ಗುರುರಾಜ ದೇಸಾಯಿ
(ಹಿಂದಿನ ಸಂಚಿಕೆಯಲ್ಲಿ…. ಕೆಂಚ ಮತ್ತು ಬಸ್ಯಾರ ಅಪ್ಪ, ಅವ್ವ ಊರಿಗೆ ಬರುತ್ತಿದ್ದಂತೆ ಶಾಕ್ ಕಾದಿತ್ತು. ಊರಿಗೆ ಊರೇ ಬಾಗಿಲು ಹಾಕಿಕೊಂಡು ಹನುಮಂತ ದೇವರ ಗುಡಿಯ ಮುಂದೆ ಕುಳಿತಿತ್ತು.
ನಿಮಗೆ ಬಹಿಷ್ಕಾರ ಹಾಕಿದ್ದೇವೆ ಎಂದು ಊರಿನ ಹಿರಿಯರು ಘೋಷಿಸಿದಾಗ ಪ್ರಪಂಚವೇ ಇವರ ಮೇಲೆ ಬಿದ್ದಂತೆ ಆಗಿತ್ತು. ಮುಂದೆ ಓದಿ…….) ಗಾಯ
ಊರ ಹಿರಿಯರು ಊರಿಂದ ಬಹಿಷ್ಕಾರ ಹಾಕಿದ ನಂತರ ಕೆಂಚ ಮತ್ತು ಬಸ್ಯಾನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಈಗಾಗಲೇ ಶೋಷಣೆಯ ಪೆಟ್ಟು ತಿಂದಿದ್ದ ಜೀವಗಳು ಬಹಿಷ್ಕಾರದ ಬೇಗುದಿಯಲ್ಲಿ ಬೆಂದು ಹೋಗಿದ್ದವು. ಅತ್ತ ತಳವಾರ ನಾಗ್ಯಾ ಊರ ತುಂಬೆಲ್ಲ ಡಂಗುರ ಬಾರಿಸಿ ಕೆಂಚ ಮತ್ತು ಬಸ್ಯಾರ ಕುಟುಂಬದ ಬಹಿಷ್ಕಾರದ ಸುದ್ದಿಯನ್ನು ಓಣಿ ಓಣಿಗೆ ಸಾರಿಬಂದ.
ಕೇಳ್ರಪ್ಪೋ ಕೇಳ್ರೀ… ಕೇಳ್ರಪ್ಪೋ ಕೇಳ್ರೀ…
ಕೆಂಚ ಮತ್ತು ಬಸ್ಯಾನ ಕುಟುಂಬನಾ ಹಾಗೂ ಕೇರಿ ಮಂದಿನ ಊರಿಂದ ಬಹಿಷ್ಕಾರ ಹಾಕವ್ರಪ್ಪೋ …
ಅವರಿಗೆ ಯಾರು ಕೆಲ್ಸ ಕೊಡಂಗಿಲ್ಲ, ಊಟ ಕೊಡಂಗಿಲ್ಲ, ಚೌರ… ಗಿವ್ರಾ… ಮಾಡಂಗಿಲ್ರಪ್ಪೋ… ಕೇಳ್ರಪ್ಪೋ… ಕೇಳ್ರೀ… ಎಂದು ತಳವಾರ ನಾಗ್ಯಾ ಡಂಗುರ ಸಾರುತ್ತಿದ್ದ… ಗಾಯ
ಇತ್ತ ದೇವ್ಯಾ, ಮಲ್ಯಾ, ಭರ್ಮವ್ವ, ದೇವವ್ವ ಹಾಗೂ ಅವರ ಕುಟುಂಬದವರು ಭಾರವಾದ ಹೆಜ್ಜೆಗಳಿಂದ ಕೇರಿಯತ್ತ ನಡೆದರು. ಕೇರಿಯ ಜನ ಕೆಂಚನ ಕುಟುಂಬದ ಜೊತೆ ನಿಲ್ಲದೆ ಆಳಿಗೊಬ್ಬರು ಮಾತನಾಡುತ್ತಿದ್ದರು. ಇವ್ರು ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸಬೇಕಾ? ನಮ್ಮ ಜೀವ ತಿನ್ನಾಕಂತನ ಈ ಭೂಮಿ ಮ್ಯಾಲೆ ಹುಟ್ಟಿರೇನ್ರೋ? ಎಂದೆಲ್ಲ ಬೈದಾಡತೊಡಗಿದರು…
ಯಪ್ಪ!!! ನಿಗ ಕೈ ಮುಗೀತಿನಿ!!! ಊರ ಹಿರಿಯ ಕೈ ಬಿಟ್ರು, ಕೇರಿ ಮಂದಿಯಾದ್ರು ಕೈ ಹಿಡಿತೀರಿ ಅಂತ ನಾ ಯೋಚ್ನಿ ಮಾಡಕತ್ತೀನಿ, ಹಿಂಗೆಲ್ಲ ಮಾತಾಡಬ್ಯಾಡ್ರೋ ಎಂದ ದೇವ್ಯಾ…
ಯೇ ದೇವಪ್ಪಣ್ಣ!!! ನೀವೇನು ಕುರುಬರ ಮಂದಿ ಅದೀರಿ, ಹೆಂಗಾರು ಬದಕ್ತೀರಿ, ನಮ್ಮ ಕತಿ ಏನ್ ಹೇಳ್ರಿ??? ಈಗ ಎಂದಳು ಒಬ್ಬಾಕೆ.
ಯವ್ವ, ಯಲ್ಲವ್ವ, ಈಗ ಮಾದರ – ಕುರುಬರ ಪ್ರಶ್ನೆ ಇಲ್ಲಾ ಬೇ…, ಅವರು ಈಗ ಊರಿಂದ ಹೊರಗ ಬಿದ್ದಾರ. ಅವರಿಗೆ ನಾವ ಆಶ್ರಯಕೊಡಬೇಕು ಜಾತಿ ಬಿಟ್ಟು ಬದುಕು ಕಟ್ಟಕೊಳ್ಳ ವ್ಯಾಳೆ ಇದು ಎಂದ ಮಲ್ಯಾ.
ಇದನ್ನೂ ಓದಿ : ಗಾಯ ಕಥಾ ಸರಣಿ| ಸಂಚಿಕೆ – 11 | ಗಾಯಗೊಂಡ ಹೃದಯಕ್ಕೆ ಬಲ ತುಂಬಿದ ರಾಜಣ್ಣ
ಸಾಕ ಸುಮ್ಮನೆ ಇರಪ್ಪ, ತಪ್ಪ ಮಾಡಿರೋರು, ಬ್ಯಾರೆ ಊರಾಗ ಅರಾಮ ಅದಾರ, ಇಲ್ಲಿ ನಾವು ನರಕ ಅನುಭವಿಸಕತ್ತೀವಿ, ಯಾ ದ್ಯಾವರ ಕಾಟ ಇತ್ತೇನೋ ನಮಗ ಕಾಡಕತ್ತೈತಿ…
ಇದು ದ್ಯಾವರ ಕಾಟ ಅಲ್ಲಬೆ…, ಊರಲ್ಲಿ ದೊಡ್ಡವರು ಅಂತ ಅನ್ಸಕೊಂಡವರು ನಮ್ಮ ಬಾಯಿ ಮುಚ್ಸಾಕ ಹೆಣದಿರೋ ಹೊಸ ಕತಿ ಇದು. ಹಿಂದೆ ನಮ್ಮಪ್ಪ- ನಮ್ಮವ್ವ ಅನುಭವಿಸಿದ ಕಷ್ಟ ಎಂಥಾದ್ದು ಅಂತ ನಾವು ನೋಡಿವಿ. ಕಣ್ಣಾರೆ ಕಂಡಿವಿ… ಈಗ ಇದು ಬ್ಯಾರೆ ತರದ ದೌರ್ಜನ್ಯ ಎಂದಳು ಭರ್ಮವ್ವ. ಗಾಯ
ಏನೇನಾರ ಹೇಳಿ ನಮ್ಮ ಬಾಯಿ ಮುಚ್ಚಿಸಬ್ಯಾಡ್ರಿ, ಅವರದೊಂದು ನಾಟಕ – ನಿಮ್ಮದೊಂದು ನಾಟಕ. ನಡಕ ನಮ್ಮ ಜೀವನ ಅಡಕತ್ರ್ಯಾಗ ಅಡಕಿ ಸಿಕ್ಕಂಗ ಆಗೈತಿ ಎಂದು ಚೂರಿ ಪರ್ಸ್ಯಾ, ಹಣೆ ಹಣೆ ಜಜ್ಜಿಕೊಂಡ.
ಪರಸಪ್ಪಣ್ಣ ನಾವು ನಾಟಕ ಮಾಡಕತ್ತಿಲ್ಲ, ದೇವಪ್ಪಣ್ಣನ ಕೇಳ್ರಿ ಏನಾಯ್ತು ಅಂತ ಎಲ್ಲಾ ಹೇಳ್ತಾನ… ಎಂದ ಮಲ್ಯಾ.
ದೇವ್ಯಾ… ಪೊಲೀಸ್ ಠಾಣೆಯಲ್ಲಿ ನಡೆದ ಎಲ್ಲಾ ಘಟನೆಗಳನ್ನು ಅವರಿಗೆ ಅರ್ಥವಾಗುವಂತೆ ವಿವರಿಸಿದ. ಪತ್ರಕರ್ತ ರಾಜಣ್ಣ ಹಾಗೂ ಡಿಸಿ ಸಾಹೇಬರು ನೀಡಿದ ಧೈರ್ಯದ ಬಗ್ಗೆಯೂ ವಿವರಿಸಿದ.
“ನಾವು ದುಡಿದು ಕೆಲಸ ಮಾಡ್ತೀವಿ ಅಂದ ಮ್ಯಾಲೆ ಅದರಾಗ ತೊಗೊಳ್ಳೊ ಪಾಲು ನಮ್ದ ಇರ್ತೀತಿ. ನಮ್ಮ ಹುಡ್ಗುರು ಮಾಡಿದ್ದು ಇದನ್ನ”. ಇದನ್ನ ಹಿಂಗಾ… ಬಿಟ್ರೇ… ಮುಂದೆ ಇವರು ನಮ್ಮ ಗುಲಾಮರಾಗಿ ಇರಲ್ಲ ಅಂತ ಆ ಧಣಿ, ಗೌಡಪ್ಪ, ದಳಪತಿ, ಶಾನುಭೋಗನ ಜೊತಿ ಸೇರಿ ಕಳ್ಳತನದ ಆರೋಪ ಕಟ್ಟಿ ನಮಗ ಇಂತ ಶಿಕ್ಷೆ ಕೊಟ್ಟಾನ. ಕಾನೂನು ಪ್ರಕಾರ ಅವರ ಮಾಡಿದ್ದು ತಪ್ಪು ಅಂತ ಡಿಸಿ ಸಾಹೇಬ್ರು ನಮ್ಗ ತಿಳ್ಸಾರ… ಎಂದ ದೇವ್ಯಾ.
ದೇವ್ಯಾ ಠಾಣೆಯಲ್ಲಿ ನಡೆದ ಘಟನೆ ಹೇಳುವಾಗ ಅವರ ಕಣ್ಣಲ್ಲಿ ನೀರು ತುಂಬಿತ್ತು. ಆಕ್ರೋಶವು ಎದ್ದು ಕಾಣುತ್ತಿತ್ತು. ರಾಜಣ್ಣ, ಡಿಸಿ ಸಾಹೇಬರ ಧೈರ್ಯ ಅವರ ಬದುಕಲ್ಲಿ ವಿಶ್ವಾಸ ತುಂಬಿದಂತೆ ಕಾಣುತ್ತಿತ್ತು. ಸ್ವಲ್ಪ ಹೊತ್ತು ಬದುಕಿನ ಮುಂದಿನ ಭವಿಷ್ಯದ ಬಗ್ಗೆ ಚರ್ಚಿಸುತ್ತಾ ಕುಳಿತರು.
ನಾವಂತು ಸಾಲಿ ಕಲಿಲಿಲ್ಲ, ಸಾಲಿ ಕಲ್ತಿದ್ರ ನಮ್ಮ ಜೀವನ ಹಿಂಗ ಅಕ್ಕಿರ್ಲಿಲ್ಲ, ನಮ್ಮ ಮಕ್ಳನಾದ್ರು ಸಾಲಿಗೆ ಕಳಸಬೇಕು ಎಂದಳು ಭರ್ಮವ್ವ.
ಹೌದು!!!, ಹೌದು!!! ಈ ಶೋಷಣೆ ಅನ್ಯಾಯ ಎಲ್ಲಾ ನಮ್ಮ ಕಾಲಕ್ಕ ನಿಂತ ಹೋಗಬೇಕು, ಅದಕ್ಕ ನಾವು ಏನ್ ಮಾಡಬೇಕು, ಸಂಪತ್ತಿನ ಸೊಕ್ಕಿನಲ್ಲಿ ಮೆರಿತಾ ಇರೋರ್ಗೆ ಪಾಠ ಕಲಸ್ಲೇ… ಬೇಕು. ಹೆಂಗ ಪಾಠ ಕಲ್ಸೋದು? ಎಂದು ಅಲ್ಲಿ ಕುಳಿತವರು ತಮಗೆ ಅನಿಸಿದ್ದನ್ನು ಒಬ್ಬೊಬ್ಬರು ಹೇಳತೊಡಗಿದರು.
ಹೌದು!!! ನೀವು ಹೇಳೋದು ಖರೆ ಐತಿ, ಈಗಾದ್ರು ನಾವು ಗಟ್ಟಿ ನಿರ್ಧಾರ ಮಾಡ್ಲಿಲ್ಲ ಅಂದ್ರ, ನಮ್ಮ ಜೀವನ ತುಳ್ಸಿಕೊಳ್ಳದ್ರಾಗ ಹೊಕ್ಕೈತಿ ಎಂದ ಮಲ್ಯಾ…
ಹೌದು ಮಲ್ಲಪ್ಪಣ್ಣ… ಈಗ ನಮ್ಮ ಬದುಕನ್ನ ಬದ್ಲಾವಣೆ ಮಾಡ್ಕೋಳ್ಳೋ ವ್ಯಾಳೆ ಬಂತು ನೋಡು. ನಿತ್ಯ ದುಡಿಯೋ ಜನ ನಾವು, ನಾವೆಲ್ಲ ಒಗ್ಗಟ್ಟಾಗಿ ನಿಂತ್ರ… ಈ ಬಹಿಷ್ಕಾರ, ದೌರ್ಜನ್ಯ ಅನ್ನೋ ಪದನ ಇಲ್ದಂಗ ಮಾಡಬಹುದು ಎಂದ ದೇವ್ಯಾ.
ಇದನ್ನೂ ಓದಿ : ಗಾಯ ಕಥಾ ಸರಣಿ| ಸಂಚಿಕೆ 12 | ಊರಿಂದ ಬಹಿಷ್ಕಾರ | ಧಣಿಯ ಅಟ್ಟಹಾಸ
ಅವಾಗಿಂದ ಹಂಗ ಮಾಡನ, ಹಿಂಗ ಮಾಡಾನ ಅಂತ ಹೇಳಿದ್ನ ಹೇಳ ಕತ್ತೀರಿ, ಆ ಧಣಿಯ ಹಣಿಯೋದು ಅಂದ್ಕೊಂಡಷ್ಟು ಸುಲಭದ ಕೆಲ್ಸ ಅಲ್ಲ. ರಾಜಪ್ಪಣ್ಣ ಅದೆಂತದೊ ಸಂಘ ಕಟ್ಟಬೇಕು ಅಂತ ಹೇಳಿದ್ನಲ್ಲ ಆ ಸಂಘ ಕಟ್ಟದು ಹೆಂಗ ಅಂತ ಯೋಚ್ನಿ ಮಾಡ್ರಿ ಎಂದಳು ಮಲ್ಲವ್ವ.
ಮಲ್ಲವಕ್ಕ, ನೀ ಸುಮ್ನೆ ಕುಂತಿದ್ದ ನೋಡಿ, ಹೆದರಿಬಿಟ್ಟಾಳ ಅನ್ಕೊಂಡಿದ್ದೆ ನಾನು. ಮಲ್ಲವಕ್ಕ ನೆನಪು ಮಾಡಿದಂಗ ನಾವು ರಾಜಪ್ಪಣ್ಣನ ಕರ್ಸಾನ ಎಂದು ಧ್ವನಿಗೂಡಿಸದಿಳು ಭರ್ಮವ್ವ.
ಸಂಘ? ಅಂದೆಂತ ಸಂಘ?, ಹೆಂಗಿರ್ತೈತಿ ಅದು? ಅದು ನಮಗ ಕೆಲ್ಸ ಕೊಡ್ತೈತಿ, ಹೊಲ, ಬಟ್ಟಿ, ಉಪಚಾರ ಎಲ್ಲಾ ಮಾಡ್ತೈತಿ ಎಂದರು… ಕುಳಿತಿದ್ದವರು ಮತ್ತೆ ಪ್ರಶ್ನೆ ಕೇಳಲು ಶುರು ಮಾಡಿದರು.
ಕೆಲಸ, ಊಟ ಉಪಚಾರ ಕೊಡತ್ತೈತೋ ಇಲ್ಲೊ ಗೊತ್ತಿಲ್ಲ, ಸಂಘ ಕಟ್ಟಿದ್ರಾ… ಗತ್ತಿನಿಂದ ಬದುಕಬಹುದು ಅಂತಾ… ರಾಜಪ್ಪಣ್ಣ ಹೇಳ್ತಿದ್ದಾ… ಎಂದ ದೇವ್ಯಾ.
ಮಲ್ಲಪ್ಪಣ್ಣ, ದೇವಪ್ಪಣ್ಣ… ಆ ರಾಜಪ್ಪಣ್ಣಗ ಬರಾಕ ಹೇಳಿ ಕಳ್ಸರಿ ಎಂದರು ಕೇರಿಯ ಜನ.
ಆಯ್ತು… ಆಯ್ತು… ಈ ವಾರದಾಗ ಅವರನ್ನ ಕರ್ಕೊಂಡು ಬರ್ತೀನಿ ಎಂದ ಮಲ್ಯಾ.
ಸ್ವಲ್ಪ ಸಮಯದ ನಂತರ……
ಈಗ ಕತ್ಲಾಗೈತಿ, ಊರ ಮಂದಿ ಕೇರಿ ಮಂದಿಗೆ ಅವಮಾನ ಮಾಡೀವಿ ಅಂತ ಖುಷಿ ಪಡಕತ್ತಾರ. ನಾವು ಅವಮಾನ ಮಾಡ್ಸಿಕೊಂಡೀವಿ ಅಂತ ಉಪವಾಸ ಮಲ್ಕೊಂಡ್ರ… ನಾಳೆ ಅವರಿಗೆ ಮತ್ತ ಬಲ ಬರ್ತ್ತೈತಿ ಎಂದು ಕೇರಿಯ ಹಿರಿಯನೊಬ್ಬ ಹೇಳಿದ..
ಯೇ ಮಾವ, ಈ ನೋವ್ಯಾಗ ಹೆಂಗ ಊಟ ಸೇರ್ತೈತೋ ಹೊಟ್ಟಿಗಿ? ಎಂದ ಮಲ್ಯಾ
ಯೇ ಮಲ್ಯಾ, ಗಪ್ ಕುಂದ್ರಲೇ… ಇಷ್ಟೋತನ… ನೀವು ಹೇಳಿದ್ದ ಕೇಳಿ ಮೈಯಾಗಿನ ರಕ್ತ ಕುದಿಯಕತ್ತೈತಿ… ನಾವು ಹೆದ್ರ ಮಂದಿ ಅಲ್ಲ, ಗಟ್ಟಿ ಮಂದಿ ಅದೀವಿ. ಚಂದನ ಬಾಳೇವು ಬಾಳ್ತೀವಿ… ಅಂತ ಊರ ಮಂದಿಗೆ ತೋರ್ಸಾಕ ಬೇಕು ಎಂದ ಹಿರಿಯ.
ಅದಕ್ಕೆ ಏನ್ ಮಾಡಣ ಅಂತಿಯೋ ಯಜ್ಜಾ? ಅದನಾರ ಹೇಳು ಎಂದಳು ಮಲ್ಲವ್ವ.
ಬಾಡೂಟ ತಿನ್ನನ್ರಿ… ನಮ್ಮ ಮನ್ಯಾಗ ಎರಡ ಕುರಿ ಅದಾವ… ಎಂದ ಆ ಹಿರಿಯ.
ಎಲ್ಲರೂ ಹೋ… ಹೋ… ಹೋ… ಎಂದು ಜೋರಾಗಿ ಕೂಗಿದರು. ಕುರಿ ಕಡಿದು, ಬಾಡೂಟ ಮಾಡಿಕೊಂಡು, ಸಂಭ್ರಮದಿಂದ ಆಕಾಶವನ್ನು ನೋಡುತ್ತಾ, ನೆಮ್ಮದಿಯ ನಾಳೆಯನ್ನು ನಮ್ಮದಾಗಿಸಿಕೊಳ್ಳೋಣ… ಎಂದು ಮಲಗಿದರು..
(ಮುಂದುವರೆಯುವುದು…)
ಈ ವಿಡಿಯೋ ನೋಡಿ :ಹೆಂಚು ಕಾರ್ಮಿಕರ ಬದುಕು ಬೇಯುತ್ತಿದೆ: ಇವರ ಬಾಳಿಗೆ ಬೆಳಕು ಯಾವಾಗ ಗಾಯ