ಗಾಂಧಿ –ಅಹಿಂಸೆಯ ಪ್ರವಾದಿಯೋ ಸ್ವಚ್ಛತಾ ರಾಯಭಾರಿಯೋ ?

ನಾ ದಿವಾಕರ

ಈ ಸಹಬಾಳ್ವೆಗೆ ತೊಡಕಾಗಿ ದೇಶದ ಯುವ ಸಮುದಾಯದಲ್ಲೂ ಸೃಷ್ಟಿಯಾಗಿರುವ ಮತದ್ವೇಷ ಮತ್ತು ಅಸಹಿಷ್ಣುತೆಯ ಚಿಂತನಾ ವಾಹಿನಿಗಳು ಎಲ್ಲ ರೀತಿಯ ದೌರ್ಜನ್ಯಗಳನ್ನೂ ಸೈದ್ಧಾಂತಿಕ ಸಾಪೇಕ್ಷತೆಯಿಂದ ನೋಡುವ ಒಂದು ಹೊಸ ಆಲೋಚನಾ ವಿಧಾನವನ್ನು ಹುಟ್ಟುಹಾಕಿದ್ದು, ಮಣಿಪುರದಂತಹ ಘಟನೆಗಳನ್ನೂ ಸಹ ಸಾರ್ವಜನಿಕ ವಿಸ್ಮೃತಿಗೆ ಜಾರುವಂತೆ ಮಾಡಿಬಿಟ್ಟಿವೆ. ಅಹಿಂಸೆಯ

ಪ್ರತಿಮೆಗಳಲ್ಲಿ ಕಳೆದುಹೋಗಿರುವ ಗಾಂಧಿ ತಾತ್ವಿಕವಾಗಿ ನಮ್ಮ ನಡುವೆ ವಿಸ್ಮೃತಿಗೆ ಜಾರಿದ್ದಾರೆ

ವರ್ಷಕ್ಕೊಮ್ಮೆ ಜನ್ಮದಿನದಂದು ಅಥವಾ ನಿಧನರಾದ ದಿನದಂದು ಸ್ವಾತಂತ್ರ್ಯಪೂರ್ವ ಭಾರತದ ದಾರ್ಶನಿಕರನ್ನು ನೆನೆದು ವೈಭವೀಕರಿಸುವ ಒಂದು ಪರಂಪರೆಗೆ ತುತ್ತಾಗಿರುವವರ ಪೈಕಿ ಗಾಂಧಿ ಪ್ರಥಮ ಶ್ರೇಣಿಯಲ್ಲಿ ನಿಲ್ಲುತ್ತಾರೆ. ಗಾಂಧಿಯನ್ನು ಒಪ್ಪುವ ಅಥವಾ ನಿರಾಕರಿಸುವ ದ್ವಂದ್ವ ಆಯ್ಕೆಗಳ ನಡುವೆಯೇ ಸಂಭ್ರಮಿಸಲ್ಪಡುವ ಗಾಂಧಿ ಅಕ್ಟೋಬರ್‌ 2ರಂದು ದೇಶಾದ್ಯಂತ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುತ್ತಾರೆ. ರಾಜಘಾಟದಲ್ಲಿ ಗಾಂಧಿ ಸಮಾಧಿಯ ಮುಂದೆ ಭಕ್ತಿಯಿಂದ ಕೈ ಮುಗಿದು,“ ವೈಷ್ಣವ ಜನತೋ,,,,” ಭಜಿಸಿ “ ರಘುಪತಿ ರಾಘವ ,,,,” ತಾಳಕ್ಕೆ ಮಿಡಿಯುವ ರಾಜಕೀಯ ನಾಯಕತ್ವಕ್ಕೆ ಗಾಂಧಿ ಜನಮಾನಸವನ್ನು ಸೆಳೆಯುವ ಚಾರಿತ್ರಿಕ ಆಯಸ್ಕಾಂತದಂತೆ ಕಾಣುತ್ತಾರೆ. ಹಾಗಾಗಿಯೇ ಗಾಂಧಿಯನ್ನು ಕೊಂದ ಗೋಡ್ಸೆಗೆ ವಂದಿಸುವ ಮನಸ್ಸುಗಳೇ ಗಾಂಧಿಯ ಪ್ರತಿಮೆಗಳಿಗೂ ನಮಿಸುತ್ತವೆ, ಯಾವುದೇ ಮುಜುಗರ ಇಲ್ಲದೆ.

ಬಹುಶಃ ಭಾರತದ ರಾಜಕೀಯ ನಾಯಕತ್ವಕ್ಕೆ ಇದು ಅನಿವಾರ್ಯ ಎನಿಸಿರಬಹುದು. ತತ್ವ ಸಿದ್ಧಾಂತಗಳಿಂದಾಚೆಗೂ ಗಾಂಧಿ ಪ್ರಸ್ತುತವಾಗುತ್ತಾರೆ ಎಂದರೆ ಅದರ ಹಿಂದೆ ಎರಡು ಕಾರಣಗಳಿರಲು ಸಾಧ್ಯ. ಮೊದಲನೆಯದು ಭಾರತವು ವಸಾಹತು ದಾಸ್ಯದಿಂದ ವಿಮೋಚನೆ ಪಡೆಯುವ ಹಾದಿಯಲ್ಲಿ ಮಹಾತ್ಮನ ಕೊಡುಗೆ. ವಿಭಿನ್ನ ತಾತ್ವಿಕ ನೆಲೆಗಳಲ್ಲಿ ನಿಂತು ಗಾಂಧಿಯ ಕೊಡುಗೆಯನ್ನು ನಿರಾಕರಿಸುವ ಅಥವಾ ಖಂಡತುಂಡವಾಗಿ ಅಲ್ಲಗಳೆಯುವ ಸಂಕಥನಗಳ ನಡುವೆಯೇ, ಭಾರತದ ಸ್ವಾತಂತ್ರ್ಯಕ್ಕಿಂತಲೂ ಹೆಚ್ಚಾಗಿ ದೇಶದ ಭೌಗೋಳಿಕ ವಿಭಜನೆಯ ಕಾರಣಕರ್ತನಾಗಿ ನೋಡುವ ಒಂದು ಸಮಕಾಲೀನ ಪ್ರತಿಪಾದನೆಗೂ ಗಾಂಧಿ ಮುಖಾಮುಖಿಯಾಗುತ್ತಾರೆ. ಒಂದೆಡೆ ಪೂಜನೀಯ ಜಂಗಮನಾಗಿ ಮತ್ತೊಂದೆಡೆ ನಿಂದಾತ್ಮಕ ಖಂಡನೆಯ ಸ್ಥಾವರವಾಗಿ ಗಾಂಧಿ, ಅವರು ಹುಟ್ಟಿದ ದಿನದಂದು ದೇಶಾದ್ಯಂತ ಚರ್ಚೆಗೊಳಗಾಗುತ್ತಾರೆ.

ಎರಡನೆಯ ಕಾರಣ 21ನೆಯ ಶತಮಾನದ ಡಿಜಿಟಲ್‌ ಯುಗದಲ್ಲಿ, ಅಮೃತಕಾಲದತ್ತ ಧಾವಿಸುತ್ತಿರುವ ಭಾರತದ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಪರಿಸರದಲ್ಲಿ ಗಾಂಧಿಯ ಪ್ರಸ್ತುತತೆ. ಅತಿ ಹೆಚ್ಚು ಚರ್ಚೆಗೊಳಗಾಗಿರುವ ಗಾಂಧಿಯ “ ಹಿಂದ್‌ ಸ್ವರಾಜ್‌ ” ಮತ್ತು ಅದರೊಳಗಿನ ತಾತ್ವಿಕ ನಿಲುವುಗಳನ್ನು ಎಷ್ಟೇ ನಿರಾಕರಿಸಿದರೂ, ವರ್ತಮಾನದ ಭಾರತದ ಸ್ಥಿತ್ಯಂತರಗಳಿಗೆ ಮುಖಾಮುಖಿಯಾಗುತ್ತಲೇ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ. ಹಿಂದ್‌ ಸ್ವರಾಜ್‌ ಮಾನವ ಜಗತ್ತನ್ನು ಕಾಡುವ ಜ್ವಲಂತ ಸವಾಲುಗಳನ್ನು ವೈಜ್ಞಾನಿಕ ನೆಲೆಯಲ್ಲಿ ವಿಶ್ಲೇಷಿಸುವ ಒಂದು ಕೃತಿಯಲ್ಲ. ಬದಲಾಗಿ ಒಳಗಿನವರಾಗಿಯೇ ಭವಿಷ್ಯದ ಭಾರತ ಹೇಗಿರಬೇಕು ಎಂದು ವ್ಯಾಖ್ಯಾನಿಸುವ ಒಂದು ತಾತ್ವಿಕ ಪ್ರತಿಪಾದನೆ.  ಹಾಗಾಗಿಯೇ ವರ್ತಮಾನದಲ್ಲಿ ನಿಂತು ನೋಡುವಾಗ ಆ ತತ್ವಗಳೊಡನೆ ಅನುಸಂಧಾನ ನಡೆಸುತ್ತಾ, ಮುಖಾಮುಖಿಯಾಗುತ್ತಾ ಅಲ್ಲಗಳೆಯುವ/ಒಪ್ಪಿಕೊಳ್ಳುವ ಕಸರತ್ತು ಬೌದ್ಧಿಕ ವಲಯಗಳಲ್ಲಿ ನಡೆಯುತ್ತಲೇ ಇರುತ್ತದೆ. ಅಕ್ಟೋಬರ್‌ 2ರ ವಿಚಾರ ಸಂಕಿರಣಗಳು ಈ ಮಿತಿಯನ್ನು ದಾಟಿ ಹೋಗುವುದು ವಿರಳ.

ವರ್ತಮಾನದಲ್ಲಿ ಗಾಂಧಿ

ಆದರೆ ಭಾರತದ ಇವತ್ತಿನ ಸಂದರ್ಭದಲ್ಲಿ ನಿಂತು ನೋಡುವಾಗ ಗಾಂಧಿಯನ್ನು ಹೇಗೆ ಪರಿಭಾವಿಸಬೇಕು ? ದೇಶದ ಒಂದು ಬೃಹತ್‌ ಜನಸಮೂಹ, ವಿಶೇಷವಾಗಿ ಯುವಜನತೆ ಮತ್ತು ಕೊಂಚಮಟ್ಟಿಗೆ ಹಿರಿಯ ತಲೆಮಾರು, ಗಾಂಧಿ ದ್ವೇಷವನ್ನೇ ತಮ್ಮ ಬೌದ್ಧಿಕ ಅಸ್ತ್ರವನ್ನಾಗಿ ಬಳಸುತ್ತಿರುವ ಒಂದು ದುರಂತ ಸನ್ನಿವೇಶದಲ್ಲಿ ನಾವಿದ್ದೇವೆ. ಈ ದ್ವೇಷಾಸೂಯೆಗಳಿಗೆ ಕಾರಣ ಸ್ವತಃ ಗಾಂಧಿ ಆಗಿರಲಾರರು ಏಕೆಂದರೆ ಸ್ವಾತಂತ್ರ್ಯಪೂರ್ವದಲ್ಲಿ ಗಾಂಧಿಯ ಕಡು ವಿರೋಧಿಯಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್‌ ಸಹ ಮಹಾತ್ಮನನ್ನು ದ್ವೇಷಿಸುತ್ತಿರಲಿಲ್ಲ. ಸೈದ್ದಾಂತಿಕ ನೆಲೆಯಲ್ಲಿ ಗಾಂಧಿಯನ್ನು ವಿಮರ್ಶಾತ್ಮಕವಾಗಿ ನೋಡುವ ಮೂಲಕ ಅಂಬೇಡ್ಕರ್‌ ಗಾಂಧಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರೂ ಅಲ್ಲಿ ದ್ವೇಷ ಕಾಣಲಾಗುವುದಿಲ್ಲ. ಆದರೆ ಈಗ ನಾವು ಕಾಣುತ್ತಿರುವ “ ಗಾಂಧಿ ದ್ವೇಷ ” ಇಂತಹ ಸಂಯಮ/ಸಭ್ಯತೆಯನ್ನು ಮೀರಿರುವುದರಿಂದ ವಿವೇಕ ವಿವೇಚನೆಯನ್ನೂ ಕಳೆದುಕೊಂಡಂತೆ ಕಾಣುತ್ತದೆ. ವಾಟ್ಸಾಪ್‌ ವಿಶ್ವವಿದ್ಯಾಲಯದ ಬೌದ್ಧಿಕ ಉತ್ಖನನಗಳು ಹಾಗೂ Some-ಶೋಧನೆಗಳು ಸೃಷ್ಟಿಸಿರುವ ಅಗಾಧ ಅಕ್ಷರ ಸರಕುಗಳಲ್ಲಿ ಗಾಂಧಿ “ ನಿರಾಕರಿಸಲ್ಪಡುವ ” ವ್ಯಕ್ತಿಯಾಗಿ ಕಾಣುತ್ತಾರೆ.

ಈ ದ್ವಂದ್ವಗಳ ನಡುವೆಯೇ ಅಕ್ಟೋಬರ್‌ 2ರ ಗಾಂಧಿ ಜಯಂತಿಯನ್ನು ಸ್ವಚ್ಛತಾ ಅಭಿಯಾನದ ಒಂದು ಚಾರಿತ್ರಿಕ ಸಂದರ್ಭವಾಗಿ ಆಚರಿಸಲಾಗುತ್ತಿದೆ. ಕೇಂದ್ರ ಸರ್ಕಾರದ “ ಸ್ವಚ್ಛ ಭಾರತ್-‌ ಸ್ವಸ್ಥ ಭಾರತ್‌ ” (ಶುಚಿಯಾದ ಭಾರತ-ಆರೋಗ್ಯಕರ ಭಾರತ) ಅಭಿಯಾನದಲ್ಲಿ ದೇಶಾದ್ಯಂತ ಕೋಟ್ಯಂತರ ಜನರು ಭಾಗಿಯಾಗಿ ರಸ್ತೆಗಳನ್ನು, ಉದ್ಯಾನಗಳನ್ನು, ಮೈದಾನಗಳನ್ನು ಸ್ವಚ್ಛಗೊಳಿಸಿದ್ದಾರೆ. ಬಾಹ್ಯ ಸಮಾಜದ ವಾತಾವರಣದ ಸ್ವಚ್ಛತೆಗೂ ಸಾರ್ವಜನಿಕರ ಆರೋಗ್ಯಕ್ಕೂ ನೇರ ಸಂಬಂಧ ಇರುವುದರಿಂದ ಇಂತಹ ಅಭಿಯಾನಗಳು ಜನಸಾಮಾನ್ಯರ ನಡುವೆ ಕೊಂಚ ಮಟ್ಟಿಗಾದರೂ ವಿವೇಕ ಮೂಡಿಸಲು ನೆರವಾಗಬಹುದು. ಅನಿವಾರ್ಯವಾಗಿ ಮನದಾಳದಲ್ಲಿ ಗಾಂಧಿ ಹಂತಕನನ್ನು ಪೂಜಿಸುವವರೂ, ಈ ಅಭಿಯಾನದಲ್ಲಿ ಪೊರಕೆ ಹಿಡಿದು ಗುಡ್ಡೆ ಹಾಕಿದ ಕಸವನ್ನು ತೆಗೆಯುವ ಮೂಲಕ ಸಾಂಕೇತಿಕವಾಗಿ ಗಾಂಧಿಯನ್ನು ನೆನಪಿಸುತ್ತಾರೆ.

ಇದನ್ನೂ ಓದಿ: ಹೊಳೆಹೊನ್ನೂರಿನಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಹಾನಿ:ಇಬ್ಬರ ಆರೋಪಿಗಳ ಬಂಧನ

ಆದರೆ ಇಲ್ಲಿ ಏಳುವ ಪ್ರಶ್ನೆ, ಗಾಂಧಿ ಸ್ವಚ್ಛತೆಯ ರಾಯಭಾರಿಯೋ ಅಥವಾ ಸಂಯಮ-ಸಹನೆ-ಅಹಿಂಸೆಯ ರಾಯಭಾರಿಯೋ ? ಗಾಂಧಿ ಜಯಂತಿಯನ್ನು ಸ್ವಚ್ಛತಾ ದಿನವನ್ನಾಗಿ ಆಚರಿಸುವ ಮೂಲಕ, ಮಹಾವೀರ-ಬುದ್ಧನ ನಂತರ ಅಹಿಂಸಾ ತತ್ವವನ್ನು ಜಗತ್ತಿಗೆ ಪರಿಣಾಮಕಾರಿಯಾಗಿ ಸಾರಿದ ಗಾಂಧಿಯ ಮತ್ತೊಂದು ಮುಖವನ್ನು ನಾವು ಮರೆಮಾಚುತ್ತಿದ್ದೇವೆಯೇ ? ಗಾಂಧಿಯ ಅಹಿಂಸಾ ತತ್ವವನ್ನು ವಿಭಿನ್ನ ಆಯಾಮಗಳಲ್ಲಿ, ಸೈದ್ಧಾಂತಿಕ ನೆಲೆಗಳಲ್ಲಿ, ಚಾರಿತ್ರಿಕ ಸಂದರ್ಭಗಳಿಗೆ ಅನುಸಾರವಾಗಿ ಮರು ನಿರ್ವಚಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇವೆ. ಈ ತಾತ್ವಿಕ ಚರ್ಚೆಗಳನ್ನು ಬದಿಗಿಟ್ಟು ನೋಡಿದಾಗ, ಶಾಂತಿ-ಸಹನೆ-ಅಹಿಂಸೆ ಎನ್ನುವ ಒಂದು ಬೌದ್ಧಿಕ-ಮಾನಸಿಕ-ತಾತ್ವಿಕ ಅಭಿವ್ಯಕ್ತಿ ನಮ್ಮ ವರ್ತಮಾನದ ಸಮಾಜಕ್ಕೆ ಅತ್ಯಗತ್ಯವಾಗಿ ಕಾಣುವುದು ಸತ್ಯ.

ಸಾಮಾಜಿಕ ಕ್ರೌರ್ಯದ ನಡುವೆ

ಆದರೆ ನಮ್ಮ ಸಮಾಜದಲ್ಲಿ ಕಾಣುತ್ತಿರುವ ಹಿಂಸೆ ಮತ್ತು ಕ್ರೌರ್ಯ ಗಾಂಧಿ ಪ್ರಣೀತ ಅಭಿವ್ಯಕ್ತಿಗಳಿಗೆ ತದ್ವಿರುದ್ಧವಾಗಿಯೇ ಕಾಣುತ್ತಿವೆ. ಮಣಿಪುರದ ಬೆತ್ತಲೆ-ಅತ್ಯಾಚಾರ ಪ್ರಕರಣಗಳು, ಉಜ್ಜಯಿನಿಯಲ್ಲಿ ನಡೆದ ಬಾಲಕಿಯ ಮೇಲಿನ ಅತ್ಯಾಚಾರ, ಒಲಂಪಿಕ್‌ ವಿಜೇತ ಮಹಿಳಾ ಕುಸ್ತಿಪಟುಗಳು ಅನುಭವಿಸಿದ ಲೈಂಗಿಕ ಕಿರುಕುಳ, ನಿತ್ಯ ಸುದ್ದಿಯಾಗಿರುವ ಮರ್ಯಾದೆಗೇಡು ಹತ್ಯೆ, ಸಾಮಾಜಿಕ ಬಹಿಷ್ಕಾರ, ಅಸ್ಪೃಶ್ಯತೆಯ ಪ್ರಕರಣಗಳು, ಉತ್ತರ-ದಕ್ಷಿಣಾದಿಯಾಗಿ ಕಣ್ಣೆದುರೇ ನಡೆಯುತ್ತಿರುವ ಮಹಿಳಾ ದೌರ್ಜನ್ಯಗಳು ಮತ್ತು ಜಾತಿ ದ್ವೇಷದ ಕೃತ್ಯಗಳು, ಮತೀಯ ದ್ವೇಷ ಮತ್ತು ಮತಾಂಧತೆಯ ಕರಾಳ ಛಾಯೆ ಇವೆಲ್ಲವೂ ವರ್ತಮಾನದ ಭಾರತವನ್ನು ಗಾಂಧಿಯ ತಾತ್ವಿಕ ನೆಲೆಗಳಿಂದ ಪ್ರತ್ಯೇಕಿಸುವುದೇ ಆಗಿದೆಯಲ್ಲವೇ ? ವರ್ಣಾಶ್ರಮ ಧರ್ಮವನ್ನು ಒಪ್ಪಿದರೂ ತಮ್ಮ ಜೀವನದ ಕೊನೆಯ ಹಂತದಲ್ಲಿ ಅಸ್ಪೃಶ್ಯತೆಯ ವಿರುದ್ಧ ಧ್ವನಿಎತ್ತಿದ್ದ ಗಾಂಧಿ ಶಾಂತಿ-ಸಂಯಮ-ಸಹಬಾಳ್ವೆಯನ್ನು ಸಾಧಿಸಲು ತಮ್ಮ ಅಹಿಂಸಾ ತತ್ವಗಳನ್ನೇ ಅನುಸರಿಸಿದ್ದರು.

ಈ ಸಹಬಾಳ್ವೆಗೆ ತೊಡಕಾಗಿ ದೇಶದ ಯುವ ಸಮುದಾಯದಲ್ಲೂ ಸೃಷ್ಟಿಯಾಗಿರುವ ಮತದ್ವೇಷ ಮತ್ತು ಅಸಹಿಷ್ಣುತೆಯ ಚಿಂತನಾ ವಾಹಿನಿಗಳು ಎಲ್ಲ ರೀತಿಯ ದೌರ್ಜನ್ಯಗಳನ್ನೂ ಸೈದ್ಧಾಂತಿಕ ಸಾಪೇಕ್ಷತೆಯಿಂದ ನೋಡುವ ಒಂದು ಹೊಸ ಆಲೋಚನಾ ವಿಧಾನವನ್ನು ಹುಟ್ಟುಹಾಕಿದ್ದು, ಮಣಿಪುರದಂತಹ ಘಟನೆಗಳನ್ನೂ ಸಹ ಸಾರ್ವಜನಿಕ ವಿಸ್ಮೃತಿಗೆ ಜಾರುವಂತೆ ಮಾಡಿಬಿಟ್ಟಿವೆ. ಬೌದ್ಧಿಕ ನಿಷ್ಕ್ರಿಯತೆಯನ್ನು ನಿರ್ಲಿಪ್ತತೆ ಎಂದು ಭಾವಿಸುವ ಮೂಲಕ ವಿಶಾಲ ಸಮಾಜವು ಸುತ್ತಲಿನ ದೌರ್ಜನ್ಯ ತಾರತಮ್ಯಗಳಿಗೆ ಕುರುಡಾಗುತ್ತಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ.  ಈ ಅಂಧತ್ವವೇ ನಮ್ಮನ್ನು ಗುಂಪು ಥಳಿತಗಳಂತಹ ದುಷ್ಕೃತ್ಯಗಳಿಗೆ, ಸಾಮಾಜಿಕ ಬಹಿಷ್ಕಾರದಂತಹ ಅಮಾನುಷ ನಡವಳಿಕೆಗಳಿಗೆ ವಿಮುಖವಾಗುವಂತೆ ಮಾಡಿದೆ. ಇಲ್ಲಿ ನಮಗೆ ಗಾಂಧಿಯ ಸಹನೆ-ಅಹಿಂಸೆಯ ತಾತ್ವಿಕ ನೆಲೆಗಳು ಹೆಚ್ಚು ಅಪ್ಯಾಯಮಾನವಾಗಿ ಕಾಣಬೇಕಲ್ಲವೇ ?

ಆದರೆ ನಾವು ಗಾಂಧಿ ಅನುಸರಿಸಲೆತ್ನಿಸಿದ ಈ ವಿವೇಕಯುತ ಮಾರ್ಗಗಳನ್ನು ನಿರ್ಲಕ್ಷಿಸುತ್ತಲೇ, ಸಾರ್ವಜನಿಕ ಸ್ವಚ್ಛತೆಯ ನೆಲೆಯಲ್ಲಿ ಅವರನ್ನು ಸಂಭ್ರಮಿಸುತ್ತಿದ್ದೇವೆ. ಗಾಂಧಿ ಜಯಂತಿಯ ಸಂದರ್ಭದಲ್ಲಿ ಪೊರಕೆಗಳನ್ನು ಹಿಡಿದು ಸೆಲ್ಫಿಗಳೊಂದಿಗೆ ವಿಜೃಂಭಿಸುವ ಎಷ್ಟು ರಾಜಕಾರಣಿಗಳಲ್ಲಿ ದ್ವೇಷಾಸೂಯೆಗಳನ್ನು ಮೀರಿ ನಿಲ್ಲುವ ಸಹನಶೀಲ ವಿವೇಚನೆ ಇದೆ ? ಮೂಲತಃ ಗಾಂಧಿ ರಸ್ತೆ ಬದಿಯ ತ್ಯಾಜ್ಯಗಳನ್ನು, ಅಸ್ಪೃಶ್ಯರ ಕೇರಿಗಳ ಶೌಚವನ್ನು ಸ್ವಚ್ಛಗೊಳಿಸುವ ಮೂಲಕ ಪ್ರತಿ ವ್ಯಕ್ತಿಯಲ್ಲೂ ತನ್ನ ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮನಸ್ಥಿತಿಯನ್ನು ರೂಪಿಸಿಕೊಳ್ಳಲು ಒಂದು ಸಂದೇಶವನ್ನು ನೀಡಿದ್ದರು. ಈ ದೈಹಿಕ ಕಸರತ್ತು ಮಾಡುವ ಮೂಲಕ ಮಾನಸಿಕವಾಗಿ ಮನುಷ್ಯನು ತನ್ನ ಮನದೊಳಗಿರುವ ಬೌದ್ಧಿಕ ತ್ಯಾಜ್ಯಗಳನ್ನು, ಮಲಿನವನ್ನು ತೊಳೆದುಕೊಳ್ಳುವುದೂ ಗಾಂಧಿಯ ಆಶಯವಾಗಿತ್ತು.

ಆದರೆ ಮಲ ಬಾಚುವುದು, ತಲೆಯ ಮೇಲೆ ಮಲ ಹೊರುವುದು, ಮಲಗುಂಡಿಗಳಲ್ಲಿ ಇಳಿದು ಸ್ವಚ್ಛಗೊಳಿಸುವುದು ಇಂತಹ ಅಮಾನುಷ ಕ್ರಿಯೆಗಳು ಇಂದಿಗೂ ಕಂಡುಬರುತ್ತಿರುವ  ನವ ಭಾರತದಲ್ಲಿ ಈ ಆಶಯ ತಳಮಟ್ಟದಲ್ಲಿ ಸಾಕಾರಗೊಂಡಿದೆಯೇ ? ಮಾನಸಿಕವಾಗಿ ನಮ್ಮ ಬೌದ್ಧಿಕ ಮಾಲಿನ್ಯವನ್ನು ತೊಳೆದುಕೊಂಡಿದ್ದೇವೆಯೇ ? ಹಿಂಸೆ, ಕ್ರೌರ್ಯ, ಅಸಹಿಷ್ಣುತೆ ಮತ್ತು ದ್ವೇಷಾಸೂಯೆಗಳೆಂಬ ಮಾಲಿನ್ಯಗಳನ್ನು ತೊಡೆದುಹಾಕಿದ್ದೇವೆಯೇ ? ಜಾತಿ ಧರ್ಮಗಳ ಬೇಲಿಗಳಿಂದಾಚೆಗೆ ಕಾಣುವ ಮನುಷ್ಯ ಸಮಾಜವನ್ನು “ ಒಳಗೊಳ್ಳುವ ” ಅಥವಾ “ ನಮ್ಮವರು ” ಎಂದು ಭಾವಿಸುವ ಸಹನಶೀಲ ಸಮಾಜ ಕಟ್ಟುವತ್ತ ನಾವು ಯೋಚಿಸುತ್ತಿದ್ದೇವೆಯೇ ? ಇಡೀ ದೇಶವೇ ಬಹಿರ್ದೆಸೆ ಮುಕ್ತ, ಬಯಲು ಶೌಚ ಮುಕ್ತ ಎಂದು ಘೋಷಣೆಯಾದರೂ, ಸ್ವಚ್ಛ ಭಾರತದ ಅಭಿಯಾನ ದೇಶದಲ್ಲಿ ಒಂದು ನಾಗರಿಕ ಪ್ರಜ್ಞೆಯನ್ನು ಉದ್ಧೀಪನಗೊಳಿಸುವಲ್ಲಿ ಯಶಸ್ವಿಯಾಗಿದ್ದರೂ, ಮಾನಸಿಕವಾಗಿ ಭಾರತೀಯ ಸಮಾಜ ತನ್ನೊಳಗೆ ಅಂತರ್ಗತವಾಗಿರುವ ಮಡಿ-ಮೈಲಿಗೆಯ ಮಾಲಿನ್ಯದಿಂದ ಮುಕ್ತವಾಗಿದೆಯೇ ? ಮುಟ್ಟಿಸಿಕೊಳ್ಳುವುದೂ, ಮುಟ್ಟುವುದೂ ಸಹ ಇಂದಿಗೂ ಅಪರಾಧವಾಗಿ ಕಾಣುವ ಸಾಮಾಜಿಕ ವಾತಾವರಣದಲ್ಲಿ ಸ್ಪೃಶ್ಯಾಸ್ಪೃಶ್ಯತೆಯ ಭಾವನೆಗಳು ಇಂದಿಗೂ ಸಾಂಪ್ರದಾಯಿಕ ಜಾತಿ ಶ್ರೇಣಿಯ ಚೌಕಟ್ಟಿನೊಳಗೇ ವ್ಯಕ್ತವಾಗುತ್ತಿರುವಾಗ, ಗಾಂಧಿ ಹೇಗೆ ಸ್ವಚ್ಛ ಭಾರತದ ರಾಯಭಾರಿಯಾಗಿ ಕಾಣಲು ಸಾಧ್ಯ ?

