ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಈ ಬಾರಿಯ ಬಜೆಟಿನಲ್ಲಿ ಮಾಡಿರುವಂತೆ ಮಧ್ಯಮ ವರ್ಗಕ್ಕೆ ಆದಾಯ ತೆರಿಗೆಗಳ ಹೊರೆಯನ್ನು ಒಂದಿಷ್ಟು ಕಡಿಮೆ ಮಾಡಿದರೆ ನಮ್ಮ ಅರ್ಥವ್ಯವಸ್ಥೆಯ ನಿಧಾನಗತಿಯನ್ನು ಹೋಗಲಾಡಿಸಿ ಚೈತನ್ಯ ತುಂಬಲು ಸಾಧ್ಯವೇ? ಖಂಡಿತಾ ಇಲ್ಲ ಎಂದಿದ್ದಾರೆ ಪ್ರೊ. ಪ್ರಭಾತ್ ಪಟ್ನಾಯಕ್ ಈ ಬಾರಿಯ ಬಜೆಟ್ ಮಂಡನೆಯ ಮೊದಲೇ ಬರೆದಿರುವ ಈ ಲೇಖನದಲ್ಲಿ. ರಿಸರ್ವ್ ಬ್ಯಾಂಕ್ ಸೇರಿದಂತೆ ಆಳುವ ವ್ಯವಸ್ಥೆಯ ಅರ್ಥಶಾಸ್ತ್ರಜ್ಞರು ಈಗ ದೇಶ ಜಿಡಿಪಿ ಬೆಳವಣಿಗೆಗೆ ರಫ್ತುಗಳನ್ನು ಆಧರಿಸುವ ಬದಲು ಸರಕುಗಳ ಬಳಕೆಯನ್ನು ಹೆಚ್ಚಿಸುವ ಕಾರ್ಯತಂತ್ರದತ್ತ ಹೊರಳಬೇಕು ಎಂದು ಹೇಳುವಾಗ ವಾಸ್ತವವಾಗಿ ಅವರ ಕಾಳಜಿ ನಗರ ಮಧ್ಯಮ ವರ್ಗದ ಬಳಕೆಯ ಬಗ್ಗೆ ಇರುವ ಕಾಳಜಿ ದುಡಿಯುವ ಜನರ ಬಳಕೆಯ ಬಗ್ಗೆ ಇಲ್ಲ ಎಂಬುದು ಸ್ಪಷ್ಟ.. ಆದರೆ ಇದು ನವ ಉದಾರವಾದಿ ಅರ್ಥವ್ಯವಸ್ಥೆಯ ಕಾರ್ಯವಿಧಾನದ ಬಗ್ಗೆ ಅರಿವಿನ ತೀವ್ರ ಕೊರತೆಯನ್ನು ತೋರಿಸುತ್ತದೆ ಎನ್ನುತ್ತಾರೆ ಅವರು. ಭಾರತ
–ಪ್ರೊ. ಪ್ರಭಾತ್ ಪಟ್ನಾಯಕ್
–ಅನು: ಕೆ.ಎಂ.ನಾಗರಾಜ್
ಏಕೆಂದರೆ, ನಿಜವಾಗಿಯೂ ಬಳಕೆ-ಆಧಾರಿತ ಬೆಳವಣಿಗೆ ನಡೆಯಬೇಕಾದರೆ ಅದು ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆಗಳ ಮೂಲಕ ಅಥವ ವಿತ್ತೀಯ ಕೊರತೆಯನ್ನು ಹೆಚ್ಚಿಸುವ ಮೂಲಕ ಹೆಚ್ಚಿನ ಸಂಪನ್ಮೂಲಗಳನ್ನು ಎತ್ತುವ ಕ್ರಮಗಳನ್ನು ಕೈಗೊಂಡರೆ ಮಾತ್ರವೇ ಸಾಧ್ಯ. ನವ-ಉದಾರವಾದಿ ಆಳ್ವಿಕೆ ಇವೆರಡಕ್ಕೂ ಅವಕಾಶ ಕೊಡುವುದಿಲ್ಲ. ಆದ್ದರಿಂದ ಈಗ ನವ-ಉದಾರವಾದಿ ವ್ಯವಸ್ಥೆಗೆ ಕಟ್ಟುಬಿದ್ದಿರುವ ಭಾರತದಲ್ಲಿ ಇಂತಹ ಬಳಕೆ- ಆಧಾರಿತ ಬೆಳವಣಿಗೆ ಸಾಧ್ಯವಿಲ್ಲ ಎನ್ನುತ್ತಾರೆ.
ಕುಂಠಿತಗೊಂಡಿರುವ ಭಾರತದ ಅರ್ಥವ್ಯವಸ್ಥೆಯ ಬೆಳವಣಿಗೆ ದರವನ್ನು ಪುನಶ್ಚೇತನಗೊಳಿಸುವ ಒಂದು ಮಾರ್ಗವಾಗಿ ಆಂತರಿಕ ಬಳಕೆಗೆ ಉತ್ತೇಜನ ನೀಡಬೇಕು ಎಂದು ಕೆಲವು ಸಲಹಾ ಸಂಸ್ಥೆಗಳಿಂದ ಹಿಡಿದು ಹಣಕಾಸು ಪತ್ರಿಕೆಗಳವರೆಗೆ ಆಳುವ ವ್ಯವಸ್ಥೆಯ ದನಿಗಳು ಸಾಮೂಹಿಕವಾಗಿ ಒತ್ತಾಯಿಸುತ್ತಿವೆ. ಈ ಮೇಳ ಗಾನಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ದನಿಗೂಡಿಸಿದೆ. ಅರ್ಥವ್ಯವಸ್ಥೆಯಲ್ಲಿ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಉದ್ಯಮಿಗಳ ಗೂಳಿ ಹುಮ್ಮಸ್ಸನ್ನು ಪುನಶ್ಚೇತನಗೊಳಿಸಬೇಕು” ಎಂದು ರಿಸರ್ವ್ ಬ್ಯಾಂಕ್ ತನ್ನ ಇತ್ತೀಚಿನ ಬುಲೆಟಿನ್‌ನಲ್ಲಿ ಹೇಳಿದೆ. ಭಾರತ
ಇದನ್ನೂ ಓದಿ: ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಪಕ್ಷಿ ಗಣತಿ – 253 ಪ್ರಬೇಧ ಪತ್ತೆ
ಈ ಎಲ್ಲರೂ ಹೊಂದಿರುವ ಕಾಳಜಿಯ ಬಗ್ಗೆ ಎರಡು ಅಂಶಗಳನ್ನು ಗಮನಿಸಬೇಕಾಗುತ್ತದೆ: ಮೊದಲನೆಯದು, 2024-25ರಲ್ಲಿ ಶೇ. 7ರಷ್ಟು ಬೆಳವಣಿಗೆಯಾಗಲಿದೆ ಎಂದು ಮುನ್ಸೂಚನೆಯಾಗಿ ಹೇಳಲಾಗಿತ್ತು. ಅದೀಗ ಕೇವಲ ಶೇ. 0.5ರಷ್ಟು ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದೇನೂ ಒಂದು ಆತಂಕದ ವಿಷಯವೇ ಅಲ್ಲ. ಏಕೆಂದರೆ, ಶೇ 6.5ರ ಬೆಳವಣಿಗೆಯು ಯಾವುದೇ ಮಾನದಂಡದ ಪ್ರಕಾರ ನೋಡಿದರೂ ಕಳಪೆಯೇನಲ್ಲ ಮತ್ತು ಅದು ಉದ್ಯಮಿಗಳ ಗೂಳಿ ಹುಮ್ಮಸ್ಸನ್ನುಕುಂದಿಸುತ್ತದೆಂಬ ಮಟ್ಟಿಗೆ ವ್ಯವಸ್ಥೆಯ ಅರ್ಥಶಾಸ್ತ್ರಜ್ಞರನ್ನು ಚಿಂತೆಗೀಡುಮಾಡಬೇಕಾದ ವಿಷಯವಲ್ಲ. ಭಾರತ
ಆದ್ದರಿಂದ, ಈ ಕಾಳಜಿಯು, ಜಿಡಿಪಿಯ ಪರಿಕಲ್ಪನೆಯೇ ದೋಷಪೂರಿತವಾಗಿದ್ದರೂ ಸಹ, ಅದರ ಪರಿಧಿಯೊಳಗೇ ನೋಡಿದರೂ ಸಹ, ಬೆಳವಣಿಗೆಯ ದರದ ಬಗ್ಗೆ ಮಾಡಿರುವ ಈ ಅಂದಾಜೇ ಒಂದು ಅತಿ-ಅಂದಾಜು ಎಂಬುದನ್ನು ಮತ್ತು ಎರಡನೆಯದಾಗಿ, ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿರುವಂತೆಯೇ, ಅದರ ಕಾಳಜಿ ನಗರ
ಮಧ್ಯಮ ವರ್ಗದ ಬಳಕೆಯ ಬಗ್ಗೆಯೇ ಹೊರತು ದುಡಿಯುವ ಜನರ ಬಳಕೆಯ ಬಗ್ಗೆ ಅಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಅದು ಬಳಕೆಯ ಉತ್ತೇಜನದ ಬಗ್ಗೆ ಹೇಳುತ್ತಿರುವುದು ನಗರ ಮಧ್ಯಮ ವರ್ಗದ ಬಳಕೆಯ ಬಗ್ಗೆ ಎಂಬುದನ್ನು ಈ ಕೆಳಗಿನ ವಿವರಗಳು ಸ್ಪಷ್ಟಪಡಿಸುತ್ತವೆ. ಭಾರತ
ಒಟ್ಟು ಬೇಡಿಕೆಯನ್ನು ದುಡಿಯುವ ಬಡಜನರ ಬಳಕೆಯ ಮೂಲಕ ಹೆಚ್ಚಿಸುವುದು ಒಂದು ಉದ್ದೇಶವಾಗಿದ್ದರೆ, ಆಗ ಅದನ್ನು ಸಾಧಿಸುವ ಸ್ಪಷ್ಟ ಮಾರ್ಗವೆಂದರೆ ಎಲ್ಲರಿಗೂ ಕೂಲಿ ದರವನ್ನು ಹೆಚ್ಚಿಸುವ ಮೂಲಕ ಮತ್ತು ಶಾಸನಬದ್ಧ ಕನಿಷ್ಠ ಕೂಲಿ ದರವನ್ನು ಏರಿಸುವ ಮೂಲಕ ಮಾಡಬಹುದು. ಆದರೆ ಈ ನಿಟ್ಟಿನಲ್ಲಿ ಯಾರೂ ಮಾತನಾಡುತ್ತಿಲ್ಲ. ಲಾರ್ಸೆನ್ ಮತ್ತು ಟೂಬ್ರೊ ಅಧ್ಯಕ್ಷರು ತದ್ವಿರುದ್ಧ ದಿಕ್ಕಿನಲ್ಲಿ ಮಾತನಾಡುತ್ತಾರೆ. ಕೆಲಸದ ಅವಧಿಯನ್ನು ವಾರಕ್ಕೆ 90 ಘಂಟೆಗಳಿಗೆ ಏರಿಸಬೇಕು ಎಂಬ ಅವರ ಅಭಿಪ್ರಾಯದ ಬಗ್ಗೆ ಬೇರೆ ಯಾವುದೇ ಉದ್ಯಮಿ ನಾಯಕನೂ ಭಿನ್ನ ಮತವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿಲ್ಲ! ಇದು, ಭಾರತದ ಕಾರ್ಖಾನೆಗಳನ್ನು ಕೂಡಿಹಾಕಿದ ಕೈದಿಗಳಿಂದ ಸಾಯುವ ವರೆಗೆ ಕೆಲಸ ಮಾಡಿಸುತ್ತಿದ್ದ ನಾಜಿ ಶಿಬಿರಗಳಿಗೆ ಹೋಲುವಂತೆ ಮಾಡುತ್ತದೆ.
ಕೆಲಸಗಾರರು ತಮ್ಮ ಹೆಂಡತಿಯರನ್ನು ದಿಟ್ಟಿಸುತ್ತಾ ಮನೆಯಲ್ಲಿರುವುದಕ್ಕಿಂತ ಕೆಲಸ ಮಾಡುವುದು ಉತ್ತಮ ಮತ್ತು ಆರಾಮಾಗಿರುವುದರ ಬದಲು ಕೆಲಸದಲ್ಲಿ ಹೆಚ್ಚು ತೊಡಗಿಕೊಳ್ಳುವುದು ಜೀವನವನ್ನು ಶ್ರೀಮಂತಗೊಳಿಸುತ್ತದೆ ಎಂಬ ಅವರ ವಾದಕ್ಕೂ ಮತ್ತು ಪ್ರಧಾನವಾಗಿ ಯಹೂದಿಯರನ್ನು, ರಷ್ಯನ್ ಮತ್ತು ಇತರ ಕೆಲವು ದೇಶಗಳ ಯುದ್ಧ ಕೈದಿಗಳನ್ನು ಕೂಡ ಹಾಕಿದ ಔಸ್ವಿಟ್ಝ್ ಯಾತನಾ ಮತ್ತು ಸಾವಿನ ಶಿಬಿರದ ಕಬ್ಬಿಣದ ಪ್ರವೇಶ ದ್ವಾರದ ಮೇಲೆ ಎರಕ ಹೊಯ್ದ ಆರ್ಬೈಟ್ ಮಾಕ್ಟ್ ಫ್ರೈ’ (ಕೆಲಸವು ವ್ಯಕ್ತಿಯನ್ನು ಮುಕ್ತಗೊಳಿಸುತ್ತದೆ) ಎಂಬ ಕುಖ್ಯಾತ ಪದಪುಂಜಗಳಿಗೂ ವಿಲಕ್ಷಣ ಹೋಲಿಕೆಯಾಗುತ್ತದೆ. ಹೀಗೆ ಭಾರತದ ವ್ಯವಸ್ಥೆಯು ದುಡಿಯುವ ಬಡವರ ಬಳಕೆಯನ್ನು ಹೆಚ್ಚಿಸುವ ಬಗ್ಗೆ ಮಾತನಾಡುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಭಾರತ
ಮಧ್ಯಮವರ್ಗದ ಬಗ್ಗೆ ಮಾತ್ರ ಕಾಳಜಿಯೇಕೆ?
ನಗರಪ್ರದೇಶದ ಮಧ್ಯಮ ವರ್ಗವನ್ನು ಸಂಬಂಧಿಸಿ ಹೇಳುವುದಾದರೆ ಕೂಡ, ಅದರ ಬಳಕೆಯನ್ನು ಹೆಚ್ಚಿಸುವ ವಿಧಾನಗಳು ಆಹಾರ ಬೆಲೆ ಹಣದುಬ್ಬರವನ್ನು ತಗ್ಗಿಸುವುದರಲ್ಲಿದೆ ಎಂದು ಭಾವಿಸಿದಂತಿದೆ. ಆಹಾರ ಬೆಲೆ ಹಣದುಬ್ಬರವನ್ನು ಖಂಡಿತಾ ನಿಗ್ರಹಿಸಲೇಬೇಕು. ಆದರೆ, ಒಟ್ಟು ಬೇಡಿಕೆಯ ಮೇಲೆ ಅದರ ಪರಿಣಾಮವೇನು ಎಂಬುದೇ ಇಲ್ಲಿರುವ ಪ್ರಶ್ನೆ. ಆಹಾರ ಬೆಲೆ ಹಣದುಬ್ಬರದ ಫಲಾನುಭವಿಗಳೂ ಗ್ರಾಹಕರೇ. ಹಾಗಾದರೆ, ಆಹಾರ ಬೆಲೆ ಹಣದುಬ್ಬರದಿಂದಾಗಿ ನಗರ ಮಧ್ಯಮ ವರ್ಗದಲ್ಲಿ ಕಳೆದುಕೊಂಡ ಬಳಕೆಯ ಬೇಡಿಕೆಯು ಆಹಾರ ಬೆಲೆ ಹಣದುಬ್ಬರದ ಫಲಾನುಭವಿಗಳು ಪಡೆದ ಬಳಕೆಯ ಬೇಡಿಕೆಗಿಂತ ಹೆಚ್ಚಿನದಾಗಿತ್ತೇ? ಆಹಾರ ಬೆಲೆ ಹಣದುಬ್ಬರದಿಂದ ಲಾಭ ಪಡೆಯುವವರು, ಅದರಿಂದ ನಷ್ಟ ಅನುಭವಿಸುವ ನಗರ ಮಧ್ಯಮ ವರ್ಗದವರಿಗಿಂತ ಹೆಚ್ಚಿನ ಉಳಿತಾಯ ಅನುಪಾತವನ್ನು ಹೊಂದಿರುವುದಿಲ್ಲವಾದ್ದರಿಂದ, ಆಹಾರ ಬೆಲೆ ಹಣದುಬ್ಬರವು ರಿಸರ್ವ್ ಬ್ಯಾಂಕ್ ಮತ್ತು ಇತರರು ಭಾವಿಸುವಂತೆ ಗ್ರಾಹಕ ಸರಕುಗಳ ಬೇಡಿಕೆಯನ್ನು ಕುಗ್ಗಿಸುವುದಿಲ್ಲ. ಭಾರತ
ಇದು ದುಡಿಯುವ ಜನರ (ಅವರು ತಮ್ಮ ವರಮಾನದ ಅತಿ ಕಡಿಮೆ ಭಾಗವನ್ನು ಉಳಿಸುತ್ತಾರೆ) ವರಮಾನವನ್ನು ಹಿಂಡುವ ಮೂಲಕ ಅವರ ಬಳಕೆಯ ಬೇಡಿಕೆಯನ್ನು ಕುಗ್ಗಿಸುತ್ತದೆ, ನಗರ ಮಧ್ಯಮ ವರ್ಗವನ್ನು ಹಿಂಡುವ ಮೂಲಕ ಅಲ್ಲ. ಆದರೆ, ಏಕಸ್ವಾಮ್ಯ ಬಂಡವಾಳ ಉತ್ಪಾದಿತ ಸರಕುಗಳನ್ನು ಆಹಾರ ಬೆಲೆ ಹಣದುಬ್ಬರದ ಫಲಾನುಭವಿಗಳಿಗಿಂತಲೂ ಹೆಚ್ಚಾಗಿ ನಗರ ಮಧ್ಯಮ ವರ್ಗವು ಬಳಸುತ್ತದೆ. ಇದುವೇ ನಗರ ಮಧ್ಯಮ ವರ್ಗದ ಬಳಕೆಯ ಬಗ್ಗೆ ತೋರುವ ಕಾಳಜಿಯ ನಿಜ ಕಾರಣ. ಇರಲಿ, ನಾವು ಮುಂದುವರಿಯೋಣ. ಭಾರತ
ಒಂದು ಮುಕ್ತ-ವ್ಯಾಪಾರ ವ್ಯವಸ್ಥೆಯನ್ನು ಹೊಂದಿದ ನವ ಉದಾರವಾದಿ ಅರ್ಥವ್ಯವಸ್ಥೆಯಲ್ಲಿ, ರಫ್ತುಗಳ ಮೂಲಕ ಬೆಳವಣಿಗೆಗೆ ಸಾಮಾನ್ಯವಾಗಿ ಉತ್ತೇಜನ ದೊರಕುತ್ತದೆ. ಆಗೊಮ್ಮೆ ಈಗೊಮ್ಮೆ ಸ್ಥಳೀಯವಾಗಿ ಸಂಭವಿಸುವ ಆಸ್ತಿ-ಬೆಲೆ ಗುಳ್ಳೆಗಳು ಉತ್ತೇಜಿಸುವ ಒಂದು ದೊಡ್ಡ ಪ್ರಮಾಣದ ಬಳಕೆಯ ಮೂಲಕವೂ ಬೆಳವಣಿಗೆಗೆ ತುಸು ಉತ್ತೇಜನ ದೊರಕುತ್ತದೆ. ಆದರೆ, ಸಾಮಾನ್ಯವಾಗಿ, ರಫ್ತು ಬೇಡಿಕೆಯ ಬೆಳವಣಿಗೆಯೇ ಅರ್ಥವ್ಯವಸ್ಥೆಯನ್ನು ಮುಂದಕ್ಕೊಯ್ಯುವ ಅಂಶವಾಗಿರುತ್ತದೆ. ಹಾಗಾಗಿ, ಈಗ ಕೇಳಲಾಗುತ್ತಿರುವುದು ಒಂದು ರಫ್ತು-ಪ್ರಧಾನ ಬೆಳವಣಿಗೆಯಿಂದ ಬಳಕೆ-ಪ್ರಧಾನ ಬೆಳವಣಿಗೆಯತ್ತ ಬದಲಾಗಬೇಕು ಎಂದು. ಸಾರಭೂತವಾಗಿ ಇದರ ಅರ್ಥ, ಬೆಳವಣಿಗೆಯನ್ನು ದೇಶೀಯ ಮಾರುಕಟ್ಟೆಗೆ ಪ್ರಾಧಾನ್ಯತೆಯ ಮೂಲಕ ಉಂಟುಮಾಡಬೇಕು ಎಂದೇ ಆಗುತ್ತದೆ. ಆದರೆ ಇದು ನವ
ಉದಾರವಾದಿ ಅರ್ಥವ್ಯವಸ್ಥೆಯು ಹೊಂದಿರುವ ಮಿತಿಯೊಳಗೆ ಸಾಧ್ಯವೇ ಎಂಬುದೇ ಪ್ರಶ್ನೆ!
ಸರ್ಕಾರದ ವೆಚ್ಚದಲ್ಲಿ ಜಿಗಿತ ಅಗತ್ಯ
ಹೆಚ್ಚು ಸಾಲವು ಲಭ್ಯವಾಗುವಂತೆ ಮಾಡುವುದರಿಂದ ಅಥವಾ ಸಾಲವನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವುದರಿಂದ ನಗರ ಮಧ್ಯಮ ವರ್ಗದವರ ಬಳಕೆ ಪ್ರಮಾಣವನ್ನು ಕೂಡ ಹೆಚ್ಚು ಮಾಡಲಾಗುವುದಿಲ್ಲ. ಸುಲಭ ಸಾಲ ಲಭ್ಯತೆಯಿಂದಾಗಿ ಮಧ್ಯಮ ವರ್ಗದ ಬಳಕೆಯು ಅಲ್ಪಾವಧಿಯಲ್ಲಿ ಹೆಚ್ಚಾಗಬಹುದು. ಆದರೆ, ತಾವು ಹೆಚ್ಚು ಹೆಚ್ಚು ಸಾಲಗಾರರಾಗುವುದರಿಂದ ಮತ್ತು ತಮ್ಮ ಸಾಲದ ಹೊರೆ ಮತ್ತಷ್ಟು ಹೆಚ್ಚುವುದನ್ನು ಬಳಕೆದಾರರು ತಪ್ಪಿಸಲು ಪ್ರಯತ್ನಿಸುತ್ತಾರೆ. ಹಾಗಾಗಿ ಈ ಉತ್ತೇಜನವು ಬಹಳ ಬೇಗ ನಿಷ್ಪçಯೋಜಕವಾಗುತ್ತದೆ. ಅದೇ ರೀತಿಯಲ್ಲಿ ಆಹಾರ ಬೆಲೆ ಹಣದುಬ್ಬರವನ್ನು ತಡೆದು ನಿಲ್ಲಿಸುವ ಕ್ರಮವೂ ಬಳಕೆಗೆ ತಾತ್ಕಾಲಿಕ
ಉತ್ತೇಜನವನ್ನು ನೀಡುತ್ತದೆಯಲ್ಲದೆ ಬೆಳವಣಿಗೆಗೆ ಒಂದು ಉತ್ತೇಜಕವಾಗಿ ಬಳಕೆಯ ಹೆಚ್ಚಳವನ್ನು ಮುಂದುವರಿಸಲಾರದು.
ಬಳಕೆಯು ಒಂದು ವೇಳೆ ಹೆಚ್ಚಿದರೆ ಮತ್ತು ಅದರ ಪರಿಣಾಮವಾಗಿ ವರಮಾನವೂ ಹೆಚ್ಚಿದರೆ, ಆಗ ಈ ಪ್ರಕ್ರಿಯೆಯ ಮುಂದುವರಿಯುತ್ತಲೇ ಇರುವುದನ್ನು ನಿಲ್ಲಿಸಲಾಗದು ಎಂದು ಭಾವಿಸಬಹುದು. ಆದರೆ, ಯಾವುದೇ ಅವಧಿಯಲ್ಲಿ ಯಾವುದೇ ಕಾರಣಕ್ಕಾಗಿ ಬಳಕೆಯು ಒಂದು ವೇಳೆ ಕುಸಿದರೆ, ಆಗ ಆರಂಭವಾಗುವ ಕೆಳಮುಖ ಚಲನೆಯನ್ನೂ ನಿಲ್ಲಿಸಲಾಗದು. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಬಳಕೆ-ಪ್ರಧಾನ ಬೆಳವಣಿಗೆಯನ್ನು ಒಂದು ಸ್ವಾಯತ್ತ ಶಕ್ತಿಯು ಹೊರಗಿನಿಂದ ಸತತವಾಗಿ ಪೋಷಿಸುವುದು ಅಗತ್ಯವಾಗುತ್ತದೆ. ಬಳಕೆದಾರರ ಕೈಯಲ್ಲಿ ಕೊಳ್ಳುವ ಶಕ್ತಿಯನ್ನು ತುಂಬುವ ಸರ್ಕಾರದ ವೆಚ್ಚವು ಅಂತಹ ಸ್ವಾಯತ್ತ ಶಕ್ತಿಗೆ ಒಂದು ಮಾದರಿಯಾಗುತ್ತದೆ.
ಈ ಪೋಷಣೆ ಸಂಭವಿಸಬೇಕು ಎಂದಾದರೆ, ಸರ್ಕಾರದ ವೆಚ್ಚದಲ್ಲಿ ಒಂದು ಜಿಗಿತ ಅಗತ್ಯವಾಗುತ್ತದೆ, ಆ ವೆಚ್ಚವು ಬಳಕೆದಾರರ ಕೈಯಲ್ಲಿ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಹಣ ವರ್ಗಾವಣೆಯ ರೂಪದಲ್ಲಿದ್ದರೂ ಸರಿಯೇ. ಆದರೆ, ಈ ಜಿಗಿತವು ಯಾವಾಗ ಸಂಭವಿಸಬಹುದು ಎಂದರೆ, ವಿತ್ತೀಯ ಕೊರತೆಯನ್ನು ವಿಸ್ತರಿಸಿದಾಗ ಅಥವಾ ತಮ್ಮ ವರಮಾನದ ಬಹು ಭಾಗವನ್ನು ಉಳಿಸುವ ವರ್ಗಗಳ ಮೇಲಿನ ತೆರಿಗೆಗಳನ್ನು ಹೆಚ್ಚಿಸಿದಾಗ ಮಾತ್ರ. ಏಕೆಂದರೆ, ಆ ಸಂದರ್ಭದಲ್ಲಿ ಮಾತ್ರವೇ ಬಳಕೆಯಲ್ಲಿ ನಿವ್ವಳ ಹೆಚ್ಚಳವಿರುತ್ತದೆ.
ವಿಷಯವನ್ನು ಉದಾಹರಣೆಯ ರೂಪದಲ್ಲಿ ಹೇಳುವುದಾದರೆ, ಅಧಿಕ ವೆಚ್ಚಗಳಿಗಾಗಿ ಹಣ ಹೊಂದಿಸಿಕೊಳ್ಳುವ ಸಲುವಾಗಿ ಸರ್ಕಾರವು, ಹೆಚ್ಚು ಕಡಿಮೆ ತಮ್ಮ ಇಡೀ ವರಮಾನವನ್ನೇ ಬಳಕೆ ಮಾಡಿಕೊಳ್ಳುವ ವರ್ಗಗಳ ಮೇಲೆ ತೆರಿಗೆಗಳನ್ನು ಒಂದು ವೇಳೆ ಹೇರಿದರೆ, ಆಗ ಅವರಿಂದ ಸಂಗ್ರಹಿಸಿದ 100 ರೂಗಳ ತೆರಿಗೆಯು ಅವರ ಬಳಕೆಯನ್ನು 100 ರೂಗಳಷ್ಟು ಇಳಿಕೆ ಮಾಡುತ್ತದೆ. ಮತ್ತು ಹಣವನ್ನು ಅದೇ ವರ್ಗದ ಬಳಕೆದಾರರಿಗೆ ವರ್ಗಾವಣೆ ಮಾಡಿದಾಗ ಅವರ ಬಳಕೆಯು 100 ರೂಗಳಷ್ಟು ಹೆಚ್ಚುತ್ತದೆ. ಅಂದರೆ, ಬಳಕೆಗೆ ನಿವ್ವಳ ಸೇರ್ಪಡೆ ಇರುವುದಿಲ್ಲ. ಹಾಗಾಗಿ, ಬಳಕೆ-ಪ್ರಧಾನ ಬೆಳವಣಿಗೆಯ ಪ್ರಶ್ನೆಯೇ ಇಲ್ಲ.
ನವ-ಉದಾರವಾದಿ ಆಳ್ವಿಕೆಯಲ್ಲಿ ಅಸಾಧ್ಯ
ಆದ್ದರಿಂದ, ಬಳಕೆ-ಪ್ರಧಾನ ಬೆಳವಣಿಗೆಗಾಗಿ ಶ್ರೀಮಂತರ ಮೇಲೆ (ಶ್ರೀಮಂತರು ತಮ್ಮ ವರಮಾನದ ಗಣನೀಯ ಭಾಗವನ್ನು ಉಳಿತಾಯ ಮಾಡುತ್ತಾರೆ) ತೆರಿಗೆ ವಿಧಿಸುವ ಮೂಲಕ ಅಥವಾ ಬೃಹತ್ ವಿತ್ತೀಯ ಕೊರತೆಯನ್ನು ಹೊಂದುವ ಮೂಲಕ ಹೆಚ್ಚು ಹೆಚ್ಚು ಸಂಪನ್ಮೂಲಗಳನ್ನು ಸಂಗ್ರಹಿಸುವ ಒಂದು ವಿತ್ತೀಯ ನೀತಿಯನ್ನು ಹೊಂದುವುದು ಅಗತ್ಯವಾಗುತ್ತದೆ. ಆದರೆ, ನವ ಉದಾರವಾದಿ ಆಳ್ವಿಕೆಯು ಈ ಎರಡೂ ವಿಧಾನಗಳನ್ನೂ ತಳ್ಳಿಹಾಕುತ್ತದೆ. ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆ ಜಿಡಿಪಿಯ ಶೇಕಡಾವಾರು ಪ್ರಮಾಣದಲ್ಲಿ ವಿತ್ತೀಯ ಕೊರತೆಯ ಪ್ರಮಾಣವನ್ನು ಮಿತಿಗೊಳಿಸುತ್ತದೆ. ಆದ್ದರಿಂದ ಒಂದು ಪ್ರಜ್ಞಾಪೂರ್ವಕ ವಿತ್ತೀಯ ಕ್ರಮವಾಗಿ ವಿತ್ತೀಯ ಕೊರತೆಯನ್ನು ಹೆಚ್ಚಿಸುವುದು ಈ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂಬ ಕಾರಣಕ್ಕೆ ಈ ರೀತಿ ವಿತ್ತೀಯ
ಕೊರತೆಯನ್ನು ಹೆಚ್ಚಿಸುವ ಕ್ರಮವನ್ನು ಕೈಗೊಳ್ಳುವುದಿಲ್ಲ. ಇನ್ನು ಸಂಪತ್ತು ತೆರಿಗೆಯ ಮೂಲಕವಾಗಲಿ ಅಥವಾ ಲಾಭದ ಮೇಲಿನ ತೆರಿಗೆಯ ಮೂಲಕವಾಗಲಿ, ಶ್ರೀಮಂತರ ಮೇಲೆ ತೆರಿಗೆ ವಿಧಿಸುವ ಕ್ರಮವು ಬಂಡವಾಳವು ದೇಶದಿಂದ ಹೊರ ಹರಿಯುವಂತೆ ಮಾಡುತ್ತದೆ.
ಇದು ಒಂದು ನವ ಉದಾರವಾದಿ ವ್ಯವಸ್ಥೆಯೊಳಗೆ ಅದರ ಬೆಳವಣಿಗೆಯ ನಿರೀಕ್ಷೆಗಳಿಗೆ ಹಾನಿಯುಂಟು ಮಾಡುತ್ತದೆ. ವಾಸ್ತವವಾಗಿ, ಉತ್ಪಾದಕ ಬಂಡವಾಳವನ್ನು ಯಾವುದೇ ರೀತಿಯಲ್ಲಿ ಹೊರಗೋಡಿಸುವ ಮುನ್ನವೇ, ದೊಡ್ಡ ಪ್ರಮಾಣದಲ್ಲಿ ಹಣಕಾಸು ಬಂಡವಾಳವು ಅದಾಗಲೇ ಹೊರ ಹರಿದಿರುತ್ತದೆ ಮತ್ತು ದೇಶವನ್ನು ತೊಂದರೆಗಳಿಗೆ ಈಡು ಮಾಡಿರುತ್ತದೆ.
ಇದನ್ನೂ ನೋಡಿ: ಬಹುರೂಪಿ | ಆದಿವಾಸಿ ಸಮುದಾಯದ ವರ್ತಮಾನದ ತಲ್ಲಣಗಳು Janashakthi Media
ನಿಜ, ರೈತರ ಆದಾಯವನ್ನು ಹೆಚ್ಚಿಸುವ ಮತ್ತು ಆ ಮೂಲಕ ಬಳಕೆಯನ್ನು ಉತ್ತೇಜಿಸುವ ಕೃಷಿ ಬೆಳವಣಿಗೆಯನ್ನು ಉತ್ತೇಜಿಸುವುದು ಸಾಧ್ಯವಿದೆ. ಬಳಕೆ-ಪ್ರಧಾನ ಬೆಳವಣಿಗೆಯ ಮತ್ತು ಆ ಕಾರಣದಿಂದಾಗಿ ದೇಶೀಯ ಮಾರುಕಟ್ಟೆ-ಪ್ರಧಾನ ಬೆಳವಣಿಗೆಯ ನಿಜ ತರ್ಕಾಧಾರವು ಕೃಷಿ-ಪ್ರಧಾನ ಬೆಳವಣಿಗೆಯಲ್ಲಿದೆ. ನವ ಉದಾರವಾದಿ ಆಳ್ವಿಕೆಯ ಬಯಕೆಗಳಿಗೆ ಅನುಗುಣವಾಗಿ ರೈತರಿಗೆ ನಷ್ಟವನ್ನುಂಟುಮಾಡಿ ಕಾರ್ಪೊರೇಟ್ ಮತ್ತು ಕೃಷಿ-ಉದ್ದಿಮೆ ಹಿತಾಸಕ್ತಿಗಳನ್ನು ಉತ್ತೇಜಿಸುವ ನೀತಿಗಳನ್ನು ಈಗ ಅನುಸರಿಸುತ್ತಿರುವುದರ ಬದಲಾಗಿ ಸರ್ಕಾರವು ರೈತ ಪರ ನೀತಿಯನ್ನು ಅನುಸರಿಸುವ ಅಗತ್ಯವಿದೆ. ರೈತರ ಆದಾಯವನ್ನು ಹೆಚ್ಚಿಸುವುದರ ಬದಲು ಮತ್ತು ಅದಕ್ಕೆ ವಿರುದ್ಧವಾಗಿ ಅದನ್ನು ಸಂಕುಚಿತಗೊಳಿಸುವ ಕಾರ್ಪೊರೇಟ್ ಕೃಷಿಯನ್ನು ಉತ್ತೇಜಿಸುವ ಕ್ರಮವು ಬಳಕೆಗೆ ಯಾವುದೇ ಉತ್ತೇಜನವನ್ನೂ ನೀಡುವುದಿಲ್ಲ.
ಅರಿವಿನ ಕೊರತೆ
ಆದ್ದರಿಂದ, ಒಂದು ನವ ಉದಾರವಾದಿ ಆಳ್ವಿಕೆಯ ಮಿತಿಯೊಳಗೆ ರಫ್ತು-ಪ್ರಧಾನ ಬೆಳವಣಿಗೆಯಿಂದ ಬಳಕೆ-ಪ್ರಧಾನ ಬೆಳವಣಿಗೆಯತ್ತ ಹೊರಳಲಾಗದು. ಬೆಳವಣಿಗೆಯ ಪ್ರಧಾನ ಪ್ರೇರಣೆಯಾಗಿ ರಫ್ತುಗಳ ಮೇಲಿನ ಅವಲಂಬನೆಯಿಂದ ಆಂತರಿಕ ಬಳಕೆಯನ್ನು ಅವಲಂಬಿಸುವ ಬದಲಾವಣೆಯನ್ನು ಸಾಧಿಸಿದ ಒಂದೇ ಒಂದು ದೇಶವೆಂದರೆ, ಚೀನಾ. ಕಾರಣವೆಂದರೆ, ಚೀನಾ ನವ ಉದಾರವಾದಿ ಆಳ್ವಿಕೆಯಿಂದ ನಿರ್ಬಂಧಿಸಲ್ಪಟ್ಟಿಲ್ಲ. ಅದು, ಸರ್ಕಾರದ ಸ್ವಾಯತ್ತ ನೀತಿಗಳು ಜಾಗತೀಕರಣಗೊಂಡ ಹಣಕಾಸು ಬಂಡವಾಳದ ಚಾಂಚಲ್ಯ ಮತ್ತು ತಿಕ್ಕಲುತನಗಳಿಂದ ನಿರ್ಬಂಧಿಸಲ್ಪಟ್ಟ ದೇಶವಲ್ಲ. ಅದು ಗಡಿಯಾಚೆಗಿನ ಹಣಕಾಸು ಬಂಡವಾಳದ ಹರಿವುಗಳಿಗೆ ಮುಕ್ತವಾಗಿಲ್ಲ. ವ್ಯಾಪಾರ ಮತ್ತು ಚಾಲ್ತಿ ಖಾತೆಯಲ್ಲಿ ಅದರ ನಿವ್ವಳ ಉಳಿಕೆಯು ಬಹಳ ದೊಡ್ಡದಿರುವುದರಿಂದ ಅಂತಹ ಹರಿವುಗಳಿಗೆ ತೆರೆದುಕೊಳ್ಳುವಂತೆ ಅದನ್ನು ಒತ್ತಾಯಿಸುವುದು ಸಾಧ್ಯವಿಲ್ಲ.
ಆದರೆ, ಭಾರತ ಮತ್ತು ಮೂರನೇ ಜಗತ್ತಿನ ಇತರ ದೇಶಗಳು ಸಂಪೂರ್ಣವಾಗಿ ಒಂದು ವಿಭಿನ್ನ ವರ್ಗಕ್ಕೆ ಸೇರಿವೆ. ಅವು ಜಾಗತಿಕ ಹಣಕಾಸು ಬಂಡವಾಳದ ಹರಿವುಗಳಿಗೆ ಮುಕ್ತವಾಗಿವೆ ಮಾತ್ರವಲ್ಲ, ಅವು ಹಾಗೆಯೇ ಇರಬೇಕಾಗಿದೆ. ಏಕೆಂದರೆ, ಅವುಗಳಲ್ಲಿ ಹೆಚ್ಚಿನವು ವ್ಯಾಪಾರ ನಿಯಂತ್ರಣಗಳನ್ನು ಆಶ್ರಯಿಸದ ಹೊರತು ಮತ್ತು ತುಲನಾತ್ಮಕವಾಗಿ ಅನಿಯಂತ್ರಿತ ಗಡಿಯಾಚೆಗಿನ ವ್ಯಾಪಾರ ಹರಿವುಗಳನ್ನು ಅನುಮತಿಸದ ಹೊರತು ಹಣಕಾಸು ಬಂಡವಾಳದ ಒಳಹರಿವು ಇಲ್ಲದೆ ತಮ್ಮ ಪಾವತಿ ಶೇಷವನ್ನು (ವಿದೇಶ ವ್ಯಾಪಾರದ ಬಾಕಿಯನ್ನು) ನಿರ್ವಹಿಸುವುದು ಸಾಧ್ಯವಾಗುವುದಿಲ್ಲ.
ಸರ್ಕಾರವು ಆರ್ಥಿಕ ನೀತಿಯ ವಿಷಯಗಳಲ್ಲಿ ಸಂಪೂರ್ಣ ಸ್ವಾಯತ್ತತೆ ಹೊಂದಿದೆ ಎಂಬಂತೆ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ವ್ಯವಸ್ಥೆಯ ಇತರ ಎಲ್ಲ ಅರ್ಥಶಾಸ್ತ್ರ-ವ್ಯಾಖ್ಯಾನಕಾರರು ಮಾತನಾಡುತ್ತಾರೆ. ಅದು ನವ ಉದಾರವಾದಿ ಅರ್ಥವ್ಯವಸ್ಥೆಯ ಕಾರ್ಯವಿಧಾನದ ಬಗ್ಗೆ ಹೊಂದಿರುವ ಅರಿವಿನ ತೀವ್ರ ಕೊರತೆಯನ್ನು ತೋರಿಸುತ್ತದೆ.
“ಈಗ 12 ಲಕ್ಷದ ವರೆಗೆ ಆದಾಯ ತೆರಿಗೆ ಇಲ್ಲ”
“ಹೌದು!!”
“ಇನ್ನೇನು ?”
“ 12 ಲಕ್ಷ ಗಳಿಸುವುದು ಹೇಗೆ?
ವ್ಯಂಗ್ಯಚಿತ್ರ:
ಅಲೋಕ್, ಫೇಸ್‍ಬುಕ್