– ಎಚ್.ಆರ್.ನವೀನ್ ಕುಮಾರ್, ಹಾಸನ
ಎತ್ತರವಾದ ಬಹುಮಹಡಿ ಕಟ್ಟಡ, ಇಡೀ ಕಟ್ಟಡದ ಪ್ರವೇಶಕ್ಕೆ ಒಂದೇ ಒಂದು ಬಾಗಿಲು. ಆ ಬಾಗಿಲ ಬಳಿ ಬಸ್ ಬಂದು ನಿಲ್ಲುತ್ತದೆ. ಕಟ್ಟಡದ ಬಾಗಿಲಿನಿಂದ ಒಂದು ಹೆಜ್ಜೆ ಹೊರಗಿಟ್ಟರೆ ಸಾಕು ನೇರವಾಗಿ ಬಸ್ಸು ಒಳಗೇ ಪ್ರವೇಶ, ಆಚೆ ಈಚೆ ನೋಡುವ ಪ್ರಶ್ನೆ ಇಲ್ಲ. ಇಡೀ ಕಟ್ಟಡ ಒಂದು ರೀತಿಯಲ್ಲಿ ಜೈಲಿನ ಅನುಭವವನ್ನು ಕೊಡುತ್ತದೆ. ಇದು ನಿಜವಾಗಲೂ ಒಂದು ಜೈಲು ! ಇದು ಆಧುನಿಕ ಜೈಲು, ಕಾರ್ಮಿಕರ ನೆತ್ತರು ಹೀರಲೆಂದೆ ಇರುವ ಜೈಲುಗಳು… ನಾನು ಮಾತನಾಡುತ್ತಿರುವುದು ಒಂದು ವೃತ್ತಿ ನಿರತ ಕಾರ್ಮಿಕರ ವಸತಿ ಸಮುಚ್ಚಯದ ಕುರಿತು. ಗಾರ್ಮೆಂಟ್ಸ್‌ಗಳಲ್ಲಿ
ಹಾಸನದ ಮುಖ್ಯ ರಸ್ತೆಯೊಂದರಲ್ಲಿ ನಾನು ಓಡಾಡುತ್ತಿರುವಾಗ ಈರೀತಿಯ ದೃಶ್ಯಗಳು ಸಹಜವಾಗಿಯೇ ನನ್ನ ಗಮನ ಸೆಳೆದಿದ್ದವು. ಒಂದು ಬಾರಿ ಕನಿಷ್ಟ 5-6 ಬಸ್ಸುಗಳು ಬಂದು ನಿಂತರೆ ಅದರಿಂದ ಇಳಿದು ಸಾಲುಗಟ್ಟಿ ಇರುವೆಗಳಂತೆ ಗೂಡು ಸೇರುತ್ತಿದ್ದ ಮಹಿಳಾ ಕಾರ್ಮಿಕರು. ಪ್ರತಿ ದಿನ ಇದೇ ರೀತಿ ಬೆಳಿಗ್ಗೆ ಕಟ್ಟಡದಿಂದ ಬಸ್ಸಿಗೆ, ಅಲ್ಲಿಂದ ನೇರವಾಗಿ ಕಾರ್ಖಾನೆಗೆ ಮತ್ತೆ ರಾತ್ರಿ ಕಾರ್ಖಾನೆಯಿಂದ ಅದೇ ಬಸ್ ಮೂಲಕ ವಸತಿಗೃಹದ ಈ ಕಟ್ಟಡಕ್ಕೆ.
ಒಮ್ಮೆ ಈ ಕಟ್ಟಡವನ್ನು ಪ್ರವೇಶಿಸಿದರೆ ಮುಗಿಯಿತು. ಇನ್ನೇನಿದ್ದರು ಅವರು ನಾಳೆ ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಬಸ್ಸ್ ಹತ್ತಲು ಮಾತ್ರ ಕಟ್ಟಡದಿಂದ ಹೊರಬರುವುದು. ಉಳಿದಂತೆ ಇವರಿಗೆ ಸ್ವತಂತ್ರ ಭಾರತದಲ್ಲಿ ಬದುಕುತ್ತಿದ್ದರೂ ಯಾವುದೇ ಸ್ವಾತಂತ್ರ್ಯ ಇಲ್ಲ. ಯಾರನ್ನೂ ಭೆಟಿಯಾಗುವಂತಿಲ್ಲ, ಎಲ್ಲಂದರಲ್ಲಿ ಅವರ ಅಗತ್ಯಗಳನ್ನು ಪೂರೈಸಿಕೊಳ್ಳಲು ಹೊರಗಡೆ ಹೋಗುವಂತಿಲ್ಲ. ಇದನ್ನು ಜೈಲು ಎಂದು ಹೇಳಲು ಇದಕ್ಕಿಂತ ಹೆಚ್ಚಿನ ಕಟ್ಟಳೆಗಳು ಬೇಕಾ.
ನಾನು ಮಾತನಾಡುತ್ತಿರುವುದು ಒಂದು ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಕಾರ್ಮಿಕರು ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ. ಈ ದೃಶ್ಯಗಳನ್ನು ನೋಡುತ್ತಿದ್ದ ನನಗೆ ಇವರುಗಳ ಬಗ್ಗೆ ತಿಳಿದುಕೊಳ್ಳಬೇಕೆನ್ನುವ ಕುತೂಹಲ ಹೆಚ್ಚಾಯಿತು. ಅದೇ ಸಂದರ್ಭದಲ್ಲಿ ಈ ಕಾರ್ಖಾನೆಯಲ್ಲಿ ಕೆಲಸ ಮಾಡಿದ ಮಾಜಿ ಉದ್ಯೋಗಿ ಒಬ್ಬರ ಪರಿಚಯವಾಯಿತು. ಅವರು ನೀಡಿದ ಮಾಹಿತಿಗಳು ನನ್ನನ್ನು ಬೆಚ್ಚಿಬೀಳಿಸುವಂತೆ ಮಾಡಿದವು. ಕೇವಲ ವಸತಿ ಗೃಹದ ಸಮಸ್ಯೆಗಳು ಮಾತ್ರವಲ್ಲದೆ, ಕೆಲಸದ ಸಮಯದಲ್ಲಿನ ಈ ಹೆಣ್ಣುಮಕ್ಕಳ ಸಂಕಷ್ಟಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಕೆಲಸ ಮಾಡುವ ಒಂದು ಬೃಹತ್ ಗಾರ್ಮೆಂಟ್ಸ್ ಫ್ಯಾಕ್ಟರಿ. ಇಲ್ಲಿ ಕೆಲಸ ಮಾಡುವವರಲ್ಲಿ ಶೇಕಡ 90 ರಷ್ಟು ಜನ ಹೆಣ್ಣು ಮಕ್ಕಳು ಮತ್ತು ಇದರಲ್ಲಿ ಶೇಕಡ 70 ರಷ್ಟು ಜನ ಈಶಾನ್ಯ ರಾಜ್ಯಗಳಿಂದ ಬಂದವರು. ಈ ಕಾರ್ಖಾನೆಗೆ ಜಾರ್ಖಾಂಢ್, ಅಸ್ಸಾಂ, ರಾಜ್ಯದ ಗುಡ್ಡಗಾಡುಗಳಲ್ಲಿ ವಾಸಿಸುವ ಅನಕ್ಷರಸ್ಥ, ಅಲ್ಪ ಸ್ವಲ್ಪ ವಿದ್ಯಾಭ್ಯಾಸ ಮಾಡಿರುವ 15-20 ವರ್ಷ ವಯಸ್ಸಿನ ಆದಿವಾಸಿ ಹೆಣ್ಣುಮಕ್ಕಳನ್ನು ಒಂದು ಏಜನ್ಸಿಯ ಮೂಲಕ ಇಲ್ಲಿಗೆ ಕೆಲಸಕ್ಕೆ ಕರೆತರಲಾಗುತ್ತದೆ. ಅವರಿಗಿರುವ ಬಡತನದ ಬೇಗೆಯನ್ನು ನಿವಾರಿಸಿಕೊಳ್ಳಲು ಯಾವುದಾದರೂ ಒಂದು ಕೆಲಸ ಸಿಕ್ಕರೆ ಸಾಕು ಎಂದು ಕೊಂಡ ಇಂತಹವರನ್ನು ಅತ್ಯಂತ ಸುಲಭವಾಗಿ ಇಂತಹ ಜಾಲಗಳಿಗೆ ಸೆಳೆಯಲಾಗುತ್ತದೆ. ಗಾರ್ಮೆಂಟ್ಸ್‌ಗಳಲ್ಲಿ
ಪ್ರಾರಂಬದಲ್ಲಿ 6 ತಿಂಗಳು ತರಬೇತಿಯ ಹೆಸರಿನಲ್ಲಿ ಕೆಲಸ ಮಾಡಿಸಲಾಗುತ್ತದೆ. ಈ ಸಂದರ್ಭದಲ್ಲಿ ವಸತಿ, ಊಟ ಬಿಟ್ಟು ಬೇರಾವ ರೀತಿಯ ಸಂಬಳ ಸವಲತ್ತುಗಳನ್ನು ಕೊಡಲಾಗುವುದಿಲ್ಲ. ಆ ನಂತರ ಮೊದಲಿಗೆ 4500 ರೂ ನಿಂದ ಆರಂಭವಾದ ಸಂಬಳ 10 ಸಾವಿರದ ವರೆಗೆ, ಅದೂ ಅವರವರ ಕೆಲಸದ ಆಧಾರದ ಮೇಲೆ ನಿಗದಿಯಾಗುತ್ತದೆ.
ಇದನ್ನು ಓದಿ : ಸೌಹಾರ್ದತೆಗಾಗಿ ಮಾನವ ಸರಪಳಿ : ರಾಜ್ಯವ್ಯಾಪಿ ಕೈ ಕೈ ಬೆಸೆದ ಶಾಂತಿಪ್ರಿಯ ಮನಸ್ಸುಗಳು
ಈ ಕಾರ್ಖಾನೆಯಲ್ಲಿ ಕನಿಷ್ಟ 12 ಗಂಟೆಗಳ ಕಾಲ ಕೆಲಸ ಮಾಡಬೇಕು, ಮಧ್ಯದಲ್ಲಿ ಜಲಬಾದೆಯನ್ನು ತೀರಿಸಿಕೊಳ್ಳಲು ಸಮಯ ಕೊಡುವಯದಿಲ್ಲ. ಈ ಕಾರಣದಿಂದ ಸರಿಯಾಗಿ ನೀರನ್ನೇ ಕುಡಿಯದ ಈ ಹೆಣ್ಣುಮಕ್ಕಳು ಹಲವು ರೀತಿಯ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಮಧ್ಯಾಹ್ನ ಊಟಕ್ಕೆಂದು ಕೇವಲ 20 ನಿಮಿಷಗಳು ಕಾಲಾವಕಾಶ. ಜೈಲಿನಲ್ಲಿ ಸಾಲುಗಟ್ಟಿ ನಿಲ್ಲಿಸಿ ಊಟ ಕೊಟ್ಟಂತೆ ಕೊಟ್ಟು ಗಡಿಯಾರವನ್ನು ನೋಡುತ್ತಾ ಇವರನ್ನು ನಿಯಂತ್ರಿಸಲೆಂದೇ ಒಂದು ಸುಸಜ್ಜಿತ ಪಡೆಯೊಂದಿರುತ್ತದೆ. ಜೈಲಿನಲ್ಲಿ ಕೊಟ್ಟ ಊಟವನ್ನು ತಿನ್ನಲುಬೇಕಾದಷ್ಟು ಸಮಯವನ್ನು ನೀಡುತ್ತಾರೆ. ಆದರೆ, ಕಾರ್ಮಿಕರು ಕೆಲಸ ಮಾಡುತ್ತಿರುವ ಪ್ರದೇಶಗಳಲ್ಲಿ ನೆಮ್ಮದಿಯಾಗಿ ತಿನ್ನಲೂ ಅವಕಾಶಗಳಿಲ್ಲ.
ಬಟ್ಟೆ ಹೊಲೆಯುವ ಕೆಲಸ ಅದರಲ್ಲೂ ಕಾರ್ಖಾನೆಗಳಲ್ಲಿ ಬಟ್ಟೆ ಹೊಲೆಯುವ ಕೆಲಸವೆಂದರೆ ಹೇಳಬೇಕ. ಯಂತ್ರಗಳ ಜೊತೆ ನಾವು ಪೈಪೋಟಿಯೊಡ್ಡಿ ಅದಕ್ಕಿಂt ವೇಗವಾಗಿ ಕೆಲಸ ಮಾಡಬೇಕೆಂದು ಮಾಲೀಕರು ಬಯಸುತ್ತಾರೆ. ಬಯಸುವುದು ಮಾತ್ರವಲ್ಲ ಅದೇ ರೀತಿ ಕಾರ್ಮಿಕರಿಂದ ಕೆಲಸ ಮಾಡಿಸುತ್ತಾರೆ.
ಈ ಗಾರ್ಮೆಂಟ್ಸ್ ನಲ್ಲಿ ನಮ್ಮ ಎದೆಯತ್ತರದ ಟೇಬಲ್ ಮೇಲೆ ಹೊಲಿಗೆ ಯಂತ್ರವನ್ನು ಜೋಡಿಸಿರುತ್ತಾರೆ. ಅದಕ್ಕೆ ಮೋಟರ್ ಅಳವಡಿಕೆ ಮಾಡಲಾಗಿರುತ್ತದೆ. ಒಂದೊಂದು ವಿಭಾಗದಲ್ಲಿ ಒಂದೊಂದು ರೀತಿಯ ಕೆಲಸಗಳು ನಡೆಯುತ್ತಿರುತ್ತವೆ. ಉದಾಹರಣೆಗೆ ಒಂದು ಶರ್ಟ್ ಹೊಲಿಗೆ ಹಾಕಬೇಕೆಂದರೆ ಕಾಲರ್ ಹೊಲೆಯಲು ಒಂದು ವಿಭಾಗ, ತೋಳುಗಳನ್ನು ಹೊಲೆಯುವುದು ಒಂದು ವಿಭಾಗ, (ಬಲ ತೋಳು ಒಂದು ಕಡೆ, ಎಡ ತೋಳು ಮತ್ತೊಂದು ಕಡೆ) ಹೀಗೆ ಕಾಜ ಒಂದು ಕಡೆ, ಗುಂಡಿ ಮತ್ತೊಂದು ಕಡೆ. ಒಂದೇ ರೀತಿಯ ಕೆಲಸವನ್ನು ಬೆಳಕಿನಿಂದ ರಾತ್ರಿಯವರೆಗು 12 ಗಂಟೆಗಳ ಕಾಲ ಸತತವಾಗಿ ಮಾಡಿಸಲಾಗುತ್ತದೆ. ಇಲ್ಲಿ ಕೆಲಸ ಮಾಡುವವರಿಗೆ ಅತ್ಯಂತ ಕಡಿಮೆ ವಯಸ್ಸಿನಲ್ಲೇ ಮೂರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಒಂದು ಬೆಳಗಿನಿಂದ ಒಂದೇ ರೀತಿ ನಿಂತು ಕೆಲಸ ಮಾಡುವುದರಿಂದ ಮಧ್ಯದಲ್ಲಿ ವಿಶ್ರಾಂತಿಗೆ ಸಮಯವಿಲ್ಲದ್ದರಿಂದ ಬಲಗಾಲಲ್ಲಿ ಹೊಲಿಗೆ ಯಂತ್ರದ ಮೋಟರ್ ನ ಬಟನ್ ಒತ್ತುವಾಗ (ಕಾರ್ ನ ಎಕ್ಸಲೇಟರ್ ರೀತಿ) ಮತ್ತೊಂದು ಕಾಲಿನ ಮೇಲೆ ಇಡೀ ದೇಹದ ತೂಕ ಬಿದ್ದು ಕಾಲು ನೋವು ಸಂಭವಿಸುತ್ತದೆ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಶಾಲೆಗಳಲ್ಲಿ ಶಿಕ್ಷಕರು ತಪ್ಪು ಮಾಡಿದ ವಿದ್ಯಾರ್ಥಿಗಳಿಗೆ ಶಿಕ್ಷೆಯ ರೂಪದಲ್ಲಿ ಒಂಟಿ ಕಾಲಿನಲ್ಲಿ ನಿಲ್ಲಿಸುತ್ತಿದ್ದರಲ್ಲಾ ಅದೇ ರೀತಿ ಈ ಗಾರ್ಮೆಂಡ್ಸ್ ನಲ್ಲಿ ದಿನವಿಡೀ ಒಂಟಿ ಕಾಲದಲ್ಲಿ ನಿಲ್ಲುವ ಶಿಕ್ಷೆ. ಮತ್ತೊಂದು ಇಡೀ ಕಾರ್ಖಾನೆಯಲ್ಲಿ ಸಾವಿರಾರು ಯಂತ್ರಗಳು ಒಟ್ಟಿಗೆ ಕೆಲಸ ಮಾಡುವುದರಿಂದ ವಿಪರೀತ ಶಬ್ದ ಮಾಲಿನ್ಯವಾಗುತ್ತದೆ. ಈ ಶಬ್ದದಿಂದ ಮುಕ್ತಿ ಪಡೆಯಲು ಕಿವಿಯಲ್ಲಿಟ್ಟುಕೊಳ್ಳಲು ಒಂದು ರೀತಿಯ ರಬ್ಬರ್ ಬಟ್ಸ್ ಗಳನ್ನು ಕೊಡಲಾಗುತ್ತದೆ. ಇದನ್ನು ಸತತ 12 ಗಂಟೆಗಳು ಕಿವಿಯಲ್ಲಿಡುವುದರಿಂದಲೂ ಕಿವಿಗೆ ಸಂಭಂದಿಸಿದ ಸಮಸ್ಯೆಗಳು ಉದ್ಭವವಾಗುತ್ತವೆ… ಇನ್ನೊಂದು ಸಮಸ್ಯೆ ಎಂದರೆ ಸ್ಪಿನ್ನಿಂಗ್ ವಿಭಾಗದಲ್ಲಿ ಕೆಲಸ ಮಾಡುವವರಿಗೆ ವಿಪರೀತ ದೂಳು. ಹತ್ತಿಯಿಂದ ಬರುವ ಅತ್ಯಂತ ಸಣ್ಣ ದೂಳು ದೇಹದ ಒಳಗೆ ಸೇರಿಕೊಂಡು ಕಡಿಮೆ ವಯಸ್ಸಿನಲ್ಲಿ ಶ್ವಾಸಕೋಶದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದ ರಕ್ಷಣೆ ಪಡೆಯಲೆಂದು ಬಟ್ಟೆಯ ಮಾಸ್ಕ್ ವಿತರಿಸಲಾಗುತ್ತದೆ. ಆದರೂ ಅದರ ಅಗಾದತೆಗೆ ಈ ಬಟ್ಟೆಯ ಮಾಸ್ಕ್ ಯಾವ ಪ್ರಯೋಜನಕ್ಕೂ ಬರುವುದಿಲ್ಲ. ಇನ್ನೊಂದೆಡೆ ದಿನವಿಡೀ ಮಾಸ್ಕ್ ಧರಿಸಿದರೆ ಕೆಲಸ ಮಾಡುವವರ ಗತಿ ಏನು? ಗಾರ್ಮೆಂಟ್ಸ್‌ಗಳಲ್ಲಿ
ಬೆಳೆಗ್ಗೆ 7.30 ಕ್ಕೆ ಹಾಸ್ಟೆಲ್ ಗಳಿಂದ ಬಸ್ ಹತ್ತುವ ಜಗತ್ತಿನ ಮಾನ ಮುಚ್ಚುವ ಬಟ್ಟೆ ತಯಾರಿಸುವ ಈ ಕಾರ್ಮಿಕರು ವಾಪಸ್ ಹಾಸ್ಟೆಲ್ ಗೆ ಬರುವುದು ರಾತ್ರಿ 8.30 ಕ್ಕೆ. ಇದು ಕಾರ್ಖಾನೆಯ ಒಳಗಿನ ಸಮಸ್ಯೆಗಳಾದರೆ ಇವರು ಉಳಿಯುವ ಹಾಸ್ಟೆಲ್ ಗಳ ಸಮಸ್ಯೆ ಇನ್ನೊಂದು ರೀತಿ.
ಜಾರ್ಖಂಡ್, ಅಸ್ಸಾಂ ರಾಜ್ಯದಿಂದ ಬಂದ ಬಹುತೇಕ ಆದಿವಾಸಿ ಹೆಣ್ಣುಮಕ್ಕಳಿಗೆ ಅವರ ಮಾತೃಭಾಷೆ ಬಿಟ್ಟರೆ ಬೇರೆ ಭಾಷೆಯ ಪರಿಚಯವೇ ಇಲ್ಲ. ಹಿಂದಿ, ಇಂಗ್ಲೀಷ್ ಭಾಷೆಗಳೇ ಅರ್ಥವಾಗದಿದ್ದಾಗ ಇನ್ನು ಕನ್ನಡದ ಕಥೆ ಕೇಳಬೇಕಾ. ಇವರುಗಳೆಲ್ಲ ಎಂತಹ ಸಾಮಾಜಿಕ ಆರ್ಥಿಕ ಪರಿಸರದಲ್ಲಿ, ಪರಿಸ್ಥಿತಿಯಲ್ಲಿ ಬೆಳೆದು ಬಂದಿದ್ದರು ಎಂಬುದಕ್ಕೆ ಒಂದು ಉತ್ತಮ ಉದಾಹರಣೆಯೆಂದರೆ ಇವರುಗಳಿಗೆ ಟಾಯ್ಲೆಟ್ ರೂಂ ಬಳಸಲು ಬರುತ್ತಿರಲಿಲ್ಲ. ಹೆಣ್ಣು ಮಕ್ಕಳು ಋತುಮತಿಯಾದಾಗ ಸ್ಯಾನಿಟರಿ ಪ್ಯಾಡ್ ಗಳನ್ನು ಬಳಸುವುದೂ ಗೊತ್ತಿರಲಿಲ್ಲ. ವಿಪರೀತ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇವರುಗಳನ್ನು ಸ್ಥಳೀಯರೊಂದಿಗೆ ಬೆರೆಯಲು ಬಿಡುತ್ತಿರಲಿಲ್ಲ. ಕನ್ನಡ ಮಾತನಾಡುವ ಸ್ಥಳೀಯ ಕಾರ್ಮಿಕರಿಗೆ ಪ್ರತ್ತೇಕ ಹಾಸ್ಟೆಲ್, ಉಳಿದವರಿಗೆ ಒಂದು ಹಾಸ್ಟೆಲ್. ಇವರುಗಳಿಗೆ ಇಲ್ಲಿ ಮಾಡುವ ಊಟ ತಿಂಡಿ ಸರಿಹೊಂದುತ್ತಿರಲಿಲ್ಲ. ಕೆಲಸ ಮಾಡಬೇಕೆಂದರೆ ಬದುಕಿರಬೇಕು, ಬದುಕಿರಲು ಏನಾದರೂ ತಿನ್ನಲೇ ಬೇಕು. ಇದು ಪರಿಸ್ಥಿತಿ. ಸಮಸ್ಯೆಗಳ ಬಗ್ಗೆ ಯಾರಾದರೂ ದನಿ ಎತ್ತಿದರೆ ಅವರು ಮರುದಿನವೇ ಕೆಲಸಕ್ಕೆ ಗೈರುಹಾಜರಾಗುತ್ತಿದ್ದರು.
ಕನಿಷ್ಟ ನಾಗರೀಕತೆ ಎನ್ನಬಹುದಾದ ಯಾವ ಕುರುಹುಗಳೂ ಇಲ್ಲದಂತೆ ಕಾಡುಗಳಲ್ಲಿ ತಮ್ಮ ಪಾಡಿಗೆ ತಾವು ಜೀವಿಸುತ್ತಿದ್ದರೆ ಆಧುನಿಕತೆಯ ಹೆಸರಿನಲ್ಲಿ ಅವರುಗಳನ್ನು ಅಲ್ಲಿಂದ ಒಕ್ಕಲೆಬ್ಬಿಸುವುದು ಮತ್ತು ಆಧುನಿಕ ಬದುಕಿನ ಅನಿವಾರ್ಯತೆಯಿಂದಾಗಿ ಸಾವಿರಾರು ಕಿಲೋ ಮೀಟರ್ ದೂರವಿರುವ ಅತ್ಯಂತ ಅಪರಿಚಿತ ಜಾಗದಲ್ಲಿ ಬಂದು ನೆಲೆಸಿ ಬದುಕು ಕಟ್ಟಿಕೊಳ್ಳುವವರ ಗೋಳಾಟ ಹೇಳತೀರದು.
ಇಲ್ಲಿ ಇರಲಾಗದೇ, ಬಿಟ್ಟು ಹೋಗಲೂ ಆಗದೆ ಅತ್ಯಂತ ಇಕ್ಕಟ್ಟಿನಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ. ಇದು ಕೇವಲ ಒಂದು ಕಡೆಯ ಸಮಸ್ಯೆಯಲ್ಲಾ ಬಹುತೇಕ ಎಲ್ಲಾ ಗ್ರಾರ್ಮೆಂಟ್ಸ್ ಗಳಲ್ಲಿನ ಸಮಸ್ಯೆ.
ಇಂತಹ ಆಧುನಿಕ ಜೀತಗಾರಿಕೆಯ ವಿರುದ್ಧ ಕಾರ್ಮಿಕರು ಸಿಡಿದೆದ್ದರೆ ಮಾತ್ರ ವಿಮೋಚನೆ ಸಾಧ್ಯ. ಅದಕ್ಕೆ ಜಗತ್ತಿನ ಸರ್ವ ಶ್ರೇಷ್ಠ ತತ್ವಜ್ಞಾನಿ ಕಾರ್ಲ್ ಮಾರ್ಕ್ಸ್ ಹೇಳಿದ್ದು “ಜಗತ್ತಿನ ಕಾರ್ಮಿಕರೇ ಒಂದಾಗಿ, ಸಂಕೋಲೆಗಳನ್ನು ಹೊರತು, ನೀಮಗೆ ಕಳೆದುಕೊಳ್ಳಲು ಬೇರೇನಿಲ್ಲ”.
ಇದನ್ನು ನೋಡಿ : ಕಾಂತರಾಜ ವರದಿ ಸ್ವೀಕರಿಸುತ್ತೇವೆ – ಸಿಎಂ ಸಿದ್ದರಾಮಯ್ಯ ವಾಗ್ದಾನ Janashakthi Media ಗಾರ್ಮೆಂಟ್ಸ್‌ಗಳಲ್ಲಿ
ಈಜೈಲುಕಾರ್ಖಾನೆ
ಹಿಮ್ಮತ್ ಸಿಂಗ್ ಕಾ ಲಿನೆನ್ಸ್
ಇದರ ಹೆಸರೇಳು ಭಯವೇಕೆ ?