ಗುರುರಾಜ ದೇಸಾಯಿ
“ಗಾಯ” ಕಥಾ ಸರಣಿಯು ಈ ವಾರದಿಂದ ಆರಂಭವಾಗುತ್ತಿದೆ. ಪ್ರತಿ ಭಾನುವಾರು ಜನಶಕ್ತಿ ಮೀಡಿಯ ವೆಬ್ಸ್‌ಟ್‌ನಲ್ಲಿ ಪ್ರಸಾರವಾಗಲಿದೆ. ಮನಸನ್ನು ಗಾಯಗೊಳಿಸಿದ ನೈಜ ಘಟನೆಯನ್ನು ಅಕ್ಷರರೂಪಕ್ಕೆ ಇಳಿಸುವ ಪ್ರಯತ್ನ ಮಾಡಲಾಗಿದೆ. ಓದಿ ಪ್ರತಿಕ್ರಿಯೆ ನೀಡಬಹುದು. ಸಲಹೆ ಸೂಚನೆಗಳಿಗೂ ಸ್ವಾಗತ.
(ಇಲ್ಲಿಯವರೆಗೆ .. “ಇಬ್ಬರು ವ್ಯಕ್ತಿಗಳು ಅಳುತ್ತಿದ್ದ ಧ್ವನಿ, ಶ್ರೀಧರನ ಮನಸ್ಸನ್ನು ಹಿಂಡಿ ಹಿಪ್ಪೆ ಮಾಡಿತ್ತು. ಯಾರದು ಆ ಅಳು? ಯಾರಾದರೂ ಸತ್ತಿರಬಹುದಾ? ವಿಚಿತ್ರವಾದ ಅಳು ಅವನಿಗೆ ನಿದ್ದೆ ಬಾರದಂತೆ ಮಾಡಿತ್ತು. ಹಾಗೇ ಅಳುತ್ತಿದ್ದವರು ಯಾರೆಂದು ಗೊತ್ತಾಗಿ ಜನರೆಲ್ಲ ಮನೆಯಿಂದ ಓಡತೊಡಗಿದರು, ಶ್ರೀಧರನೂ ಅಲ್ಲಿಗೆ ಹೋದ”,…..! ಮುಂದೆ ಓದಿ)
ಅಗಸಿಕಟ್ಟಿ ಸಮೀಪಿಸುತ್ತಿದ್ದಂತೆ ಶ್ರೀಧರನಿಗೆ ಚೀರಾಟದ ಧ್ವನಿ ಜೋರಾಗಿ ಕೇಳಿಸತೊಡಗಿತು. ಸುತ್ತಲು ಜನ ಸೇರಿದ್ದರು, ರಪ್… ರಪ್… ಎಂದು ಹಸಿ ಬರಲು, ಬಾರಕೋಲಿನಿಂದ ಬೀಳುತ್ತಿದ್ದ ಏಟಿಗೆ ಆ ಇಬ್ಬರು ಅಯ್ಯೋ…. ಯಪ್ಪಾ…. ಸಾಕ ಬಿಡ್ರಿ… ತಪ್ಪಾಗೈತ್ರಿ, ಕಾಣಕಿ ಕೊಡ್ತೀವಿ ಎಂದು ಕೈ ಮುಗಿದು ನಿಂತಿದ್ದರು.
ಏಟುಗಳು ರಪರಪನೇ ಬೀಳುತ್ತಲೇ ಇದ್ದವು. ಚೀರಾಟ, ಅಳುವಿನ ಕಾರಣದಿಂದ ಅವರ ಧ್ವನಿ ಕ್ಷೀಣಿಸುತ್ತಾ ಬಂದಿತ್ತು.
ಶ್ರೀಧರ ಅವರಪ್ಪನ ಹೆಗಲ ಮೇಲೆ ಕುಳಿತ ಕಾರಣ ಎಲ್ಲವೂ ಸ್ಪಷ್ಟವಾಗಿ ಕಾಣುತ್ತಿತ್ತು. ಪೆಪ್ಪರ್‌ಮೆಂಟ್ ಕೊಡ್ತಾ ಇದ್ದ ಕೆಂಚಪ್ಪಣ್ಣ, ಹಾಗೂ ಬಸ್ಸಣ್ಣನ ಹೊಡಿತಾರಲ್ಲ ಅಂತ ಇವನ ಮನಸು ಚಡಪಡಿಸಿತು.
ನೀರಿಗೆ ಖಾರದಪುಡಿ ಸೇರಿಸಿ ಉಗ್ಗ್ರಿ ಇವರಿಗೆ, ಎಂದು ಮೀಸೆ ದ್ಯಾಮಣ್ಣ ಹೇಳಿದ. ಅಲ್ಲಿದ್ದ ನಾಲ್ಕಾರು ಜನ ದೊಡ್ಡದಾದ ಡ್ರಮ್‌ಗೆ ಐದಾರು ಕೇಜಿ ಖಾರದ ಪುಡಿ ಸೇರಿಸಿ ಇವರಿಬ್ಬರಿಗೆ ಉಗ್ಗಲು ಶುರು ಮಾಡಿದರು.
ರಕ್ತ ಸುರಿಯುತ್ತಿದ್ದ ದೇಹಕ್ಕೆ ಖಾರದಪುಡಿ ನೀರು ಸೋಂಕಿದಂತೆ ಯವ್ವಾ… ಯಪ್ಪಾ… ಎಂದು ಅವರಿಬ್ಬರು ಚೀರ ತೊಡಗಿದರು. ಶ್ರೀಧರ ಅವರಪ್ಪನ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದ. ಅವರಪ್ಪ, ಮಗ ಹೆದರಿಕೊಂಡಾನು ಎಂದು ಅವನ ಕಣ್ಣು ಮುಚ್ಚಿದ.
ಎಲ್ರೂ ಗಪ್‌ನ ಕುಂದರ್ರಿ, ಈಗ ಯಜಮಾನರು ಮಾತಾಡ್ತಾರ ಎಂದು ಒಬ್ಬ ವ್ಯಕ್ತಿ, ಗುಸು ಗುಸು ಮಾತಾಡುತ್ತಿದ್ದ ಜನರನ್ನು ನಿಯಂತ್ರಿಸಿದ.
ಖುರ್ಚಿಯ ಮೇಲೆ ಕುಳಿತ್ತಿದ್ದ ಐದಾರು ಜನರಲ್ಲಿ ಪ್ಯಾಂಟ್ ಹಾಕಿದ್ದ ಯಜಮಾನ ಎದ್ದು ನಿಂತು, ನೋಡ್ರಿ, ಈ ಕೆಂಚ ಮತ್ತು ಬಸ್ಯಾ ಇಬ್ರೂ ಸೇರಿ ನನ್ನ ಹೊಲದಾಗ 4 ಸೇರ್ ಶೆಂಗಾ ಹಾಗೂ ಹೊಲಕ್ಕ ಹೊಡೆಯೋ ಎಣ್ಣಿ ಕದ್ದಾರ. ಯಾಕ ಅಂತ ಕೇಳಿದ್ರ ಮನ್ಯಾಗ ಸಾಮಾನ ಇರ್ಲಿಲ್ಲ ಅದಕ್ಕ ಕದ್ದಿವ್ರಿ ಅಂತ ತಪ್ಪು ಒಪ್ಕೊಂಡಾರಾ. ಅಲ್ಲ ಇವರ ಮನಿಗೆ ಸಾಮಾನು ತರಾಕ ನನ್ನ ಹೊಲದಾಗಿನ ಸಾಮಾನು ಕದಿಯದು ಎಷ್ಟು ಸರಿ ಹೇಳ್ರಿ. ಇವತ್ತು ಹೊಲ್ದಾಗ ಕದೀತಾರ, ನಾಳೆ ನನ್ನ ಮನಿ, ನಾಡಿದ್ದು ನಿಮ್ಮ ಮನಿ, ಆಮೇಲೆ ಇಡೀ ಊರಾಗಿನ ಸಾಮಾನ ಕದೀತಾರ… ಎಂದೆನ್ನುತ್ತಲೇ…
ಇದನ್ನೂ ಓದಿ : ಗಾಯ |ಕಥಾ ಸರಣಿ – ಸಂಚಿಕೆ 01
ಸಾಹುಕಾರ್ರೆ, ನೀವು ಹೊಲಕ್ಕ ಬಂದಿದ್ದ ತಡ, ಬಂದ ತಕ್ಷಣ ನಿಮಗೆ ಅವರು ಏನು ಮಾಡೀವಿ ಅಂತ ಹೇಳ್ಯಾರಲ್ರಿ, ಅವರು ಸತ್ಯಾನ ಹೇಳ್ಯಾರಲ್ರಿ, ನೀವ ಸುಳ್ಳ ಹೇಳಕತ್ತೀರಿ ಎಂದು ಬಸ್ಯಾನ ಅಪ್ಪ ತಲೆತಗ್ಗಿಸಿ ಮಾತನಾಡುತ್ತಿದ್ದ.
“ಹಾ… ಹಾ… ನೋಡ್ರಿ ಇವರು ಕಳ್ಳತನ ಮಾಡಿದ್ದನ್ನ ನಾನು ಸುಳ್ಳ ಕಥಿ ಕಟ್ಟಕತ್ತೀನಿ ಅಂತ ಆ ದೇವ್ಯಾ ಹೇಳಕತ್ತಾನ. ಅವನ, ಬಸ್ಯಾಗೆ ಹೇಳಿ ಕಳ್ಳತನ ಮಾಡ್ಸಿರ್ಬೇಕು ಅನ್ಸತ್ತ, ಇವನಿಗೂ ನಾಲ್ಕೇಟು ಬಾರ್ಸರಿ ಸರಿ ಹೋಕ್ತಾನ”ಸಾಹುಕಾರ ಹೀಗೆನ್ನುತ್ತಿದ್ದಂತೆ ದೇವ್ಯಾನ ಹೆಂಡತಿ ಬಂದು ಸುಮ್ನಿರು ಎಂದು ಅವನ ಬಾಯಿ ಮುಚ್ಚಿಸಿದಳು.
ಸಾಹುಕಾರ ತನ್ನ ಮಾತನ್ನು ಮುಂದುವರಿಸಿ, ನೋಡ್ರಿ ಇವರು ಮಾಡಿದ ತಪ್ಪಿಗೆ ಕ್ಷಮಾಪಣಿ ಸಿಗಾಕ ಸಾಧ್ಯಾನ ಇಲ್ಲ, ಈಗ ಹೊಡೆದಿರೋ ಶಿಕ್ಷೆ ಯಾವುದಕ್ಕೂ ಸಾಕಾಗಲ್ಲ, ಇವರನ್ನ ಏನ್ ಮಾಡೋಣ ಅಂತ ಹೇಳ್ತಿರಿ? ನೀವು ಹೇಳಿದಾಂಗ ತೀರ್ಮಾನ ತೊಗೊತಿವಿ ಎಂದು ಖುರ್ಚಿಯ ಮೇಲೆ ಕುಳಿತ.
ಸೇರಿದ್ದ ಜನ ಗುಸು ಗುಸು ಮಾತಾಡುತ್ತಿದ್ದರು, ಇವರನ್ನ ಊರಿಂದ ಬಹಿಷ್ಕಾರ ಹಾಕಬೇಕು ಎಂದು ಒಂದಿಷ್ಟು ಜನ ಜೋರಾಗಿ ಹೇಳತೊಡಗಿದರು.
ಒಂದು ವಾರ ಊಟ, ನೀರು ಕೊಡದ ಅವರನ್ನ ಹಿಂಗ ಕಟ್ಟಿಹಾಕಬೇಕು ಎಂಬ ಧ್ವನಿಗಳು ಕೇಳಿಸಿದವು.
ಅಗಸಿಕಟ್ಟಿಗೆ ಉಲ್ಟಾ ನೇತಾಕಿ ಕಟ್ರಿ, ಹೋಗೋ ಬರೋ ಮಂದಿ ಎಲ್ಲಾ ಇವರಿಗೆ ಚೀ… ಥೂ… ಅಂತ ಉಗುಳಲಿ ಎಂದು ಹಿಂದಿನ ಸಾಲಿನಲ್ಲಿದ್ದ ಜನ ಹೇಳ ತೊಡಗಿದರು.
ಸದ್ದು. ಸದ್ದು. ಹೆಣ್ಮಕ್ಕಳು ಏನು ಹೇಳವಲ್ರು, ನೀವು ಏನರ ಹೇಳ್ರಲ ಎಂದು ಖುರ್ಚಿಯ ಮೇಲಿದ್ದ ಪಂಚೆ ಭರಮಣ್ಣ ಹೆಣ್ಣು ಮಕ್ಕಳತ್ತ ಕೈ ಮಾಡಿದ. ಒಂದಿಷ್ಟು ಹೊತ್ತು ಮೌನ, ಯಾರು ಮಾತನಾಡುತ್ತಿಲ್ಲ.
ಅವ್ರು ಕದ್ದಿರೋ ವಸ್ತುಗೆ 50 ರೂ ಬರ್ತ್ತೈತಿ ಅಷ್ಟರಿ, ಸಾಕು ಬಿಟ್ಟು ಬಿಡ್ರಿ ಅವರನ್ನ ಎಂದು ಹಣ್ಣು ಹಣ್ಣಾದ ಧ್ವನಿಯೊಂದು ಕೇಳಿತು.
