ಗಂಗಾನದಿಯಲ್ಲಿ ಮತ್ತೆ ತೇಲಿ ಬರುತ್ತಿರುವ ಮೃತದೇಹಗಳು!?

ಲಕ್ನೋ : ಕಳೆದ ವರ್ಷ ಕೊರೊನಾ ವೇಳೆ ಮೃತದೇಹಗಳು ತೇಲಿ ಬಂದು ಸುದ್ದಿಯಾಗಿದ್ದ ‘ಗಂಗಾನದಿ’ ಈಗ ಮತ್ತೆ ಸುದ್ದಿಯಲ್ಲಿದೆ. ಗಂಗಾನದಿಯ ದಂಡೆಯ ಮರಳಿನಲ್ಲಿ ಮತ್ತೆ ಮೃತ ದೇಹಗಳು ಕಾಣಿಸಿಕೊಳ್ಳಲಾರಂಭಿಸಿದ್ದು, ಮೃತದೇಹಗಳನ್ನು ಹೂಳಿರುವ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್ ಸಿಕ್ಕಂತಾಗಿದೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಗಂಗಾ ನದಿಯ ದಡದ ಫಫಮೌ ಘಾಟ್‌ನಲ್ಲಿ ಮತ್ತೆ ಮೃತ ದೇಹಗಳು ತೇಲಿ ಬರುತ್ತಿವೆ. ಈ ದೃಶ್ಯ ನೋಡುಗರಲ್ಲಿ ಭಯ ಹುಟ್ಟಿಸುತ್ತಿದೆ. ಕಳೆದ ವರ್ಷದ ಕೋವಿಡ್ ಸಮಯದಲ್ಲಿ ಗಂಗೆಯಲ್ಲಿ ಶವ ತೇಲಿಬಂದ ಘಟನೆಯನ್ನು ನೆನಪಿಸುತ್ತಿವೆ.

ಫಫಮೌ ಘಾಟ್‌ನಲ್ಲಿ ಸದ್ಯದ ಬೆಳವಣಿಗೆ ಚಿಂತಾಜನಕಾವಾಗಿದೆ. ಜಿಲ್ಲಾಡಳಿತದ ಸೂಚನೆಗಳನ್ನಷ್ಟೇ ಅಲ್ಲದೆ ಎಸ್‌ಜಿಟಿಯ ಎಚ್ಚರಿಕೆಯನ್ನೂ ಬಹಿರಂಗವಾಗಿ ಉಲ್ಲಂಘಿಸಲಾಗುತ್ತಿದೆ. ಮುಂಗಾರು ಶುರುವಾಗಲು ಒಂದು ತಿಂಗಳಿಗಿಂತ ಕಡಿಮೆ ಸಮಯ ಉಳಿದಿದ್ದು, ಈ ವೇಳೆ ಗಂಗಾ ನದಿಯ ದಡದಲ್ಲಿ ಹೆಣಗಳನ್ನು ಹೂಳಲಾಗುತ್ತಿದೆ. ಮಳೆಯಿಂದ ಗಂಗಾ ನದಿಯ ನೀರಿನ ಮಟ್ಟ ಹೆಚ್ಚಾದರೆ ಮರಳಿನಲ್ಲಿ ಹೂತಿರುವ ಶವಗಳು ಗಂಗೆಯನ್ನು ಸೇರುವ ಅಪಾಯವಿದೆ. ಮೃತದೇಹಗಳು ಗಂಗಾನದಿ ಸೇರುವುದಲ್ಲದೆ ನದಿಯೂ ಕಲುಷಿತವಾಗುತ್ತದೆ.

ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯವರು ಈ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಕೋವಿಡ್‌ನಿಂದ ಮೃತಪಟ್ಟವರನ್ನು ಗಂಗಾನದಿಯ ದಡದ ಮರಳಿನಲ್ಲಿ ಹೂತುಹಾಕಲಾಗಿದೆ ಎಂಬ ಸುದ್ದಿ ಬಂದ ನಂತರ, ಅಲ್ಲಿನ ನಗರಸಭೆಯು ಸಾವಿರಾರು ಶವಗಳನ್ನು ಹೊರತೆಗೆದು ಸುಟ್ಟುಹಾಕಲಾಗಿತ್ತು.

ಇಲ್ಲಿ ನಿಷೇಧಾಜ್ಞೆ ವಿಧಿಸಿದ್ದರೂ ಮೃತದೇಹಗಳನ್ನು ಹೂಳುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ. ಘಾಟ್‌ನ ಪರಿಸ್ಥಿತಿ ಚಿಂತಾಜನಕವಾಗಿದೆ, ಇಲ್ಲಿ ಯಾವುದೇ ಮೂಲಸೌಲಭ್ಯ ಕಲ್ಪಿಸುತ್ತಿಲ್ಲ ಎಂದು ಘಾಟ್‌ಗೆ ಆಗಮಿಸಿದ ಜನರು ಆರೋಪಿಸಿದ್ದಾರೆ. ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಈ ಬಗ್ಗೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *