ಗುರುರಾಜ ದೇಸಾಯಿ
“ಗಾಯ” ಕಥಾ ಸರಣಿಯು ಆರು ವಾರಗಳಿಂದ ಆರಂಭಗೊಂಡಿದೆ. ಪ್ರತಿ ಭಾನುವಾರು ಜನಶಕ್ತಿ ಮೀಡಿಯ ವೆಬ್ಸ್‌ಟ್‌ನಲ್ಲಿ ಪ್ರಸಾರವಾಗಲಿದೆ. ಮನಸನ್ನು ಗಾಯಗೊಳಿಸಿದ ನೈಜ ಘಟನೆಯನ್ನು ಅಕ್ಷರರೂಪಕ್ಕೆ ಇಳಿಸುವ ಪ್ರಯತ್ನ ಮಾಡಲಾಗಿದೆ. ಓದಿ ಪ್ರತಿಕ್ರಿಯೆ ನೀಡಬಹುದು. ಸಲಹೆ ಸೂಚನೆಗಳಿಗೂ ಸ್ವಾಗತ.
(ಇಲ್ಲಿಯವರೆಗೆ… ಧಣಿ ನಡೆಸಿದ್ದ ಕ್ರೌರ್ಯವನ್ನು ಶಕ್ತಿ ಪತ್ರಿಕೆ ವರದಿ ಮಾಡಿತ್ತು. ಈ ಕೇಸಿನಿಂದ ನೀವು ತಪ್ಪಿಸಿಕೊಳ್ಳೋದು ಕಷ್ಟ ಎಂದ ಸಾಹೇಬ ಹೇಳಿದಾಗ, ಧಣಿ ಠಾಣೆಯಲ್ಲಿ ಪತರ್‌ಗುಟ್ಟಿ ಬೆವತು ಹೋಗಿದ್ದ, ಧಣಿಯನ್ನು ಇದರಿಂದ ರಕ್ಷಣೆ ಮಾಡುವ ನಿಟ್ಟಿನಲ್ಲಿ ಸಾಹೇಬ್ ಮತ್ತೆ ಊರಿಗೆ ಪೊಲೀಸ್ ಜೀಪ್ ಕಳುಹಿಸಿದ್ದ!? ಮುಂದೆ ಓದಿ……)
ಕೆಂಚ ಮತ್ತು ಬಸ್ಯಾರ ಅಪ್ಪ- ಅವ್ವರನ್ನು ಹೊತ್ತ ಪೊಲೀಸ್ ಜೀಪು ಠಾಣೆಯನ್ನು ಪ್ರವೇಶಿಸಿತು. ಡ್ರೈವರ್ ಹಾರ್ನ್ ಹಾಕಿ, ಅವರನ್ನು ಕರೆ ತಂದಿರುವುದಾಗಿ ಸಾಹೇಬರಿಗೆ ಸೂಚನೆ ಕೊಟ್ಟ. ಒಳಗಡೆ ಕುಳಿತಿದ್ದ ಸಾಹೇಬ ಬಿರಬಿರನೆ ಹೊರಗಡೆ ಬಂದು, ಹಾಂ… ಕರ್ಕೊಂಡು ಬಂದಿ, ಎಂದು ಸಾಹೇಬ ಜೀಪಿನ ಬಳಿ ಬಂದ.
ಸಾಹೇಬನನ್ನು ನೋಡಿ ದೇವ್ಯಾ ಮತ್ತು ಮಲ್ಯಾ ಕೈಮುಗಿದರು. ಸಾಹೇಬ್ರ…. ನಮ್ಮ ಮಕ್ಕಳು ಎಲ್ಲಿ ಅದರ್ರಿ? ಊಟ ಗಿಟ ಏನಾದ್ರೂ ಹೊಟ್ಟಿಗೆ ಹಾಕೊಂಡಾರೇನ್ರಿ? ಎಂದರು.
ಹು ದೇವ್ಯಾ, ಅವರಿಗೆ ಊಟನು ಕೊಟ್ಟೀವಿ ಹಂಗ ಡಾಕ್ಟರ್ನ ಕರಿಸಿ ತೋರ್ಸಿ ಗಾಯಕ್ಕ ಮಲಾಮು ಹಚ್ಸೀವಿ ಎಂದ ಸಾಹೇಬ.
ಗಾಯ! ಎಂದು ಮಲ್ಯಾ ಮತ್ತು ದೇವ್ಯಾ ಇಬ್ಬರೂ ಒಂದೇ ಸಾರಿ ಕೂಗಿದರು, ಏನ್ ಗಾಯ ಅಗೈತ್ರಿ ನಮ್ಮ ಮಕ್ಕಳ್ಗಿ? ಏನಾತ್ರಿ ಅಂತದ್ದು, ಸಾಹೇಬ್ರ? ಎಂದು ದೇವ್ಯಾ, ರಟ್ಟೆಗೆ ಬಂದಿದ್ದ ಸಿಟ್ಟನ್ನು ಸಾವರಿಸಿಕೊಂಡು ಕೇಳಿದ.
ಸಾಹೇಬ್ರ… ನಮ್ಮ ಮಕ್ಕಳು ಈಗ ಎಲ್ಲಿ ಅದಾರ್ರಿ? ನಾವು ನೋಡ್ಬೇಕ್ರಿ ಅವರನ್ನ… ಎಂದು ಮಲ್ಯಾ ಗೋಳಾಡತೊಡಗಿದ.
ಉಫ್!!! ಎಂದು ಸಾಹೇಬ ಉಸಿರೆಳೆದುಕೊಂಡು, ಮಕ್ಕಳ್ನ ನೋಡ್ಲೇ ಬೇಕಾ? ಆಯ್ತು… ಬರ್ರಿ… ಎಂದು ಕೆಂಚ ಮತ್ತು ಬಸ್ಯಾರನ್ನು ಕೂಡಿ ಹಾಕಿದ್ದ ಠಾಣೆಯ ಜೈಲಿನೊಳಗೆ ಕರೆದುಕೊಂಡು ಹೋದ.
ಠಾಣೆಯ ಒಳಗೆ ಕೈಕಾಲು ಮುದುಡಿಕೊಂಡು ಗೂಡಿಸಿಕೊಂಡು ಮಲಗಿದ್ದ ದೃಶ್ಯವನ್ನು ಕಂಡ ಬರ್ಮವ್ವ ಮತ್ತು ದೇವವ್ವರ ಗೋಳಾಟ ಮುಗಿಲುಮುಟ್ಟಿತ್ತು.
“ ಯಪ್ಪ!!! ಹುಲಿಹಂಗ ಇದ್ದ… ಮಕ್ಕಳು ಹೆಂಗ ಮುದುರಿಕೊಂಡು ಮಲ್ಗ್ಯಾವಲ್ಲೋ … ಯಪ್ಪ… ಎಂದು ಕೆಳಗಡೆ ಕುಳಿತು ಅಳ ತೊಡಗಿದಳು, ಸಿಟ್ಟು ಕಮ್ಮಿಯಾಗುವವರೆಗೂ ನೆಲವನ್ನು ಗುದ್ದುತ್ತಲೇ… ಇದ್ದಳು
ಯೇ!! ನೋಡ್ರಬೇ… ಇದು ಪೊಲೀಸ್ ಠಾಣೆ ಐತಿ, ಹಿಂಗೆಲ್ಲ ಗಲಾಟಿ ಮಾಡಬಾರದು ಎಂದು ಸಾಹೇಬ ಅವರನ್ನು ದಬಾಯಿಸಿದ.
ಸಾಹೇಬನ ಅವಾಜಿಗೆ ಎಲ್ಲರೂ ಹೆದರಿಕೊಂದು ಮುದುಡಿ ಕುಳಿತುಕೊಂಡರು.
ಇದನ್ನೂ ಓದಿ : ಗಾಯ | ಕಥಾ ಸರಣಿ – ಸಂಚಿಕೆ 05
ನೋಡ್ರಿ… ಸಾಹೇಬ್ರ ಮಕ್ಳು ಹೆಂಗ ಆಗ್ಯಾರ ನೋಡ್ರಿ, ಹೊಡ್ದು, ಬಡ್ದು ಪಟಪಟಿ ಮ್ಯಾಲೆ ದರ ದರ ಅಂತ ಎಳ್ಕೊಂಡು ಬಂದ ಧಣಿ, ದಳಪತಿ, ಗೌಡ, ಶಾನಭೋಗರನ್ನು ಜೈಲಿಗೆ ಕಳ್ಸೊದು ಬಿಟ್ಟು ನಾಲ್ಕು ಸೇರು ಸೆಂಗಾ ತೊಗೊಂಡಿದ್ದ ನಮ್ಮ ಮಕ್ಕಳಿಗೆ ಎಂಥಾ ಸ್ಥಿತಿ ಬಂದೈತಿ ನೋಡ್ರಿ…… ದೇವ್ಯಾ ಇನ್ನೂ ಮಾತು ಮುಗಿಸಿರಲಿಲ್ಲ… ಪಟಾರ್ ಎಂಬ ಸದ್ದು ಕೇಳಿಸಿತು. ಒಳಗಡೆ ಕುಳಿತಿದ್ದ ಧಣಿ ಹೊರಗಡೆ ಬಂದು ದೇವ್ಯಾನ ಕಪಾಳಕ್ಕೆ ಬಾರಿಸಿದ.
ಲೇ ದೇವ್ಯಾ…. ಮಗನಾ ಚರ್ಮ ಸುಲ್ದು ಬಿಡ್ತೀನಿ ನಿಂದು, ನಮ್ಮನ್ನ ಜೈಲಿಗೆ ಕಳಸಬೇಕು ಅಂತ ಸಾಹೇಬನ ಹತ್ರ ಹೇಳ್ತಿಯಾ? ಮಗನ, ಎಂದು ಮತ್ತೆ ನಾಲ್ಕೇಟು ಬಾರಿಸಿದ.
ಧಣಿ ಇಲ್ಲ ಎಂದುಕೊಂಡು ಧೈರ್ಯವಾಗಿ ಮಾತನಾಡಿದ್ದ ಅವರಿಗೆ, ಧಣಿಯನ್ನು ನೋಡಿ ಉಸಿರು ನಿಂತತಾಯಿತು.
ದೇವ್ಯಾನಿಗೆ ಏಟು ಬೀಳುತ್ತಿದ್ದಂತೆ, ಮಲ್ಯಾ, ಬರ್ಮವ್ವ, ದೇವವ್ವ ಕೈ ಕೊಟ್ಟಿಕೊಂಡು ತಲೆ ತಗ್ಗಿಸಿ ನೆಲದ ಮೇಲೆ ಕುಳಿತುಕೊಂಡರು.
ಏನಪಾ… ದೇವಪ್ಪ… ಇಷ್ಟೊಂದು ಧೈರ್ಯ ಬಂತಾ ನಿನಗ? ಎಂದ ಒಳಗಡೆ ಕುಳಿತಿದ್ದ ಗೌಡ, ದಳಪತಿ, ಶಾನುಭೋಗ, ಧಣಿಯ ಮಾತಿಗೆ ದನಿ ಗೂಡಿಸಿದರು.
ಧಣಿ, ಸಾಕು ನಿಲ್ಸಿ. ನಾನು ಇವರನ್ನ ಹೊಡಿಯೋದಕ್ಕೆ ಕರ್ಸಿಕೊಂಡಿಲ್ಲ. ನೀವು ನಿಮ್ಮ ಊರಲ್ಲಿ ನಡ್ಕೊಂಡಗೆ ಠಾಣೆಯಲ್ಲಿ ನಡ್ಕೊಬೇಡಿ, ನನ್ನ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ ಎಂದು ಸಾಹೇಬ ದಬಾಯಿಸಿದ. ಸ್ವಲ್ಪ ಹೊತ್ತು ಮೌನ ಆವರಿಸಿತ್ತು.
ನೋಡು ದೇವ್ಯಾ ಮತ್ತ ಮಲ್ಯಾ, ತಪ್ಪು ಆಗೈತಿ, ಇದ್ರಾಗ ಪಾಲು ಯಾರ್ದು ದೊಡ್ಡದೈತಿ, ಯಾರ್ದು ಸಣ್ಣದು ಐತಿ ಅಂತ ಕುಂತು ಮಾತಾಡೋ ವ್ಯಾಳೆ ಅಲ್ಲ ಇದು. ಈ ವಿಚಾರ ನಮ್ಮ ಡಿಸಿ ಸಾಹೇಬ್ರಿಗೂ ಗೊತ್ತಾಗೈತಿ. ಇನ್ನೊಂದು ತಾಸ್ನಾಗ ಅವರು ಇಲ್ಲಿಗೆ ಬರ್ತಾರ, ಏನು ಮಾಡಬೇಕು ಅಂತ ಹೇಳ್ತಾರ. ಸಾಹೇಬನ ಮಾತು ಪೂರ್ತಿ ಮುಗಿದಿರಲಿಲ್ಲ.
ಅವರೇನ್ರಿ ಮಾತಾಡ್ತಾರ? ಏನ್ ಹೇಳ್ತಾರಿ ಅವರು? ಎಷ್ಟೇ ಆಗ್ಲಿ ಅವರು ನೌಕರದಾರರು, ನೀವು ನೌಕರದಾರರು, ನಮ್ಮೂರು ಧಣಿನೂ ನೌಕರದಾರ, ಹಂಗಾಗಿ ಧಣಿ ಮತ್ತು ಆತನ ಗೆಳೆಯರ್ನಾ ಉಳಸಾಕ ಏನ್ ಮಾಡಬೇಕೋ ಅದನ್ನ ಮಾಡ್ತಿರಿ, ಎಂದು ಮಲ್ಯಾ ಮಾರುದ್ದ ಉತ್ತರ ಕೊಟ್ಟ.
ಸಾಹೇಬನ ಪಿತ್ತ ನೆತ್ತಿಗೇರಿತ್ತು, ಧಣಿ ಮತ್ತು ಆತನ ಗೆಳೆಯರ್ನಾ ಉಳ್ಸೊ ವಿಚಾರ ಎಡವಟ್ಟು ಆದೀತು ಎಂದು ತಾಳ್ಮೆಯಿಂದಲೇ, ನೋಡ್ರಪ್ಪಾ ಕೋರ್ಟು… ಕೇಸು… ಅಂತ ಹೋದ್ರಾ ಹಣ ಖರ್ಚಾಗ್ತದ, ನಿಮ್ಮತ್ರ ಹಣನೂ ಇಲ್ಲ. ಜಮೀನು ಮಾರಿ ಹಣ ಜೋಡ್ಸಿದ್ರಾಯ್ತು ಅಂದ್ರ ಜಮೀನೂ ಇಲ್ಲ, ನಿಮ್ಮೂರಾಗ ಸಾಲ ಕೊಡೋ ದೊಡ್ಡ ಮನಶ್ಯಾರು ಇಲ್ಲೇ ಅದರ, ಅಂತದ್ರಾಗ ಕೇಸ್ಗೀಸ್ ಅಂತ ಯೋಚಿಸ್ಬ್ಯಾಡ್ರಪಾ, “ಬಡ್ವನ ಕೋಪ ದವಡಿಗೆ ಮೂಲ” ಅನ್ನೊದು ಗೊತ್ತೈತ್ತಿಲ್ಲ ನಿಮಗ… ಎಂದು ಸಾಹೇಬ ಅವರನ್ನು ಮನವೊಲಿಸೊ ಪ್ರಯತ್ನ ಮಾಡತೊಡಗಿದ.
ಹೌದ್ರಿ ಯಪ್ಪ!!! ಬಡ್ವನ ಕೋಪ ದವಡಿಗೆ ಮೂಲ, ಹಿಂಗಂತ… ನಮ್ಮ ದವಡಿಗೆ ನೀವು ಕೈ ಹಾಕಕತ್ತೀರಿ ಎಂದಳು ದೇವವ್ವ.
ನೋಡಬೇ… ಬಾಯಿಗೆ ಬಂದಂಗ ಮಾತಾಡಬ್ಯಾಡ್ರಿ. ನೀವು ನನ್ನ ತಾಬಾದಾಗ ಅದೀರಿ ಅನ್ನೋದು ನೆನಪಿರಲಿ ಎಂದು ಲಾಠಿಯನ್ನು ಎತ್ತಿ ದಬಾಯಿಸಿದ ಸಾಹೇಬ.
ಸಾಹೇಬ್ರ… ಇವರ್ದು ಕುಮ್ಮಕ್ಕಿತ್ತು ಅಂತ ನಾನು ದೂರು ಕೊಡ್ತೀನ್ರಿ, ಕೆಂಚ ಮತ್ತು ಬಸ್ಯಾನ ಜೊತೆ ಇವರನ್ನು ಒದ್ದು ಒಳಗ ಹಾಕ್ರಿ ಎಂದ ದಳಪತಿ.
ದಳಪತಿ ಹೀಗೆ ಹೇಳುತ್ತಿದ್ದಂತೆ ಅವರ ಮುಖದಲ್ಲಿ ಸಿಟ್ಟು, ಭಯ ಆವರಿಸಿ ಬೆವರತೊಡಗಿದರು. ತಮ್ಮ ಅಸಹಾಯಕತೆಗೆ ಮುಖ ಮುಖ ನೋಡಿಕೊಂಡು ತಲೆ ತಗ್ಗಿಸಿ ಸುಮ್ಮನಾದರು.
ಯೇ!! ದಳಪತಿ ನೀ ಸುಮ್ನ ಕುಂದ್ರೋ… ಮರಾಯ… ಎಂದ ಸಾಹೇಬ, ನೀವು ನಾಲ್ಕು ಜನ ಒಳಗ್ಹೋಗ್ರಿ ನಾನು ಇವರ ಹತ್ರ ಮಾತಾಡ್ತಿನಿ ಎಂದು ಅವರನ್ನು ಒಳಗಡೆ ಕಳುಹಿಸಿದ.
ಇದನ್ನೂ ಓದಿ : ಗಾಯ ಕಥಾ ಸರಣಿ – ಸಂಚಿಕೆ ; 06 – ಕ್ರೌರ್ಯ ಮೆರೆದಿದ್ದ ಧಣಿ, ಪೊಲೀಸ್ ಠಾಣೆಯಲ್ಲಿ ಬೆವತು ಹೋಗಿದ್ದ!
ಸ್ವಲ್ಪ ಸಮಯದ ನಂತರ…. ಇದನ್ನ ಬೆಳ್ಸೋದು ಬ್ಯಾಡ…, ರಾಜಿ ಆಗ್ಬಿಡ್ರಿ, ಊರ ಪ್ರಶ್ನೆ… ಊರ ದೊಡ್ಡವರ ಪ್ರಶ್ನೆ… ನಿಮ್ಮ ಬದುಕಿನ ಪ್ರಶ್ನೆ…. ಎಂದು ಸಾಹೇಬ ಮತ್ತೂ ಅವರನ್ನು ಮನವೊಲಿಸತೊಡಗಿದ.
ಬದುಕಿನ ಪ್ರಶ್ನೆ!!!!, ಬದುಕಿನ ಪ್ರಶ್ನೆ… ಊರು ಹಾಗೂ ದೊಡ್ಡವರ ಪ್ರಶ್ನೆ ಹೌದ್ರಿ… ಸಾಹೇಬ್ರ… ಮಾಯಲಾರದಂತ ಗಾಯ ಮಾಡಿದ ದೊಡ್ಡವರಿಗೆ ಮರ್ಯಾದಿ ಪ್ರಶ್ನೆ. ಗಾಯ ಮಾಡ್ಕೊಂಡಿರೋ ಈ ಬಡಪಾಯಿಗಳಿಗೆ ಬದುಕಿನ ಪ್ರಶ್ನೆ ಎಂದ ಒಮ್ಮೆ, ಮಕ್ಕಳನ್ನು, ಮತ್ತೊಮ್ಮೆ ಸಾಹೇಬನನ್ನು ನೋಡಿ ಅಳತೊಡಗಿದ.
