ಗಾಯ ಕಥಾ ಸರಣಿ – ಸಂಚಿಕೆ ; 06 – ಕ್ರೌರ್ಯ ಮೆರೆದಿದ್ದ ಧಣಿ, ಪೊಲೀಸ್‌ ಠಾಣೆಯಲ್ಲಿ ಬೆವತು ಹೋಗಿದ್ದ!

ಗುರುರಾಜ ದೇಸಾಯಿ
“ಗಾಯ” ಕಥಾ ಸರಣಿಯು ಐದು ವಾರಗಳಿಂದ ಆರಂಭಗೊಂಡಿದೆ. ಪ್ರತಿ ಭಾನುವಾರು ಜನಶಕ್ತಿ ಮೀಡಿಯ ವೆಬ್ಸ್‌ಟ್‌ನಲ್ಲಿ  ಪ್ರಸಾರವಾಗಲಿದೆ. ಮನಸನ್ನು ಗಾಯಗೊಳಿಸಿದ ನೈಜ ಘಟನೆಯನ್ನು ಅಕ್ಷರರೂಪಕ್ಕೆ ಇಳಿಸುವ ಪ್ರಯತ್ನ ಮಾಡಲಾಗಿದೆ. ಓದಿ ಪ್ರತಿಕ್ರಿಯೆ ನೀಡಬಹುದು.  ಸಲಹೆ ಸೂಚನೆಗಳಿಗೂ ಸ್ವಾಗತ. 

(ಇಲ್ಲಿಯವರೆಗೆ… ಕೆಂಚ ಬಸ್ಯಾರನ್ನು ಎಳೆದೊಯ್ದ ಪಟಪಟಿ ಪೇಟೆಯನ್ನು ತಲುಪಿತು, ಅಲ್ಲಿ ವರದಿಗಾರ ರಾಜಣ್ಣ ಈ ದೌರ್ಜನ್ಯವನ್ನು ಖಂಡಿಸಿ ಧಣಿಗೆ ಛೀಮಾರಿ ಹಾಕುತ್ತಾನೆ, ಅಷ್ಟೆ ಅಲ್ಲ ಡಿಸಿ ಸಾಹೇಬರಿಗೆ ದೂರು ನೀಡುತ್ತಾನೆ, ಮಾರನೆಯದಿನ ಶಕ್ತಿಪತ್ರಿಕೆಯ ಮುಖಪುಟದಲ್ಲಿ ದೌರ್ಜನ್ಯದ ಸುದ್ದಿ ನೋಡಿ ಧಣಿ ದಿಕ್ಕೆಟ್ಟವನಂತೆ ಆಡುತ್ತಾನೆ….. ಮುಂದೆ ಓದಿ..) 

ಶಕ್ತಿ ಪತ್ರಿಕೆಯಲ್ಲಿನ ಸುದ್ದಿ ನೋಡಿ ಧಣಿಯ ಬಿಪಿ ಹೆಚ್ಚಾಗಿಹೋಯ್ತು. ದಳಪತಿ ಬೆನ್ನು ಸವರಿ ಸಮಾಧಾನವಾಗಿರಲು ಹೇಳಿದ.

“ನೋಡ್ರಿ ಧಣಿ ಜಾಸ್ತಿ ಹೆದರಬ್ಯಾಡ್ರಿ, ನೀವ ಹಿಂಗ ಹೆದರಿದ್ರ, ನಮ್ಮ ಕತಿ ಹೆಂಗ, ಆಗಿದ್ದು ಅಕ್ಕೈತಿ”, ನೋಡೋಣ…. ಸಾಹೇಬ್ರು ಏನ್ ಮಾಡ್ತಾರ ಅಂತ… ಯೋಚ್ಸೋಣ ಎಂದ ದಳಪತಿ.

ಎಳೆ ಬಿಸಲು ಮುಖಕ್ಕೆ ಹೊಡೆಯತೊಡಗಿತು. ಗಾಡಿ, ಜನರ ಸದ್ದು ನಿಧಾನಕ್ಕೆ ಹೆಚ್ಚಾಗುತ್ತಾ ಬಂತು. ಠಾಣೆಯ ಮುಂದೆ ಇದ್ದ ಕೈ ಬೋರಿನಲ್ಲಿ ಧಣಿ, ದಳಪತಿ, ಗೌಡ, ಶಾನುಭೋಗ ಮುಖ ತೊಳೆದು, ಎದುರಿಗಿದ್ದ ತಟ್ಟಿ ಹೋಟೆಲ್ಗೆ ಚಹ ಕುಡಿಯಲು ಹೊರಟರು.

ಹೋಟೆಲ್ನಲ್ಲೂ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯದೇ ಮಾತು, ಕೆಲವರು ಜೋರಾಗಿ ಚರ್ಚೆ ನಡೆಸಿದ್ದರೇ… ಕೆಲವರು ಗುಸು ಗುಸು ಮಾತಾಡುತ್ತಿದ್ದರು.

ಮಂಡಾಳ ಒಗ್ಗರಣಿ ತಿನ್ನುತ್ತಿದ್ದ ವ್ಯಕ್ತಿಯೊಬ್ಬ “ ತಪಗಲೂರಾಗ ಎಂತ ಹಿಂಸೆ ನಡದೈತಿ ಅಂತಿನಿ… ನಾಲ್ಕು ಸೇರ ಸಿಂಗಾ ಕದ್ದಾರ ಅಂತ… ಹೆಂಗ ಹೊಡ್ದಾರ ನೋಡೋ… ಮರಾಯ, ಈ ಕಾಲ್ದಾಗೂ ಹಿಂಗ ದೌರ್ಜನ್ಯ ಮಾಡ್ತಾರ? ಅಂದ್ರ ಆ ಊರ ಧಣಿ ಮತ್ತು ದಳಪತಿ ಎಂತಾ ಬಂಡ್ರ ಇರಬ್ಯಾಡ” ಅಂತ ಮಾತನಾಡುತ್ತಿದ್ದ.

ಪಕ್ಕದಲ್ಲಿ ಚಹ ಕುಡಿಯುತ್ತದ್ದ ವ್ಯಕ್ತಿ, ಅವನ ಸೊಂಟಕ್ಕೆ ಕೈ ತಾಗಿಸಿ, ಅಲ್ಲಿ ನಿಂತು ಚಾ ಕುಡ್ಯಾಕತ್ತಾನಲ… ಆತ್ನ ಆ ಊರ ಧಣಿ. ಯಾವ್ದೋ ಸರ್ಕಾರಿ ನೌಕ್ರಿ ಮಾಡ್ತಾನಂತ…, ನಮಗ್ಯಾಕ ಬೇಕು? ಸುಮ್ನಿರು… ಎಂದು ಸಣ್ಣ ಧ್ವನಿಯಲ್ಲಿ ಮಾತನಾಡಿದ.

ಅಲ್ಲಿನ ಬಿಸಿ ಬಿಸಿಯಾದ ಚರ್ಚೆ ಕೇಳಿ ಅವರ ಹೊಟ್ಟೆಯಲ್ಲಿ ಅವಲಕ್ಕಿ ಕಲಿಸಿದಂತಾಗಿತ್ತು. ಥೋ!!! ಇವ್ನ… ಎಲ್ಲೋದ್ರು ನಮ್ದಾ ಮಾತಾಡ್ತರಲ್ರಿ? ಆ ರಾಜಣ್ಣ ಮಾಡಿದ ಕಿತಾಪತಿ ನಮ್ಮ ಮಾನ… ಮರ್ಯಾದಿ… ಎಲ್ಲ ಹರಾಜ ಹಾಕಂಗ ಆತ ನೋಡು… ಎಂದು ಶಾನಭೋಗ ತಲೆ ತಲೆ ಚಚ್ಚಿಕೊಂಡು, ಧಣ್ಯಾರ, ಅದು ಸಾಹೇಬನ ಗಾಡಿ ಅನ್ಸುತ್ತ, ಬರ್ರಿ… ಹೋಗೋಣು, ಲಗೂ ಲಗೂ ಏನ್ ಮಾಡೋದು? ಅಂತ ತೀರ್ಮಾನ ಮಾಡೋಣ ಎಂದ. ಗಾಯ

