ಬರಹಗಾರನ ಧ್ವನಿ ಕ್ಷೀಣವಾದರೆ ಕಗ್ಗತ್ತಲ ಕಾಲದ ಜೊತೆ ನಾವು ಸಾಗಬೇಕಾಗುತ್ತದೆ – ಜಿ.ಎನ್. ಮೋಹನ್

ಕೊಪ್ಪಳ : ಬರಹಗಾರನ ಜೀವಾಳವೆಂದರೆ ಆತ್ಮಸಾಕ್ಷಿ ಮತ್ತು ಪ್ರಜ್ಞಾವಂತಿಕೆಯಿಂದ ಬರೆಯುವುದು. ಪ್ರಭುತ್ವ ಹೆದರುವದು ಬರಗಾರರಿಗೆ ಮಾತ್ರ. ಸಮಾಜದ ಓರೆ-ಕೋರೆಗಳನ್ನು ಪ್ರಶ್ನಿಸುವುದೇ ಬರಹಗಾರನ ಬಹುದೊಡ್ಡ ಜವಾಬ್ದಾರಿ. ಪತ್ರಿಕೋದ್ಯಮವು ಮನುಷ್ಯಪರ ಸಿದ್ಧಾಂತವನ್ನು ಹೊಂದಿರಬೇಕಾಗುತ್ತದೆ. ಬರಹಗಾರ ಗೌಣವಾದರೆ, ಪ್ರಶ್ನಿಸದಿದ್ದರೆ ಕಗ್ಗತ್ತಲ ಕಾಲದೊಂದಿಗೆ ಸಾಗಬೇಕಾಗುತ್ತದೆ ಎಂದು ಹಿರಿಯ ಪತ್ರಕರ್ತ ಜಿ.ಎನ್. ಮೋಹನ್ ಅಭಿಪ್ರಾಯಪಟ್ಟರು.

ಅವರು ಕೊಪ್ಪಳದಲ್ಲಿ ನಡೆದ ‘ಕವಿ ಗವಿಸಿದ್ಧ ಬಳ್ಳಾರಿ ಸಾಹಿತ್ಯೋತ್ಸವ’ ಉದ್ಘಾಟಿಸಿ ಮಾತನಾಡುತ್ತಾ, ಗವಿಸಿದ್ಧ ಬಳ್ಳಾರಿಯಂತಹ ಕಾವ್ಯ ಶಕ್ತಿ ಈ ನಾಡಿನ ಬಹುದೊಡ್ಡ ಕೊಡುಗೆ. ಅವರ ಸಾಹಿತ್ಯಕ-ಸಾಂಸ್ಕೃತಿಕ ಪರಂಪರೆಯ ವಾರಸುದಾರರಾಗಿ ಅವರ ಮಕ್ಕಳು ನಡೆಸುತ್ತಿರುವ ‘ಸಾಹಿತ್ಯೋತ್ಸವ’ ಮಾದರಿ ಕಾರ್ಯಕ್ರಮವಾಗಿದೆ ಎಂದರು.

ಗವಿಸಿದ್ಧ ಬಳ್ಳಾರಿಯವರ ಬದುಕು-ಬರಹ ಕುರಿತಾಗಿ ಡಾ. ಗವಿಸಿದ್ಧಪ್ಪ ಪಾಟೀಲ ಸವಿಸ್ತಾರವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಎ.ಎಂ. ಮದರಿ ಗವಿಸಿದ್ಧ ಬಳ್ಳಾರಿಯವರೊಂದಿಗಿನ ಒಡನಾಟವನ್ನು, ಸಾಹಿತ್ಯೋತ್ಸವದ ಪ್ರಸ್ತುತತೆಯನ್ನು ತಿಳಿಸಿದರು. ಸಂಸದ ಕರಡಿ ಸಂಗಣ್ಣ ಮಾತನಾಡಿ ಕವಿ ಗವಿಸಿದ್ಧ ಬಳ್ಳಾರಿ, ಈ ಜಿಲ್ಲೆಯ ಆಸ್ತಿಯಾಗಿದ್ದರು. ನಮ್ಮ ಸಂಬಂಧ ನಾಲ್ಕು ದಶಕಗಳಷ್ಟು ಹಳೆಯ ಮತ್ತು ಗಟ್ಟಿ ಸಂಬಂಧ ಎಂದು ಹೇಳಿದರು.

ಕವಿಗಳು, ಪತ್ರಕರ್ತರು, ಚಿಂತಕರು, ಪ್ರಕಾಶಕರು, ಕಥೆಗಾರರೊಂದಿಗೆ ಜಿ.ಎನ್. ಮೋಹನ್ ಅವರ ಸಂವಾದ ಎಲ್ಲರ ಗಮನ ಸೆಳೆಯಿತು. ತೂಕಬದ್ಧ ಪ್ರಶ್ನೆಗಳಿಗೆ – ಅಷ್ಟೇ ತೂಕಬದ್ಧ ಪ್ರತಿಕ್ರಿಯೆಗಳು ಬಂದದ್ದು ಸಂವಾದದ ಮಹತ್ವವನ್ನು ಸಾಕ್ಷೀಕರಿಸಿತು.

