ಗುರುರಾಜ ದೇಸಾಯಿ
(ಇಲ್ಲಿಯವರೆಗೆ….. ಪೊಲೀಸರ ದರ್ಪಕ್ಕೆ ಹೆದರಿದ್ದ ಕೆಂಚ ಮತ್ತು ಬಸ್ಯಾರ ಕುಟುಂಬಕ್ಕೆ ಪತ್ರಕರ್ತ ರಾಜಣ್ಣ ಧೈರ್ಯ ತುಂಬಿದ್ದ, ಇದನ್ನು ನೋಡಿದ ಸಾಹೇಬ್ ರಾಜಣ್ಣನ ಜೊತೆ ಜಗಳ ಮಾಡಿದ್ದ. ಇಬ್ಬರು ಪರಸ್ಪರ ಸವಾಲು ಹಾಕಿದ್ದರು. ರಾಜಣ್ಣ ಹೇಳಿದಂಗೆ ಕೇಳಿದ್ರೆ ಚರ್ಮ ಸುಲಿಯುತ್ತೇನೆ ಎಂದು ಸಾಹೇಬ ಇವರನ್ನು ಹೆದರಿಸಿದ್ದ, ಇದೇ ವೇಳೆ ಡಿಸಿ ಸಾಹೇಬ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಧಣಿ ನಡೆಸಿದ್ದ ದೌರ್ಜನ್ಯವನ್ನು ನೋಡಿ ಸಾಹೇಬನನ್ನು ತರಾಟೆಗೆ ತಗೆದುಕೊಂಡಿದ್ದರು. ಮುಂದೆ ಓದಿ……) ಗಾಯ
ಸಾಹೇಬನ ಆದೇಶದಂತೆ ಪೇದೆ, ಧಣಿ, ದಳಪತಿ, ಗೌಡ, ಶಾನಭೋಗರನ್ನು ಕರೆತಂದು ಡಿಸಿಯ ಮುಂದೆ ನಿಲ್ಲಿಸಿದ. ಸಾಹೇಬ…
ಸರ್!!! ಇವರೆ… ಧಣಿ ಮತ್ತು ದಳಪತಿ ಎಂದು ಅವರತ್ತ ಕೈ ಮಾಡಿ ತೋರಿಸಿದ.
ನಾಲ್ವರನ್ನು ಡಿಸಿ ಸಾಹೇಬರು ದುರುಗುಟ್ಟಿ ನೋಡಿದರು. ಒಮ್ಮೆ ಅವರನ್ನು, ಮತ್ತೊಮ್ಮೆ ಸಾಹೇಬನನ್ನು ನೋಡಿದರು. ಹೀಗೆ ಇವರನ್ನು ಮೂರ್ನಾಲ್ಕು ಬಾರಿ ನೋಡುತ್ತಿದ್ದಂತೆ ಡಿಸಿ ಸಾಹೇಬರಿಗೆ ಸಿಟ್ಟಿರುವುದು ಇವರಿಗೆ ಖಾತ್ರಿಯಾಯ್ತು . ಐವರು ತಲೆ ತಗ್ಗಿಸಿ ನಿಂತರು.
ಏನ್ರಿ? ಮಿ. ಪ್ರತಾಪ್!!! ಏನಿದು? ಹೀಗೆ ಇವರನ್ನು ಹೊಡೆಯಲು ನಿಮಗೆ ಯಾರು ಅಧಿಕಾರ ಕೊಟ್ಟರು? ಎಂದು ಧಣಿಯನ್ನು ದಬಾಯಿಸಿದರು.
ಅದು…. ಸಾರ್… ಸಾರ್… ಅವರು ನಮ್ಮ ಹೊಲ್ದಾಗಿನ ಸಾಮಾನು ಕಳ್ಳತನ ಮಾಡಿದ್ರು, ಅದಕ್ಕೆ… ಊರ ಜನ ಸೇರಿ ಇಂತಹ ಶಿಕ್ಷೆ ಕೊಟ್ಟೀವ್ರಿ…, ಮುಂದ ಯಾರು ಹಿಂಗ ಮಾಡಬಾರ್ದು… ಅಂತಾ… ಎಂದ ಧಣಿ.
ಮುಚ್ಚ್ರಿ… ಬಾಯ್ನಾ…!!! ಎಲ್ಲಾ ಗೊತ್ತಿದೆ ನನಗೆ. ನೀವು ನಾಲ್ಕು… ಜನ ಸೇರಿ ಹೊಡೆದು, ಆ ತಪ್ಪನ್ನ ಊರವರ ಹೆಸರಲ್ಲಿ ಸೇರಿಸ್ತೀರಿ??? ನಾಚ್ಕೆ ಆಗೋದಿಲ್ವ ನಿಮಗೆ????.
ಹಂಗಲ್ರಿ… ಡಿಸಿ ಸಾಹೇಬ್ರ… ಅದು… ಊರಾಗ ಹಿರಿಯರು ಅಂತ ಇರ್ತಾರಲ್ರಿ? ಅವರೆಲ್ಲ… ಸೇರಿ ಹಿಂಗೆಲ್ಲಾ… ನಿರ್ಧಾರ … ಎಂದು ಧಣಿ ಇನ್ನೂ ಮಾತನ್ನು ಪೂರ್ಣ ಗೊಳಿಸಿರಲಿಲ್ಲ…
ಯಾರ್ರಿ ಹಿರಿಯರು? ನನಗೇನು ಹಳ್ಯಾಗ ಏನೈತಿ… ಅದರ ಕಥೆ ಏನು? ಅದೆಲ್ಲಾ ನನಗ ಗೊತ್ತಿಲ್ಲ ಅಂತ ತಿಳ್ಕೊಂಡಿರೇನು? ನೋಡ್ರಿ… ಮಿ. ಪ್ರತಾಪ್, ನೀವು ಧಣಿ ಇರಬಹುದು. ಅದು, ನಿಮ್ಮ ಮನೆತನಕ್ಕೆ ಮಾತ್ರ ಸೀಮಿತ, ಊರಿಗಲ್ಲ. ಬ್ರೀಟಿಷರ ಕಾಲದಲ್ಲಿ ಇದ್ದ ಪದ್ದತಿ ಮುಂದುವರೆಸಿಕೊಂಡು ಹೋಗ್ತಿದ್ದೀರಿ ಅದನ್ನು ಮೊದಲು ಬಿಡಿ ಎಂದು ಡಿಸಿ ಸಾಹೇಬರು ಬೈಗುಳಗಳ ಮಳೆಯನ್ನೇ ಸುರಿಸಿದರು.
ಧಣಿ, ಸಾಹೇಬನ ಹತ್ರ ಮಾತಾಡಿದ್ಹಾಂಗ, ಇವರತ್ರ ಮಾತಾಡಿದ್ರ ನಡ್ಯಾಂಗಿಲ್ರಿ… ಎಂದು ದಳಪತಿ ಧಣಿಯ ಕಿವಿಯಲ್ಲಿ ನಿಧಾನಕ್ಕೆ ಪಿಸುಗುಟ್ಟಿದ. ಇದನ್ನು ಗಮನಿಸಿದ ಡಿಸಿ ಸಾಹೇಬರು…
ಏನ್ರಿ… ಅದು? ದಳಪತಿ ಗುಸು ಗುಸು ಮಾತು, ಏನು ಅಂತ ನೇರವಾಗಿ ನನ್ನ ಹತ್ರ ಹೇಳಿ ಎಂದು ಖಾರವಾಗಿಯೇ ಹೇಳಿದರು.
ಸರ್!!! ಇವರು ತಪ್ಪು ಮಾಡ್ಯಾರ, ಅವರ ಬುದ್ದಿ ಅವರ ಕೈಯಾಗ ಇರ್ಲಿಲ್ಲ. ಏನೋ… ಕೆಟ್ಟ ಕೆಲಸ ನಡೆದ ಬಿಟ್ಟೈತಿ, ಹೆಂಗರ ಮಾಡ್ರಿ… ಎಂದ ಸಾಹೇಬ.
ಹೆಂಗರ… ಅಂದ್ರೆ? ಹೆಂಗೆ? ರಾಜೀ ಮಾಡಸ್ಬೇಕು…, ಇವರ ಮೇಲೆ ಕೇಸ್ ಹಾಕ್ಬಾರ್ದು… ಅಂತನಾ ನೀವು ಹೇಳ್ತಿರೋದು? ಎಂದರು ಡಿಸಿ ಸಾಹೇಬರು.
ಹುನ್ರಿ!!!! ಎಂದು ಐವರು ಒಂದೇ ಸ್ವರದಲ್ಲಿ ಉತ್ತರ ನೀಡಿದರು.
ಡಿಸಿ ಸಾಹೇಬರಿಗೆ ಪಿತ್ತ ನೆತ್ತಿಗೇರಿತು, ದೀರ್ಘ ಉಸಿರು ತೆಗೆದುಕೊಂಡು ಐವರನ್ನು ದಿಟ್ಟಿಸಿ ನೋಡುತ್ತಾ ಇದ್ದರು. ಹೀಗೆ ಐದಾರು ನಿಮಿಷ ಕಳೆಯಿತು. ಮಿ.ಪ್ರತಾಪ್ ಅವರೆ ನೀವು ತಲಾಟಿಯಾಗಿ ಕೆಲಸ ಮಾಡ್ತಿರೋದು ಎಲ್ಲಿ? ಎಂದು ಡಿಸಿ ಸಾಹೇಬರು ಧಣಿಯನ್ನು ಪ್ರಶ್ನಿಸಿದರು. ಗಾಯ
ಸರ್, ನಾನು ಹುಲಿಯೂರು ಅಂತ ಸ್ವರ್ಣಗಿರಿ ಹತ್ರ ಇರೋ ಪಂಚಾಯ್ತಿರಿ ಎಂದ ಧಣಿ.
ಡಿಸಿ ಸಾಹೇಬರು ತನ್ನ ಸಹಾಯಕನ್ನು ಕರೆದು, ಕಿವಿಯಲ್ಲಿ ಏನೋ ಪಿಸುಗುಟ್ಟಿದರು, ನಂತರ ಧಣಿಯನ್ನು ನೋಡುತ್ತಾ….., ನೀವು ಒದ್ಕೊಂಡಿದ್ದೀರಿ, ಮೇಲಾಗಿ ಹೆಸರು ಇರೋ ಮನೆತನದವರು. ಹೀಗಿದ್ದು ಇವರ ಮೇಲೆ ಈ ರೀತಿ ಹೊಡೆಯೋದಕ್ಕೆ ಹೇಗೆ ಮನಸ್ಸು ಬಂತು. ಇಲ್ಲಿ ಕಳ್ಳತನ ಪ್ರಶ್ನೆ ಅಷ್ಟೇ ಇಲ್ಲ ಬೇರೆ ಏನೋ ಹಿನ್ನೆಲೆ ಇದೆ ಎಂದರು ಡಿಸಿ ಸಾಹೇಬರು.
ಇದನ್ನೂ ಓದಿ : ಗಾಯ ಕಥಾ ಸರಣಿ – ಸಂಚಿಕೆ ; 07 – ಬಡತನದ ಅಸ್ತ್ರ ಪ್ರಯೋಗಿಸಿದ ಸಾಹೇಬ!
ಬ್ಯಾ… ಬ್ಯಾ… ಬ್ಯಾರೇ ಏನೂ… ಇಲ್ರಿ… ಸಾಹೇಬ್ರ…. ಹೊಲ್ದಾಗಿನ ಆಳು ತಪ್ಪು ಮಾಡಿದ್ರ, ಯಜಮಾನಗ ಸಿಟ್ಟು ಬರೋದು ಸಹಜ ನೋಡ್ರಿ… ಎಂದ ಗೌಡ.
ಗೌಡನ ಮಾತಿಗೆ ಡಿಸಿ ಸಾಹೇಬರು ಮುಗಳ್ನಕ್ಕರು, ತಪ್ಪು ಮಾಡಿದ್ದಾರಾ? ಅವರಿಬ್ರು, ನಂಗೆ ಪತ್ರಕರ್ತ ರಾಜಣ್ಣ ಎಲ್ಲಾ ವಿಷಯಾನು ಪತ್ರದ ಮೂಲಕ ತಿಳ್ಸಿದ್ದಾನೆ. ಮುಚ್ಚಿಡೋ ಪ್ರಯತ್ನ ಮಾಡಬೇಡಿ ಎಂದರು ಡಿಸಿ ಸಾಹೇಬರು.
ಅಲ್ರ…. ಅದು…. ಎಂದು ದಳಪತಿ, ಶಾನುಭೋಗ ಒಟ್ಟಿಗೆ ಏನೋ ಹೇಳಲು ಮುಂದಾದರು.
ಸಾಕು ನಿಲ್ಸಿ! ಎಂದು ಕೈ ಸನ್ನೆ ಮಾಡಿದರು ಡಿಸಿ ಸಾಹೇಬರು “ ಅವರು ಕದ್ದ ವಸ್ತುವಿನ ಬೆಲೆ ಮಾರ್ಕಟ್ನಲ್ಲಿ 50 ರೂಪಾಯಿ ಕೂಡ ಇಲ್ಲ. ಓಂದುವೇಳೆ 100 ರೂಪಾಯಿ ಅಂತ ಇಟ್ಕೊಳ್ರೀ.., ನಿಜಕ್ಕೂ ಅವರು ಕದ್ದಿದ್ದು ನಿಮಗೆ ತಪ್ಪು ಅಂತ ಅನ್ಸಿದ್ರೆ ಪೊಲೀಸ್ ಸ್ಟೇಷನ್ ಇತ್ತು. ಕೋರ್ಟ್ ಇತ್ತು. ನಿಮ್ಮ ಧಣಿ ಕಡೆಯಿಂದ ದೂರು ಕೊಡಿಸಬಹುದಿತ್ತಲ್ವಾ? ದಳಪತಿಯವರೆ ಎಂದರು.
ಡಿಸಿಯವರ ಮಾತು ಕೇಳಿ ದಳಪತಿಗೆ ನೀರು ಇಳಿಯಲು ಆರಂಭಿಸಿತು. ಮನಸ್ಸಲ್ಲೇ ರಾಜಣ್ಣನ್ನು ಬೈದುಕೊಂಡ. ಡಿಸಿಯವರ ನೋಟಕ್ಕೆ ಪ್ರತಿಕ್ರಿಯೆ ಕೊಡಲಾಗದೆ ತಲೆ ತಗ್ಗಿಸಿ ನಿಂತ.
ಮಿ. ಪ್ರತಾಪ್!!! ಅವರು ಕಳ್ಳತನ ಮಾಡಿದ್ರು, ಅನ್ನೋದು ನೆಪ ಅಷ್ಟೆ. ಆದ್ರೆ, ಅದಕ್ಕೆ ಕಾರಣ ಬೇರೆ ಇದೆ. ಅದೇನಂತಾ…. ನನಗೆ ಚನ್ನಾಗಿ ಗೊತ್ತು. ನಾನೇ… ಹೇಳಲಾ ಎಂದರು ಡಿಸಿ ಸಾಹೇಬರು. ಗಾಯ
ಎರಡು ಮುಂಗೈ ತೋರಿಸಿ, ಯೇ… ಯೇ… ಬ್ಯಾರೆ ಏನೂ… ಇಲ್ರಿ. ಸಾಹೇಬ್ರ… ಎಂದ ಧಣಿ.
ನೀವು ಹೇಳಲ್ಲ ಅಂತ ಗೊತ್ತು, ಅದಕ್ಕೆ ನಾನೇ ಹೇಳ್ತೀನಿ, ನೀವು ಹೊಡೆದ ಇಬ್ಬರಲ್ಲಿ ಒಬ್ಬ ದಲಿತ, ಇನ್ನೊಬ್ಬ ಕುರುಬ. ಅವರು ಕದ್ದಿರೋದಕ್ಕಿಂತ, ನಿಮಗೆ ಹೇಳದೆ ತೊಗೊಂಡ್ರಲ್ಲ!, ಅನ್ನೋ ಕೋಪ, ಅದಕ್ಕೆ ನೀವು ಹೊಡೆದದ್ದು …. ಡಿಸಿ ಮಾತು ಪೂರ್ಣ ಗೊಂಡಿರಲಿಲ್ಲ.
ಹುನ್ರಿ…. ಸಾಹೇಬ್ರ… ನೀವು ಹೇಳೋದು ಖರೇ ಐತಿ ನೋಡ್ರಿ… ಎಂದ ಗೌಡ.
ನಾನಿನ್ನು ಪೂರ್ತಿ ಮಾತು ಮುಗ್ಸಿಲ್ಲ, ನಾನು ಮಾತಾಡುವಾಗ ಮಧ್ಯ ಮಾತಾಡಬೇಡಿ ಎಂದು ಡಿಸಿ ಸಾಹೇಬರು ಬೈದು ತಮ್ಮ ಮಾತುಗಳನ್ನು ಮುಂದುವರೆಸಿದರು.
“ಅವರು ನಿಮ್ಮನ್ನು ಕೇಳದೆ ತೊಗಿಂಡಿದ್ದಕ್ಕೆ ನಿಮ್ಮ ಮನಸ್ಸಲ್ಲಿ ಹತ್ತು ದುರಾಲೋಚನೆ ಹುಟ್ತು. ಇವತ್ತು ಕಳ್ಳತನ… ನಾಳೆ ಇನ್ನು ಬೇರೆ ಏನೋ…. ಎಂಬ ಭಯ ನಿಮ್ಮನ್ನು ಕಾಡಿತ್ತು. ಅವರು ಅಲ್ಲಿ ಮಾಡಿದ್ದು ಕಳ್ಳತನ ಅಲ್ಲ, ಅವರ ಹಕ್ಕನ್ನು ಚಲಾಯಿಸಿದ್ದರು. ಅವರು ದುಡಿದ ಫಲವನ್ನು ಅವರು ತೆಗೆದುಕೊಂಡಿದ್ದರು. ಅವರು ಹಕ್ಕು ಚಲಾಯಿಸ್ತಾರೆ, ನಾಳೆ ತಿರುಗಿ ಬೀಳ್ತಾರೆ. ನಿಮ್ಮ ಧಣಿ ಪಟ್ಟಕ್ಕೆ ಕುತ್ತು ಬರುತ್ತೆ ಅನ್ನೋ ಕಾರಣಕ್ಕೆ ನೀವು ಅವರನ್ನ ಹೊಡೆದದ್ದು, ನಿಮ್ಮ ನಾಲ್ಕು ಜನರ ಅಪ್ಪಣೆ ಇಲ್ಲದೆ, ಊರಲ್ಲಿ ಯಾರು ಒಂದು ಕಾಳು ತೊಗೋಬಾರ್ದು ಅನ್ನೋ ಉದ್ದೇಶಕ್ಕೆ ಇವರನ್ನ ಹೊಡದ್ರಿ. ಊರ ಮಂದಿಯನ್ನೆಲ್ಲ ಹೆದ್ರಿಸಿದ್ರಿ, ಸಾಲದಕ್ಕೆ ಬೈಕ್ನಲ್ಲಿ ಮೆರವಣಿಗೆ ಮಾಡಿಸಿ ಸುತ್ತೂರಿನ ಜನ ಹೆದರುವಂತೆ ಮಾಡಿದ್ರಿ ಎಂದರು ಡಿಸಿ ಸಾಹೇಬರು.
ಡಿಸಿ ಸಾಹೇಬರ ಮಾತು ಕೇಳಿ, ನಾಲ್ವರು ಪತರ್ಗುಟ್ಟಿದ್ದರು, ಮೇಲಿಂದ ಕೆಳಗಿನವರೆಗೆ ನೀರು ಇಳಿಯುತ್ತಲೇ… ಇತ್ತು. ಸಾಹೇಬ ಕಕ್ಕಾಬಿಕ್ಕಿಯಾಗಿ ನಿಂತು ಡಿಸಿ ಸಾಹೇಬರನ್ನೇ…. ನೋಡುತ್ತಿದ್ದ. ಡಿಸಿ ಸಾಹೇಬರು ಮತ್ತೆ ಮುಂದುವರೆಸಿದರು.
ಮಿ. ಪ್ರತಾಪ್!!!! ಜಾತಿ ವ್ಯವಸ್ಥೆಯನ್ನು ಉಳಿಸಬೇಕು, ಉಳಿಗಮಾನ್ಯ ವ್ಯವಸ್ಥೆ ಜೀವಂತ ಇರಬೇಕು ಅಂತ ಇಷ್ಟೆಲ್ಲಾ ಕೆಲಸ ಮಾಡಿದ್ರಿ. ಇದಕ್ಕೆ ಪೊಲೀಸರ ಸಹಾಯ ಬೇರೆ ತೊಗೊಂಡ್ರಿ. ಪತ್ರಕರ್ತ ರಾಜಣ್ಣ ಇದನ್ನ ನೋಡದೇ ಇದ್ದಿದ್ರೆ… , ಆ ಇಬ್ಬರ ಮೇಲೆ ಇಲ್ದೇ ಇರೋ ಕೇಸ್ ಹಾಕ್ಸಿ… ಅವರನ್ನು ಜೈಲಿಗೆ ಕಳ್ಸಬೇಕು ಅಂತ ಯೋಜನೆ ಕೂಡ ಹಾಕಿದ್ರಿ… ಎಂದರು ಡಿಸಿ ಸಾಹೇಬರು.
ಇದನ್ನೂ ಓದಿ : ಗಾಯ ಕಥಾ ಸರಣಿ – ಸಂಚಿಕೆ 8 | ಲಾಠಿಗಿಂತ ಪೆನ್ನಿನ ತಾಕತ್ತು ದೊಡ್ಡದು!
ಧಣಿ, ನಮ್ಮ ಮನಸನ್ಯಾಗ ಇದ್ದಿದ್ನೆಲ್ಲಾ ಹೇಳ್ತಾನಲ್ರಿ? ಈ ಡಿಸಿ ಸಾಹೇಬ, ಇನ್ನೂ ನಮಗೆ ಒಂದು… ಎರಡು… ಮೂರು… ಪಕ್ಕಾ ಎಂದು ದಳಪತಿ ಧಣಿಯ ಕಿವಿಯಲ್ಲಿ ನಿಧಾನಕ್ಕೆ ಮಾತನಾಡಿದ.
ಸುಮ್ನೆ ಇರೋ… ದಳಪತಿ, ಇದರಿಂದ ತಪ್ಸ್ಕೋಳ್ಳೋದು ಹ್ಯಾಂಗ…. ಅಂತ ನಾ ಯೋಚ್ನಿ ಮಾಡಕತ್ತೀನಿ…, ಅಂತದ್ರಾಗ ನೀನು ಬೇರೇ… ಎಂದ ಧಣಿ.
ಧಣಿ ನೀವಾ… ಏನಾರಾ… ಮಾಡ್ರೀ.., ಡಿಸಿ ಸಾಹೇಬರ ಹತ್ರ ತಪ್ಪೊಪ್ಕಂಡು ಬಿಡೋಣ್ರೀ… ಎಂದ ಗೌಡ.
ಹೂನ್ರಿ!!!! ಯಪ್ಪ…, ಬಿಸೋ ದೊಣ್ಣೆಯಿಂದ ತಪ್ಸ್ಕೋಂಡ್ರ ನೂರೋರ್ಷ ಆಯಸ್ಸಂತ… ಅಂದ ಶಾನುಭೋಗ.
ಹು…. ಎಂದು ತಲೆಯಾಡಿಸಿದ ಧಣಿ, ಸರ್ ಅದು, ನಮ್ದು ತಪ್ಪಾಗಿಬಿಟ್ಟೈತ್ರಿ, ನೀವಾ….ಹೆಂಗರ ಮಾಡಿ ನಮ್ಮನ್ನ ಕಾಪಾಡ್ರಿ… ಎಂದು ಎಲ್ಲರೂ ಡಿಸಿ ಸಾಹೇಬರಿಗೆ ಕೈ ಮುಗಿದರು.
ಇವರ ಸ್ಥಿತಿ ನೋಡಿ, ಡಿಸಿ ನಕ್ಕ. ನನ್ನ ಕೈಯಲ್ಲಿ ಏನೂ ಇಲ್ಲ, ಅವರಿಬ್ಬರು ಹಾಗೂ ಅವರ ಕುಟುಂಬದವರು ಏನ್ ಹೇಳ್ತಾರೆ? ಅನ್ನೋದನ್ನ ನೋಡಿ ನಾನು ನಿರ್ಧಾರ ಮಾಡ್ತಿನಿ. ರೀ… ಇನ್ಸಪೆಕ್ಟರ್ ಬಸ್ಯಾ, ಕೆಂಚ ಹಾಗೂ ಅವರ ಕುಟುಂಬದವರನ್ನು ಇಲ್ಲಿಗೆ ಕರ್ಕೊಂಡು ಬನ್ನಿ ಎಂದರು.
ಹುಂ ಎಂದು ತಲೆ ಅಲ್ಲಾಡಿಸಿದ ಸಾಹೇಬ, ಕ್ಯಾಪ್ ಸರಿಮಾಡಿಕೊಂಡು ಅವರನ್ನು ಕರೆಯಲು ಹೊರಟ.
ನಿಂತ್ಕೊಳ್ರೀ… ನೀವು ಬೇಡ… ಪೇದೆಗೆ, ಅವರಿಬ್ಬರನ್ನು ಕರ್ಕೊಂಡು ಬನ್ನಿ ಎಂದು ಕೆಂಚ ಮತ್ತು ಬಸ್ಯಾರ ಕಡೆ ಕೈ ತೋರಿಸಿದರು, ತನ್ನ ಸಹಾಯಕನನ್ನು ಕರೆದು, ಹೊರಗಡೆ ಇರುವ ಆ ನಾಲ್ಕು ಜನರನ್ನು ಇಲ್ಲಿ ಬರಲು ಹೇಳಿ ಎಂದು ಹೇಳಿ ಕಳಿಸಿದರು.
(ಮುಂದುವರೆಯುವುದು……)
ಈ ವಿಡಿಯೋ ನೋಡಿ : ವಿಶ್ವಕಪ್ ಮೇಲೆ ಕಾಲಿಟ್ಟಾಗ ಚುರ್ ಎಂದ ಹೃದಯ ದಲಿತರಿಗೆ ಮೂತ್ರ ಕುಡಿಸಿದಾಗ ಯಾಕೆ ಮಿಡಿಯಲಿಲ್ಲ? ಗಾಯ