ನೈತಿಕ ನಿಷ್ಠಾವಂತ, ತಾತ್ವಿಕ ಹೃದಯವಂತ
ಬೆಂಗಳೂರು : ಜಿ.ಸಿ.ಬಯ್ಯಾರೆಡ್ಡಿ ಭೂಮಿ ಬದ್ಧತೆಯ ಬಯ್ಯಾರೆಡ್ಡಿ ಎಂದು ಬರಗೂರು ರಾಮಚಂದ್ರಪ್ಪ ಶ್ಲಾಘಿಸಿದರು.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ, ರೈತ ನಾಯಕ ಜಿ.ಸಿ. ಬಯ್ಯಾರೆಡ್ಡಿಯವರ ನುಡಿನಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಿ.ಸಿ.ಬಯ್ಯಾರೆಡ್ಡಿಯವರು ನೈತಿಕ ನಿಷ್ಠಾವಂತ, ತಾತ್ವಿಕ ಹೃದಯವಂತರಾಗಿದ್ದರು. ಆರಂಭದಿಂದ ಸಾಯುವವರೆಗೂ ಸಿದ್ದಾಂತಕ್ಕೆ ಬದ್ಧರಾಗಿದ್ದಾರು. ನೈತಿಕತೆಯನ್ನು ಉಳಿಸಿಕೊಂಡು ಮಾದರಿಯಾಗಿ ಜೀವನ ಸಾಗಿಸುವುದು ಸುಲಭದ ಕೆಲಸವಲ್ಲ. ಆದರೆ ಬಯ್ಯಾರೆಡ್ಡಿಯವರು ನೈತಿಕ ನಿಷ್ಠಾವಂತರಾಗಿದ್ದು. ಆ ಕಾರಣಕ್ಕಾಗಿಯೇ ಅವರು ಹೃದಯವಂತರಾಗಿದ್ದರು ಎಂದರು.
ರೈತರಿಗಾಗಿ ಭೂಮಿಯನ್ನು ಕೊಡಿಸುವುದಕ್ಕಾಗಿ ಪ್ರಮುಖ ಹೋರಾಟಗಳನ್ನು ರೂಪಿಸಿದ್ದರು. ರಾಜ್ಯದ ಎಲ್ಲಾ ರೈತ ಸಂಘಟನೆಗಳನ್ನು ಒಗ್ಗೂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ರೂಪಗೊಳ್ಳಲು ಮಹತ್ವದ ಪಾತ್ರವನ್ನು ವಹಿಸಿದ್ದರು. ಹಾಗಾಗಿ ನಾನು ಅವರನ್ನು
‘ಭೂಮಿ ಬದ್ಧತೆಯ ಬಯ್ಯಾರೆಡ್ಡಿ’ ಎಂದು ಕರೆಯುತ್ತೇನೆ ಎಂದರು.
ಸುಪ್ರೀಂ ಕೋರ್ಟ್ನ ವಿಶ್ರಾಂತಿ ನ್ಯಾಯಮೂರ್ತಿ ಜಸ್ಟೀಸ್ ವಿ.ಗೋಪಾಲಗೌಡ ಮಾತನಾಡಿ,ಉಸಿರಾಟದ ಸಮಸ್ಯೆ, ಆರೋಗ್ಯ ಹಾಳಾಗಿದ್ದರು ಅದನ್ನು ಲೆಕ್ಕಿಸದೆ ರೈತರಿಗಾಗಿ, ಈ ನಾಡಿನ ಜನರಿಗಾಗಿ ಜಿ.ಸಿ. ಬಯ್ಯಾರೆಡ್ಡಿ ದುಡಿದಿದ್ದಾರೆ. ಅವರ ದಾರಿ ವಿದ್ಯಾರ್ಥಿ – ಯುವಜನರಿಗೆ ಆದರ್ಶ ಎಂದರು.
ವಿದ್ಯಾರ್ಥಿ ದೆಸೆಯಿಂದಲೇ ಚಿಂತಾಮಣಿಯಲ್ಲಿ SFI ಚಟುವಟಿಕೆಗಳನ್ನು ಆರಂಭಿಸಿ, ವಿದ್ಯಾರ್ಥಿಗಳಿಗಾಗಿ ಹೋರಾಟಗಳನ್ನು ರೂಪಿಸಿದರು. ರಾಜ್ಯ ನಾಯಕರಾಗಿ, ಸಿಪಿಐ(ಎಂ) ಪಕ್ಷದ ನಾಯಕರಾಗಿ, ರೈತ ನಾಯಕರಾಗಿ ನಾಡಿಗೆ ಅನೇಕ ಕೊಡುಗೆಗಳನ್ನು ಕೊಟ್ಟಿದ್ದಾರೆ ಎಂದರು.
ಸಾಹಿತಿ ಎಲ್. ಹನುಮಂತಯ್ಯ ಮಾತನಾಡಿ, ಜಮೀನ್ದಾರಿ ಕುಟುಂಬದಲ್ಲಿ ಹುಟ್ಟಿ ಕಮ್ಯೂನಿಸ್ಟ್ ಸಿದ್ದಾಂತಕ್ಕೆ ಜಿಸಿ ಬಯ್ಯಾರೆಡ್ಡಿ ಆಕರ್ಷಿತರಾದಿರು. ವಿವಿಧ ಜನಾಂಗಗಳನ್ನು ಹೋರಾಟದಲ್ಲಿ ನೇಯಿಗಿ ಮಾಡಿದ್ದು ಬಯ್ಯಾರೆಡ್ಡಿಯವರ ಮಹತ್ವದ ಕೆಲಸ. ಜನಾಂದೋಲನಗಳ ನಾಯಕ ಬಯ್ಯಾರೆಡ್ಡಿ ಹೋರಾಟಗಾರರಿಗೆ ಆದರ್ಶವಾಗಲಿ ಎಂದರು.
ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ಚನ್ನರಾಯಪಟ್ಟಣ ಭೂಮಿಯ ಹೋರಾಟದಲ್ಲಿ ಅವರ ಬದ್ಧತೆ ಮಹತ್ವದ್ದು, ಯಾಗಾಗಲೂ ಮೂಗಿಗೆ ನಳಿಕೆ ಹಾಕೊಕೊಂಡು, ಆಕ್ಸಿಜನ್ ಕಿಟ್ ಹಿಡಿದು ಹೋರಾಟ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ನಾನು ಹಲವಾರು ಬಾರಿ ಅವರಿಗೆ ವಿಶ್ರಾಂತಿ ಪಡೆಯಿರಿ ಎಂದು ಹೇಳಿದೆ. ಚನ್ನರಾಯಪಟ್ಟಣ ಜನರಿಗೆ ನ್ಯಾಯ ಕೊಡಿಸುವವರಿಗೂ ವಿಶ್ರಾಂತಿ ಇಲ್ಲ ಎಂದು ಅಷ್ಟೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು ಎಂದು ಬಯ್ಯಾರೆಡ್ಡಿಯವರನ್ನು ಸ್ಮರಿಸಿದರು.
ದಲಿತ ಸಂಘರ್ಷ ಸಮಿತಿ ( ಅಂಬೇಡ್ಕರ್ ವಾದ) ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ರೈತರಿಗೆ ಭೂಮಿ ಸಿಗಬೇಕು, ದಲಿತರ ಮೇಲಿನ ದೌರ್ಜನ್ಯಗಳು ನಿಲ್ಲಬೇಕು ಎಂಬುದು ಬಯ್ಯಾರೆಡ್ಡಿಯವರ ಕನಸಾಗಿತ್ತು ಆ ಕನಸನ್ನು ನಾವು ಈಡೇರಿಸಬೇಕು, ಅದಕ್ಕಾಗಿ ಚಳುವಳಿ ಬಲಗೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಡಾ. ಕೆ ಪ್ರಕಾಶ್ ವಹಿಸಿದ್ದರು, ವೇದಿಕೆಯ ಮೇಲೆ ಸಿಪಿಐ(ಎಂ) ಪೋಲಿಟ್ ಬ್ಯೂರೊ ಸದಸ್ಯ ಎಂ.ಎ ಬೇಬಿ, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯು. ಬಸವರಾಜ, ಕೆ. ನೀಲಾ, ಎಸ್.ವರಲಕ್ಷ್ಮೀ, ಚಂದ್ರಪ್ಪ ಹೊಸ್ಕೇರಾ, ಕೆ.ಮಹಾಂತೇಶ್ ಹಾಗೂ ಬಯ್ಯಾರೆಡ್ಡಿಯವರ ಬಾಳ ಸಂಗಾತಿ ಮಂಜಮ್ಮ, ಪುತ್ರಿ ನಿಲೋನಾ, ಕುರಬೂರು ಶಾಂತಕುಮಾರ್, ಜನಪರ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಸೇರಿದಂತೆ ಎಡಪಕ್ಷಗಳ ನಾಯಕರು, ಚಳುವಳಿಗಳ ನಾಯಕರು ಇದ್ದರು.