ಅವರ ಊಹೆ ನಿಜವಾಗಿತ್ತು. ಅದು ಸಾಹೇಬನದ್ದೆ ಗಾಡಿಯಾಗಿತ್ತು. ಸಾಹೇಬ ರೂಮಿನೊಳಗೆ ಬಿರ ಬಿರನೇ ನಡೆದ, ಆತನ ಹಿಂದೆಯೇ ಈ ನಾಲ್ವರು ಒಳಗೆ ಹೋದರು. ಕುತ್ಕೋರಿ ಎಂದು ಕಣ್ಸನ್ನೆಯಲ್ಲಿ ಸಾಹೇಬ ಹೇಳಿದ.

ಇದನ್ನೂ ಓದಿ : ಗಾಯ | ಕಥಾ ಸರಣಿ – ಸಂಚಿಕೆ 04

ಸಾಹೇಬನ ಎದುರಿಗಿದ್ದ ಖುರ್ಚಿಯ ಮೇಲೆ ಈ ನಾಲ್ಕು ಜನ ಕುಳಿತರು, ಸಾಹೇಬನು ಮೌನವಾಗಿದ್ದ, ಇವರೂ  ಮೌನವಾಗಿದ್ದರು. ಹೀಗೆ ಐದಾರು ನಿಮಿಷ ಕಳೆಯಿತು.

“ ಸಾ… ಸಾ… ಸಾಹೇಬ್ರ ಏನ್ ಮಾಡಿದ್ರಿ?, ಅವರ ಮ್ಯಾಲೆ ಕೇಸ್ ಹಾಕೋದು ಅಂತ ನಿರ್ಧಾರ ತೊಗೊಂಡ್ರೇನು?, ನಾವು ನಿನ್ನೆನಾ ದೂರು ಕೊಟ್ಟೀವಿ, ಲಗು ಲಗು ಎಫ್ಐಆರ್ ಹಾಕಿ ಬಿಡ್ರಲ… ಎಂದು ಧಣಿ ದಡಬಡಿಸಿದ.

ಹೂಂ… ಎಂದು ಸಾಹೇಬ  ದೀರ್ಘವಾದ ಉಸಿರನ್ನು ಎಳೆದುಕೊಂಡು ಬಿಟ್ಟ. ನೋಡ್ರಿ… ಧಣಿ, ಡಿಸಿ ಸಾಹೇಬ್ರಿಗೆ ವಿಷಯ ಗೊತ್ತಾಗೈತಿ, ಅವರು ಇಲ್ಲಿಗೆ ಬರ್ತಿನಿ ಅಂತ ಹೇಳ್ಯಾ……. ʼ ಮಾತು ಇನ್ನೂ ಪೂರ್ಣವಾಗಿರಲಿಲ್ಲ… ಏನ್ ಹೇಳಕತ್ತಿಯೋ ಸಾಹೇಬ ನೀನು? ಎಂತ ಯಡವಟ್ಟು ಆತಲ ಇದು. ಹೊಡ್ಸಕೊಂಡ ಮಕ್ಕಳು ಅರಾಮ ಕುಂತಾರ, ನಾವು ಸಂಕಟ ಪಡಕತ್ತೀವಿ ಎಂದ ಧಣಿ.

ಮಾಡಿದ್ದುಣ್ಣೋ ಮಾರಾಯ ಅಂತ ಗಾದೆಮಾತು ನಿಮಗ ಸರಿಯಾಕ್ಕೈತಿ ನೋಡ್ರಿ… ಎಂದು ಸಾಹೇಬ ಧಣಿಯನ್ನು ಮತ್ತಷ್ಟು ಕೆಣಕಿದ. ನನ್ನ ಕೈಯಾಗ ಏನು ಇಲ್ರಿ, ನೀವು ಹೊಡ್ದು ಕರ್ಕೊಂಡು ಬಂದಿರಲ್ರಿ ಅವರು ಡಿಸಿ ಮುಂದ ಏನ್ ಹೇಳಿಕೆ ಕೊಡ್ತಾರ ಅನ್ನೋದರ ಮ್ಯಾಲೆ ಎಲ್ಲಾ ನಿಂತೈತಿ ನೋಡ್ರಿ. ಡಿಸಿ ಸಾಹೇಬರು ಏನ್ ಹೇಳ್ತಾರ ಅದನ್ನ ನಾವು ಮಾಡಬೇಕಲ್ರಿ, ಎಂದು ಸಾಹೇಬ, ಕಡ್ಡಿ ತುಂಡಾಗುವಂತೆ ಹೇಳಿದ.

ಸಾಹೇಬನ ಮಾತು ಕೇಳಿ ಧಣಿ ಚಳಿಯಲ್ಲೂ ಬೆವರತೊಡಗಿದ. ಗೌಡ, ದಳಪತಿ, ಶಾನುಭೋಗರ ಮುಖವನ್ನು ಮತ್ತೆ ಮತ್ತೆ ನೋಡುತ್ತಾ ಮುಖ ಸಣ್ಣದು ಮಾಡಿಕೊಂಡ.

ಸಾಹೇಬ್ರ, ತಪ್ಪ ಮಾಡಿ ಬಿಟ್ಟಿವ್ರಿ… ಈಗ ಊರ ಮರ್ಯಾದಿ ಪ್ರಶ್ನೆ ಒಂದ ಕಡೆ, ಧಣಿ ನೌಕರಿ ಉಳಿಬೇಕು ಅನ್ನೋದು ಇನ್ನೊಂದ ಕಡೆ. ಒಂದ ಏಟಿನ್ಯಾಗ ಇರಡನ್ನು ಉಳಿಸಿ ಪುಣ್ಯ ಕಟ್ಕೊರ್ರಿ… ಎಂದ ದಳಪತಿ.

ದಳಪತಿಯ ಮಾತಿಗೆ ನಕ್ಕ ಸಾಹೇಬ, ಕೆಳತುಟಿಯನ್ನು ಮುಂದೆ ಮಾಡಿ ‘ಊ ಹೂಂ ಎಂದ! ಗಾಯ

ಸ್ವಲ್ಪ ಸಮಯದ ಬಳಿಕ ನೋಡ್ರಿ ಧಣಿ, ಒಂದು ಕೆಲ್ಸ ಮಾಡಬಹುದು, “ ಕೆಂಚ ಮತ್ತು ಬಸ್ಯಾ ಹಾಗೂ ಆತನ ಕುಟುಂಬದವರು ನಿಮ್ಮ ವಿರುದ್ಧ ದೂರು ಕೊಡದೇ ಇರಂಗ ನೋಡ್ಕೊಂಡ್ರ, ಮುಂದಿಂದು ನಾನು ಡಿಸಿ ಸಾಹೇಬರ ಹತ್ರ ಮಾತಾಡ್ತಿನಿ ನೋಡ್ರಿ” ಅಂದ ಸಾಹೇಬ

ಸಪ್ಪೆಯಾಗಿ ಕೂಳಿತಿದ್ದ ಧಣಿಯ ಕಿವಿಗೆ ಈ ಮಾತು ಬೀಳುತ್ತಲೇ…. ಮುಖ ಅರಳಿಸಿ ಆತ್ರೀ ಸಾಹೇಬ್ರ, ಈಗಾಗ್ಲೇ  ಅವರಿಬ್ಬರಿಗೆ ಸಾಕಾಗೈತಿ, ಇನ್ನ ಅವರ ಮನಿಯವರು ಯಾರೂ  ದೂರು ಕೊಡ್ದೆ ಇರಂಗ ನೋಡ್ಕೊಳ್ಳೋ ಜವಬ್ದಾರಿ ನಂದು, ಆದ್ರ… ಆದ್ರ… ಎಂದು ಧಣಿ ಮತ್ತೆ ತಡವರಿಸಿದ.

ಮತ್ತೇನ್ರಿ? ಆದ್ರ ಅಂತ ಗೆರಿ ಎಳೀತಿರಿ? ಎಂದು ಸಾಹೇಬ ಗರಂ ಆದ.

ಆ ವರ್ದಿಗಾರ ರಾಜಣ್ಣನ ಬಾಯಿ ಮುಚ್ಸೋದು ಹೆಂಗ? ಅನ್ನೋದು ಯೋಚ್ನಿ ಮಾಡಕತ್ತಿನ್ರಿ ಎಂದ ಧಣಿ.

ಯೇ ಬಿಡ್ರಿ…., ಅವನನ್ನ… ಏನಾದ್ರೂ ಮಾಡಿ ನಾನು ಬಾಯಿ ಮುಚ್ಚಿಸ್ತೀನಿ, ಉಳಿದಿದ್ದು ನೀವು ನೋಡ್ಕೋರಿ ಎಂದ ಸಾಹೇಬ.

ಯೇ!!!! ದಳಪತಿ ಬಾರೋ ಇಲ್ಲಿ “ಊರಿಗೆ ಹೋಗಿ, ಕೆಂಚ ಬಸ್ಯಾನ ಅಪ್ಪ, ಅವ್ವನ ಎಳ್ಕೊಂಡು ಬಾ ಎಂದ ಧಣಿ. ದಳಪತಿ ಹು!!! ಎಂದು ತಲೆ ಅಲ್ಲಾಡಿಸಿ ಖುರ್ಚಿ ಮೇಲಿಂದ ಎದ್ದ.

ಇದನ್ನೂ ಓದಿಗಾಯ | ಕಥಾ ಸರಣಿ – ಸಂಚಿಕೆ 05

ಯಪ್ಪ!!! ಧಣಿ ಮತ್ತ ಇನ್ನೊಂದು ತಪ್ಪ ಮಾಡಕತ್ತೀ???, ನೀನು. ಕರ್ಕೊಂಡು ಬರ್ಬ್ಯಾಡ, ನಾನ ಅವರನ್ನ ಕರಸ್ತೀನಿ, ಡಿಸಿ ಸಾಹೇಬ್ರು ಬರೋದ್ರಾಗ ಅವರ ಬಾಯ್ನ ಗಪ್ ಮಾಡೋ ಜವಾಬ್ದಾರಿ ನಿಂದು ಎಂದ ಸಾಹೇಬ.

ನೀವು ಕರಸ್ತೀರಿ?, ಹೆಂಗ ಕರಸ್ತೀರಿ?, ನೀವು ಕರದ್ರ ಬರ್ತಾರ ಅಂತಿರಿ? ಅವ್ರು… ಎಂದು ಧಣಿ ಆತಂಕದಲ್ಲಿ ಮತ್ತೊಂದು ಪ್ರಶ್ನೆ ಎಸೆದ.

ನೋಡ್ರಿ!!! ಧಣಿ, ಪೊಲೀಸ್ ಹೆಸರ ಕೇಳಿದ್ರ ಜಗತ್ತ ನಡಗತ್ತ, ಇನ್ನು ನಿಮ್ದು ಸಣ್ಣ ಊರು, ಹೆಂಗ ಕರಸತೀನಿ ನೋಡ್ರಿ ನಾನು ಎಂದು ಪೇದೆಯನ್ನು ಕೂಗಿದ, ಎಸ್. ಸರ್ ಎಂದು ಪೇದೆಯೊಬ್ಬ ಬಂದು ಸೆಲ್ಯೂಟ್ ಮಾಡಿದ.

ತಪಗಲೂರಿಗೆ ಹೋಗಿ, ಕೆಂಚ ಮತ್ತು ಬಸ್ಯಾರ ಅಪ್ಪ, ಅವ್ವನ ಸಾಹೇಬ್ರು ಕರ್ದಾರ ಅಂತ ಹೇಳಿ ಕರ್ಕೊಂಡು ಬಾ. ಅಂದಂಗೆ, ಜೀಪು ಊರಾಗ ನಾಲ್ಕಾರು ಸುತ್ತು ಹಾಕ್ಲಿ, ಆಗ ಊರ ಜನ ಹೆದರ್ತಾರ…, ನಾವು ಹೇಳಿದ ದಾರಿಗೆ ಬರ್ತಾರ ಎಂದು ಹೇಳಿ ಕಳಿಸಿದ.

ಸಾಹೇಬ ಬುದ್ದಿ ಅಂದ್ರ ನಿಂದ ನೋಡ ಮರಾಯ, ಎಂತ ಇಕ್ಕಟ್ಟಿಂದ ನನ್ನ ಮತ್ತು ಗೆಳೆಯಾರ್ನ ಪಾರು ಮಾಡಕತ್ತಿಯಪ್ಪ…, ಎಲ್ಲಾ ಮುಗೀಲಿ ನೀ ಏನ್ ಕೇಳ್ತಿ ಅದನ್ನ ನಾನು ಕೊಡ್ತಿನಿ ಎಂದು ಧಣಿ ಸಾಹೇಬನಿಗೆ ಆಸೆ ಹುಟ್ಟಿಸಿದ.

ಆತ ಆತ್ರಿ ಧಣ್ಯಾರ, ನಾ ನಿನ್ನೆಯಿಂದ ನಿಮಗ ಸಮಾಧಾನದಿಂದ ಇರ್ರಿ… ಸಮಾಧಾನದಿಂದ ಇರ್ರಿ… ಅಂತ ಹೇಳಿದ್ದೆ, ನೀವ ಗಡಿಬಿಡಿ ಮಾಡ್ಕೊಂಡು, ಗಾಬ್ರಿನೂ ಮಾಡ್ಕೊಂಡ್ರಿ, ನಾನು ಒಂದು ರೌಂಡ್ ಪ್ಯಾಟಿ ಸುತ್ತಾಡಿ ಬರ್ತಿನಿ. ಅವರ ಬಂದ ತಕ್ಷಣ ಎಲ್ಲ ಒಪ್ಸೋದು ನಿಮ್ಮ ಕೈಯಾಗ ಐತಿ. ನೋಡ್ರಿ… ಎಂದು ಹೇಳಿ ಸಾಹೇಬ ಬಿರಬಿರನೇ ಹೊರಟು ಹೋದ.

ಇತ್ತ ಪೊಲೀಸ್ ಜೀಪು ತಪಗಲೂರು ಪ್ರವೇಶಿಸಿತು. ಸಾಹೇಬ ಹೇಳಿದಂತೆ ಡ್ರೈವರ್, ಜೀಪನ್ನು ನಾಲ್ಕು ನಾಲ್ಕು ಬಾರಿ ಓಣಿಯ ತುಂಬೆಲ್ಲ ಓಡಾಡಿಸಿದ, ಅಗಸಿಕಟ್ಟಿ ಮುಂದೆ ನಿಲ್ಲಿಸಿ ಜೋರಾಗಿ ಹಾರ್ನ್ ಹಾಕಿದ. ಯಾರೂ ಬರಲಿಲ್ಲ. ಹೀಗೆ ನಾಲ್ಕಾರು ಬಾರಿ ಹಾಕಿದ,, ಜೀಪ್ ನೋಡಿ ಹೆದರಿದ್ದ ಜನ ಮನೆಯಿಂದ ಆಚೆ ಬರಲೇ ಇಲ್ಲ.

ಗಾಡಿಯಲ್ಲಿದ್ದ ಕೈ ಮೈಕ್ ತೆಗೆದುಕೊಂಡು ಕೆಂಚ ಮತ್ತು ಬಸ್ಯಾನ ಅಪ್ಪ, ಅವ್ವ ಠಾಣಿಗೆ ಬರ್ಬೇಕು… ಸಾಹೇಬ್ರು ಹೇಳಿ ಕಳ್ಸ್ಯಾರಿ… ನೀವಾ… ಬಂದು ಜೀಪ ಹತ್ತಿದ್ರ ಸರಿ, ಇಲ್ಲಂದ್ರ… ನಾನೇ ಮನಿ ಹೊಕ್ಕು ಎಳ್ಕೋಂಡು ಬರ್ತೀನಿ ಎಂದು ಕೂಗಿದ. ಕೆಂಚ ಮತ್ತು ಬಸ್ಯಾರ ಅಪ್ಪ – ಅವ್ವ ಮನೆಯಿಂದ ಹೊರ ಬಂದರು, ಮನೆ ಸಂದಿ, ಕಿಟಕಿಯಿಂದಲೇ ಏನಾಗುತ್ತಿದೆ ಎಂದು ಊರ ಜನ ನೋಡುತ್ತಿದ್ದರು.

‘ಹೂಂ ಜೀಪ್ ಹತ್ರಿʼ, ಎಂದು ಡ್ರೈವರ್ ಅವರನ್ನು ದಬಾಯಿಸಿದ. ಟವಲ್ ಹಾಗೂ ಸೀರೆಯನ್ನು ಮುಖಕ್ಕೆ ಹಾಕಿಕೊಂಡು ಅವರು ಜೀಪ್ ಹತ್ತಿದರು. ಜೀಪು ಬುರ್….. ಎಂದು ಊರನ್ನು ದಾಟೀತು. ಜೀಪು ಹೋಗುತ್ತಿದ್ದಂತೆ ಊರ ಜನರೆಲ್ಲ ಅಗಸಿಕಟ್ಟಿ ಹತ್ತಿರ ಜಮಾವಣೆ ಗೊಂಡರು. ಗುಸು ಗುಸು ಮಾತನಾಡಿದರು.

ಪೊಲೀಸರು ಬಂದು ಹೋದ ವಿಷಯ ಶ್ರೀಧರನ ಕಿವಿಗೂ ಬಿತ್ತು, ಅಪ್ಪಾ… ಪೊಲೀಸರು ಬಂದು ಕೆಂಚಪ್ಪಣ್ಣ , ಬಸ್ಸಪ್ಪಣ್ಣನ ಅಪ್ಪ- ಅಮ್ಮನ ಕರ್ಕೊಂಡು ಹೋದ್ರಂತಲ್ಲಾ ಯಾಕ?, ಎಂದು ಪ್ರಶ್ನಿಸಿದ.

ಗೊತ್ತಿಲ್ಲ ಮಗನ, ಏನ ಆಗ್ತದ ಅಂತಾನ ಗೊತ್ತಾಗವಲ್ದು, ಸಂಜಿ ಕಡೇನೆ ಗೊತ್ತಾಗತ್ತ, ನೀನು ಇದರ ಬಗ್ಗೆ ಜಾಸ್ತಿ ಹಚ್ಕೊಬ್ಯಾಡ, ಮೂರು ದಿನ ಆಯ್ತು ಸಾಲಿ ಬಿಟ್ಟು, ಇವತ್ತರ ಸಾಲಿಗೆ ನಡಿ ಎಂದ ಅವರಪ್ಪ.

ಹು, ಎಂದು ಶ್ರೀಧರ ತಲೆ ಅಲ್ಲಾಡಿಸಿ, ಗೋಡೆಗೆ ನೇತುಹಾಕಿದ್ದ ಪಾಟೀ ಚೀಲವನ್ನು ತೆಗೆದುಕೊಂಡು ಶಾಲೆಯತ್ತ ನಡೆದ…

(ಮುಂದುವರೆಯುವುದು…….)

ಈ ವಿಡಿಯೋ ನೋಡಿ :  ಗಾಜಾಪಟ್ಟಿಯನ್ನು ಇಸ್ರೇಲ್ ಗೆಲ್ಲುತ್ತಾ? ಪ್ಯಾಲಿಸ್ಟೈನ್ ತಿರುಗಿ ಬಿದ್ದರೆ ಏನಾಗಬಹುದು? Janashakthi Media ಗಾಯ

 

Donate Janashakthi Media

Leave a Reply

Your email address will not be published. Required fields are marked *