– ವಸಂತರಾಜ ಎನ್.ಕೆ
ಗಾಜಾ ಬಾಂಬ್ ದಾಳಿ ಮೂರು ವಾರಗಳನ್ನು ದಾಟುತ್ತಿದೆ. ಗಾಜಾ ಗಡಿಯಲ್ಲಿ ಇಸ್ರೇಲ್ ಪಡೆ ಪೂರ್ಣ ಭೂಯುದ್ಧ ಕ್ಕೆ ಸಜ್ಜಾಗಿ ನಿಂತಿದೆ. ಈ ಸಂದರ್ಭದಲ್ಲಿ ಗಾಜಾ ಕುರಿತು ಇನ್ನಷ್ಟು ಪ್ರಶ್ನೆಗಳು ಎದ್ದಿವೆ – ಗಾಜಾದಲ್ಲಿ ಈಗ ಏನಾಗುತ್ತಿದೆ? ವಿಶ್ವಸಂಸ್ಥೆ ಮತ್ತು ಅಂತರ್ರಾಷ್ಟ್ರೀಯ ಪ್ರತಿಕ್ರಿಯೆ ಏನು ? ಗಾಜಾ ಯುದ್ಧ ಇಡೀ ಪ್ರದೇಶಕ್ಕೆ ವ್ಯಾಪಿಸುವ ಅಪಾಯ ಇದೆಯಾ?, ಗಾಜಾ ಭೂ ಯುದ್ಧವನ್ನು ಇಸ್ರೇಲ್ ಗೆಲ್ಲಬಹುದಾ ?. ಇದಕ್ಕೆ ಉತ್ತರ ಹುಡುಕುವ ಪ್ರಯತ್ನದಲ್ಲಿ ಬರುವ ಇನ್ನಷ್ಟು ದೊಡ್ಡ ಪ್ರಶ್ನೆ – ಗಾಜಾದಲ್ಲಿ ಯುದ್ಧ ಅಪರಾಧಗಳ ಸರಣಿ ನಡೆಯುತ್ತಿದೆಯೇ, ಮುಂದುವರೆಯಲಿದೆಯೇ?
ಗಾಜಾದಲ್ಲಿ ಈಗ ಏನಾಗುತ್ತಿದೆ?
ಗಾಜಾದ ಮೇಲೆ ಇಸ್ರೇಲ್ ನಿರಂತರ ಬಾಂಬ್ ದಾಳಿ ಮುಂದುವರೆದಿದೆ. ಅಕ್ಟೋಬರ್ 26 ರ ಹೊತ್ತಿಗೆ ಗಾಜಾದಲ್ಲಿ ಬಾಂಬ್ ದಾಳಿಯಲ್ಲಿ ಸತ್ತವರ ಸಂಖ್ಯೆ 7000 ದಾಟಿದೆ. ಇವರಲ್ಲಿ ಸುಮಾರು ಅರ್ಧದಷ್ಟು ಮಕ್ಕಳು. ಸುಮಾರು ಶೇ.80 ಹೆಂಗಸರು ಮತ್ತು ಮಕ್ಕಳು. ಗಾಯಗೊಂಡವರ ಸಂಖ್ಯೆ 20,000 ದಾಟಿದೆ. 12 ಸಾವಿರ ಟನ್ ಬಾಂಬುಗಳನ್ನು ಹಾಕಲಾಗಿದೆ. ಇದು ವಿನಾಶದ ಮಟ್ಟಿಗೆ ಹಿರೋಷಿಮಾದ ಮೇಲೆ ಹಾಕಲಾದ ಬಾಂಬುಗಳಿಗೆ ಸಮಾನವೆನ್ನಲಾಗಿದೆ. ನಿಷೇಧಿತ ಪಾಸ್ಫರ್ ಬಾಂಬುಗಳನ್ನು ಹಾಕಲಾಗಿದೆ. ಅರ್ಧದಷ್ಟು ಮನೆಗಳು ಪೂರ್ಣವಾಗಿ ನಾಶವಾಗಿವೆ ಇಲ್ಲವೆ ಬಿರುಕು ಬಿಟ್ಟು ವಾಸಯೋಗ್ಯವಿಲ್ಲ. ಆಸ್ಪತ್ರೆಗಳಲ್ಲಿ ಮೂರನೇ ಒಂದು ಭಾಗದಷ್ಟು ನಾಶವಾಗಿವೆ ಅಥವಾ ಕೆಲಸ ಮಾಡುವ ಸ್ಥಿತಿಯಲ್ಲಿ ಇಲ್ಲ. 24 ಪತ್ರಕರ್ತರು ಬಾಂಬ್ ದಾಳಿಗಳಲ್ಲಿ ಸತ್ತಿದ್ದಾರೆ. ಅಲ್ ಜಜೀರಾ ಬ್ಯುರೊ ಮುಖ್ಯಸ್ಥರು ಇಡೀ ಕುಟುಂಬ ಬಾಂಬ್ ದಾಳಿಯಲ್ಲಿ ಸತ್ತಿದ್ದಾರೆ.
ಸುಮಾರು 10 ಲಕ್ಷ ಜನ ನಿರಾಶ್ತಿತರಾಗಿದ್ದಾರೆ. ಇವರಲ್ಲಿ 6 ಲಕ್ಷಕ್ಕೂ ಹೆಚ್ಚು ಜನ 150 ವಿಶ್ವಸಂಸ್ಥೆ ನಡೆಸುವ ಕ್ಯಾಂಪುಗಳಲ್ಲಿ ವಾಸಿಸುತ್ತಿದ್ದಾರೆ. ದಕ್ಷಿಣದ ಭಾಗಗಳಿಗೆ ವಲಸೆ ಹೋಗುತ್ತಿರುವವರ ಮೇಲೂ ಬಾಂಬ್ ದಾಳಿಗಳಾಗಿವೆ. ಗಾಜಾದ ಮೇಲೆ ಇಸ್ರೆಲ್ ದಿಗ್ಬಂಧನ ಮುಂದುವರೆದಿದ್ದು ನೀರು. ವಿದ್ಯುತ್, ತೈಲ ಇಂಧನ, ಆಹಾರ, ಔಷಧಿ ಸಾಮಗ್ರಿಗಳನ್ನು ಬಿಡುತ್ತಿಲ್ಲ. ಕೇವಲ ಈಜಿಪ್ಟಿನ ಮೂಲಕ 20 ಟ್ರಕ್ ಪರಹಾರ ಸಾಮಗ್ರಿಗಳನ್ನು ಬಿಡಲಾಗಿದೆ. ನೀರು. ತೈಲ ಇಂಧನ, ಆಹಾರ, ಔಷಧಿ ಸಾಮಗ್ರಿಗಳ 1-2 ದಿನಗಳಿಗೆ ಸಾಕಾಗುವಷ್ಟು ದಾಸ್ತಾನು ಮಾತ್ರ ಇದ್ದು ‘ಭೀಕರ ಮಾನವೀಯ ದುರಂತ ಕಾದಿದೆ’ ಎಂದು ವಿಶ್ವಸಂಸ್ಥೆ ಹೇಳಿದೆ. ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದ ಇಬ್ಬರು ಅಮೆರಿಕನ್ನರು ಮತ್ತು ಇಬ್ಬರು ಇಸ್ರೇಲಿ ಹಿರಿಯ ನಾಗರಿಕರನ್ನು ಹಮಾಸ್ ಬಿಡುಗಡೆ ಮಾಡಿದೆ. ಒತ್ತೆಯಾಳುಗಳಾಗಿ ವಶಕ್ಕೆ ತೆಗೆದುಕೊಂಡು ಗಾಜಾಗೆ ಒಯ್ಯುವಾಗ ಸಾಕಷ್ಟು ಕಷ್ಟವಾದರೂ, ಗಾಜಾ ಪ್ರದೇಶ ಮುಟ್ಟಿದ ಮೇಲೆ ಹಮಾಸ್ ತಮ್ಮನ್ನು ಚೆನ್ನಾಗಿ ನೋಡಿಕೊಂಡರು ಎಂಬ ಹೇಳಿಕೆ ಹಮಾಸ್ ‘ಭಯೋತ್ಪಾದಕ ದೆವ್ವಗಳು’ ಎಂದು ಬಿರುಸಿನ ಪ್ರಚಾರ ನಡೆಸಿದ್ದ ಇಸ್ರೇಲಿ ಸರಕಾರಕ್ಕೆ ನುಂಗಲಾರದ ತುತ್ತಾಗಿದೆ.
ವಿಶ್ವಸಂಸ್ಥೆ ಮತ್ತು ಅಂತರ್ರಾಷ್ಟ್ರೀಯ ಪ್ರತಿಕ್ರಿಯೆ ಏನು ?
ವಿಶ್ವಸಂಸ್ಥೆ ಭದ್ರತಾ ಸಮಿತಿ ತುರ್ತು ಸಭೆ ನಡೆಸಿದೆ. ಕದನ ವಿರಾಮಕ್ಕೆ ಕರೆ ಕೊಡುವ ಬ್ರೆಜಿಲ್ ಮಂಡಿಸಿದ ನಿರ್ಣಯವನ್ನು 15 ಸದಸ್ಯ ದೇಶಗಳಲ್ಲಿ ಯು.ಎಸ್ ಮಾತ್ರ ವಿರೋಧಿಸಿತು. ತನ್ನ ವಿಟೋ ಬಳಸಿ ನಿರ್ಣಯವನ್ನು ತಡೆ ಹಿಡಿಯಿತು. ಆ ಮೇಲೆ ಯುದ್ಧದಲ್ಲಿ ಕೆಲವು “‘ಮಾನವೀಯ ನಿಲುಗಡೆ” ಗಳಿಗೆ ಕರೆ ಕೊಡುವ ಯು.ಎಸ್ ನಿರ್ಣಯವನ್ನು ರಷ್ಯಾ ಮತ್ತು ಚೀನಾ ತಮ್ಮ ವಿಟೋ ಬಳಸಿ ವಿರೋಧಿಸಿದವು. ಕದನ ವಿರಾಮಕ್ಕೆ ಕರೆ ಕೊಡದ ನಿರ್ಣಯಕ್ಕೆ ಅರ್ಥವಿಲ್ಲವೆಂದು ಅವು ಹೇಳಿವೆ. ಯು.ಎಸ್ ಅಧ‍್ಯಕ್ಷ ಮತ್ತು ವಿದೇಶಾಂಗ ಕಾರ್ಯದರ್ಶಿ ಗಳು, ಯು.ಕೆ ಮತ್ತು ಫ್ರಾನ್ಸ್‌ನ ಪ್ರಧಾನಿಗಳು ಇಸ್ರೇಲಿಗೆ ಧಾವಿಸಿದ್ದು ತಾವು ‘ಇಸ್ರೇಲಿನ ಜತೆ ನಿಲ್ಲುವುದಾಗಿಯೂ, ಅದಕ್ಕೆ ಸ್ವ-ರಕ್ಷಣೆಯಲ್ಲಿ ಗಾಜಾ ಮೇಲೆ ದಾಳಿಯ ಹಕ್ಕು ಇರುವುದಾಗಿಯೂ, ಆದರೆ ಅದು ಯುದ್ಧದ ನಿಯಮಗಳನ್ನು ಪಾಲಿಸಬೇಕೆಂದೂ ಹೇಳಿದ್ದಾರೆ. ಆದರೆ ಇಸ್ರೇಲಿನ ಜತೆ ನಿಲ್ಲುವ ಕುರಿತು ಯುರೋ ಕೂಟದಲ್ಲಿ ತೀವ್ರ ಭಿನ್ನಾಭಿಪ್ರಾಯ ತಲೆದೋರಿದೆ. ಪಶ್ಚಿಮ ಏಶ್ಯಾದ ನೆರೆಯ ದೇಶಗಳಲ್ಲಿಯೂ, ಯುರೋಪ್ ಯು.ಎಸ್‌ಗಳಲ್ಲಿಯೂ ಭಾರೀ ಪ್ರದರ್ಶನಗಳು ನಡೆದಿದ್ದು ನಾಗರಿಕರ ನರಮೇಧ ಮತ್ತು ಇಸ್ರೇಲಿನ ಯುದ್ಧ ಅಪರಾಧಗಳನ್ನು ಖಂಡಿಸಿವೆ. ಇಸ್ರೇಲಿನ ಒಳಗೂ “ನಾಗರಿಕ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಆಧ್ಯತೆ ಕೊಡಬೇಕು. ಅದಕ್ಕೆ ಅಡ್ಡಿಯಾಗುವ ಯಾವುದೇ ಕಾರ್ಯಾಚರಣೆ ಮಾಡಬಾರದು’ ಎಂದೂ, ಹಮಾಸ್ ದಾಳಿಗೆ ತಕ್ಕ ಪರಿಸ್ಥಿತಿ ನಿರ್ಮಿಸಿದ ಮತ್ತು ಭದ್ರತಾ ವೈಫಲ್ಯಕ್ಕಾಗಿ ನೆತನ್ಯಾಹು ರಾಜೀನಾಮೆ ಕೊಡಬೇಕೆಂದೂ ಇಸ್ರೇಲಿನ ಗಮನಾರ್ಹ ಜನವಿಭಾಗ ಪ್ರದರ್ಶನಗಳನ್ನು ನಡೆಸುತ್ತಿದೆ.
ವಿಶ್ವಸಂಸ್ಥೆ ಕಾರ್ಯದರ್ಶಿ ಗುಟೆರಸ್ ಅವರು ಭದ್ರತಾ ಸಮಿತಿ ಉದ್ಧೇಶಿಸಿ ಮಾತನಾಡುತ್ತಾ ಇಸ್ರೇಲ್ ಬಾಂಬ್ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಗಾಜಾ ಜನರ ಸಮಸ್ಯೆ ಅಕ್ಟೋಬರ್ 7 ದಾಳಿಯಿಂದ ಆರಂಭವಾಗಿಲ್ಲ”, “ಹಮಾಸ್ ದಾಳಿಗಳು ನಿರ್ವಾತದಲ್ಲಿ ಸಂಭವಿಸಿಲ್ಲ. ಪ್ಯಾಲೆಸ್ಯೀನಿಯರನ್ನು 56 ವರ್ಷಗಳ ಉಸಿರು ಕಟ್ಟಿಸುವ ಅತಿಕ್ರಮಣಕ್ಕೆ ಗುರಿ ಮಾಡಲಾಗಿದೆ. ವಲಸೆಗಾರರು ಅವರ ಭೂಮಿಯನ್ನು ನುಂಗುತ್ತಾ ಹೋಗುವುದನ್ನು, ವ್ಯಾಪಕ ಹಿಂಸಾಚಾರದಿಂದ ಅವರನ್ನು ನಿರಾಶ್ರಿತರಾಗಿ ಮಾಡುವುದನ್ನು, ಅವರ ಜೀವನೋಪಾಯವನ್ನು ಮತ್ತು ಮನೆಗಳನ್ನು ನಾಶ ಮಾಡುವುದನ್ನು ಪ್ಯಾಲೆಸ್ಯೀನಿಯರು ಅನುಭವಿಸಿದ್ದಾರೆ. ಈ ದುರ್ದೆಸೆಗೆ ರಾಜಕೀಯ ಪರಿಹಾರದ ಅವರ ಆಸೆ ಕಂದಿ ಹೋಗುತ್ತಿದೆ” ಎಂದು ಅವರು ಹೇಳಿದ್ದು ಇಸ್ರೇಲ್ ಸರಕಾರವನ್ನು ಕೆರಳಿಸಿದ್ದು, ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ!
ಇದನ್ನ ಓದಿ: ಗಾಜಾ ಮೇಲೆ ಮುಂದುವರಿದ ಇಸ್ರೇಲ್ ವೈಮಾನಿಕ ದಾಳಿ | ಇಂಟರ್ ನೆಟ್, ಮೊಬೈಲ್ ಸೇವೆ ಸ್ಥಗಿತ
ಗಾಜಾ ಯುದ್ಧ ಇಡೀ ಪ್ರದೇಶಕ್ಕೆ ವ್ಯಾಪಿಸುವ ಅಪಾಯ ಇದೆಯಾ?
ಈಗಾಗಲೇ ಇಸ್ರೇಲ್ ತನ್ನ ಉತ್ತರ ಗಡಿಯಲ್ಲಿರುವ ದಕ್ಷಿಣ ಲೆಬನಾನ್ ನಲ್ಲಿರುವ ಹೆಜಬೊಲ್ಲಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಲೆಬನಾನ್ ಜತೆಗಿರುವ ಉತ್ತರ ಗಡಿ ಪ್ರದೇಶದಿಂದ ನಾಗರಿಕರನ್ನು ಖಾಲಿ ಮಾಡಿಸಿದೆ. ಸಿರಿಯಾದ ಎರಡು ವಿಮಾನ ನಿಲ್ದಾಣಗಳ ರನ್ ವೇ ಮೇಲೆ ದಾಳಿ ಮಾಡಿ ಅದನ್ನು ಬಳಸದಂತೆ ಮಾಡಿದೆ. ಸಿರಿಯಾದ ಮೂಲಕ ಹೆಜಬೊಲ್ಲಾ ಮತ್ತು ಹಮಾಸ್‌ಗೆ ಶಸ್ತ್ರಾಸ್ತ್ರಗಳ ಪೂರೈಕೆ ತಡೆಗಟ್ಟಲು ಈ ದಾಳಿ ಎನ್ನಲಾಗಿದೆ. ಇಸ್ರೇಲ್ ಬೆದರಿಕೆ ಹಾಕುತ್ತಿರುವಂತೆ ಗಾಜಾದೊಳಗೆ ನುಗ್ಗಿ ಭೂಯುದ್ಧ ಆರಂಭಿಸಿದರೆ ಈ ಅಪಾಯ ನಿಜವಾಗಬಹುದು. ಗಾಜಾದೊಳಗೆ ನುಗ್ಗಿ ಭೂಯುದ್ಧ ಆರಂಭಿಸಿದರೆ ಅದಕ್ಕೆ ತಕ್ಕ ಉತ್ತರ ಕೊಡುವುದಾಗಿ ಲೆಬನಾನ್ ನಲ್ಲಿ ನೆಲೆ ಮತ್ತು ಸಾಕಷ್ಟು ಕ್ಷಿಪಣಿ ಹೊಂದಿರುವ ಹೆಜಬೊಲ್ಲಾ ಹೇಳಿದೆ. ಆ ಸಾಧ್ಯತೆ ದಟ್ಟವಾಗಿದೆ. ಇದು ನಿಜವಾದರೆ ಸಿರಿಯಾ ಸಹ ಇಸ್ರೇಲ್ ಮೇಲೆ ದಾಳಿ ನಡೆಸಬಹುದು. ಪಶ್ಚಿಮ ದಂಡೆಯ ಪ್ಯಾಲೆಸ್ಟೈನ್ ಪ್ರದೇಶಗಳಲ್ಲೂ ಇಸ್ರೇಲಿ ಸೈನ್ಯ ದಮನದಲ್ಲಿ ತೊಡಗಿದ್ದು ನಾಗರಿಕರ ಜತೆ ಸಂಘರ್ಷ ನಡೆಯುತ್ತಿದೆ. ಈಗಾಗಲೇ ಇಸ್ರೇಲಿ ಪಡೆಯ ಗೋಲಿಬಾರಿನಲ್ಲಿ 100 ಪ್ಯಾಲೆಸ್ತಿನಿಯರು ಸತ್ತಿದ್ದಾರೆ. ಅಲ್ಲೂ ಆಕ್ರೋಶ ಮಡುಗಟ್ಟಿದ್ದು ದಂಗೆ ಆರಂಭವಾಗಬಹುದು.
ಯು.ಎಸ್ ಈಗಾಗಲೇ ತನ್ನ ಎರಡು ದೈತ್ಯ ಯುದ್ಧ ನೌಕೆಗಳನ್ನು ಆಯಕಟ್ಟಿನ ಪ್ರದೇಶದಲ್ಲಿ ನಿಲ್ಲಿಸಿದೆ. ಯೆಮೆನ್ ನಿಂದ ಹಮಾಸ್ ಬೆಂಬಲಿಸುವ ಹೌತಿ ಗೆರಿಲ್ಲಾಗಳು ಹಾರಿಸಿದ್ದರೆನ್ನಲಾದ ಕ್ಷಿಪಣಿಗಳನ್ನು ಈ ಯುದ್ಧ ನೌಕೆಗಳಲ್ಲಿರುವ ಕ್ಷಿಪಣಿ-ವಿರೋಧಿ ಕ್ಷಿಪಣಿಗಳಿಂದ ತಡೆಯುವ ಮೂಲಕ ಸಣ್ಣ ರೀತಿಯಲ್ಲಿ ಯು.ಎಸ್ ಸಹ ಸಕ್ರಿಯ ಸಂಘರ್ಷ ಪ್ರವೇಶಿಸಿದೆ. ಇರಾಕ್ ಮತ್ತಿತರ ಅರಬ್ ದೇಶಗಳಲ್ಲಿರುವ ಯು.ಎಸ್ ಪಡೆಗಳ ಮೇಲೆ ದಾಳಿ ನಡೆಯದಂತೆ ತಡೆಯಲು ಎರಡು ಯುದ್ಧ ನೌಕೆಗಳನ್ನು ಕಳಿಸಿದೆ ಎಂದು ಯು.ಎಸ್ ಹೇಳಿದೆ. ಆದರೆ ಗಾಜಾದಲ್ಲಿ ಪೂರ್ಣ ಪ್ರಮಾಣದ ಭೂಯುದ್ಧ ಆರಂಭವಾಧರೆ ಹಮಾಸ್, ಹೆಜಬೊಲ್ಲಾ ರಕ್ಷಣೆಗೆ ಇರಾನ್ ಸಹ ಯುದ್ಧ ಪ್ರವೇಶಿಸಬಹುದು ಎಂಬ ಆತಂಕವಿದೆ. ಇರಾನ್‌ಗೆ ಯುದ್ಧ ಪ್ರವೇಶಿಸದಂತೆ ಇದು ಎಚ್ಚರಿಕೆ ಎನ್ನಲಾಗಿದೆ.
ಹೀಗೆ ಯುದ್ಧ ವ್ಯಾಪಕವಾಗುವುದಕ್ಕೆ ಇಸ್ರೇಲ್ ಗಾಜಾದಲ್ಲಿ ಪೂರ್ಣ ಪ್ರಮಾಣದ ಯುದ್ಧದಲ್ಲಿ ತೊಡಗುತ್ತಾ ಎಂಬುದು ಮುಖ್ಯ ಪ್ರಶ್ನೆಯಾಗುತ್ತದೆ. ಈ ನಿರ್ಣಯವನ್ನು ಇಸ್ರೇಲ್ ಒಂಟಿಯಾಗಿ ತೆಗೆದುಕೊಳ್ಳುವುದಿಲ್ಲ. ಯು.ಎಸ್ ಮಾತ್ರವಲ್ಲ ಯು.ಕೆ, ಫ್ರಾನ್ಸ್ ಬೆಂಬಲವಿಲ್ಲದೆ ಇಸ್ರೇಲ್ ಈ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ. ಹಾಗಾಗಿಯೇ ಈ ದೇಶದ ನಾಯಕರು ಇಸ್ರೇಲಿಗೆ ಧಾವಿಸಿದ್ದಾರೆ. ಈ ಯುದ್ಧವನ್ನು ವ್ಯಾಪಕಗೊಳಿಸುವುದು ತಮ್ಮ ಭೂರಾಜಕೀಯ ಭೂ-ವ್ಯೂಹಾತ್ಮಕ ದೃ಼ಷ್ಟಿಯಿಂದ ಬೇಕಾ ಮತ್ತು ಲಾಭವಾಗುತ್ತಾ ಎಂಬುದು ಮುಖ್ಯವಾಗುತ್ತದೆ.
ಇಸ್ರೇಲ್ ‘ಅಬ್ರಹಾಂ ಒಪ್ಪಂದಗಳ’ನ್ನು ವಿಸ್ತರಿಸುತ್ತಾ ಎಲ್ಲ ನೆರೆಯ ಅರಬ್ ದೇಶಗಳ ಜತೆ “ಶಾಂತಿ ಮತ್ತು ಸುಭದ್ರ ಸಹ ಅಸ್ತಿತ್ವ”ದ ಸ್ಥಿತಿ ಸಾಧಿಸಿದೆ. ಹಾಗಾಗಿ ಪ್ಯಾಲೆಸ್ತೀನಿಯರ ಹಕ್ಕುಗಳ ಬಗ್ಗೆ ಕೇರ್ ಮಾಡಬೇಕಾಗಿಲ್ಲ. ಅವರ ಬೆಂಬಲಕ್ಕೆ ಯಾರೂ ಬರುವುದಿಲ್ಲ. ಹಾಗಾಗಿ ಗಾಜಾ ಮತ್ತು ಪಶ್ಚಿಮ ದಂಡೆ ಪ್ರದೇಶವನ್ನು ಇಡಿಯಾಗಿ ಅತಿಕ್ರಮಣ ನಡೆಸಿ ಇಸ್ರೇಲಿಗೆ ಸೇರಿಸಿಕೊಳ್ಳಬಹುದು. ಹಮಾಸ್ ದಾಳಿ ಈ ನಿಟ್ಟಿನಲ್ಲಿ “ಉತ್ತಮ ಅವಕಾಶ” ಎಂದು ಇಸ್ರೇಲ್ ಆಳುವವರ ಲೆಕ್ಕಾಚಾರ ಹಾಗಾಗಿ ಅದು ಯು.ಎಸ್ ಮೇಲೆ ಒತ್ತಡ ಹಾಕಿ ಭೂ ಯುದ್ಧ ಆರಂಭಿಸಲು ತುದಿಗಾಲಲ್ಲಿ ನಿಂತಿದೆ.
ಇರಾನ್ ಮತ್ತು ಸೌದಿ ಅರೇಬಿಯ, ಯು.ಎ.ಇ ಮತ್ತಿತರ ಅರಬ್ ದೇಶಗಳ ನಡುವೆ ಚೀನಾ ಮಧ್ಯಸ್ತಿಕೆಯಲ್ಲಿ ನಡೆದ ಶಾಂತಿ ಒಪ್ಪಂದ, ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಇರಾನ್ ಪ್ರಭಾವ, ಚೀನಾ ಜತೆಗೆ ಎಲ್ಲ ದೇಶಗಳ ಹೆಚ್ಚುತ್ತಿರುವ ಆಳ ದೂರಗಾಮಿ ಆರ್ಥಿಕ ಸಂಬಂಧ, ಯೆಮೆನ್ ಶಾಂತಿ ಒಪ್ಪಂದ – ಇವೆಲ್ಲ ಬೆಳವಣಿಗೆಗಳಿಂದ ಯು.ಎಸ್ ಪ್ರಭಾವ ಈ ಪ್ರದೇಶದಲ್ಲಿ ಕುಂದಿದೆ. ಹಾಗಾಗಿ ಮತ್ತೆ ಈ ಪ್ರದೇಶದಲ್ಲಿ ತನ್ನ ಅಧಿಪತ್ಯ ಸಾಧಿಸಲು ಇತ್ತೀಚಿಗೆ ಇಂಡಿಯಾ – ಯುರೋಪ್ ಆರ್ಥಿಕ ಕಾರಿಡಾರ್ ಯೋಜನೆ ಹರಿಯ ಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಯು.ಎಸ್ ತನ್ನ ವಿಶ್ವಾಸದ ಬಂಟ ಇಸ್ರೇಲಿನ ಕೈಬಿಡುವಂತಿಲ್ಲ. ಅದು ತನ್ನ ಹಿತಾಸಕ್ತಿಯಲ್ಲಿ ಸಹ ಇದೆ ಎಂದು ಕೊಂಡಿದೆ.
ಅರಬ್ ದೇಶಗಳ ಜತೆಗಿನ ಇಸ್ರೇಲಿನ ಅಬ್ರಹಾಂ ಒಪ್ಪಂದವನ್ನು ಮೊಳಕೆಯಲ್ಲೇ ಚಿವುಟಬೇಕು, ಅರಬ್ ದೇಶಗಳು ಕಾರಿಡಾರ್ ಯೋಜನೆಯಿಂದ ಹೊರ ಬಂದು ಯು.ಎಸ್‌ನ್ನು ಸಹ ವಿರೋಧಿಸುವಂತೆ ಮಾಡಬೇಕು. ಇಸ್ರೇಲಿನ ಪ್ರಭುತ್ವದ ವಿರುದ್ಧ ಎಲ್ಲರನ್ನು ತಿರುಗಿಸಿ ಅದು ಕುಸಿಯುವಂತೆ ಅಥವಾ ಕನಿಷ್ಠ ಎರಡು-ದೇಶ ಪರಿಹಾರ ಸರಿಯಾಗಿ ಜಾರಿ ಮಾಡಲು ಒತ್ತಡ ಹೇರಬೇಕು. ಇದು ಹಮಾಸ್ ಈ ದಾಳಿಯನ್ನು ಆರಂಭಿಸಿದ್ದರ ಉದ್ದೇಶವೆಂದು ಯು.ಎಸ್ ಅಂದಾಜು. ಹಾಗೆ ಅಧ್ಯಕ್ಷ ಬಿಡೆನ್ ಹೇಳಿದ್ದಾರೆ ಕೂಡಾ. ಸಂಘರ್ಷ ವ್ಯಾಪಕವಾದರೆ ಮತ್ತೆ ಇಸ್ರೇಲ್ ಒಂಟಿಯಾಗಿ, ದುರ್ಬಲವಾಗಿ ತನ್ನ ಹಿತಾಸಕ್ತಿಗೆ ಧಕ್ಕೆಯಾಗಬಹುದೆಂಬ ಆತಂಕವೂ ಅದಕ್ಕಿದೆ.
ಯು.ಕೆ. ಫ್ರಾನ್ಸ್ ಮತ್ತಿತರ ಯುರೋ ದೇಶಗಳ ಪ್ರಭಾವ ಇಲ್ಲೂ ಉತ್ತರ ಆಫ್ರಿಕಾದಲ್ಲೂ ಕುಂದಿದ್ದು ಅವು ಮತ್ತೆ ತಮ್ಮ ಪ್ರಭಾವ ಸ್ತಾಪಿಸಲು ಉತ್ಸುಕವಾಗಿವೆ. ಆದರೆ ಸಂಘರ್ಷ ವ್ಯಾಪಕವಾದರೆ ತೈಲ ಬೆಲೆ, ಪೂರೈಕೆ ಮೇಲೆ ತೀವ್ರ ಪರಿಣಾಮಗಳಾಗಬಹುದು. ಈಗಾಗಲೇ ಉಕ್ರೇನ್ ಯುದ್ಧದ ಪರಿಣಾಮಗಳಿಂದ ಬಾಧೆಗೊಳಗಾಗಿರುವ ಜನ ದಂಗೆಯೇಳಬಹುದು. ಸಂಘರ್ಷ ವ್ಯಾಪಕವಾದರೆ ಚೀನಾ, ರಷ್ಯಾಗಳೂ ಸುಮ್ಮನೆ ಕೂರಲಿಕ್ಕಿಲ್ಲ ಎಂಬ ಆತಂಕವೂ ಇದೆ.
ಹೀಗಾಗಿ ಯು.ಎಸ್ ಸದ್ಯಕ್ಕೆ ಇಸ್ರೇಲಿನ ಗಾಜಾ ಭೂ ಯುದ್ಧ ವನ್ನು ತಡೆ ಹಿಡಿದಿದೆ. ಆದರೆ ಅದರಿಂದ ಯುದ್ಧ ವ್ಯಾಪಕವಾದರೆ ಅದನ್ನು ಎದುರಿಸಲು ಅದು ಅಗತ್ಯ ತಯಾರಿ ನಡೆಸುತ್ತಿದೆ. ಗಾಜಾ ಭೂ ಯುದ್ಧ ಮಾಡುವುದಾದರೆ ಅದರ ವ್ಯೂಹ-ತಂತ್ರ, ವ್ಯಾಪ್ತಿ ಏನಿರಬೇಕು ಎಂಬ ವಿವಿಧ ಆಯ್ಕೆಗಳನ್ನು ಪರಿಶೀಲಿಸುತ್ತಿದೆ.
ಗಾಜಾ ಭೂ ಯುದ್ಧವನ್ನು ಇಸ್ರೇಲ್ ಗೆಲ್ಲಬಹುದಾ ?
ಗಾಜಾ ಭೂ ಯುದ್ಧ ನಡೆದರೆ ಅದು ನಗರ ಪ್ರದೇಶಗಳಲ್ಲಿ ನಗರ ಗೆರಿಲ್ಲಾ ಕದನದಲ್ಲಿ ನುರಿತ ಮತ್ತು ದೀರ್ಘ ಟನೆಲ್ ಜಾಲದಲ್ಲಿ ನೆಲೆ ಯಿರುವ ಹಮಾಸ್‌ನ್ನು ಎದುರಿಸಬೇಕಾಗುತ್ತದೆ. ಭಾರೀ ನಾಗರಿಕ ಸಾವು ನೋವು ಆಗುತ್ತದೆ. 50 ಮೀಟರ್‌ಗಿಂತಲೂ ಆಳದಲ್ಲಿರುವ ಟನೆಲ್‌ಗಳನ್ನು ಬಾಂಬ್ ದಾಳಿಗಳಿಂದಲೇ ನಾಶ ಮಾಡಬಹುದೆ ? ಅದರೊಳಗೆ ಪಡೆಗಳನ್ನು ನುಗ್ಗಿಸಬಹುದೆ ? ಆ ಇಡೀ ಪ್ರದೇಶದಲ್ಲಿ ನೆರೆ ಬರುವಂತೆ ಮಾಡಬಹುದೆ ಎಂಬ ವಿವಿಧ ತಂತ್ರಗಳನ್ನು ಯು.ಎಸ್ ಮಿಲಿಟರಿ ಪರಿಣತರು ಪರಿಶೀಲಿಸುತ್ತಿದ್ದಾರೆ. ಅವರು ಇಸ್ರೇಲಿ ಮಿಲಿಟರಿ ಪರಿಣತರ ಜತೆ ಈ ಬಗ್ಗೆ ಸಂವಾದ ನಡೆಸುತ್ತಿದ್ದಾರೆ. ಐಸಿಸ್ ವಶದಲ್ಲಿ ಹೋಗಿದ್ದ ಇರಾಕ್ ನ ಮಾಸುಲ್ ಮತ್ತು ರಕ್ಕಾದಲ್ಲಿ ಐಸಿಸ್ ಪಡೆಗಳಿಂದ ವಾಪಸು ಪಡೆದ ಮಿಲಿಟರಿ ಕಾರ್ಯಾಚರಣೆ ನಡೆಸಿದ್ದ ಜನರಲ್ ಆಗಲೇ ಇಸ್ರೇಲಿನಲ್ಲಿದ್ದಾನೆ. ಹಾಗಾಗಿ ಮಾಸುಲ್-ರಕ್ಕಾ ಮಾದರಿ ಅನುಸರಿಸಬಹುದೇ ಎಂಬ ಚಿಂತನೆ ನಡೆದಿದೆ.
