ಗುರುರಾಜ ದೇಸಾಯಿ
(ಇಲ್ಲಿಯವರೆಗೆ…… ರಾಜೀ ಆದ ನಂತರ, ಹೊಟೇಲ್‌ನಲ್ಲಿ ಕುಳಿತಿದ್ದ ಕೆಂಚ ಮತ್ತು ಬಸ್ಯಾರ ಬಳಿ ವರದಿಗಾರ ರಾಜಣ್ಣ ಬಂದು ಧೈರ್ಯ ತುಂಬಿದ. ನಿಮ್ಮೂರಲ್ಲಿ ನಡೆಯುವ ದೌರ್ಜನ್ಯದ ವಿರುದ್ಧ ಸಂಘ ಮಾಡಬೇಕು ಎಂದು ಅವರಿಗೆ ತಿಳಿ ಹೇಳಿದ. ಕೆಂಚ ಮತ್ತು ಬಸ್ಯಾರನ್ನು ಬೆಂಗಳೂರಿನಲ್ಲಿ ತನಗೆ ಗೊತ್ತಿರುವ ಹೊಟೇಲ್‌ನಲ್ಲಿ ಒಂದಿಷ್ಟು ದಿನ ಕೆಲಸ ಮಾಡಿ ವಾಪಸ್ಸ ಊರಿಗೆ ಬನ್ನಿ ಎಂದು ಕಳುಹಿಸಿಕೊಟ್ಟ. ಮುಂದೆ ಓದಿ ……… ) ಗಾಯ
ಕೆಂಚಪ್ಪಣ್ಣ ಮತ್ತು ಬಸ್ಸಪ್ಪಣ್ಣನಿಗೆ ಏನಾಗಿರಬಹುದು? ಎಂದು ಶ್ರೀಧರ್ ಯೋಚಿಸುತ್ತಲೇ… ಇದ್ದ. ಅಪ್ಪನನ್ನು ಹತ್ತಾರು ಬಾರಿ ಕೇಳಿದ್ದ, ಆದರೆ ಅವನಿಗೆ ಉತ್ತರ ಸಿಕ್ಕಿರಲಿಲ್ಲ. ಒಳಗಿದ್ದ ಸಂಕಟ, ಕಸಿವಿಸಿ ಅವನಿಗೆ ಊಟ ಸೇರದಂತೆ ಮಾಡಿತ್ತು. ತಳವಾರ ನಾಗ್ಯಾನ ಡಂಗೂರದ ಸದ್ದು ಕೇಳಿ ಬೆಚ್ಚಿ ಬಿದ್ದಿದ್ದ! ಏನೋ ಆಗಿದೆ, ಅದಕ್ಕೆ ಊರ ಮಂದಿಯನ್ನು ಸೇರಿಸುತ್ತಿದ್ದಾರೆ ಎಂದು ಮನೆಯಲ್ಲಿ ಮಾತನಾಡಿಕೊಳ್ಳುತ್ತಿರುವುದನ್ನು ಕಂಡು ಶ್ರೀಧರ ಮಮ್ಮಲ ಮರುಗಿದ್ದ.
ಇತ್ತ… ದೇವ್ಯಾ, ಮಲ್ಯಾ, ದೇವವ್ವ ಮತ್ತು ಭರ್ಮವ್ವ ತಪಗಲೂರು ತಲುಪುವಷ್ಟರಲ್ಲಿ ಕತ್ತಲಾಗಿತ್ತು. ಮನೆಯ ಬಾಗಿಲುಗಳೆಲ್ಲ ಮುಚ್ಚಿಕೊಂಡಿದ್ದವು. ಊರಲ್ಲಿ ಮತ್ತಿನ್ನೇನೋ ಮಸಲತ್ತು ನಡೆಯುತ್ತಿದೆ ಎಂಬುದು ಅವರಿಗೆ ಇದರಿಂದ ಖಚಿತವಾಯಿತು. ಗಾಯ
ಧಣಿ, ಮತ್ತೆ ಊರಾಗ ಏನೋ ಮಸಲತ್ತು ನಡಿಸಿದ್ಹಂಗ ಕಾಣುತ್ತ ನೋಡು ದೇವಣ್ಣ ಎಂದ ಮಲ್ಯಾ.
ನಂಗೂ ಹಂಗ ಅನ್ಸಕತ್ತೈತ… ಎಲ್ಲಾರು ಮನಿ ಕದ ಹಾಕ್ಯಾರ, ಎಲ್ಲರೂ ಅಗಸಿಕಟ್ಟಿ ಮುಂದ ಸೇರಿರಬೇಕು ಅನ್ಸುತ್ತ ನಡಿ ನೋಡೋಣ ಎಂದು ಹೆಜ್ಜೆಗೆ ವೇಗ ನೀಡಿದರು.
ಅಗಸಿಕಟ್ಟಿಯ ಸುತ್ತ ಜನರಿರಲಿಲ್ಲ ಎಲ್ಲಿ ಸೇರಿರಬಹುದು ಎಂದು ನಾಲ್ಕಾರು ಹೆಜ್ಜೆ ಮುಂದಕ್ಕೆ ನೋಡಿದರೆ, ಹನುಮಪ್ಪನ ಗುಡಿಯ ಮುಂದೆ ಜನರೆಲ್ಲ ಸೇರಿದ್ದರು.
ಇದನ್ನೂ ಓದಿ: ಗಾಯ ಕಥಾ ಸರಣಿ | ಸಂಚಿಕೆ 10 – ಕ್ರೌರ್ಯ ಮೆರೆದ ಧಣಿಗೆ ಮಾನವೀಯತೆಯ ಪಾಠ
ನಾಲ್ವರು ಗುಡಿಯ ಸಮೀಪ ಬರುತ್ತಿದ್ದಂತೆ, ಬಂದ್ರು ನೋಡ್ರಿ ಧಣಿ, ಊರ ಮರ್ಯಾದಿ ತೆಗೆದ ಮಾನಗೇಡಿಗಳು ಎಂದ ದಳಪತಿ.
ಬರ್ರಿ… ಬರ್ರಿ… ಊರ ಮರ್ಯಾದಿ ತೆಗೆದಿದ್ದು ಅಲ್ಲದ, ಇಲ್ಲಿ ಏನ್ ನಡ್ಯಾಕತ್ತೈತಿ ಅಂತ ನೋಡಾಕ ಬಂದಿರೇನು? ಬಾರೀ ನಾಟಕ ಮಾಡ್ತೀರಿ ನೀವು… ಎಂದು ಧಣಿ ಅಬ್ಬರಿಸಿದ.
ಊರ ಜನರೆಲ್ಲ ಈ ನಾಲ್ಕು ಜನರನ್ನು ದಿಟ್ಟಿಸಿ ನೋಡುತ್ತಲೇ ಇದ್ದರು. ಶ್ರೀಧರನ ಕಣ್ಣುಗಳು ಕೆಂಚ ಮತ್ತು ಬಸ್ಯಾರನ್ನು ಹುಡುಕುತ್ತಿದ್ದವು.
ಊರಿನ ಜನರ ನೋಟವನ್ನು ಸಾವರಿಸಿಕೊಂಡು, ಧಣಿ ನಾವೆಲ್ಲಿ ಮಾನ ತೆಗ್ದೀವ್ರಿ, ಊರ ಮರ್ಯಾದಿ ಉಳ್ಸಾಕ ರಾಜೀ ಆಗಿವಲ್ರೀ… ಎಂದ ಮಲ್ಯಾ,
ಲೇ!!!! ಮಲ್ಯಾ… ಏ!!! ದೇವ್ಯಾ ಆ ರಾಜಣ್ಣನ ಬಲ ಐತಿ ಅಂತ ನೀವು ಏನೇನ್ ಆಟ ಆಡಿದ್ರಿ… ಅಂತ… ನಾ ನೋಡಿಲ್ಲ ಅನ್ಕೊಂಡೀರೇನು? ನಾಲ್ಕು ಮಂದಿ ಮುಂದ ನೀವು ಒಳ್ಳೇರಾಗಿ, ನಮ್ಮನ್ನ ಕೆಟ್ಟವರನ್ನಾಗಿ ಮಾಡೀರಿ, ನಿಮ್ಮ ಮಕ್ಕಳಿಗೆ ಹೊಡದಂಗ!!! ನಿಮಗ ಆವತ್ತ ನಾಲ್ಕು ಬಾರ್ಸಿದ್ರ!!! ನೀವು ಪೊಲೀಸ್ ಠಾಣಿ ದಾರಿ ಎಲ್ಲೈತಿ ಅಂತ ನೋಡ್ತಾನು… ಇರಲಿಲ್ಲ ಎಂದು ಧಣಿ ಜೋರಾಗಿ ಕೂಗಾಡತೊಡಗಿದ.
ಯಾಕ್ರಿ? ಧಣಿ ಕೂಗ್ಯಾಡ್ತೀರಿ?, ಇಂತವರಿಗೆ ಕೂಗ್ಯಾಡಿದ್ರ ಆಗಲ್ರೀ ಇವರಿಗೆ ಬ್ಯಾರೆ ಪಾಠನ ಕಲಿಸಬೇಕ್ರಿ ಎಂದ ಗೌಡಪ್ಪ….
ಧಣಿ!!! ಇವರ ಪುರಾಣ ಕೇಳೋ ಟೈಮ್ ಅಲ್ರಿ ಇದು. ಊರ ಹಿರೇರು ಏನ್ ತೀರ್ಮಾನ ತೊಗೊಂಡೀವಿ ಅನ್ನೋದನ್ನ ಹೇಳಿ ಬಿಡಣ್ರಿ, ಉಣ್ಣೋ ಹೊತ್ತು ಬೇರೆ ಆಯ್ತು ಎಂದು ದಳಪತಿ ಹೊಟ್ಟೆಯ ಮೇಲೆ ಕೈಯಾಡಿಸಿದ.
ಗುಸು ಗುಸು ಮಾತನಾಡುತ್ತಿದ್ದ ಜನರನ್ನು, ತಳವಾರ ನಾಗ್ಯಾ, ಸದ್ದು!!! ಸದ್ದು!!! ಎಂದು ಜೋರಾಗಿ ಕೂಗಿ ಸುಮ್ಮನೆ ಕೂಡುವಂತೆ ಮಾಡಿದ. ಈಗ ಏನ್ ತೀರ್ಮಾನ ತೊಗೊಂಡಾರ ಅನ್ನೋದನ್ನ… ಧಣಿ ಎಲ್ಲರ ಮುಂದ ಹೇಳ್ತಾರ… ಎಲ್ಲರೂ ಸುಮ್ನ ಕುಂತು ಕೇಳಬೇಕು ಎಂದು ಧಣಿಯ ಕಡೆ ನೋಡಿದ.
ಧಣಿ ಎದ್ದು ನಿಂತು, ಎರಡು ಕೈಯನ್ನು ಪ್ಯಾಂಟಿನ ಜೇಬಿನೊಳಗೆ ಇಟ್ಟ ಸುತ್ತಲೂ ಕಣ್ಣು ಹಾಯಿಸಿದ. ನೆರದಿದ್ದ ಜನರೆಲ್ಲ ಧಣಿಯ ನೋಟಕ್ಕೆ ತುಟಿಕ್ ಪಿಟಕ್ಕೆ ಎನ್ನದೆ ಸುಮ್ಮನೆ ಕುಳಿತಿದ್ದರು. ಗಾಯ
ನೋಡ್ರೀ… ಊರ ಹಿರೇರು ಎಲ್ಲರೂ ಸೇರಿ ಒಂದು ತೀರ್ಮಾನ ತೊಗೊಂಡಿವಿ. ಆ ತೀರ್ಮಾನ ಏನು? ಅನ್ನೋದನ್ನ ನಾನು ಹೇಳ್ತಿನಿ. ಅದನ್ನ ಎಲ್ಲರೂ ಒಪ್ಗೊಂಡು ಜಾರಿ ಮಾಡಬೇಕು. ತಿಳಿತಾ… ಎಂದು ಜನರತ್ತ ನೋಡಿದ ಧಣಿ.
ಕೆಲವರು ತಲೆ ತಗ್ಗಿಸಿದರೆ, ಇನ್ನು ಕೆಲವರು ಆಯ್ತು ಎಂದು ತಲೆ ಅಲ್ಲಾಡಿಸಿದರು. ಹಿಂದುಗಡೆ ನಿಂತಿದ್ದ ಇವರ ಬೆಂಬಲಿಗರು “ ಸುತ್ತಲ ಹಳ್ಳಿಗೆ ಪಾಠ ಆಗಬೇಕು ನೋಡ್ರಿ”, ಅಂತ ಶಿಕ್ಷೆ ಕೊಡ್ರಿ… ಎಂದು ಜೋರಾಗಿ ಕೂಗುತ್ತಿದ್ದರು. ಗಾಯ
ಅವರತ್ತ ಕೈ ಬೀಸಿದ ಧಣಿ, ಆಯ್ತು… ಆಯ್ತು… ಎಂದು ಸುಮ್ಮನಾಗಿರುವಂತೆ ಎರಡು ಕೈಯಿಂದ ಸನ್ನೆ ಮಾಡಿದ. ಟೇಬಲ್ ಮೇಲೆ ಇಟ್ಟಿದ ಗ್ಲಾಸ್ ನೀರನ್ನು ಧಣಿ ಗಟಗಟನೆ ಕುಡಿದ. ಏನು ತೀರ್ಮಾನ ಇರಬಹುದು ಎಂದು ಎಲ್ಲರೂ ಧಣಿಯನ್ನು ನೋಡುತ್ತಾ ಇದ್ದರು.
ನೋಡ್ರಿ… ಕೆಂಚ ಮತ್ತು ಬಸ್ಯಾ ನಮ್ಮ ಹೊಲದಾಗ ಕಳ್ಳತನ ಮಾಡಿದ್ದು ನಿಮಗೆಲ್ಲ ಗೊತ್ತೈತಿ, ಪೊಲೀಸ್‌ರಿಗೆ ಹಿಡಿದು ಕೊಡಬೇಕು ಅಂತ ನಾವು ಅನ್ಕೊಂಡು ಅವರನ್ನ ಠಾಣೆ ಹತ್ರಾನು ಕರ್ಕೊಂಡೋದ್ವಿ…, ಆದ್ರ… ಊರ ಮರ್ಯಾದಿ ಪ್ರಶ್ನಿ ಅಂತ ನಾವ ರಾಜೀ ಆಗೀವಿ…, ಡಿಸಿ ಸಾಹೇಬರು ದೂರು ಕೊಟ್ಟ ಬಿಡ್ರಿ ಧಣಿ ಇವರಿಗೆ ಪಾಠ ಕಲಸ್ತೀವಿ ಅಂತ ನನ್ನ ಹತ್ರ ಎಷ್ಟು ಕೇಳಿದ್ರು…. ಆದರ ನಾವು ನಾಲ್ಕು ಜನ ಮಾತಾಡ್ಕೊಂಡು ರಾಜೀ ಮಾಡ್ಕೊಳ್ಳೊದು ಬೇಷ್ ಅಂತ ಅನ್ಕೊಂಡ್ವಿ. ಆದ್ರ ಇಲ್ಲಿ ನಿಂತಾರಲ್ಲ ಈ ನಾಲ್ಕು ಮಂದಿ ಆ ಪತ್ರಕರ್ತ ರಾಜಣ್ಣನ ಮಾತು ಕೇಳಿ ನಮ್ಮ ಮ್ಯಾಲೆ ದೂರು ಕೊಡಾಕ ಹೊಂಟಿದ್ರು… ಎಂದು ಧಣಿ ಹೇಳಿದಾಗ, ಜನ ಬಾಯಿಯ ಮೆಲೆ ಕೈ ಇಟ್ಟುಕೊಂಡು ಈ ನಾಲ್ವರನ್ನು ನೋಡುತ್ತಾ ಇದ್ದರು. ಗಾಯ
ಇದನ್ನೂ ಓದಿ : ಗಾಯ ಕಥಾ ಸರಣಿ| ಸಂಚಿಕೆ – 11 | ಗಾಯಗೊಂಡ ಹೃದಯಕ್ಕೆ ಬಲ ತುಂಬಿದ ರಾಜಣ್ಣ
ಜನರು… ನಾ… ಹೇಳುತ್ತಿರುವುದನ್ನು ಸತ್ಯ ಎಂದು ನಂಬುತ್ತಿದ್ದಾರೆ, ನಮ್ಮ ಕಾರ್ಯ ಯಶಸ್ವಿ ಆಯಿತು ಎಂದು ಧಣಿ, ದಳಪತಿ, ಶಾನುಭೋಗ, ಗೌಡ ಪರಸ್ಪರ ನೋಡಿ ಮುಗುಳ್ನಕ್ಕರು.