ಪ್ರಶಸ್ತಿ ಪ್ರಧಾನ : ಮಧ್ಯಾಹ್ನದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ 2022 ನೇ ಸಾಲಿನ ‘ಕವಿ ಗವಿಸಿದ್ಧ ಬಳ್ಳಾರಿ ಕಾವ್ಯ ಪ್ರಶಸ್ತಿ’ ಯನ್ನು ಡಾ. ಮಹಾಂತೇಶ ಪಾಟೀಲ ಮತ್ತು ಮಮತಾ ಅರಸೀಕೆರೆ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ತಲಾ 6,೦೦೦ ರೂ. ನಗದು ಮತ್ತು ಪ್ರಶಸ್ತಿ, ಫಲಕ ಒಳಗೊಂಡಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಮಹನೀಯರಾದ ಶತಾಯುಷಿ ದೇವೇಂದ್ರಪ್ಪ ಬಡಿಗೇರ, ತೃತೀಯ ಲಿಂಗಿ ಕೆ.ಸಿ. ಅಕ್ಷತಾ, ಜಿ.ಎನ್. ಹಳ್ಳಿ, ಬಸನಗೌಡ ತೊಂಡಿಹಾಳ, ವಿಕಲ ಚೇತನ ಸಾಧಕಿ ಕಳಕಮ್ಮ ಇವರಿಗೆ ಸಮಾಜಮುಖಿ ಗೌರವ ಮತ್ತು ಪ್ರಕಾಶ ಕಂದಕೂರು, ಡಾ. ಬಸವರಾಜ ಪೂಜಾರ, ಎ.ಎಂ. ಮದರಿ, ಅರುಣಾ ನರೇಂದ್ರ, ಹಾಲಯ್ಯ ಹುಡೇಜಾಲಿ ಅವರಿಗೆ ಅಭಿನಂದನಾ ಗೌರವವನ್ನು ಸಮರ್ಪಿಸಲಾಯಿತು.

ವೇದಿಕೆ ಮತ್ತು ಸಾಹಿತ್ಯೋತ್ಸವದ ಕಾರ್ಯಕ್ರಮಗಳ ಕುರಿತಾಗಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿದರು. ಮಹೇಶ ಬಳ್ಳಾರಿಯವರ ‘ನೀನೀಗ ಜಗದ ವಿಳಾಸ’, ‘ಕ್ರಾಂತಿಕಾರಿ ಬುಡಕಟ್ಟು ಸಿಂಹ – ಅಲ್ಲೂರಿ ಸೀತಾರಾಮರಾಜು’ ಮತ್ತು ರಮೇಶ ಸಿ. ಬನ್ನಿಕೊಪ್ಪ ಇವರ ‘ನೆಲದ ಋಣ ತೀರಿಸಿದವರು’ ಕೃತಿಗಳ ಲೋಕಾರ್ಪಣೆಯಾದವು. ಫಕೀರಪ್ಪ ಎಮ್ಮಿಯವರ್ ರ ‘ಮೂಲಚರಿತ್ರೆ’ ಯೂಟ್ಯೂಬ್ ಚಾನೆಲ್ ಸಹ ಇದೇ ಸಂದರ್ಭದಲ್ಲಿ ಬಿಡುಗಡೆಯಾಯಿತು.

ಅಂತಾರಾಷ್ಟ್ರೀಯ ಚಿತ್ರ ಕಲಾವಿದರಾದ ಗುಜ್ಜಾರಪ್ಪ ಇವರು ತೇಜಸ್ವಿಯವರೊಂದಿಗಿನ ತಮ್ಮ ಒಡನಾಟವನ್ನು ವಿವರಿಸಿದರೆ, ಇನ್ನೋರ್ವ ಖ್ಯಾತ ಕಾರ್ಟೂನಿಸ್ಟ್ ರಾ. ಸೂರಿಯವರು ಕಾರ್ಯಕ್ರಮದ ಕುರಿತಾಗಿ ಮೆಚ್ಚುಗೆಯ ಮಾತುಗಳನ್ನಾಡಿದರು.

ಅಂತಾರಾಷ್ಟ್ರೀಯ ಜನಪದ ಕಲಾವಿದರಾದ ಮಹೆಬೂಬ ಕಿಲ್ಲೇದಾರ ಮತ್ತು ಮರಿಯಪ್ಪ ಚಾಮಲಾಪುರ ಗೀತಗಾಯನವನ್ನು ನಡೆಸಿಕೊಟ್ಟರು. ಟಿ.ಆರ್. ಬೆಲ್ಲದ್ ರಿಂದ ಸುಗಮ ಸಂಗೀತ, ಶೈಲಾನಿಭಾಷಾ ಇವರಿಂದ ಜಾನಪದ ಹಾಡುಗಳು ಸಭಿಕರ ಗಮನ ಸೆಳೆದವು. ಆರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ರಮೇಶ ಬನ್ನಿಕೊಪ್ಪ ಮಾಡಿದರೆ, ಮಂಜುನಾಥ ಚಿತ್ರಗಾರ, ಸಂಜನಾ ಆನಂದ ಬಳ್ಳಾರಿ ಮತ್ತು ಮಹೇಶ ಬಳ್ಳಾರಿ ಕಾರ್ಯಕ್ರಮ ನಿರ್ವಹಿಸಿದರು.

ಲೋಹಿಯಾ ಪ್ರಕಾಶನದ ಸಿ. ಚೆನ್ನಬಸವಣ್ಣ, ಹಿರಿಯರಾದ ಎಚ್.ಎಸ್. ಪಾಟೀಲ, ಡಿ.ಡಿ.ಪಿ.ಐ. ಮುತ್ತರಡ್ಡಿ ರಡ್ಡೇರ, ಕೊಪ್ಪಳ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶರಣಬಸನಗೌಡರು ಪಾಟೀಲರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

4೦೦ ಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಇಡೀ ದಿನದ ಕಾರ್ಯಕ್ರಮದ ಭಾಗಿಯಾಗಿದ್ದರು ಎಂದು ‘ಸಾಹಿತ್ಯೋತ್ಸವ’ದ ಸಂಚಾಲಕ ಮಹೇಶ ಬಳ್ಳಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *