ಜೆರುಸಲೇಂ: ಪ್ಯಾಲೆಸ್ತೀನ್ ಪ್ರತಿರೋಧ ಹೋರಾಟಗಾರರು ತಮ್ಮ ”ಆಪರೇಷನ್ ಅಲ್-ಅಕ್ಸಾ ಫ್ಲಡ್” ಪ್ರಾರಂಭಿಸಿದ 16 ಗಂಟೆಗಳ ನಂತರ ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಶನಿವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಭೂ ಆಕ್ರಮಣದ ಸುಳಿವು ನೀಡಿದ್ದಾರೆ. ಇಸ್ರೇಲ್‌ನ ಈ ನಡೆಯು ಗಾಜಾ ವಿರುದ್ಧದ ಆಕ್ರಮಣದಲ್ಲಿ ಗಂಭೀರವಾದ ಉಲ್ಬಣವಾಗಲಿದೆ ಎಂದು ವರದಿಯಾಗಿದೆ.
ಆಪರೇಷನ್ ಅಲ್-ಅಕ್ಸಾ ಫ್ಲಡ್ ಪ್ರಾರಂಭವಾದ ಗಂಟೆಗಳ ನಂತರ, ಇಸ್ರೇಲಿ ಪಡೆಗಳು ಗಾಜಾದೊಳಗೆ ತೀವ್ರವಾದ ಬಾಂಬ್ ದಾಳಿಯನ್ನು ಪ್ರಾರಂಭಿಸಿದವು. ವೈಮಾನಿಕ ದಾಳಿ ನಡೆಸಿರುವ ಇಸ್ರೇಲ್ ಗಾಜಾ ಪಟ್ಟಿಯ 14 ಅಂತಸ್ತಿನ ಕಟ್ಟಡ, ವಿವಿಧ ಆಡಳಿತ ಕಚೇರಿಗಳನ್ನು ಒಳಗೊಂಡಂತೆ ಹಲವಾರು ನಾಗರಿಕ ಕಟ್ಟಡಗಳನ್ನು ನಾಶಪಡಿಸಿವೆ. ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯದ ಪ್ರಕಾರ, ಅಂದಾಜು 313 ಪ್ಯಾಲೆಸ್ತೀನಿಯರು ಇಸ್ರೇಲಿ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದು, 2,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಆಕ್ರಮಿತ ಗಾಜಾದಲ್ಲಿ, ಹಮಾಸ್, ಇಸ್ಲಾಮಿಕ್ ಜಿಹಾದ್ ಮತ್ತು ಇತರರ ಪ್ಯಾಲೇಸ್ತೀನ್ ಪ್ರತಿರೋಧ ಪಡೆಗಳು ಶನಿವಾರ ಮುಂಜಾನೆ ಸಂಘಟಿತ ”ಆಪರೇಷನ್ ಅಲ್-ಅಕ್ಸಾ ಫ್ಲಡ್” ಅನ್ನು ಪ್ರಾರಂಭಿಸಿದವು. ಈ ಕಾರ್ಯಾಚರಣೆಯನ್ನು ವಾಯು, ಸಮುದ್ರ ಮತ್ತು ಭೂ ಸೇನೆಗಳ ಮೂಲಕ ಮಾಡಲಾಗಿದೆ. ಇಸ್ರೇಲ್ ಒಳಗೆ ಸುಮಾರು 5,000 ರಾಕೆಟ್‌ಗಳನ್ನು ಹಾರಿಸಿರುವುದಾಗಿ ಹಮಾಸ್ ಹೇಳಿಕೊಂಡಿದೆ.
ಇದನ್ನೂ ಓದಿ: ಇಸ್ರೇಲ್ ಆಕ್ರಮಣ ಕೊನೆಗೊಳ್ಳಬೇಕು- ಪ್ಯಾಲೆಸ್ಟೀನ್ ವಿಮೋಚನೆಗೊಳ್ಳಬೇಕು
ಸ್ಥಳೀಯ ಇಸ್ರೇಲಿ ಮಾಧ್ಯಮಗಳ ಪ್ರಕಾರ ಕೊಲ್ಲಲ್ಪಟ್ಟ ಇಸ್ರೇಲಿಗಳ ಸಂಖ್ಯೆ 600 ಮೀರಿದೆ ಮತ್ತು 2,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕೆಲವು ಉನ್ನತ ಅಧಿಕಾರಿಗಳು ಸೇರಿದಂತೆ ಡಜನ್‌ಗಟ್ಟಲೆ ಇಸ್ರೇಲಿ ಸೈನಿಕರನ್ನು ಪ್ಯಾಲೇಸ್ತೀನ್ ಪ್ರತಿರೋಧ ಪಡೆಗಳು ಒತ್ತೆಯಾಳಾಗಿ ತೆಗೆದುಕೊಂಡು ಗಾಜಾಕ್ಕೆ ಕರೆದೊಯ್ದಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ಹೇಳಿವೆ.
ಟಿವಿ ಸಂದರ್ಶನದಲ್ಲಿ ಮಾತನಾಡಿದ ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು, ಗಾಜಾವನ್ನು “ನಿರ್ಜನ ದ್ವೀಪ”ವನ್ನಾಗಿ ಮಾಡುವುದಾಗಿ ಬೆದರಿಕೆ ಹಾಕಿದ್ದು, ಅಲ್ಲಿನ 20 ಲಕ್ಷ ಮಿಲಿಯನ್ ಪ್ಯಾಲೆಸ್ತೀನ್ ನಿವಾಸಿಗಳನ್ನು ಸ್ಥಳದವನ್ನು ತೊರೆಯುವಂತೆ ಕೇಳಿಕೊಂಡಿದ್ದಾರೆ.
ನೆತನ್ಯಾಹು ಹೇಳಿಕೆಯ ನಂತರ ತಮ್ಮ ಹೇಳಿಕೆ ಬಿಡುಗಡೆ ಮಾಡಿರುವ ಹಮಾಸ್‌ನ ಅಲ್-ಕಸ್ಸೆಮ್ ಬ್ರಿಗೇಡ್, “ನೆತನ್ಯಾಹು ಅವರ ಬೆದರಿಕೆಗಳು ‘ಮುರಿದ ದಾಖಲೆ’ಯಾಗಿದ್ದು, ಆಪರೇಷನ್ ಅಲ್-ಅಕ್ಸಾ ಫ್ಲಡ್ ಮುಂದುವರಿಯುತ್ತದೆ. ಇಸ್ರೇಲಿ ಒತ್ತೆಯಾಳುಗಳ ಸಂಖ್ಯೆ ನೆತನ್ಯಾಹು ನಂಬಿದ್ದಕ್ಕಿಂತ ಹಲವು ಪಟ್ಟು ಹೆಚ್ಚಿದೆ” ” ಎಂದು ಹೇಳಿಕೊಂಡಿದೆ.
ಶನಿವಾರ ದೂರದರ್ಶನದಲ್ಲಿ ಭಾಷಣ ಮಾಡಿದ ಹಮಾಸ್‌ನ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್, “ಶನಿವಾರದ ದಾಳಿಗೆ ಇಸ್ರೇಲ್ ಹೊಣೆಯಾಗಿದೆ. ಅಲ್-ಅಕ್ಸಾ ವಿರುದ್ಧ ನಡೆಸಿದ ದಾಳಿಯಲ್ಲಿ ಕೆಂಪು ಗೆರೆಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ಪ್ಯಾಲೇಸ್ಟಿನಿಯನ್ ಎಚ್ಚರಿಕೆಗಳನ್ನು ಇಸ್ರೇಲ್ ಪದೇ ಪದೇ ನಿರ್ಲಕ್ಷಿಸಿದೆ” ಎಂದು ಹೇಳಿದ್ದಾರೆ.
“ಸಾಕೆಂದರೆ ಸಾಕಷ್ಟೆ, ನಮ್ಮ ಭೂಮಿ ಮತ್ತು ಆಕ್ರಮಿತ ಜೈಲಿನಲ್ಲಿ ನರಳುತ್ತಿರುವ ನಮ್ಮ ಕೈದಿಗಳನ್ನು ಸ್ವತಂತ್ರಗೊಳಿಸುವ ಹೋರಾಟದಲ್ಲಿ ಇಂತಿಫಾದ, ದಂಗೆಗಳು ಮತ್ತು ಕ್ರಾಂತಿಗಳ ಚಕ್ರವನ್ನು ಪೂರ್ಣಗೊಳಿಸಬೇಕು. ಪ್ಯಾಲೆಸ್ಟೀನಿಯನ್ನರು ಯುದ್ಧವನ್ನು ಗೆಲ್ಲುತ್ತಾರೆ” ಎಂದು ಅವರು ಘೋಷಿಸಿದ್ದಾರೆ.
2005 ರಿಂದ ಆಕ್ರಮಿಸಲ್ಪಟ್ಟ ಗಾಜಾ ಪ್ರದೇಶಕ್ಕೆ ಈಗಾಗಲೆ ಇಂಧನ ಮತ್ತು ಸರಕುಗಳ ಸಾಗಣೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದ್ದು, ಅದರ ಹೊರತಾಗಿ ಇಸ್ರೇಲ್ ವಿದ್ಯುತ್ ಅನ್ನು ಕಡಿತಗೊಳಿಸಿದೆ. ಇಸ್ರೇಲ್‌ನ ಈ ನಡೆಯು ಪ್ರಪಂಚದ ಅತೀ ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿರುವ ಗಾಜಾದಲ್ಲಿನ ಮಾನವೀಯ ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಲಿದೆ.
ಇದನ್ನೂ ಓದಿ: ಹೋರಾಟ ನಿರತ ಪ್ಯಾಲೆಸ್ತೀನಿ ಜನತೆಗೆ ಸೌಹಾರ್ದತೆ ತೋರೋಣ…
ಪ್ಯಾಲೇಸ್ತೀನ್ ಪ್ರತಿರೋಧವನ್ನು ಪ್ರಪಂಚದ ವಿವಿಧ ಭಾಗಗಳಲ್ಲಿ ಬೆಂಬಲಿಸಿದ್ದು, ಇರಾನ್‌ನಲ್ಲಿ ದೇಶಾದ್ಯಂತ ದೊಡ್ಡ ಪ್ರಮಾಣದ ಆಂದೋಲನ ನಡೆಸಲಾಗಿದೆ ನಡೆಸಲಾಯಿತು. ಅಲ್ಲಿನ ಜನರು ಇಸ್ರೇಲ್ ಪಡೆಗಳ ವಿರುದ್ಧ ಪ್ಯಾಲೆಸ್ತೀನ್ ಪ್ರತಿರೋಧದ ಆರಂಭಿಕ ಯಶಸ್ಸನ್ನು ಆಚರಿಸಿದ್ದಾರೆ.
ಅಮೆರಿಕಾದ ನಗರಗಳಲ್ಲಿ ಪ್ಯಾಲೆಸ್ತೀನ್ ಪರ ಗುಂಪುಗಳು, ಯುದ್ಧ ವಿರೋಧಿ ಸಂಘಟನೆಗಳು, ಪ್ರಗತಿಪರ ಮತ್ತು ಎಡ ಚಳುವಳಿಗಳು ತುರ್ತು ಪ್ರತಿಭಟನೆಗಳನ್ನು ಆಯೋಜಿಸಿದ್ದು, ಇಸ್ರೇಲ್‌ಗೆ ಎಲ್ಲಾ ಅನುದಾನವನ್ನು ಕಡಿತಗೊಳಿಸುವಂತೆ ಮತ್ತು ಪ್ಯಾಲೇಸ್ತೀನ್ ಹೋರಾಟವನ್ನು ಬೆಂಬಲಿಸಲು ಅಮೆರಿಕಾ ಸರ್ಕಾರಕ್ಕೆ ಕರೆ ನೀಡಿವೆ.
ನಾಗರಿಕರಿಗೆ ಹಾನಿ ಮಾಡುವ ನೆತನ್ಯಾಹು ಅವರ ಬೆದರಿಕೆಗಳನ್ನು ಹಲವಾರು ಜನರು ಖಂಡಿಸಿದ್ದು, ಇದು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಪ್ರಕಾರ ಯುದ್ದಾಪರಾಧವಾಗಬಹುದು ಎಂದು ಹೇಳಿದ್ದಾರೆ. ಈ ಮಧ್ಯೆ, ಗಾಜಾದಲ್ಲಿನ ಇತ್ತೀಚಿನ ಪರಿಸ್ಥಿತಿಯನ್ನು ಚರ್ಚಿಸಲು ಯುಎನ್ ಭದ್ರತಾ ಮಂಡಳಿಯು ಭಾನುವಾರ ಸಭೆ ಸೇರಲಿದೆ. ಕೃಪೆ: ಪೀಪಲ್ಸ್ ಡಿಸ್‌ಪ್ಯಾಚ್
ವಿಡಿಯೊ ನೋಡಿ: ಚುನಾಯಿತ ಸರ್ವಾಧಿಕಾರ ಪ್ರಭುತ್ವದಿಂದ ” ನ್ಯೂಸ್ ಕ್ಲಿಕ್ ಮೇಲೆ ದಾಳಿ”, ಅಪಾಯದಲ್ಲಿರುವ ಭಾರತದ ಪ್ರಜಾಪ್ರಭುತ್ವ