕ್‌ಡೌನ್‌ ಜಾರಿಗೊಳಿಸಿದೆ. ಕೇರಳ, ತಮಿಳುನಾಡು ರಾಜ್ಯಗಳು ಜನರ ಜೀವನೋಪಾಯಕ್ಕೆ ಸಹಾಯಹಸ್ತ ಚಾಚಿದಂತೆ ಕರ್ನಾಟಕ ಒಳಗೊಂಡು ಇತರೆ ರಾಜ್ಯಗಳಲ್ಲಿ ವಿಶೇಷ ಆರ್ಥಿಕ ಘೋಷಣೆಗಳು ಜಾರಿಗೊಳಿಸದ ಪರಿಣಾಮವಾಗಿ ಒಂದು ಕಡೆ ಉದ್ಯೋಗ ನಷ್ಟ ಮತ್ತೊಂದು ಕಡೆ ಆರ್ಥಿಕ ವರಮಾನದ ಕುಸಿತದಿಂದ ಜನರು ತತ್ತರಿಸಿ ಹೋಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *