ಗೌರಿ ಲಂಕೇಶ್ ಹತ್ಯೆ ಪ್ರಕರಣ: ಮೂವರು ಆರೋಪಿಗಳಿಗೆ ಜಾಮೀನು

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ  ಕರ್ನಾಟಕ ಹೈಕೋರ್ಟ್‌ ಜಾಮೀನು ನೀಡಿದೆ.

ಗೌರಿ ಲಂಕೇಶ್ ಹತ್ಯೆ  ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿಗಳಾದ ಎ-5 ಅಮಿತ್ ದಿಗ್ವೇಕರ್, ಎ-17ಕೆ.ಟಿ.ನವೀನ್ ಕುಮಾರ್, ಎ – 7 ಸುರೇಶ್ ಹೆಚ್.ಎಲ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ‌ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ಪೀಠ ಜಾಮೀನು ನೀಡಿ ಆದೇಶ ಹೊರಡಿಸಿದೆ.

ಆರೋಪಿಗಳ ಪರ ಹಿರಿಯ ವಕೀಲ ಅರುಣ್ ಶ್ಯಾಂ ವಾದ ಮಂಡಿಸಿದ್ದರು. ಕೋರ್ಟ್‌ ಹಲವು ಷರತ್ತು ವಿಧಿಸಿದ್ದು ಈ ಷರತ್ತು ಪೂರ್ಣಗೊಂಡ ಬಳಿಕ ಇಂದು ಸಂಜೆ ಅಥವಾ ನಾಳೆ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಏಕಲವ್ಯ ಶಾಲೆಗಳಿಗೆ ನೇಮಕಾತಿಯ ವಿಪರೀತ ಕೇಂದ್ರೀಕೃತ ವಿಧಾನವನ್ನು ಹಿಂತೆಗೆದುಕೊಳ್ಳಬೇಕು: ಬೃಂದಾ ಕಾರಟ್ ವಿನಂತಿ

ಹನ್ನೊಂದನೇ ಆರೋಪಿ ಮೋಹನ್‌ ನಾಯಕ್‌ಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿರುವುದನ್ನು ಪರಿಗಣಿಸಿ ತಮಗೂ ಜಾಮೀನು ಮಂಜೂರು ಮಾಡಬೇಕು ಎಂಬುದು ಎಲ್ಲಾ ಅರ್ಜಿದಾರರ ವಾದವಾಗಿತ್ತು. ಇದಕ್ಕೆ ತೀವ್ರವಾಗಿ ಆಕ್ಷೇಪಿಸಿದ ಪ್ರಾಸಿಕ್ಯೂಷನ್‌ “ಮೋಹನ್‌ ನಾಯಕ್‌ ಈ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್‌ನ ಬೇರೊಂದು ಪೀಠವು ತಿರಸ್ಕರಿಸಿದ್ದು, ಕೊಲೆ, ಪಿತೂರಿಯಂಥ ಗಂಭೀರ ಆರೋಪಗಳಿರುವಾಗ ಜಾಮೀನು ನೀಡಲಾಗದು ಎಂದಿದೆ.

ಪ್ರಕರಣದಲ್ಲಿ ಹನ್ನೊಂದನೆಯ ಆರೋಪಿ ಮೋಹನ್ ನಾಯಕ್​ಗೆ ಈಗಾಗಲೇ ಜಾಮೀನು ಮಂಜೂರಾಗಿದೆ. ಅಲ್ಲದೇ, ಕಳೆದ ಆರು ವರ್ಷಗಳ ಕಾಲ ಆರೋಪಿಗಳು ವಿಚಾರಣಾ ದೀನ ಕೈದಿಗಳಾಗಿ ಜೈಲಿನಲ್ಲಿದ್ದಾರೆ. ‘ವಿಚಾರಣೆ ಪೂರ್ಣಗೊಳ್ಳದೇ ಸುಧೀರ್ಘವಾಗಿ ಜೈಲಿನಲ್ಲಿಡುವಂತಿಲ್ಲ ಎಂಬುದಾಗಿ ಹಲವು ತೀರ್ಪುಗಳಿವೆ’ ಎಂದು ಅಭಿಪ್ರಾಯ ಪಟ್ಟಿರುವ ಪೀಠ, ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2017ರ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಅವರು ಕೆಲಸ ಕಚೇರಿಯಿಂದ ಮನೆಗೆ ಮರಳುವ ವೇಳೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಹತ್ಯೆಯ ಸಂಚು ರೂಪಿಸಿದ ಪ್ರಮುಖ ರೂವಾರಿ ಎಂದು ಅಮೋಲ್ ಕಾಳೆ ಮೇಲೆ ಆರೋಪವಿದ್ದರೆ, ಗುಂಡು ಹಾರಿಸಿದ ಆರೋಪ ಪರಶುರಾಮ್ ವಾಗ್ಮೋರೆ ಮೇಲೂ ಹಾಗೂ ಆತನನ್ನು ಕೂರಿಸಿಕೊಂಡು ಬೈಕ್ ಚಲಾಯಿಸಿ ತಪ್ಪಿಸಿಕೊಳ್ಳಲು ನೆರವಾದ ಆರೋಪವು ಗಣೇಶ್ ಮಿಸ್ಕಿನ್ ಅವರ ಮೇಲಿತ್ತು.

ಅಮೋಲ್ ಕಾಳೆ, ಪರಶುರಾಮ್ ವಾಗ್ಮೋರೆ, ಗಣೇಶ್ ಮಿಸ್ಕಿನ್, ಅಮಿತ್ ಬಾಡ್, ಅಮಿತ್ ದೆಗ್ವೇಕರ್, ಭರತ್ ಕುರಣೆ, ಸುರೇಶ್ ಹೆಚ್ ಎಲ್, ರಾಜೇಶ್ ಬಂಗೇರ, ಸುಧನ್ವ ಗೊಂದಲೇಕರ್, ಶರದ್ ಕಾಲಸ್ಕರ್, ಮೋಹನ್ ನಾಯಕ್, ವಾಸುದೇವ್ ಸೂರ್ಯವಂಶಿ, ಸುಜಿತ್ ಕುಮಾರ್, ಮನೋಹರ ಎಡವೆ, ವಿಕಾಸ್ ಪಾಟೀಲ್, ಶ್ರೀಕಾಂತ್ ಪಂಗರ್ಕರ್, ಕೆ.ಟಿ. ನವೀನ್ ಕುಮಾರ್ ಮತ್ತು ಹೃಶಿಕೇಶ್ ದಿಯೋದಿಕರ್ ಪ್ರಕರಣದ ಆರೋಪಿಗಳಾಗಿದ್ದಾರೆ.

 ಇದನ್ನೂ ನೋಡಿ: ವಚನಾನುಭವ – 04 | ಆಲೈ ಆಡಿದೆನೊ ಬೊಂಸೈ ಆಡಿದೆನೊ | ಕಡಕೋಳ ಮಡಿವಾಳಪ್ಪ ತತ್ವಪದ – ಮೀನಾಕ್ಷಿ ಬಾಳಿ Janashakthi Media

Donate Janashakthi Media

Leave a Reply

Your email address will not be published. Required fields are marked *