ಗಾಜಾ: ಪ್ರಾಲೆಸ್ತೀನ್ ಪ್ರತಿರೋಧ ಪಡೆ ಹಮಾಸ್ ಮತ್ತು ಇಸ್ರೇಲ್ ಮಧ್ಯೆ ಯುದ್ಧ ಪ್ರಾರಂಭವಾದ ನಂತರ, ಕಳೆದ ದಿನ ಗಾಜಾ ಪಟ್ಟಿಯು ಅತ್ಯಂತ ಹೆಚ್ಚು ಸಾವುನೋವಿಗೆ ಸಾಕ್ಷಿಯಾಗಿದೆ. ಕಳೆದ ರಾತ್ರಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 700 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಹತ್ಯೆಯಾಗಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ದಾಳಿಗೆ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಇಸ್ರೇಲ್ ಯುದ್ಧದ ಹೆಸರಿನಲ್ಲಿ ಗಾಜಾ ನರಮೇಧ ನಡೆಸುತ್ತಿದೆ ಎಂದು ಪ್ರತಿಪಾದಿಸಲಾಗಿದೆ.
ಅಕ್ಟೋಬರ್ 7 ರಿಂದ ಈ ವರೆಗೆ 2,360 ಮಕ್ಕಳು ಸೇರಿದಂತೆ 5,791 ಪ್ಯಾಲೆಸ್ತೀನಿಯರನ್ನು ಇಸ್ರೇಲ್ ಬಾಂಬ್ ದಾಳಿಯ ಮೂಲಕ ಹತ್ಯೆ ಮಾಡಿದೆ ಎಂದು ವರದಿಗಳು ಉಲ್ಲೇಖಿಸಿವೆ. ಅದರಲ್ಲೂ ಕಳೆದ 24 ಗಂಟೆಗಳಲ್ಲಿ 704 ಸಾವುಗಳು ಸಂಭವಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ದಾಳಿಯ ವಿರುದ್ಧ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ದಾಳಿಯನ್ನು ಗಾಝಾ ನರಮೇಧ ಎಂದು ಬಣ್ಣಿಸಲಾಗಿದೆ. ಗಾಜಾ ನರಮೇಧ
ಇದನ್ನೂ ಓದಿ: ಶೈಕ್ಷಣಿಕ ಧನ ಸಹಾಯ ಬಿಡುಗಡೆಗೆ ಆಗ್ರಹ | ಕಟ್ಟಡ ಕಾರ್ಮಿಕರ ಮಕ್ಕಳಿಂದ ರಾಜ್ಯವ್ಯಾಪಿ ಪೊಸ್ಟ್ ಕಾರ್ಡ್ ಚಳವಳಿ
ಗಾಜಾದ ಆಸ್ಪತ್ರೆಗಳು ತುಂಬಿ ತುಳುಕುತ್ತಿದ್ದು, ಇಸ್ರೇಲ್ ನಡೆಸುತ್ತಿರುವ ಜನಾಂಗೀಯ ಹತ್ಯಾಕಾಂಡದಿಂದಾಗಿ 14 ಲಕ್ಷಕ್ಕೂ ಹೆಚ್ಚು ಜನರು ಮನೆಗಳನ್ನು ತೊರೆದು ಪಲಾಯನ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ. 400 ಕ್ಕೂ ಹೆಚ್ಚು ಹಮಾಸ್ ತಾಣಗಳನ್ನು ತಾನು ಗುರಿಯಾಗಿಸಿಕೊಂಡಿರುವುದಾಗಿ ಇಸ್ರೇಲಿ ಸೇನೆ ಹೇಳಿದ್ದು, ಕಳೆದ ರಾತ್ರಿಯಲ್ಲಿ ಹಮಾಸ್ ಪ್ರತಿರೋಧ ಪಡೆಯ ಹಲವಾರು ಹೋರಾಟಗಾರರನ್ನು ಹತ್ಯೆ ಮಾಡಿದ್ದಾಗಿ ಅದು ಹೇಳಿಕೊಂಡಿದೆ.
ಅಕ್ಟೋಬರ್ 7ರಂದು ಪ್ರಾರಂಭವಾದ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷವು ಮೂರನೇ ವಾರಕ್ಕೆ ಪ್ರವೇಶಿಸುತ್ತಿದೆ. ಈ ನಡುವೆ ಗಾಜಾದಲ್ಲಿ ಮಾನವೀಯ ಪರಿಸ್ಥಿತಿಯು ಭೀಕರ ದುರಂತದ ಮಟ್ಟವನ್ನು ತಲುಪಿದೆ. ಅಂತರಾಷ್ಟ್ರೀಯ ಪರಿಹಾರ ಏಜೆನ್ಸಿಗಳು ಈ ಬಗ್ಗೆ ಎಚ್ಚರಿಕೆ ನೀಡುತ್ತಿದ್ದು, ಪ್ರದೇಶದಲ್ಲಿ ಮಾನವೀಯ ನೆರವಿನ ತುರ್ತು ಅಗತ್ಯವಿದೆ ಎಂದು ಒತ್ತಿಹೇಳುತ್ತಿವೆ.
ವಿಶ್ವಸಂಸ್ಥೆಯ ಏಜೆನ್ಸಿಗಳು ಕೂಡಾ ಅಡೆತಡೆಯಿಲ್ಲದೆ ಗಾಜಾಕ್ಕೆ ತುರ್ತು ಸಹಾಯವನ್ನು ಅನುಮತಿಸಲು ಮನವಿ ಮಾಡುತ್ತಿವೆ. ಆದರೆ ಕಳೆದ ಎರಡು ವಾರಗಳಿಂದ ಪಟ್ಟುಬಿಡದ ಇಸ್ರೇಲ್ ದಿನಗಳ ಹಿಂದೆಯಷ್ಟೆ ಪರಿಹಾರ ಸಾಮಾಗ್ರಿ ಗಡಿ ದಾಟಲು ಈಜಿಫ್ಟ್‌ಗೆ ಅನುಮತಿ ನೀಡಿತ್ತು.
ಇದನ್ನೂ ಓದಿ: ರಕ್ತ ವರ್ಗಾವಣೆ ನಂತರ ಹೆಪಟೈಟಿಸ್ & ಎಚ್ಐವಿ ಸೋಂಕಿತರಾದ 14 ಮಕ್ಕಳು | ಯುಪಿ ಸರ್ಕಾರದಿಂದ ಗಂಭೀರ ನಿರ್ಲಕ್ಷ್ಯ
ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ (WHO)ಯು ಪರಿಹಾರ ಕಾರ್ಯಕ್ಕಾಗಿ ತಕ್ಷಣವೇ ಮಾನವೀಯ ಕದನ ವಿರಾಮ ಘೋಷಿಸಬೇಕು ಎಂದು ಮತ್ತೊಂದು ಹತಾಶ ಮನವಿ ಮಾಡಿದೆ. ಕದನ ವಿರಾಮಕ್ಕಾಗಿ ಅಂತರಾಷ್ಟ್ರೀಯ ಒತ್ತಡ ಕೂಡಾ ಹೆಚ್ಚುತ್ತಿದೆ. ಆದರೆ ಎಲ್ಲಾ ರಾಜತಾಂತ್ರಿಕ ಪ್ರಯತ್ನಗಳ ಹೊರತಾಗಿಯೂ ಪರಿಸ್ಥಿತಿ ಇನ್ನೂ ಕಠೋರವಾಗಿದ್ದು, ಈ ವರೆಗೆ ಯಾವುದೇ ನಿರ್ಣಯಗಳು ತೀರ್ಮಾನವಾಗಿಲ್ಲ. ಗಾಜಾ ನರಮೇಧ
ಗಾಜಾದಲ್ಲಿ ಆಹಾರ, ಶುದ್ಧ ನೀರು, ಔಷಧ ಮತ್ತು ಇಂಧನದ ಲಭ್ಯತೆ ವೇಗವಾಗಿ ಕ್ಷೀಣಿಸುತ್ತಿದೆ. ಜನರು ತಮ್ಮ ಎಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡಲು ಮತ್ತು ನೀರನ್ನು ಸಂಗ್ರಹಿಸಲು ಜಮಾಯಿಸಿದ ಖಾನ್ ಯೂನಿಸ್‌ನಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಇಸ್ರೇಲ್ ಕ್ಷಿಪಣಿ ದಾಳಿ ಮಾಡಿದೆ.
ಇಸ್ರೇಲ್‌ನ ಟ್ಯಾಂಕರ್‌ಗಳು ಮತ್ತು ಪಡೆಗಳು ಗಡಿಯಲ್ಲಿ ಜಮಾಯಿಸಿದ್ದು, ಸಂಭಾವ್ಯ ಭೂ ಆಕ್ರಮಣದ ಆದೇಶಗಳಿಗಾಗಿ ಕಾಯುತ್ತಿವೆ. ಇಸ್ರೇಲ್ ಯಾವಾಗ ಗಾಜಾದ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸುತ್ತದೆ ಎಂಬ ಪ್ರಶ್ನೆಯು ಅನಿಶ್ಚಿತವಾಗಿಯೇ ಉಳಿದಿದೆ. ಈ ನಡುವೆ ಪ್ಯಾಲೆಸ್ತೀನ್‌ನ ಪಶ್ಚಿಮ ದಂಡೆಯಲ್ಲಿ ಕೂಡಾ ಘರ್ಷಣೆಗಳು ತೀವ್ರಗೊಂಡಿವೆ. ಗಾಜಾ ನರಮೇಧ
ವಿಡಿಯೊ ನೋಡಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನಲ್ಲಿ ಶಾಂತಿ ನೆಲೆಸಲಿ ಎಂದವರನ್ನು ಬಂಧಿಸಿದ ಸರ್ಕಾರ! Janashakthi Media