ಹಾಸನ : ಅರಕಲಗೂಡು ತಾಲ್ಲೂಕಿನ ಗಂಗೂರು ಜೀತ ವಿಮುಕ್ತ ದಲಿತರಿಗೆ ಕಳೆದ 27 ವರ್ಷಗಳಿಂದ ಭೂಮಿ ಮಂಜೂರು ಮಾಡದ ಸರ್ಕಾರದ ಕ್ರಮವನ್ನು ಖಂಡಿಸಿ ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ಹೋರಾಟ ಇಂದು ತೀವೃ ಸ್ವರೂಪ ಪಡೆದುಕೊಂಡಿದ್ದರಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ಈಗಾಗಲೇ ಸ್ವಾಧೀನದಲ್ಲಿರುವ ಅರಣ್ಯ ಭೂಮಿಯನ್ನು ಉಳುಮೆ ಮಾಡಲು ಗ್ರಾಮಸ್ಥರು ಮುಂದಾಗಿದ್ದರು. ಇದನ್ನು ತಡೆದು ದಲಿತರ ಗುಡಿಸಲುಗಳನ್ನು ತೆರವುಗೊಳಿಸಲು ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆಯ ನೂರಾರು ಸಿಬ್ಬಂದಿ ಜಮಾವಣೆಗೊಂಡಿದ್ದರು. ಬೆಳಗ್ಗೆ 6 ಗಂಟೆಯಿಂದ ಸ್ಥಳದಲ್ಲಿ ಪರಿಸ್ಥಿತಿ ಅತ್ಯಂತ ಬಿಗುವಿನಿಂದ ಕೂಡಿತ್ತು. ಶಾಂತಿಯುತವಾಗಿವ ದಲಿತರು ಪ್ರತಿಭಟನೆಯನ್ನು ಆರಂಭಿಸಿದರು
ಸ್ವಲ್ಪ ಸಮಯದಲ್ಲೇ ಅರಕಲಗೂಡು ತಾಲ್ಲೂಕು ತಹಶಿಲ್ದಾರರು ಸ್ಥಳಕ್ಕೆ ಆಗಮಿಸಿ ಒಂದು ವಾರ ಕಾಲಾವಕಾಶ ಕೊಡಿ ಈ ಕುರಿತು ಜಿಲ್ಲಾಡಳಿತ ಭೂಮಿ ಮಂಜೂರು ಮಾಡಲು ಗಂಭೀರ ಪ್ರಯತ್ನ ನಡೆಸಲಾಗುವುದು ಎಂದು ಮನವಿ ಮಾಡಿದರು.
ಇದನ್ನೂ ಓದಿ : ಗಂಗೂರು ದಲಿತರ ಹೊರಾಟ : ಪ್ರತಿಭಟನೆಕಾರರ ಮೇಲೆ ದೌರ್ಜನ್ಯ ನಡೆಸಲು ಪೂರ್ವ ತಯಾರಿ ಮಾಡಿಕೊಂಡಿದೆಯಾ ಜಿಲ್ಲಾಡಳಿತ?
ಅಧಿಕಾರಿಗಳ ಮನವಿಯನ್ನು ಗೌರವಿಸಿದ ಸಂಘಟನೆಗಳ ಮುಖಂಡರು ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಯತಾಸ್ಥಿತಿಯನ್ನು ಕಾಪಾಡಲು ದಲಿತ ಮತ್ತು ಜನಪರ ಸಂಘಟನೆಗಳ ಮುಖಂಡರು ಮತ್ತು ಗ್ರಾಮಸ್ಥರಿಗೆ ಮನವಿ ಮಾಡಿದರು. ಅದೇ ಸ್ಥಳದಲ್ಲಿ ದಲಿತರಿಗೆ ಗಂಜಿಕೇಂದ್ರ, ಕುಡಿಯುವ ನೀರು ಮತ್ತು ಬೆಳಕಿನ ವ್ಯವಸ್ಥೆ ಮಾಡಿ ಒಂದು ವಾರದೊಳಗೆ ಭೂಮಿ ಮಂಜೂರಾತಿಗೆ ಸಂಬಂಧಿಸಿದಂತೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಒತ್ತಾಯಿಸಿ, ಹೋರಾಟವನ್ನು ಒಂದು ವಾರದ ಗಡುವು ಕೊಟ್ಟು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ತಿಳಿಸಿದ್ದಾರೆ.
ಸ್ಥಳಿದಲ್ಲಿ ಹಿರಿಯ ದಲಿತ ಮುಖಂಡರಾದ ರಾಜಶೇಖರ್, ಡಿ.ಎಚ್.ಎಸ್ ನ ಜಿಲ್ಲಾ ಸಂಚಾಲಕ ಪೃಥ್ವಿ, ಮಾದಿಗದಂಡೋರ ಜಿಲ್ಲಾಧ್ಯಕ್ಷರಾದ ವಿಜಯ್ ಕುಮಾರ್, ಕೆ.ಪಿ.ಆರ್.ಎನ್ ನ ಜಿಲ್ಲಾಧ್ಯಕ್ಷರಾದ ಎಚ್.ಆರ್. ನವೀನ್ ಕುಮಾರ್, ಸ್ಥಳೀಯ ಮುಖಂಡರಾದ ಕೆ.ಎಸ್.ಮಂಜುನಾಥ್, ಅಶೋಕ್, ಚಲವಾದಿ ಮುಖಂಡರಾದ ಲಿಂಗರಾಜು, ಚಂದ್ರು,ಪ್ರಸನ್ನ ಗಂಗೂರಿನ ಗೋವಿಂದಯ್ಯ, ರವಿ ಸೇರರಿದಂತೆ ದಲಿತ ಸಂಘಟನೆಗಳ ವಿವಿಧ ಮುಖಂಡರು ಹಾಜರಿದ್ದು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.