ಗುರುರಾಜ ದೇಸಾಯಿ
(ಇಲ್ಲಿಯವರೆಗೆ…. ತಪಗಲೂರಿನಲ್ಲಿ ಚೂರಿ ಪರ್ಸ್ಯಾನ ಕೊಲೆ, ದಲಿತರ ರಟ್ಟೆಯ ಸಿಟ್ಟು ಕೈಗೆ ಬಂದಿತ್ತು. ಈ ಸಾವಿಗೆ ನ್ಯಾಯ ಕೇಳಬೇಕು ಎನ್ನುವಷ್ಟರಲ್ಲಿ ಪತ್ರಕರ್ತ ರಾಜಣ್ಣ ಇವರಲ್ಲಿಗೆ ಬಂದಿದ್ದು ಬಲ ತಂದು ಕೊಡುತ್ತದೆ, ಆ ಬಲವನ್ನು ಪ್ರತಿಭಟನೆ ಸ್ವರೂಪ ಪಡೆದುಕೊಳ್ಳತ್ತದೆ….. ಮುಂದೆ ಓದಿ….. ) ಗಾಯ
ಹೋರಾಟದ ಬಿಸಿ, ತಪಗಲೂರಿನಲ್ಲಿ ಬಿಗಿ ವಾತಾವರಣ ಸೃಷ್ಟಿಸಿತ್ತು!!!, ತಲೆ ತಗ್ಗಿಸಿ, ಕೈಕಟ್ಟಿ ನಿಲ್ಲುವ ಸಂಸ್ಕೃತಿ ಹೊಂದಿದ್ದ ಊರಲ್ಲಿ ಪ್ರತಿರೋಧ ಮೊಳಗಿದ್ದು ಕೆಲವರಲ್ಲಿ ಭಯ ಮತ್ತು ಸಂಚಲನ ಮೂಡಿಸಿತ್ತು. ಇದು ಅನ್ಯಾಯ!!! ಎಂಬುದನ್ನು ಊರ ಜನರ ಮನೆಯ ಗೋಡೆಗಳು ಹೇಳುತ್ತಿದ್ದವು.
ಚೂರಿ ಪರ್ಸ್ಯಾನ ಕೊಲೆ ಪ್ರಕರಣ ತಪಗಲೂರಿನ ಸುತ್ತ ಮುತ್ತ ಹಳ್ಳಿಗಳಿಗೆ ತಲುಪಿತ್ತು. ಹೋರಾಟ ಒಂದು ಬಿಸಿ… ಬಿಸಿ… ಚರ್ಚೆಯ ವಿಷಯವಾಗಿ ಮಾರ್ಪಟ್ಟಿತ್ತು. ನ್ಯಾಯ, ಅನ್ಯಾಯದ ಪ್ರಶ್ನೆಗಳು ಜನರ ತಲೆಯಲ್ಲಿ ಹರಿದಾಡತೊಡಗಿದ್ದವು. ಇತ್ತ ಕೇರಿಯಲ್ಲಿ ಘೋಷಣೆಗಳು ಗಟ್ಟಿಯಾಗಿ ಮೊಳಗೊತ್ತಾ… ಕ್ರಾಂತಿಯ ಜ್ವಾಲೆಯನ್ನು… ಉಗುಳುತ್ತಿತ್ತು.
ಚೂರಿ ಪರ್ಸ್ಯಾನನ್ನು… ಕೊಂದವರಿಗೆ ಶಿಕ್ಷೆ ಯಾಗಲೇಬೇಕು!!! ಸರ್ವಾಧಿಕಾರಿ ಧೋರಣೆ ನಿಲ್ಲಲಿ… ಸಮಾನತೆ ಜಾರಿಯಾಗಲಿ… ನಮ್ಮ ಹಕ್ಕನ್ನು ಕಿತ್ತುಕೊಳ್ಳಬೇಡಿ!!! ಎಂಬ ಘೋಷಣೆಗಳು ಮೊಳಗುತ್ತಿರುವಾಗ…
ರಾಜಣ್ಣಾರ… ಊರ ಜಾತ್ರಿ… ಚಾಲು… ಆಗೈತ್ರಿ!!! ಚೆಲ್ವ್ಯಾ… ಹೋಗಿ ನೋಡಿ ಬಂದಾನ್ರಿ. ಧಣಿ, ಗೌಡ, ಶಾನುಭೋಗ, ದಳಪತಿ ಮತ್ತವರ ಒಂದಿಷ್ಟು ಬಾಲಂಗೋಚಿಗಳು ಮಾತ್ರ… ಜಾತ್ರಿ ಕಾರ್ಯಾದಾಗ… ತೊಡಿಗ್ಯಾರ್ರಿ… ಊರ ಮಂದಿ ಇನ್ನೂ ಜಾತ್ರಿ ಕಡೆ ಹೊಂಟಿಲ್ರೀ…. ಏನು? ಇದು ಅಂತ ತಿಳವಲ್ದಾಗೈತ್ರಿ… ಎಂದ ದೇವ್ಯಾ…
ನಮ್ಮ ಹೋರಾಟಕ್ಕ ಅವರು ಬೆಂಬಲ ಕೊಟ್ಟು ಮನ್ಯಾಗ ಅದರ ಅಂತ ಅರ್ಥ… ಏನು? ನಿನ್ನ ಮಾತು ಎಂದ ರಾಜಣ್ಣ…
ಹೌದು!!! ಹೌದು !!! ಇರಬಹುದು ಎಂದು ಅನುಮಾನದಿಂದಲೇ ತಲೆ ಆಡಿಸಿದ ದೇವ್ಯಾ…
ಅಯ್ಯೋ… ಹಂಗೆಲ್ಲ… ಏನೂ… ಇಲ್ಲ ದೇವಣ್ಣ… ಇನ್ನೊಂದು ಸ್ವಲ್ಪ ಹೊತ್ತು ತಡಿರಿ. ಎಲ್ಲಾ ಮಂದಿ ಹೋಗ್ತಾರ… ಇದು ದೇವರ ಕಾರ್ಯ, ಹಿಂದಿನಿಂದಲೂ ಬಂದಿರೋ ಪರಂಪರೆ… ಇದನ್ನ… ಬಹಿಷ್ಕಾರ ಹಾಕೋ… ಧೈರ್ಯ ಊರ ಮಂದಿಗೆ ಇಲ್ಲ… ಇಲ್ಲಿ… ಬ್ಯಾರೇನೋ!!!! ನಡದೈತಿ. ನಾನೂ… ಅದ್ನಾ… ಯೋಚ್ನಿ ಮಾಡಕತ್ತೀನಿ… ಎಂದ ರಾಜಣ್ಣ. ಗಾಯ
ಇದನ್ನೂ ಓದಿ : ಗಾಯ ಕಥಾ ಸರಣಿ | ಸಂಚಿಕೆ – 18 | ಕೇರಿ ಮಕ್ಕಳ ಅಕ್ಷರ ಕಲಿಕೆಗೆ ಅಡ್ಡಿಪಡಿಸಿದ ಧಣಿ
ಇವರಿಬ್ಬರ ಮಾತು… ಮುಂದುವರೆದಿತ್ತೂ… ಇತ್ತ… ಘೋಷಣೆಗಳು ಮೊಳಗುತ್ತಿದ್ದವು. ಸಣ್ಣ ಸಣ್ಣ ತಂಡವಾಗಿ ತಪಗಲೂರಿನ ಸುತ್ತಮುತ್ತಲ ಜನ ಜಾತ್ರೆಗೆ ಬರತೊಡಗಿದರು… ಬಂದವರು “ಇಲ್ಲಿ ಏನ್… ನಡೆಯುತ್ತಿದೆ ಎಂದು ಇಣುಕಿ ನೋಡುತ್ತಿದ್ದರು” ರುಂಡ… ಮುಂಡ… ಬೇರ್ಪಟ್ಟ ಶವವನ್ನು… ನೋಡಿ…
“ಯಪ್ಪ!!! ಯಾರ… ಮಾಡ್ಯಾರೋ… ಯಪ್ಪ!!!, ಹಿಂಗ… ಕೊಂದಾರಲ್ಲ… ಅಂತೀನಿ” ಎಂದು ತಮ್ಮಲ್ಲೇ ಗುಸುಗುಸು ಮಾತನಾಡುತ್ತಿದ್ದರು.
“ಹೆಣ ಇಟ್ಕೊಂಡು ಊರ ಜಾತ್ರಿ ಹೆಂಗ ಮಾಡ್ತಾರ ಅಂತ????” ಕೆಲವರು ಗೊಣಗುತ್ತಿದ್ದರು..
ಇದೆಲ್ಲವನ್ನು ಗಮನಿಸುತ್ತಿದ್ದ ರಾಜಣ್ಣ, ಮಲ್ಯಾ… ದೇವ್ಯಾ… ಚೆಲ್ವಾ… ಸಣ್ಣ್ಯಾರನ್ನು… ಕಣ್ಸನ್ನೆಯಲ್ಲೇ… ಹತ್ತಿರಕ್ಕೆ ಕರೆದ…
ಏನ್ರಿ ??? ರಾಜಣ್ಣಾರ!? ಎಂದ ಮಲ್ಯಾ.
ನಮ್ಮ ಹೋರಾಟ ಇನ್ನಷ್ಟು ಜೋರಾಗಬೇಕು. ಘೋಷಣೆ ಅಷ್ಟೇ… ಸಾಕಾಗಲ್ಲ… ಹಲಗಿ ಬಾರ್ಸಾಕ… ಚಾಲು ಮಾಡೋಣ… ಹಲಗಿ… ಹೊಡದಾಗ ಬರೋ ಶಬ್ದದಿಂದ ನಮ್ಮ ನೋವು ಏನು? ಅಂತ ಅವರಿಗೆ ತೋರ್ಸಣ… ಎಂದ ರಾಜಣ್ಣ…
ಆತ್ರಿ!!! ಎಂದು ಎಲ್ಲರೂ ಹಲಗೆ ತರಲು ಹೊರಟರು…
ಸ್ವಲ್ಪ ಸಮಯ ಕಳೆದ ನಂತರ ಹಲಗೆಯ ಸದ್ದು ಶುರುವಾಯಿತು… ಐದಾರು ಜನ ಸೇರಿ ಹಲಗೆ ಬಾರಿಸುತ್ತಿದ್ದರು…, ಹಲಗೆಯ ಶಬ್ದ… ಒಂದೇ… ರೀತಿ ಬರುತ್ತಿತ್ತು. ಜಾತ್ರೆಗೆ ಬಂದವರೆಲ್ಲ… ಚೂರಿ ಪರ್ಸ್ಯಾನ… ಹೆಣ ನೋಡುವಲ್ಲಿ ಹಲಗೆಯ ಶಬ್ದ ಮಹತ್ವ ಪಡೆದುಕೊಂಡಿತು…
ಘೋಷಣೆಗಳು… ಹಲಗೆಯ ಸದ್ದು… ಜೋರಾಗುತ್ತಲೇ… ಗುಂಪು ಗುಂಪಾಗಿ ಜನ ಕೇರಿಯ ಸುತ್ತ ಸೇರತೊಡಗಿದರು…
ಅತ್ತ ಡೊಳ್ಳು… ಗಂಟೆಯ… ಸದ್ದು ಕೇಳುತ್ತಲೇ… ಜಾತ್ರೆ ಶುರು… ಆಯ್ತು… ಎಂದು ಅಲ್ಲಿಂದ ಜನ ಹೋಗಲು ಶುರು ಮಾಡಿದರು. ಜಾತ್ರೆಯ ಮೆರವಣಿಗೆ ಆರಂಭವಾಗುತ್ತಿದ್ದಂತೆ… ಹಾರ್ನ್ ಮಾಡಿಕೊಂಡು ನಾಲ್ಕಾರು ವಾಹನಗಳು ಕೇರಿಯತ್ತ ಬಂದು ನಿಂತವು…
“ರಾಜಣ್ಣಾರ ಪೊಲೀಸ್ ಗಾಡಿ ಬಂತ್ರೀ…” ಸಣ್ಯಾ ಆತಂಕದಿಂದ ಹೇಳಿದ.
ಕೈಯಲ್ಲಿ ದೊಡ್ಡ… ದಪ್ಪದಾದ… ಲಾಠಿ, ದೊಡ್ಡದಾದ ಬಂದೂಕಿನ ಸಮೇತ ವಾಹನಗಳಿಂದ ಪೊಲೀಸರು ಒಬ್ಬೊಬ್ಬರಾಗಿ… ಇಳಿಯುತ್ತಿದ್ದರು. ಅವರು ಇಳಿಯುತ್ತಿದ್ದ ವೇಗ ಪ್ರತಿಭಟನೆಗೆ ಕುಳಿತಿದ್ದ ಕೇರಿಯ ಜನರಲ್ಲಿ ಆತಂಕ ಮೂಡಿಸಿತ್ತು…
ಇದನ್ನು ಗಮನಿಸಿದ ರಾಜಣ್ಣ, ನೀವು ಹೆದರ ಬ್ಯಾಡ್ರಿ… ಏನೂ ಆಗಲ್ಲ… ನೋಡೋಣ ಅವರು ಏನ್ ಮಾಡ್ತಾರ… ಎಂದು ಧೈರ್ಯ ನೀಡಿದ…
ಅಷ್ಟರಲ್ಲಾಗಲೇ… ಪೊಲೀಸರು ಪ್ರತಿಭಟಿಸುತ್ತಿದ್ದ ಜನರ ಸುತ್ತಲೂ… ಬಂದು ನಿಲ್ಲುತ್ತಾರೆ. ಟಕ್… ಟಕ್… ಎಂದು ನೆಲಕ್ಕೆ ಲಾಠಿಯನ್ನು ಗುದ್ದಿ ಸದ್ದು ಮಾಡುತ್ತಿರುವುದನ್ನು ನೋಡಿದ ಕೇರಿಯ ಜನ ಗಾಬರಿಯಿಂದ ಒಬ್ಬರ ಮುಖವನ್ನು ಒಬ್ಬರು ನೋಡಲು ಶುರು ಮಾಡಿದರು.
ದಫೇದಾರನೊಬ್ಬ… “ ಯೇ ಎತ್ರೋ… ಈ ಹೆಣಾನ… ಮಣ್ಣ ಮಾಡಂಗಿಲ್ಲ ಇನ್ನೂ??? ಜಾತ್ರಿ ವ್ಯಾಳೆ ಆತು…, ಲಗೂ…. ಲಗೂ… ಮಣ್ಣ ಮಾಡ್ರಿ” ಎಂದು ಲಾಠಿ ಎತ್ತಿ ತೋರಿಸಿ ಅರಚುತ್ತಾನೆ.
ದಪೇದಾರನ ಮಾತು ಕೇಳಿಸಿದರೂ ಕೇಳಿಸದಂತೆ ಸುಮ್ಮನೆ ಕುಳಿತುಕೊಳ್ಳಿತ್ತಾರೆ.
ನಿಮಗೆ ಹೇಳ್ತಾ… ಇರೋದು… ಎತ್ರೀ ಈ ಹೆಣಾನ… ಎಂದು ಒಂದೆಜ್ಜೆ ಮುಂದೆ ಬರುತ್ತಾನೆ ದಫೇದಾರ…
“ಕುಳಿತಿದ್ದವರೆಲ್ಲ ಒಬ್ಬರಿಗೊಬ್ಬರು ಕೈ ಹಿಡಿದ ಒಗ್ಗಟ್ಟನ್ನ ಪ್ರದರ್ಶಿಸುತ್ತಾರೆ”…
ಇದನ್ನೂ ಓದಿ ಗಾಯ ಕಥಾ ಸರಣಿ | ಸಂಚಿಕೆ 19 – ಕೊಲೆಯಾದ ಚೂರಿ ಪರ್ಸ್ಯಾ, ಪುಟಿದೆದ್ದ ಕೇರಿಯ ಜನ
ಹೀಗೆ ಪೊಲೀಸರು ಮಾತನಾಡುತ್ತಿರುವಾಗ… ಈ ಹೆಣ ಯಾವಾಗಿದ್ರು ಮಣ್ಣ… ಸೇರಬೇಕ್ರಿ ಸರ್… ಆದ್ರೂ… ಈ ಹೆಣ ನೋಡಿದ ಮ್ಯಾಲೆ ತಮಗೆ ಏನು ಅನಸ್ತಿಲ್ವಾ? ಎಂದು ರಾಜಣ್ಣ ಪ್ರಶ್ನಿಸಿದ.
ಏನ್ ಅನಸಬೇಕು ಮಿ.ರಾಜಣ್ಣ… ಹೀಗೆ… ಗುಂಪು ಕಟ್ಟಿಕೊಂಡು ಗಲಾಟೆ ಮಾಡ್ತಿರೋದು… ನೀವು… ನಿಮ್ಮಲ್ಲೇ… ಇವನನ್ನು ಯಾರೋ… ಕೊಂದು ಹೀಗೆ ಮಾಡ್ತಾ… ಇರಬಹುದು… ದಪೇದಾರನ ಮಾತು ಪೂರ್ತಿ ಆಗಿರಲಿಲ್ಲ…
“ ಓಹ್!!! ಅದಾಗಲೆ ತಮಗೆ ಧಣಿಯ ನೈವೇದ್ಯ… ಸಿಕ್ಕಂಗೆ ಕಾಣ್ತಾ ಐತೆ… ಅದಕ್ಕೆ… ಇಂತ ಮಾತು ಬರಕತ್ತಾವ ನೋಡ್ರಿ… ಎಂದೆನ್ನುತ್ತಾನೆ ರಾಜಣ್ಣ.
ಹೀಗೆ ಒಂದಿಷ್ಟು ಮಾತಿನ ಚಕಮಕಿ ನಡೆಯುತ್ತಿರುವಾಗ… ಜಾತ್ರೆಯ ಮೆರವಣಿಗೆ ಊರ ಅಗಸಿಯ ಮುಂದೆ ಬಂದು ನಿಲ್ಲುತ್ತದೆ. ಇತ್ತ ಕೇರಿಯತ್ತ… ಪೊಲೀಸ್ ಸಾಹೇಬನ ಆಗಮನವಾಗುತ್ತದೆ… ಸಾಹೇಬ್ರು ಬಂದ್ರು ಅಂತಾ ಎಲ್ಲರೂ ಸೆಲ್ಯೂಟ್ ಹೊಡೆಯುತ್ತಾರೆ…
“ಏನ್ರಿ!!! ಮಿ. ಲಕ್ಷ್ಮಣ್… ಈ ಗದ್ದಲ ಇನ್ನೂ… ಮುಗ್ದಿಲ್ವಾ???” ಎಂದು ಸಾಹೇಬ ದಫೇದಾರನನ್ನು ಪ್ರಶ್ನಿಸಿದ.
ಸಾಹೇಬ… ಪ್ರತಿಭಟನಕಾರರತ್ತ… ಬರುತ್ತಿದ್ದಂತೆಯೇ… ಘೋಷಣೆಗಳ ವೇಗ ಹೆಚ್ಚಾಗುತ್ತದೆ… ರಾಜಣ್ಣನನ್ನು ನೋಡಿದ ತಕ್ಷಣ!!! ಸಾಹೇಬ… ಅಲ್ಲಿಯೇ ನಿಲ್ಲುತ್ತಾನೆ… ಅಲ್ಲಿಂದಲೇ… “ಯಾಕ್ರಪ್ಪಾ… ಇನ್ನೂ ಹೆಣ ಎತ್ತಿಲ್ಲ ನೀವು” ಎಂದು ಕೇಳಿದ… ಇನ್ನೂ ಹೆಣ ಎತ್ತಿಲ್ಲಂದ್ರ… ಲಾಠಿ ರುಚಿ ತೋರಿಸ ಬೇಕಾಗತೈತಿ ನೋಡ್ರಿ…” ಎಂದು ಸಾಹೇಬ ಗದರಿಸಿದ.
ಕುಳಿತಿದ್ದವರೆಲ್ಲ… ಕೈ… ಕೈ… ಹಿಡಿದು ಒಗ್ಗಟ್ಟು ಪ್ರದರ್ಶಿಸಿದರು. ಇದು ಸಾಹೇಬನನ್ನು ಕೆಣಕಿತು. “ ನನ್ನ ತಾಳ್ಮೆ ಪರೀಕ್ಷೆ ಮಾಡಬ್ಯಾಡ್ರಿ…, ಲಾಠಿ… ಬಂದೂಕಿನ… ಏಟಿಗೆ… ಸುಮ್ನೆ… ಬಲಿ ಆಗಬ್ಯಾಡ್ರಿ… ಒಂದ್ ಹೆಣಕ್ಕ ಇಪ್ಪತ್ತ ಮಂದಿ ಸಾಯ್ತಿರಿ… ಹುಷಾರ್!!! ಎಂದು ಸಾಹೇಬ ತನ್ನ ಪ್ಯಾಂಟಿಗೆ ಸಿಕ್ಕಿಸಿಕೊಂಡಿದ್ದ ಬಂದೂಕನ್ನೂ ಹೊರ ತೆಗೆದ.
ಸಾಹೇಬ ಬಂದೂಕು ತೆಗೆಯುತ್ತಿದ್ದಂತೆ, ಕುಳಿತಿದ್ದವರ ಎದೆಯಲ್ಲಿ ನಡುಕ ಶುರುವಾಯಿತು… ರಾಜಣ್ಣ ಅವರಿಗೆ ಅಲ್ಲಿಯೇ ಧೈರ್ಯ ನೀಡುತ್ತಾ… “ಸಾಹೇಬ್ರ… ನಿಮ್ಮದು ಒಂದೇ ಒಂದು… ಪ್ರಶ್ನೆ… ನಮ್ಮದು… ಒಂದೇ ಒಂದು… ಪ್ರಶ್ನೆ… ಹೆಣ ಎತ್ರೀ… ಅಂತ ನೀವು… ಈ ಹೆಣ ಹೆಂಗ ಎತ್ತಬೇಕು? ಇದಕ್ಕ ನ್ಯಾಯ ಕೊಡ್ರೀ… ಅಂತ ನಾವು… ನೋಡ್ರೀ…
ಏನ್!!! ರಾಜಣ್ಣ ನೀವು ಹೇಳ್ತಾ… ಇರೋದು… ಎಂದು ಸಾಹೇಬ ವ್ಯಂಗವಾಡಿದ…
ನಗೋದು ಬ್ಯಾಡ್ರಿ… ಸಾಹೇಬ್ರ… ಈ ಹೆಣ… ನೋಡಿದ್ರ… ಕೊಲೆ ಅನ್ನೋದು ನೋಡಿದವರಿಗೆಲ್ಲಾ… ಗೊತ್ತಾಗತೈತಿ… ನಿಮಗೂ… ಗೊತ್ತೈತಿ… ಕೊಲೆ ಯಾರು ಮಾಡ್ಯಾರ… ಅಂತ…, ಇದಕ್ಕೆ ದಾರಿ ಹ್ಯಾಂಗ… ಅಂತ… ನೀವ… ಹುಡಕಬೇಕ್ರೀ… ಎಂದ ರಾಜಣ್ಣ.
ಮಿ.ರಾಜಣ್ಣ… ಗುಂಪು ಕಟ್ಕೊಂಡು… ಈ ಗುಂಪು ನಿಮ್ಮ ಹಿಂದೆ ಇದೆ ಅಂತ… ಏನೇನೋ… ಮಾತಾಡ್ತಾ… ಇದ್ದಂಗ… ಕಾಣ್ತಾ… ಇದೆ ಎಂದ ಸಾಹೇಬ.
ಹೌದ್ರಿ!!! ಸಾಹೇಬರ… ಅನ್ಯಾಯ ಪ್ರಶ್ನಿಸಬೇಕು… ಅಂತ… ನಾವು ಗುಂಪು ಕಟ್ಟೀವಿ. ಆದ್ರ… ತಾವು… ಆ ಧಣಿ ಕೊಡೊ ಕಾಸಿಗೆ… ಅನ್ಯಾಯದ ಪರ ವಕೀಲಿಕೆ… ಕೆಲಸ ಮಾಡಕತ್ತೀರಿ… ನೋಡ್ರಿ… ಅನ್ಯಾಯ ತಡೀರಿ ಅಂತ ಸರ್ಕಾರ ನಿಮಗ ಪಗಾರ ಕೊಡತೈತಿ… ಆದ್ರ… ನೀವು? ಗಿಂಬ್ಳಕ್ಕ ಆಸೆ ಬಿದ್ದು ಅನ್ಯಾಯಕ್ಕ… ಜೈ!!! ಅನ್ನಕತ್ತೀರಿ… ನೋಡ್ರಿ… ಎಂದ ರಾಜಣ್ಣ.
ರಾಜಣ್ಣನ ಮಾತು ಸಾಹೇಬನ ಕೋಪ ನೆತ್ತಿಗೇರುವಂತೆ ಮಾಡಿತ್ತು “ಹಂಗಾದ್ರ… ನೀವು… ಈ ಹೆಣ ಎತ್ತಂಗಿಲ್ಲ… ಅಂತ ಆತೂ…” ಎಂದ ಸಾಹೇಬ.
“ನಾವುಎತ್ತಂಗಿಲ್ರೀ… ನಮಗ ನ್ಯಾಯ ಬೇಕು” ಎಂದು ಕುಳಿತಿದ್ದವರೆಲ್ಲ… ಒಕ್ಕೊರಲಿಂದ ಹೇಳಿದಾಗ… ಸಾಹೇಬನಿಗೆ ಏನು ಮಾಡುವುದೆಂದು ತೋಚದಂತಾಯಿತು.
ಅಗಸಿಕಟ್ಟೆಯ ಹತ್ತಿರವಿದ್ದ ಜಾತ್ರೆಯ ಮೆರವಣಿಗೆ… ಕೇರಿಯತ್ತ ಧಾವಿಸುತ್ತಿದ್ದಂತೆ…, ಪ್ರತಿಭಟನೆಕಾರರ ಘೋಷಣೆಗಳು ಮತ್ತು ಹಲಗೆಯ ಸದ್ದು ಜೋರಾಯಿತು… ಘೋಷಣೆಗಳ ಸದ್ದು ಜಾತ್ರೆಯ ಸದ್ದಿಗಿಂತ ಜೋರಾಗಿಯೇ ಕೇಳ ತೊಡಗಿದ್ದಂತೆ… ಏನು ಮಾಡುವುದು? ಎಂದು ಪೋಲಿಸರು ಹೊಂಚು ಹಾಕುತ್ತಿದ್ದರು..
(ಮುಂದುವರೆಯುದು…………)
ಈ ವಿಡಿಯೋ ನೋಡಿ : ಖಾಸಗಿ ಎಲೆಕ್ರ್ಟಿಕ್ ಬಸ್‌ಗೆ ಯಾಕೆ ವಿರೋಧ? ವಿಶೇಷ ಚರ್ಚೆ