ಆದರೆ ಮಾಸುಲ್-ರಕ್ಕಾ ಮತ್ತು ಗಾಜಾ ನಡುವೆ ಮುಖ್ಯ ವ್ಯತ್ಯಾಸಗಳೂ ಇದ್ದು ಇದು ಅದಕ್ಕಿಂತಲೂ ಹೆಚ್ಚು ತೀವ್ರ ಸವಾಲಿನವು. ಮಾಸುಲ್-ರಕ್ಕಾ ದಲ್ಲಿ ಭಾರೀ ಬಾಂಬ್ ದಾಳಿ ಆರಂಭಿಸುತ್ತಿದ್ದಂತೆ ನಾಗರಿಕರು ಮತ್ತು ಐಸಿಸ್ ಪಡೆ ಆ ಪ್ರದೇಶ ಬಿಟ್ಟು ಗ್ರಾಮೀಣ ಪ್ರದೇಶಗಳಿಗೆ ಹೋಗಿದ್ದರು. ಹಾಗಾಗಿ ಯು.ಎಸ್ ಪಡೆಗಳ ಕೆಲಸ ಸುಲಭವಾಗಿತ್ತು. ಅಲ್ಲದೆ ಹಾಮಾಸ್‌ಗೂ ಐಸಿಸ್‌ಗೂ ಬಹಳ ವ್ಯತ್ಯಾಸಗಳಿವೆ. ಐಸಿಸ್‌ನಲ್ಲಿ ಜನರ ವಿಶ್ವಾಸ ಮತ್ತು ಹಿಡಿತ ಬಹಳ ಕಡಿಮೆಯಿತ್ತು. ಐಸಿಸ್ ಪಡೆಗಳಲ್ಲಿ ಸುಸಜ್ಜಿತ ಪಡೆಗಳ ಜತೆ ದೀರ್ಘ ಹೋರಾಟದ ಛಲವೂ ಇರಲಿಲ್ಲ. ಹಮಾಸ್ ಗಾಜಾ ಜನತೆಯ ವಿಶ್ವಾಸವನ್ನೂ ಮತ್ತು ಅವರ ಮೇಲೆ ಹಿಡಿತವನ್ನೂ ಹೊಂದಿದೆ. ಸ್ಥಳದ ಆಳವಾದ ಅರಿವು ಮತ್ತು ದೀರ್ಘ ಹೋರಾಟದ ಛಲವನ್ನೂ ಹೊಂದಿದೆ. ಗಾಜಾದಿಂದ ಓಡಿ ಹೋಗಲು ಅವಕಾಶವೇ ಇಲ್ಲವಾದ್ದರಿಂದ ಪ್ರತಿರೋಧ ತೀವ್ರ ಮತ್ತು ದೀರ್ಘವಾಗಿರಬಹುದು. ಅದರ ಟನೆಲ್ ಜಾಲವನ್ನು ಬೇಧಿಸುವುದೂ ಸುಲಭವಾಗಲಿಕ್ಕಿಲ್ಲ.
ಇದನ್ನೂ ಓದಿ: ಹಮಾಸ್ ಇಸ್ರೇಲ್ ಯುದ್ಧ – ಹಲವು ಪ್ರಶ್ನೆಗಳು
ಹಾಗಾಗಿ ಇಸ್ರೇಲ್ – ಯು.ಎಸ್ – ಇಸ್ರೇಲ್ ಪಡೆಗಳು ಒಂದೊಮ್ಮೆ ಈ ದುಸ್ಸಾಹಸಕ್ಕೆ ಇಳಿದರೆ ಭಾರಿ ನಾಗರಿಕ ಸಾವು-ನೋವು ಆಗುವುದು, ಹೋರಾಟ ದೀರ್ಘವಾಗಿರುವುದೂ ಖಂಡಿತ. ಮಾಸುಲ್-ರಕ್ಕಾ ಜನಸಂಖ್ಯೆ 16 ಲಕ್ಷವಿದ್ದು ಓಡಿ ಹೋಗಲು ಅವಕಾಶವಿದ್ದರೂ 10 ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದರು. ಆದರೂ ಉಕ್ರೇನಿನಲ್ಲಿ ಯು.ಎಸ್ (ಪ್ರಾಕ್ಸಿಯಾದರೂ) ದುಸ್ಸಾಹಸ ನೋಡಿದರೆ ಇಲ್ಲೂ ಅದು ಮರುಕಳಿಸಲಿಕ್ಕಿಲ್ಲ ಎನ್ನುವಂತಿಲ್ಲ. ಇಂತಹ ನಿರ್ಧಾರ ಮಾಡಿದರೆ ಇಸ್ರೇಲ್ ಪಡೆಗಳು ಸರಣಿ ಯುದ್ಧ ಅಪರಾಧಗಳಿಗೆ ಸಹ ತಯಾರಿ ನಡೆಸಬೇಕು. ಆದರೆ ಫಲಿತಾಂಶ ಮಾಸುಲ್-ರಕ್ಕಾ ಮಾದರಿಯಲ್ಲಿರುತ್ತದೆ ಎಂದು ಹೇಳುವಂತಿಲ್ಲ. ಆದರೆ ಅಂತರ್ರಾಷ್ಟ್ರೀಯ ಪ್ರತಿಕ್ರಿಯೆ ಇದನ್ನು ಆಗಗೊಡಲಿಕ್ಕಿಲ್ಲ. ಈ ಯುದ್ಧ ವ್ಯಾಪಕವಾದರೆ ಇಸ್ರೇಲಿ ನಾಗರಿಕರ ಸಾವು-ನೋವೂ ಹೆಚ್ಚಿರುವ ಎಲ್ಲ ಸಾಧ್ಯತೆಗಳಿವೆ. ಆಗ ಇಸ್ರೇಲಿನೊಳಗೂ ಯುದ್ಧಕ್ಕೆ ಈಗಿನ ಬೆಂಬಲ ಉಳಿಸಿಕೊಳ್ಳುವುದು ಕಷ್ಟವಾಗಬಹುದು.
ವಿಡಿಯೋ ನೋಡಿ: ಪ್ಯಾಲಿಸ್ತೇನ್ ಪರ ಪ್ರತಿಭಟನೆ ಮಾಡುವುದು ಅಪರಾಧವೆ? Janashakthi Media