ಬೆಂಗಳೂರು : ಬೆಂಗಳೂರಿನ ಚಂದ್ರಾಲೇಔಟ್‍ನ ಗಂಗೋಂಡನಹಳ್ಳಿಯಲ್ಲಿ ಕಳೆದ ಎರಡು ವರ್ಷಗಳಿಂದ ಕೋವಿಡ್ ಪರಿಣಾಮ ಯಾವುದೇ ಜಾತ್ರೆ ಮಹೋತ್ಸವಗಳು ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಅಣ್ಣಮ್ಮದೇವಿ ಜಾತ್ರೆ ಮಹೋತ್ಸವ ನಡೆಯಿತು. ವಿಶೇಷ ಅಂದರೆ ಗಂಗೊಂಡನಹಳ್ಳಿ ಹಿಂದೂಗಳಿಗಿಂತ ಹೆಚ್ಚಾಗಿ ಮುಸ್ಲಿಮರೇ ವಾಸವಾಗಿದ್ದಾರೆ. ಅಣ್ಣಮ್ಮ ಜಾತ್ರೆ ಮೆರವಣಿಗೆಯಲ್ಲಿ ಹಿಂದೂ ಮುಸ್ಲಿಮರು ಎನ್ನುವ ಯಾವುದೇ ಭೇದ, ಭಾವ ಇಲ್ಲದೇ ಪರಸ್ಪರ ಕೈ, ಕೈ ಹಿಡಿದುಕೊಂಡು ಭರ್ಜರಿ ಡಾನ್ಸ್ ಮೂಲಕ ಜಾತ್ರೆಯನ್ನು ವಿಶೇಷವಾಗಿ ಆಚರಿಸಿದ್ದಾರೆ.
ಮೆರವಣಿಗೆ ಪ್ರಾರಂಭದಿಂದ ಕೊನೆಯವರೆಗೂ ಮುಸ್ಲಿಮರು ಮೆರವಣಿಗೆಯಲ್ಲಿ ಭಾಗಿಯಾಗಿ ಭಾವೈಕ್ಯತೆ ಸಾರಿದರು. ಸ್ಥಳೀಯ ಮಸೀದಿ ಎದುರು ದೇವಿಮೂರ್ತಿ ಬರುತ್ತಿದ್ದಂತೆ, ಮುಸ್ಲಿಂ ಸಮುದಾಯದ ಜನರು ಬರಮಾಡಿಕೊಂಡರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಜ್ಯೂಸ್ ಕೊಟ್ಟು ಉಪಚರಿಸಿದರು.
ಕಳೆದ ಮೂರು ತಿಂಗಳಿನಿಂದಲೂ ರಾಜ್ಯದಲ್ಲಿ ಹಿಂದೂ ಮುಸ್ಲಿಂ ಸಾಮರಸ್ಯ ಕದಡುವ ಬೆಳವಣಿಗಳು ನಡೆಯುತ್ತಿವೆ. ಹಿಜಾಬ್ ನಿಂದ ಆರಂಭದಿಂದ ಮೊದಲಗೊಂಡ ಕಿಚ್ಚು ಇನ್ನೂ ತಣ್ಣಗಾಗಿಲ್ಲ. ನಿನ್ನೆ ಸಹ ಹಿಂದೂಪರ ಸಂಘಟನೆಗಳು ಮಸೀದಿಗಳ ಮೇಲಿನ ಧ್ವನಿವರ್ಧಕ ತೆಗೆಯಬೇಕು. ಅಜಾನ್ ನಿಲ್ಲಿಸಬೇಕು. ಸುಪ್ರೀಂಕೋರ್ಟ್ ತೀರ್ಪನ್ನು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿ ಹಿಂದೂ ದೇವಾಲಯಗಳಲ್ಲಿ ಧ್ವನಿ ವರ್ಧಕ ಹಾಕಿ ಪ್ರಾರ್ಥನೆಗೆ ಚಾಲನೆ ನೀಡಿದ್ದಾರೆ. ಇದಕ್ಕೂ ಮೊದಲು ಯುಗಾದಿ ವೇಳೆ ಹಲಾಲ್ ಕಟ್ ವಿರುದ್ಧ ಜಟ್ಕಾ ಕಟ್ ಎಂಬ ದೊಡ್ಡ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಇಂತಹ ಕೆಟ್ಟ ಪರಿಸ್ಥಿತಿ ನಡುವೆ ಹಿಂದೂ ಮುಸ್ಲಿಂ ಮಾತನಾಡುವುದೇ ಕಷ್ಟ ಎಂಬಂತ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ವೇಳೆಯಲ್ಲಿ ಇಂತಹ ಐಕ್ಯತೆಯ ಕಾರ್ಯಕ್ರಮಗಳು ನೆಮ್ಮದಿ ನೀಡುತ್ತಿವೆ.