ಗಾಂಧೀಜಿಯವರ ಚಿಂತನೆಗಳನ್ನು ವಿದ್ಯಾರ್ಥಿ-ಯುವಜನರ ಮಧ್ಯೆ ಕೊಂಡೊಯ್ಯಬೇಕಿದೆ: ಬಸವರಾಜ ಪೂಜಾರ

ಹಾವೇರಿ: ಸತ್ಯ, ಅಹಿಂಸೆ, ಶಾಂತಿ ಹಾಗೂ ಸಾಮರಸ್ಯ ಸೇರಿದಂತೆ ಜೀವಪರ ಮೌಲ್ಯಗಳನ್ನು ಭಾರತ ಸೇರಿದಂತೆ ಜಗತ್ತಿಗೆ ಸಾರಿದ ಮಹಾತ್ಮ ಗಾಂಧೀಜಿ ಚಿಂತನೆಗಳನ್ನು ವಿದ್ಯಾರ್ಥಿ-ಯುವಜನರ ಮಧ್ಯೆ ಕೊಂಡೊಯ್ಯಬೇಕಿದೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು. ವಿದ್ಯಾರ್ಥಿ

ನಗರದ ಗಾಂಧಿ ವೃತ್ತ ಹಾಗೂ ಮುನ್ಸಿಫಲ್ ಹೈಸ್ಕೂಲ್ ಆವರಣದಲ್ಲಿ ಶುಕ್ರವಾರ ಸಮಾನ ಮನಸ್ಕ ಪ್ರಗತಿಪರ ಸಂಘಟನೆಗಳನ್ನೊಳಗೊಂಡ ಸೌಹಾರ್ದ ಕರ್ನಾಟಕ ಹಾವೇರಿ ಘಟಕವು ಆಯೋಜಿಸಿದ್ದ ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನಾಚರಣೆಯ ಅಂಗವಾಗಿ ಗಾಂಧೀಜಿಯವರ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು. ವಿದ್ಯಾರ್ಥಿ

ಗಾಂಧೀಜಿಯವರನ್ನು ಒಪ್ಪದ ಕೋಮುವಾದಿಗಳು ಇಂದಿಗೂ ಗಾಂಧೀಜಿಯವರ ವಿರುದ್ಧ ಸುಳ್ಳುಗಳನ್ನು ಹರಡುತ್ತಿದ್ದಾರೆ. ಗಾಂಧೀಜಿಯವರ ಮೇಲೆ ಎಷ್ಟೇ ದ್ವೇಷ ಕಾರಿದರೂ ಜನಮಾನಸದಲ್ಲಿ ಆಳವಾಗಿ ಬೇರೂರಿರುವ ಅವರ ತತ್ವ ಸಿದ್ಧಾಂತಗಳನ್ನು ಅಳಿಸುವುದಾಗಲೀ ಹಾಗೂ ಜನ ಮಾನಸದಿಂದ ಗಾಂಧೀಜಿಯವರನ್ನು ದೂರ ಮಾಡಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ: ಮತ್ತೆ ಬಂದಿರಾ ಬಾಪು, ಬನ್ನಿ

ಸ್ವಾತಂತ್ರ್ಯ ಹೋರಾಟಕ್ಕೆ ನಾಯಕತ್ವ ನೀಡಿದ್ದ ಗಾಂಧೀಜಿಯವರು ಸರ್ವ ಧರ್ಮ ಸಮನ್ವಯಕ್ಕಾಗಿ‌ ದುಡಿದು, ಧಾರ್ಮಿಕ ಮೂಲಭೂತವಾದಕ್ಕೆ ಬಲಿಯಾಗಿ ಹುತಾತ್ಮರಾದ ಗಾಂಧೀಜಿಯವರ ಸ್ಮರಣೆಯ ಈ ದಿನದಂದು ಎಲ್ಲ ರೀತಿಯ ಹಿಂಸೆ ಮತ್ತು ದ್ವೇಷಾತ್ಮಕ ಕೃತ್ಯಗಳನ್ನು ಖಂಡಿಸುವ ಜೊತೆಯಲ್ಲಿ ಸಹಿಷ್ಣತೆ ಹಾಗೂ ಸಮಾನತೆಗಳನ್ನು ಒಂದಾಗಿಸಿಕೊಂಡ ಸಮಾಜ ನಿರ್ಮಾಣಕ್ಕೆ ಶ್ರಮಿಸುವ ಪಣತೊಡಬೇಕಿದೆ ಎಂದರು. ವಿದ್ಯಾರ್ಥಿ

ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಗಾಂಧೀಜಿಯವರ ಸ್ಫೂರ್ತಿಯನ್ನು ಪಡೆದುಕೊಂಡು ಮಾನವಕುಲಕ್ಕೆ ಕಂಟಕವಾಗಿರುವ ಎಲ್ಲ ತರಹದ ಧಾರ್ಮಿಕ ಮೂಲಭೂತವಾದವನ್ನು ಕೊನೆಗಾಣಿಸಬೇಕು. ಭಾರತದ ಅಂತಃಸತ್ವವಾದ ಬಹುತ್ವ ಪರಂಪರೆಯನ್ನು ಉಳಿಸಿ ಬೆಳೆಸುವ ಸಂಕಲ್ಪವನ್ನು ಮಾಡಬೇಕು ಎಂದರು.

ಡಿಎಸ್ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಉಡಚಪ್ಪ ಮಾಳಗಿ ಮಾತನಾಡಿ, ಮಹಾತ್ಮ ಗಾಂಧೀಜಿಯವರು ದೇಶಕ್ಕಾಗಿ ಹಾಗೂ ಜನತೆಯ ಘನತೆಯ ಬಹುದೊಡ್ಡ ಹೋರಾಟವನ್ನು ಮಾಡಿದ್ದಾರೆ. ಅವರ ಹೋರಾಟದ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕಿದೆ ಎಂದರು.

ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ಗಾಂಧೀ ಚಿಂತನೆಗಳನ್ನು ಒಪ್ಪದ ಕೇಂದ್ರ ಸರಕಾರವು ಮನರೇಗಾ ಯೋಜನೆಗೆ ಇದ್ದ ಇಂದು ಗಾಂಧೀಜಿ ಹೆಸರನ್ನು  ತೆಗೆಯುತ್ತಿರುವುದು ಆತಂಕಕಾರಿಯಾಗಿದೆ. ಕೂಡಲೇ ಮೊದಲಿನಂತೆ ಯೋಜನೆಯ ಹೆಸರನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ಕಾರ್ನಾಟಕ ರಾಜ್ಯ ರೈತ ಸಂಘದ ಶಹರ ಘಟಕದ ಅಧ್ಯಕ್ಷ ಸುರೇಶ ಛಲವಾದಿ ಮಾತನಾಡಿ, ಗಾಂಧೀಜಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುವ ಜೊತೆಯಲ್ಲಿಯೇ ಜನ ಸಾಮನ್ಯರ ಬದುಕಿನ ಕುರಿತಾಗಿ ಅತೀವ ಕಾಳಜಿಯನ್ನು ಹೊಂದಿದ್ದರು. ಬ್ರಿಟಿಷ್ ಸರಕಾರ ಉಪ್ಪಿನ ಮೇಲೆ ತೆರಿಗೆ ಹೇರಿದಾಗ ಅದನ್ನು ವಿರೋಧಿಸಿ ದಂಡಿ ಸತ್ಯಾಗ್ರಹ ಹಮ್ಮಿಕೊಂಡಿದ್ದರು, ಈ ಸತ್ಯಾಗ್ರಹದಲ್ಲಿ ನಮ್ಮ ಜಿಲ್ಲೆಯ ಮೈಲಾರ ಮಹದೇವಪ್ಪನವರು ಪಾಲ್ಗೊಂಡಿದ್ದರು. ಇಂತಹ ಮಹಾನ್ ವ್ಯಕ್ತಿತ್ವ ಹೊಂದಿದ್ದ ಗಾಂಧೀಜಿಯವರ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಡಿಎಚ್ಎಸ್ ಜಿಲ್ಲಾ ಸಂಚಾಲಕ ವೀರಣ್ಣ ಗಡ್ಡಿಯವರ, ಸಾಹಿತಿ ಕಲಾವಿದರ ಬಳಗದ ಕಮಲಮ್ಮ ಬುಕ್ಕಶೆಟ್ರ ಮಾತನಾಡಿ, ಸಾಮರಸ್ಯ, ಸೌಹಾರ್ದತೆ, ಐಕ್ಯತೆ, ಸಮಗ್ರತೆ, ಸಾರ್ವಭೌಮತ್ವ ಗಟ್ಟಿಗೊಳಿಸಲು ಪ್ರಜಾಸತ್ತಾತ್ಮಕ ಹೋರಾಟಗಳನ್ನು ನಡೆಸುವ ಜೊತೆಯಲ್ಲಿ ಸಂವಿಧಾನಾತ್ಮಕ ಆಶಯಗಳ ಅನುಷ್ಠಾನಕ್ಕೆ ಬದ್ದತೆಯಿಂದ ಪ್ರತಿಯೋರ್ವರೂ ಶ್ರಮಿಸಬೇಕು ಎಂದರು.

ಈ ಸಂದರ್ಭದಲ್ಲಿ ಅಲೆಮಾರಿ ಸಮುದಾಯ ಸಂಘಟನೆ ಜಿಲ್ಲಾಧ್ಯಕ್ಷ ಸೆಟ್ಟಿ ವಿಭೂತಿ ನಾಯಕ್, ಬಿಎಸ್ಪಿ ಜಿಲ್ಲಾಧ್ಯಕ್ಷ ಎಂ.ಕೆ ಮಕಬುಲ್, ಬಿಜಿವಿಎಸ್ ರಾಜ್ಯ ಜಂಟಿ ಕಾರ್ಯದರ್ಶಿ ರೇಣುಕಾ ಗುಡಿಮನಿ, ಎಸ್ಎಫ್ಐ ಜಿಲ್ಲಾ ಮುಖಂಡ ಅರುಣ ನಾಗಾವತ್, ರೇಣುಕಾ ಕಹಾರ, ಶಾಹೀದ್ ಗುಡದೂರ, ಶಂಭು ಕಳಸದ, ಯುವ ಮುಖಂಡ ಶಿವಬಸಯ್ಯ ಹಿರೇಮಠ, ಶಿವಶಂಕರ ಕುರುಬೆಟ್ಟಹಿರೇಮಠ, ಸಾಹಿತಿ ಕಲಾವಿದರ ಬಳಗದ ನೇತ್ರಾ ಅಂಗಡಿ, ಜುಬೇದಾ ನಾಯಕ, ಅಕ್ಕಮಹಾದೇವಿ ಹಾನಗಲ್, ಅಂಬಿಕಾ‌ ಹಂಚಾಟೆ ಸೇರಿದಂತೆ ಎಸ್ಎಫ್ಐ, ಡಿವೈಎಫ್ಐ, ಸಾಹಿತಿ ಕಲಾವಿದರ ಬಳಗ, ಬಿಜಿವಿಎಸ್ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಇದನ್ನೂ ನೋಡಿ: ಗೋಡ್ಸೆಯ 8 ಪುಟದ ಹೇಳಿಕೆ 200 ಪುಟ ಮೀರಿದ್ದು ಹೇಗೆ? ನವ ಹಿಂದುತ್ವದ ಅಂಗಡಿ ಬಂದ್ ಮಾಡುವುದು ಹೇಗೆ?

Donate Janashakthi Media