ಯಾರವ್ರು? ಮುಂದ ಬಂದ ಮಾತಾಡ್ರಿ, ಎಂದು ಭರಮಣ್ಣ ಜೋರಾಗಿ ಕೂಗಿದ.
ತಲೆ ಅಲ್ಲಾಡಿಸುತ್ತಾ, ಕೈಯಲ್ಲಿದ್ದ ಬೆತ್ತದ ಸಹಾಯದಿಂದ ನಡೆದುಕೊಂಡು ಬಂದ ಶಂಕ್ರಮಜ್ಜಿ, ಸಾಹುಕಾರ್ರೆ ನಾನ ಹೇಳಿದ್ರಿ, ಬಿಟ್ಟು ಬಿಡ್ರಿ ಅವರನ್ನ ಎಂದು ಕೈ ಮುಗಿದು ಕೇಳಿದಳು
ಯೇ! ಮುದೇಕಿ, ಸಂಜೀ ಅನ್ನೊಷ್ಟ್ರಲಿ ಕುಣಿಗೆ ಹೋಗಂಗ ಅದೀ, ನಿನಗ್ಯಾಕ ಬೇಕು ಇದು ಸುಮ್ನಿರು. ಎಂದು ಖುರ್ಚಿಯಲ್ಲಿ ಕುಳಿತಿದ್ದ ಮಹಾನುಭಾವರು ಶಂಕ್ರಮ್ಮಜ್ಜಿಗೆ ಗದರಿದರು.
ನೋಡ್ರಿ, ಇವರಿಗೆ ಯಾವ ಶಿಕ್ಷೆ ಕೊಡಬೇಕು ಅಂತ, ನಾವು ಊರ ಹಿರೇರು ಏನದವಿ ನಾವು ತೀರ್ಮಾನ ತೊಗೊಂತೀವಿ, ಏನ್ ತೀರ್ಮಾನ ತೊಗೊಂಡ್ವಿ ಅನ್ನೋದನ್ನ ಸಂಜಿ 4 ಕ್ಕೆ ಡಂಗುರ ಬಾರ್ಸಿ ಓಣಿ ಓಣಿಗೂ ಹೇಳ್ತಿವಿ. ನೀವಿನ್ನು ಜಾಗ ಖಾಲಿ ಮಾಡ್ರಿ ಎಂದು ಸಾಹುಕಾರ ಪ್ಯಾಂಟಿನ ಜೇಬಿನೊಳಗೆ ಕೈ ಹಾಕಿದ.
ತಲೆಗೆ ರುಮಾಲು ಕಟ್ಟಿದ್ದ ಊರ ಹಿರಿಯನೊಬ್ಬ, ಇನ್ನೊಂದಿಷ್ಟು ಡ್ರಮ್ ನೀರ ತೊಗೊಂಡು ಬರ್ರಿ, ಅದಕ್ಕೂ ಖಾರದಪುಡಿ ಹಾಕಿ ನೀರು ಸುರೀರಿ, ಬರ್ರಿ ಬರ್ರಿ ಏನು ಮಾಡೋದು ಅಂತಾ ಕುಂತ್ಕೊಂಡು ಮಾತಾಡೋಣ ಎಂದು ಸಾಹುಕಾರನ ಭುಜಮುಟ್ಟಿ ಹೇಳಿದ.
ಸಾಹುಕಾರ ಹಾ…! ನಡೀರಿ ಎಂದು ಕಟ್ಟೆಯಿಂದ ಕೆಳಗಿಳಿದ. ಆತನ ಹಿಂದೆ ಖುರ್ಚಿಯಲ್ಲಿ ಕುಳಿತಿದ್ದ ಹಿರಿಯರೆಲ್ಲ ಹೊರಟರು. ಜನ ಗುಸು ಗುಸು ಮಾತನಾಡುತ್ತ ಮನೆ ಕಡೆ ಮುಖ ಮಾಡಿದರು.
(ಮುಂದುವರೆಯುವುದು …..)
ಈ ವಿಡಿಯೋ ನೋಡಿ : ಮಹಿಳಾ ಮೀಸಲಾತಿ ಲೆಕ್ಕಾಚಾರ ಏನು? ಎತ್ತ? ಕೆ.ಎಸ್. ವಿಮಲಾ ಜೊತೆ ಮಾತುಕತೆ