ಮುಂದುವರಿದ ಧಣಿ… ನಾವು ದೊಡ್ಡವರು ಆಗ ದೊಡ್ಡತನ ತೋರ್ಸಿವಿ. ಆದ್ರ… ಈ ಮಕ್ಳು ಎಂದು ನಾಲ್ವರತ್ತ ಧಣಿ ಮುಖ ಮಾಡಿ ಹಲ್ಲು ಕಡಿದ. ಧಣಿ ಹೇಳುತ್ತಿರುವುದು ಸುಳ್ಳು ಎಂದು ಹೇಳುವ ಧ್ವನಿ ಅವರಿಗಿಲ್ಲದ ಕಾರಣ ನಾಲ್ವರು ತಲೆ ತಗ್ಗಿಸಿದರು.
ತೀರ್ಮಾನ ಏನೂ ಅನ್ನೋದನ್ನ ಈಗ ಹೇಳ್ತಿನಿ !!! ಈ ನಾಲ್ಕು ಮಂದಿಗೆ ಹಾಗೂ ಅವರ ಕುಟುಂಬದವರಿಗೆ ಊರಲ್ಲಿ ಯಾರು ಕೆಲಸ ಕೊಡಬಾರ್ದು. ಕೇರಿ ಮಂದಿ ಯಾರೂ ಊರಾಗ ಬರಬಾರ್ದು, ಹೊಲ್ದಾಗ ಅವರಿಗೆ ಕೆಲ್ಸಾನು ಕೊಡಬಾರ್ದು. ಚಾದಂಗಡಿ ಹತ್ರಾನು ಅವರು ಸುಳಿಯಂಗಿಲ್ಲ, ಇನ್ನೂ ಚೌರ ಮಾಡ್ಸ್ಕೋಳ್ಳಾಕು… ಇವರು ಬರಬಾರ್ದು. ಊರಿಂದ ಇವರನ್ನ ಬಹಿಷ್ಕಾರ ಹಾಕ್ತೀವಿ. ಮಾತಿಗೆ ತಪ್ಪಿ ನಡದರ ತಪ್ಪು ಕಾಣಕಿ ಕೊಡಬೇಕು ಎಂದು ಧಣಿ ಒಂದೊಂದೆ ತೀರ್ಮಾನವನ್ನು ಹೇಳತೊಡಗಿದ.
ಈ ತೀರ್ಮಾನಗಳು ಆ ನಾಲ್ಕು ಜನರಿಗೆ ಹಾಗೂ ಕೇರಿಯ ಜನರಿಗೆ ಬಾಣದಂತೆ ಚುಚ್ಚತೊಡಗಿದವು. ಮಾಡದ ತಪ್ಪಿಗೆ ಇಂತಹ ಶಿಕ್ಷೆ ಯಾಕೆ? ಅಂದು ಅವರ ಮನಸ್ಸಿನಲ್ಲಿ ಮಾತನಾಡಿಕೊಂಡರು. ಹೇಳುವ ಧೈರ್ಯ ಇಲ್ಲದೆ ತಲೆ ತಗ್ಗಿಸಿ ನಿಂತರು.
ಕೆಲವರು ಧಣಿ ಹೇಳಿದ ತೀರ್ಮಾನವನ್ನು ಬೆಂಬಲಿಸಿ ಚಪ್ಪಾಳೆ ತಟ್ಟಿದರು. ಅಂತಿಮವಾಗಿ ತೀರ್ಮಾನ ಈ ಕ್ಷಣದಿಂದಲೆ ಜಾರಿಗೆ ಬರುತ್ತೆ ಎಂದು ಹೇಳಿದಾಗ, ಕೇರಿಯ ಜನರ ಪಕ್ಕದಲ್ಲಿ ಕುಳಿತಿದ್ದ ಒಂದಿಷ್ಟು ಜನ ಎದ್ದು ನಿಂತು ಮನೆಯ ಹಾದಿ ಹಿಡಿದರು.
“ ತೀರ್ಮಾನ ವಾಪಸ್ ತೊಗೋರಿ ಎಂದು ಕೇರಿಯ ಜನ ಅಂಗಲಾಚಿ ಅಳತೊಡಗಿದರು” ಹೆಣ್ಣು ಮಕ್ಕಳು ಸೆರೆಗೊಡ್ಡಿ ಊರ ಹಿರಿಯರ ಹತ್ತಿರ ಬೇಡಿಕೊಳ್ಳುತ್ತಿದ್ದರು. ದರ್ಪದ ಧಣಿಗೆ ಇವರ ಕಣ್ಣೀರು ಕಾಣಲೇ ಇಲ್ಲ ಖುರ್ಚಿಯಿಂದ ಎದ್ದು, ದಳಪತಿ, ಗೌಡ ಶಾನುಭೋಗರತ್ತ ನೋಡಿ… ಹೋಗೋಣ ನಡೀರಿ…ಎಂದು ಕಣ್ಸನ್ನೆ ಮಾಡಿದ. ನಾಲ್ವರು ಧಣಿಯ ಮನೆ ಕಡೆ ಹೆಜ್ಜೆ ಹಾಕಿದರು. ಗಾಯ
ಇಲ್ಲಿ ಏನು ನಡೆಯುತ್ತಿದೆ? ಎಂದು ಶ್ರೀಧರಿನಿಗೆ ಅರ್ಥ ಆಗುವ ವಯಸ್ಸಾಗಿರಲಿಲ್ಲ… ಕೇರಿಯ ಜನ ಅಳುತ್ತಿರುವುದು ಮಾತ್ರ ಅವನ ಮನಸ್ಸನ್ನು ಹಿಂಡುತ್ತಲೇ… ಇತ್ತು. ಆ ಕಡೆ ನೋಡಬೇಡ ಶ್ರೀಯಾ ಎಂದು ಅವರಪ್ಪ ಅವನ ಕತ್ತನ್ನು ತಿರುಗಿಸುತ್ತಾ ಇದ್ದ… ಆದರೂ ಶ್ರೀಧರನ ಕತ್ತು ಪದೇ… ಪದೇ…. ಇವರನ್ನೇ… ನೋಡುತ್ತಿತ್ತು. ಅವರಪ್ಪ ಅಲ್ಲಿಂದ ಹೊರಡಲು ಸಿದ್ದನಾದ, ಕಣ್ಮರೆಯಾಗುವವರೆಗೂ ಅವರ ಅಳುವಿನ ದೃಶ್ಯ ಇವನ ಕಣ್ಣಲ್ಲಿ ನೀರು ತರಿಸಿತ್ತು.
(ಮುಂದುವರೆಯುವುದು………)
ಈ ವಿಡಿಯೋ ನೋಡಿ : ದೇಶಕ್ಕೆ ಗಾಯವಾದಾಗ ಜನ ಮೌನವಾಗಿದ್ದರೆ, ಅದು ಇಡೀ ದೇಶವನ್ನೇ ಸುಡುತ್ತದೆ – ಪ್ರಕಾಶ್ ರಾಜ್ Janashakthi Media ಗಾಯ