ಗುರುರಾಜ ದೇಸಾಯಿ
(ಇಲ್ಲಿಯವರೆಗೆ…. ಚೂರಿ ಪರ್ಸ್ಯಾನ ಕೊಲೆಗೆ ನ್ಯಾಯ ಸಿಗಬೇಕು ಎಂಬ ಪ್ರತಿಭಟನೆಯ ಕಾವು ಜೋರಾಗಿತ್ತು. ಇತ್ತ ಊರ ಜಾತ್ರೆಯ ಮೆರವಣಿಗೆಯೂ ಜೋರಾಗಿತ್ತು.. ಬಿಸಿ ಏರಿದ್ದ ಪ್ರತಿಭಟನೆಕಾರರನ್ನು ತಡೆಯಲು ಅಲ್ಲಿಗೆ ಪೊಲೀಸ್ ಪಡೆ ಬಂದಿತ್ತು. ಪೊಲೀಸ್‌ರ ಮಾತುಗಳಿಗೆ ಜಗ್ಗದೆ, ಕುಗ್ಗದೆ ಹೋರಾಟ ಮುಂದುವರೆದಿತ್ತು…. ಮುಂದೆ ಓದಿ ….. ) ಗಾಯ
ಅಗಸಿಕಟ್ಟೆಯಲ್ಲಿದ್ದ ಜಾತ್ರೆಯ ಮೆರವಣಿಗೆ ಕೇರಿಯ ಕಡೆ ಧಾವಿಸುತ್ತಿದ್ದಂತೆ, ಮುಗಿಲು ಮುಟ್ಟುವ ಹಾಗೆ ಪ್ರತಿಭಟನಕಾರರ ಘೋಷಣೆ ಮೊಳಗಿದವು, ಹಲಗೆಯ ಸದ್ದು ಮತ್ತಷ್ಟು… ಮಗದಷ್ಟು… ಜೋರಾಯಿತು…
ಟಂಕಣಕ್ಕ!, ಟಂಕಣಕ್ಕ!!, ಟಂಕಣಕ್ಕ!!! ಟಂಕಣಕ್ಕ!!!!… ಎಂದು ಹತ್ತಾರು ಹಲಗೆಗಳು ಒಂದೇ ನಾದವನ್ನು ಹೊರಡಿಸಿದವು…
ರಾಜಣ್ಣ… ಮಲ್ಯಾ… ಮತ್ತು ದೇವ್ಯಾನಿಗೆ ಹೆಣ ಎತ್ರೀ… ಎಂಬಂತೆ ಕಣ್ಸನ್ನೆ… ಮಾಡಿದ… ಪೋಲಿಸ್ ಸಾಹೇಬ.
ಮಲ್ಯಾ… ದೇವ್ಯಾ… ಸಣ್ಯಾ… ಅಲ್ಲಿದ್ದ ನಾಲ್ಕಾರು ಹುಡುಗರಿಗೆ ಕೈ ಸನ್ನೆ!!! ಮಾಡಿದರು. ಆ ಹುಡುಗರು ಚೂರಿ ಪರ್ಸ್ಯಾನ ದೇಹವನ್ನು ಹೆಗಲ ಮೇಲೆ… ಹೊತ್ತುಕೊಂಡು ಮುಂದೆ ಸಾಗಲು ಸಜ್ಜಾದರು. ಟಂಕಣಕ್ಕ!, ಟಂಕಣಕ್ಕ!!, ಟಂಕಣಕ್ಕ!!! ಟಂಕಣಕ್ಕ!!!! ಎಂದು ಹಲಗೆ ಸದ್ದು ಜೋರಾಗುವುದರ ಜೊತೆಗೆ ಊರ ದೇವರನ್ನು ಮೆರವಣಿಗೆ ಮಾಡುತ್ತಿದ್ದವರು ಹೆದರುವಂತೆ ಘೋಷಣೆಗಳು ಮೊಳಗಿದವು!!!.
ಚೂರಿ ಪರ್ಸ್ಯಾನ ಸಾವಿಗೆ ನ್ಯಾಯ ಸಿಗಲೇಬೇಕು…
ಚೂರಿ ಪರ್ಸ್ಯಾನನ್ನು ಕೊಂದವರನ್ನು!!! ಜೈಲಿಗೆ!!! ಕಳಿಸಲೇಬೇಕು…
ಸರ್ವಾಧಿಕಾರ… ನಾಶವಾಗಲಿ… ಹೀಗೆ ಘೋಷಣೆಗಳ ಸದ್ದು ಊರನ್ನು ಆವರಿಸಿತು.
ಇತ್ತ… ಜಾತ್ರೆಯ ಮೆರವಣಿಗೆ ಕೇರಿಯಿಂದ 100 ಮೀಟರ್ ದೂರದಲ್ಲಿತ್ತು. ಚೂರಿ ಪರ್ಸ್ಯಾನ ಹೆಣ ಎತ್ತಿಕೊಂಡಿದ್ದವರು ಜಾತ್ರೆಯ ಮೆರವಣಿಗೆ!!! ಹತ್ತಿರ ಧಾವಿಸಿದರು…
ಎಲ್ಲವನ್ನೂ ನೋಡುತ್ತಾ… ನಿಂತಿದ್ದ ಪೊಲೀಸರಿಗೆ… ಸಾಹೇಬ… ಹುಬ್ಬೇರಿಸಿ “ಕೈಯಲ್ಲಿದ್ದ ಲಾಠಿಗೆ ಕೆಲಸ ನೀಡಲು” ಆಜ್ಞೆ ನೀಡಿದ…
ರಾಜಣ್ಣ… ಮಲ್ಯಾ… ದೇವ್ಯಾ… ಭರ್ಮವ್ವ… ದೇವವ್ವ ಪ್ರತಿಭಟನೆಯ ಮುಂದಿನ ಸಾಲಿನಲ್ಲಿದ್ದರು. ಚೂರಿ ಪರ್ಸ್ಯಾನ ಕೊಲೆಯನ್ನು ಖಂಡಿಸಿ ಮೊಳಗುತ್ತಿದ್ದ ಘೋಷಣೆಗಳು ಪ್ರತಿಧ್ವನಿಸತೊಡಗಿದವು…
ಟಪ್… ಟಪ್… ಟಪ್… ಟಪ್… ಎಂದು ಪೊಲೀಸರ ಲಾಠಿಗಳು ಪ್ರತಿಭಟನಕಾರರ ಮೇಲೆ ದಾಳಿ ಮಾಡಿದವು. ಅದ್ಯಾವುದಕ್ಕೂ ಜಗ್ಗದೆ ಹಲಗೆಯ ಸದ್ದು, ಘೋಷಣೆಗಳು ಜೋರಾದವು… ಪೊಲೀಸರ ಲಾಠಿಯ ಏಟುಗಳು ಇನ್ನಷ್ಟು ಬಲವಾಗಿ ಬೀಳತೊಡಗಿತು…
ತಲೆ, ಹಣೆ, ಎದೆಗೆ ತಿವಿಯುವಂತೆ , ಸಾಹೇಬ ದಫೇದಾರನಿಗೆ ಕಣ್ಸನ್ನೆಯಲ್ಲೇ… ಆಜ್ಞೆಮಾಡಿದ…
ಮುಂದೆ ಬಂದ ದಫೆದಾರ ಲಾಠಿ ಎತ್ತಿ, ಮಲ್ಯಾನ… ತಲಗೆ ಬಲವಾಗಿ ಬಾರಿಸಿದ!!!
ಅಯ್ಯೋ!!! ಯಪ್ಪಾ… ಯವ್ವಾ… ಎಂದು ಮಲ್ಯಾ ಕೂಗಿದ, ಅವನಿಗೆ ಅರಿವಿಲ್ಲದೆ ಕೈ ತಲೆಯ ಮೇಲೆ ಹೋಯಿತು. ರಕ್ತ ಹತ್ತಿದ ಕೈ ನೋಡಿ ಮೂರ್ಚೆ ಬಂದು ನೆಲಕ್ಕುರುಳಿದ… ಗಾಯ
ಇದನ್ನೂ ಓದಿ : ಗಾಯ ಕಥಾ ಸರಣಿ | ಸಂಚಿಕೆ 19 – ಕೊಲೆಯಾದ ಚೂರಿ ಪರ್ಸ್ಯಾ, ಪುಟಿದೆದ್ದ ಕೇರಿಯ ಜನ
ಇತ್ತ ಪೊಲೀಸರು ಲಾಠಿಯನ್ನು ಬೀಸುತ್ತಲೇ… ಇದ್ದರು. ಮಲ್ಯಾ ಬಿದ್ದದ್ದನ್ನು ನೋಡಿ!!! ದೇವವ್ವ ಮತ್ತು ಭರ್ಮವ್ವ ಅಳುತ್ತಾ… ಓಡೋಡಿ… ಬಂದರು…
ತಾನು ಅಂದುಕೊಂಡ ಕೆಲಸ ಆಗುತ್ತಿದೆ ಎಂದು ಸಾಹೇಬ ಮುಗುಳ್ನಗುತ್ತ… ದೇವ್ಯಾನ ಹಣೆಗೆ ಒಡೆಯುವಂತೆ ದಫೇದಾರನಿಗೆ ಮತ್ತೆ ಕಣ್ಸನ್ನೆ ಮಾಡಿದ.
ಚೂರಿ ಪರ್ಸ್ಯಾನ ಸಾವಿಗೆ ನ್ಯಾಯ ಸಿಗಲಿ, ನಮ್ಮ ಮ್ಯಾಲೆ ದೌರ್ಜನ್ಯ… ನಡಸ್ತಿರೋ ಪೊಲೀಸರಿಗೆ ಧಿಕ್ಕಾರ… ಎಂದು ದೇವ್ಯಾ ಘೋಷಣೆ ಕೂಗುತ್ತಿದ್ದಾಗ ಪಟ್ ಪಟ್ ಎಂದು ಹಣೆ ಹಾಗೂ ದವಡೆಗೆ ದಫೇದಾರ ಲಾಠಿ ಬೀಸೀದ.
ಘೋಷಣೆ ಕೂಗುತ್ತಲೆ ದೇವ್ಯಾ ನೆಲದ ಮೇಲೆ ಕುಸಿದು ಬಿದ್ದ.
ಸಾಹೇಬನ ಸಂಭ್ರಮ ಹೆಚ್ಚಾಯಿತು, ದಫೇದಾರ ಕಣ್ಣ ಹಾಯಿಸಿದೊಡನೆ, ಮುಂದುವರೆಸು… ಮುಂದುವರೆಸು… ಎಂದು ಕೈಸನ್ನೆ ಮಾಡುತ್ತಾ ಹೆಗಲು ಕುಣಿಸುತ್ತಾ ನಗತೊಡಗಿದ…
ಮಲ್ಯಾ, ದೇವ್ಯಾ ನೆಲಕ್ಕೆ ಬಿದ್ದಿದ್ದು… ಪ್ರತಿಭಟನೆಕಾರರನ್ನು ಕುಸಿಯುವಂತೆ ಮಾಡಿತು. ಲಾಠಿ ಏಟಿಗೆ ಎಲ್ಲರೂ ಸುಸ್ತಾಗಿ ಒಬ್ಬೊಬ್ಬರೇ.. ನೆಲಕ್ಕುರಳಿದರು.
ಸ್ವಲ್ಪ ದೂರದಿಂದ ಓಡಿ ಬಂದ ದಫೇದಾರ ರಾಜಣ್ಣನ ಎದೆಗೆ ಲಾಠಿಯಿಂದ ಜೋರಾಗಿ ತೀವಿದ…
ಅಯ್ಯೋ….. ಅಮ್ಮಾ…. ಎಂದು ಎದೆ ಹಿಡಿದುಕೊಂಡು ರಾಜಣ್ಣ ನೆಲಕ್ಕೆ ಕುಸಿದು ಬಿದ್ದ.
ಕರುಣೆ ಇಲ್ಲದ ದಫೆದಾರ ಮತ್ತೆರಡು ಬಾರಿ ರಾಜಣ್ಣನ ಎದೆಗೆ!!! ತಿವಿದ…
ನಿಧಾನಕ್ಕೆ ರಾಜಣ್ಣನ ಧ್ವನಿ ಕ್ಷೀಣಿಸಿತು…
ದೇವವ್ವ , ಭರ್ಮವ್ವಾ ಓಡಿ ಬಂದು ರಾಜಣ್ಣನನ್ನು ಮುಟ್ಟಿ “ ರಾಜಣ್ಣಾರ… ರಾಜಣ್ಣಾರ… ಇವರ ಕೂಗು ರಾಜಣ್ಣನ ಕಿವಿಗೆ ಮುಟ್ಟಲಿಲ್ಲ…
ಅಯ್ಯೋ ಯಪ್ಪಾ… ರಾಜಣ್ಣನ ಸಾಯಿಸಿ ಬಿಟ್ರಲ್ಲರಿ ಎಂದು ಭರ್ಮವ್ವ ಜೋರಾಗಿ ಅಳುತ್ತಾಳೆ… ಆಗ ಎಲ್ಲವೂ ಸ್ತಬ್ಧವಾಯಿತು… ಹಿಂದೆ ಸರಿಯುವಂತೆ ಸಾಹೇಬ ಪೊಲೀಸರಿಗೆ ಕಣ್ಸನ್ನೆ ಮಾಡಿದ.
ಅಲ್ಲಿಯವರೆಗೆ ಎಲ್ಲವನ್ನೂ… ನೋಡುತ್ತಾ ನಿಂತಿದ್ದ ಜಾತ್ರೆಯ ಮೆರವಣಿಗೆಯ… ಜನ… ಮತ್ತು ದೇವರನ್ನು ಹೊತ್ತಿದ್ದ ಹುಡುಗರು, ಆ ದೇವರನ್ನು ಬೀದಿಯಲ್ಲೇ… ಬಿಟ್ಟು ಮನೆಗಳತ್ತ ಓಡಿ ಹೋದರು.
ಲಾಠಿ ಏಟು ತಿಂದು ನರಳುತ್ತಾ ಬಿದ್ದ ಪ್ರತಿಭಟನೆಕಾರರ ಸುತ್ತಲೂ… ರಕ್ತ!!! ಹರಿದಿತ್ತು. ರಾಜಪ್ಪಣ್ಣನಿಗೆ ಏನಾಗಿದೆ? ಎಂಬುದರ ಅರಿವೆ ಅಲ್ಲಿರಲಿಲ್ಲ.. ರಾಜಣ್ಣ ಮಾತ್ರ ಕಣ್ತೆರೆದು ಮುಗಿಲು ನೋಡುತ್ತಿದ್ದ…
ಇದನ್ನೂ ಓದಿ : ಗಾಯ ಕಥಾ ಸರಣಿ | ಸಂಚಿಕೆ 20 – ನ್ಯಾಯಕ್ಕಾಗಿ ಕಾವೇರಿದ ಪ್ರತಿಭಟನೆ
ಬೇ… ಯಕ್ಕಾ… ಮಲ್ಲಪ್ಪಣ್ಣ… ದೇವಪ್ಪಣ್ಣನೂ… ಮಾತಾಡ್ತಿಲ್ಲ, ಉಸಿರಾಟಾನೂ ಇಲ್ಲ… ಎಂದು ಸಣ್ಯಾ… ಜೋರಾಗಿ ಬಾಯಿ ಬಡಿದುಕೊಳ್ಳತೊಡಗಿದ…
ಮಲ್ಯಾ… ಮತ್ತು ದೇವ್ಯಾನ… ಮೂಗಿನ ಬಳಿ ಕೈ ಹಿಡಿದು ನೋಡಿದಾಗ ಅವರಿಬ್ಬರು ಸತ್ತಿದ್ದಾರೆ ಎಂಬುದು ಭರ್ಮವ್ವ, ದೇವವ್ವರಿಗೆ ಖಚಿತವಾಯಿತು…
ಜೋರಾಗಿ ಅಳಲಾರಂಭಿಸಿದರು, ನೆಲದ ತುಂಬೆಲ್ಲ ಉರಳಾಡಿದರು… ಇನ್ಯಾರೋ ದಿಕ್ಕೊ ನಮಗೆ… ದೌರ್ಜನ್ಯದ ವಿರುದ್ದ ಹೋರಾಡ್ತಿನಿ ಅಂದವ್ರು ಹಿಂಗ ಹೆಣ ಆಗಿ ಬಿದ್ದೀರಿ, ಮುಂದ್ಯಾಂಗೋ ನಮ್ಮ ಕಷ್ಟ ಎಂದು ಇಬ್ಬರು ಗೋಳಾಡುತ್ತಲೇ ಇದ್ದರು…
ಇತ್ತ… ಧಣಿ ಸಾಹೇಬನ ಜೊತೆ ಸೇರಿ ಮತ್ತೇನೋ ಸಂಚು ರೂಪಿಸಲು… ಅತ್ತಿಂದಿತ್ತ… ಇತ್ತಿಂದತ್ತ… ನಡೆದಾಡತೊಡಗಿದರು…
ತಪಗಲೂರು ಮತ್ತೆ ರಕ್ತಮಯವಾಗಿದ್ದ ಸುದ್ದಿ ಡಿಸಿ ಸಾಹೇಬರ ಕಿವಿಗೆ ಮತ್ತು ದೊಡ್ಡ ಪೊಲೀಸ್ ಸಾಹೇಬರ ಕಿವಿಗೆ ಬಿದ್ದಿತ್ತು.
ಸ್ವಲ್ಪ ಸಮಯದ ನಂತರ…
ಬುಂವ್… ಬುಂವ್… ಎಂದು ಸದ್ದು ಮಾಡುತ್ತಾ… ಹತ್ತಾರು ವಾಹನಗಳು ತಪಗಲೂರಿಗೆ ಧಾವಿಸಿ ಬಂದವು…
ಜೀಪಿನಿಂದ ಇಳಿದ ಡಿಸಿ ಸಾಹೇಬರು… ರಕ್ತದ ಮಡುವಲ್ಲಿ ಬಿದ್ದಿದ್ದ ರಾಜಣ್ಣ… ಮಲ್ಯಾ… ದೇವ್ಯಾ… ಮೃತ ದೇಹಗಳನ್ನು ನೋಡಿ ಮಮ್ಮಲ …
“ ರೀ!!! ಇನ್ಸ್ಫೆಕ್ಟರ್… ಇವರಿಗೆ ರಕ್ಷಣೆ ಕೊಡಿ ಅಂತಾ ಹೇಳಿದ್ರೆ, ಲಂಚದ ಆಸೆಗೆ ಬಿದ್ದು ಮತ್ತೆ ಆ ಮೃಗದ ಜೊತೆ ನಿಂತಿದ್ದಿರಲ್ರಿ?” ಎಂದು ಧಣಿಯತ್ತ ಕೈ ತೋರಿಸಿ ಪೊಲೀಸ್ ಸಾಹೇಬನಿಗೆ ಅವಾಜ್ ಹಾಕಿದರು…
“ ರೀ… ಇನ್ಸ್ಪೆಕ್ಟರ್… ಏನ್ರೀ… ಇದು… ಥೂ… ನಾವೆಲ್ಲ ತಲೆ ತಗ್ಸೋ… ಹಂಗ ಮಾಡಿದ್ರಲ್ರೀ… ಎಂದು ದೊಡ್ಡ ಸಾಹೇಬರು… ದಫೇದಾರನಿಗೆ ಮತ್ತು ಸಾಹೇಬನಿಗೆ ಹಿಗ್ಗಾ ಮುಗ್ಗಾ ಜಾಡಿಸಿದರು…
“ ಎಸ್‌ಪಿ ಯವರೇ… ಈ ಇನ್ಸ್ಪೆಕ್ಟರ್, ದಫೇದಾರ, ಈ ಎಲ್ಲಾ ಪೊಲೀಸರು ಮತ್ತು ಆ ಧಣಿ, ದಳಪತಿ, ಗೌಡ, ಶಾನುಭೋಗ… ಇವರ ಮೇಲೆ ಸ್ವಯಂ ದೂರು ದಾಖಲಿಸ್ರೀ… ತಡ ಆಗಬಾರ್ದು… ಈಗಲೇ ಮಾಡ್ಬೇಕು ಈ ಕೆಲಸ… ಎಂದರು ಡಿಸಿ ಸಾಹೇಬರು…
ದೊಡ್ಡ ಸಾಹೇಬರ ಜೊತೆಗೆ ಬಂದಿದ್ದ.. ಪೊಲೀಸರು, ಇವರನ್ನೆಲ್ಲ ಬಂಧಿಸಿ… ಜೀಪಿನೊಳಗೆ ಕೂರಿಸಿಕೊಂಡು ಪೇಟೆಯತ್ತ ಹೊರಟರು…
ನಾಲ್ಕಾರು ಜನ ಕಂಪೌಂಡರ್ ಹಾಗೂ ಒಬ್ರು ಡಾಕ್ಟರ್ ಇಲ್ಲಿಗೆ ಬಂದು ಇವರಿಗೆ ಚಿಕಿತ್ಸೆ ಕೊಡಬೇಕು. ಈ ಮೂರು ಜನರ ಶವಸಂಸ್ಕಾರಕ್ಕೆ ಏನ್ ವ್ಯವಸ್ಥೆ ಬೇಕೊ ಅದೆಲ್ಲ ಮಾಡ್ಕೊಳ್ರೀ… ಎಂದು ಡಿಸಿ ಸಾಹೇಬರು ತಮ್ಮ ಸಿಬ್ಬಂದಿಗೆ ಹೇಳಿದರು.
ಸಾರಿ… ರಾಜಣ್ಣ… ಎಂದು ಡಿಸಿ ಸಾಹೇಬರು ಮಲ್ಯಾ… ರಾಜಣ್ಣ… ದೇವ್ಯಾರ… ಮೃತ!!! ದೇಹಗಳಿಗೆ ಕೈ ಮುಗಿದು ಜೀಪ್ ಹತ್ತಿ ಹೊರಟರು…
(ಮುಂದುವರೆಯುವುದು…………….)
ವಿಡಿಯೋ ನೋಡಿ : ಬಜೆಟ್ ಮಾತುಕತೆ ʻಬಜೆಟ್ʼ ದಾರಿ – ಗುರಿ