ನಾ ಹೇಳೋದು ಹೇಳೀನಿ, ಏನ್ ಮಾಡ್ತೀರಿ ನೋಡ್ರಿ, ಕುಡುಗೋಲು ನಿಮ್ಮ ಕೈಯಾಗ ಐತಿ, ಕುಂಬಳಕಾಯಿನು ನಿಮ್ಮ ಕೈಯಾಗ ಐತಿ, ಕಡೀತಿರೋ ಹಂಗ ಬಿಡ್ತಿರೋ ನಿಮಗ ಬಿಟ್ಟಿದ್ದು. ನಿಮ್ಮ ನಿರ್ಧಾರ ನಿಮ್ಮ ಕೈಯಾಗ ಐತಿ ಎಂದ ಸಾಹೇಬ ಪಿಸಿ ಯೊಬ್ಬನನ್ನು ಕರೆದು “ ಕೆಂಚ ಮತ್ತು ಬಸ್ಯಾನ ಹೊರಗ ಕೂಡ್ಸು, ಇವರನ್ನು ಹೊರಗ ಕೂಡ್ಸು, ಡಿಸಿ ಸಾಹೇಬ್ರ ಬರೋ ಹೊತ್ತಾಯ್ತು, ಆಫೀಸ್ ಒಂಚೂರು ಸ್ವಚ್ಚ ಮಾಡ್ರಿ” ಎಂದು ಟೀಯಂಗಡಿಯತ್ತ ಹೊರಟ.
ಬರ್ಲಿ…. ಬರ್ಲಿ…. ಡಿಸಿ ಸಾಹೇಬ ಬರ್ಲಿ… , ಏನ್ ಆಗಬೇಕೋ ಅದು ಅಕ್ಕೈತಿ ಎಂದು ಮಲ್ಯಾ… ದೇವ್ಯಾ… ಬರ್ಮವ್ವ… ದೇವವ್ವ… ಮಾತನಾಡಿಕೊಳ್ಳುತ್ತಾ ಹೊರ ಬಂದರು.
ಠಾಣೆಯ ಕಂಪೌಂಡಿಗೆ ಒರಗಿಗೊಂಡು ಮೆಲುದನಿಯಲ್ಲಿ ಮಾತನಾಡತೊಡಗಿದರು.
ಎಂಥಾ… ಚಂದ ಕಥಿ ಹೆಣ್ದಾರ ನೋಡು ಮಲ್ಲಪ್ಪಣ್ಣ, ನಮ್ಮ ಬಡತನ ತೋರ್ಸಿ ನಮ್ಮನ್ನ ಹೆದ್ರಸಕತ್ತಾರ ಎಂದಳು ಬರ್ಮವ್ವ.
ಹುನ್ಬೇ, “ನಾವು ಅದ್ರಗ ಅಶಕ್ತರದೀವಿ ಅಂತನ ಹಿಂಗ ಆಟ ಆಡಕತ್ತಾರ? ನಮಗ ತಿಳುವಳಿಕಿ ಅನ್ನೋ ಶಕ್ತಿ, ಧೈರ್ಯ ಬರೋವರೆಗೂ ಇಂತವರು ಮುಕ್ತನಾ ಇರ್ತಾರ, ನಮ್ಮನ್ನ ಮುಗಸ್ತಾನ ಇರ್ತಾರ” ಎಂದ ಮಲ್ಲಪ್ಪ.
“ನಮ್ಮ ಜೀವನ ಈಗ ಅನ್ನ ಬೇಯ್ಸಕ ನೀರ ಸಿಗದಂಗ ಆಗೈತಿ, ಈ ನಾಲ್ಕು ಮಂದಿನಿ ಎದರ ಹಾಕೊಂಡು ಊರಾಗ ಬದ್ಕೋಕು ಆಗಲ್ಲ, ಮುಂದಿಂದು ನೆನಸ್ಕೊಂಡ್ರ ಎದಿಗೆ ಬೆಂಕಿ ಇಟ್ಟಂಗ ಆಗಕತ್ತೈತಿ” ಎಂದಳು ದೇವವ್ವ.
ಉಫ್!!! ಎನ್ನುತ್ತಾ ತಲೆಯ ಮೇಲೆ ಕೈಹೊತ್ತು ಕುಳಿತುಕೊಂಡರು.
(ಮುಂದುವರೆಯುವುದು……)
ಈ ವಿಡಿಯೋ ನೋಡಿ : ಹಾಲಿ ಕ್ರಿಮಿನಲ್ ಕಾಯ್ದೆಗಳಿಗೆ ಪರ್ಯಾಯಕೇಂದ್ರ ಸರ್ಕಾರದ ಉತ್ಸುಕತೆಗೆ ಕಾರಣವೇನು?