ಇದನ್ನೂ ಓದಿ: 12ನೇ ತರಗತಿ ಪಠ್ಯ : ಮಹಾತ್ಮ ಗಾಂಧಿ, ಹಿಂದೂ-ಮುಸ್ಲಿಂ ಏಕತೆ, ಆರ್‌ಎಸ್‌ಎಸ್‌ ನಿಷೇಧ ವಿಚಾರ ಕೈಬಿಟ್ಟ ಎನ್‌ಸಿಇಆರ್‌ಟಿ

ಸ್ಮರಣೆಯಿಂದಾಚೆಗೆ ಬಾಪು

ಆದರೂ ನಾವು ಭಕ್ತಿ ಭಾವದಿಂದ ಗಾಂಧಿ ಜಯಂತಿಯನ್ನು ಸ್ವಚ್ಛ ಭಾರತ್‌ ಅಭಿಯಾನದ ಒಂದು ಚಾರಿತ್ರಿಕ ದಿನವನ್ನಾಗಿ ಆಚರಿಸುತ್ತಿದ್ದೇವೆ. ಗಾಂಧಿ ಬಯಸಿದ ಬೌದ್ಧಿಕ ಸ್ವಚ್ಛತೆಯ ಬಗ್ಗೆ ಕಿಂಚಿತ್ತೂ ಯೋಚನೆ ಮಾಡದೆ ಸಾರ್ವಜನಿಕ ಸ್ವಚ್ಛತೆಯ ಕ್ರಿಯಾಶೀಲ ಚಟುವಟಿಕೆಗಳ ನಡುವೆ ಗಾಂಧಿಯನ್ನು ಸ್ಮರಿಸುತ್ತಿದ್ದೇವೆ. ಆದರೆ ಬೌದ್ಧಿಕವಾಗಿ ನವ ಭಾರತಕ್ಕೆ, ಅಮೃತಕಾಲದ ಭವಿಷ್ಯ ಭಾರತಕ್ಕೆ ಅತ್ಯವಶ್ಯವಾದ ಶಾಂತಿ-ಸಹನೆ-ಸಂಯಮ-ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಮಹಾತ್ಮನಲ್ಲಿ ಕಾಣುವ ಮೂಲಕ ನಾವು ಗಾಂಧಿ ಜಯಂತಿಯನ್ನು ಅಚರಿಸಬೇಕಿದೆ. ಚಾರಿತ್ರಿಕವಾಗಿ ಗಾಂಧಿಯನ್ನು ಆ ಕಾಲದ ಸ್ವಾತಂತ್ರ್ಯ ಸಂಗ್ರಾಮಿಗಳಿಗೆ ಮುಖಾಮುಖಿಯಾಗಿಸುತ್ತಾ ದ್ವಂದ್ವ ಆಯ್ಕೆಗಳ ನಡುವೆ ಗಾಂಧಿಯನ್ನು ತಿರಸ್ಕರಿಸುತ್ತಾ, ಅಲ್ಲಗಳೆಯುತ್ತಾ, ಆರಾಧಿಸುತ್ತಾ ನಮ್ಮ ಬೌದ್ಧಿಕ ಚಿಂತನೆಗಳನ್ನು ಜಟಿಲಗೊಳಿಸುವ ಬದಲು, ವರ್ತಮಾನದ ಭಾರತದೊಡನೆ  ಮಹಾತ್ಮನ ಅನುಸಂಧಾನ ಮಾಡುವ ಮೂಲಕ, ಗಾಂಧಿ ನಮ್ಮೊಳಗೆ ಸೃಜಿಸಬಹುದಾದ ಮನುಷ್ಯಪರ ಆಲೋಚನೆಗಳನ್ನು ನಾವು ಅಪ್ಪಿಕೊಳ್ಳಬೇಕಿದೆ.

ವಿಶಾಲ ಸಮಾಜದಲ್ಲಿ, ಯುವ ಸಮೂಹದ ನಡುವೆ, ಸುಶಿಕ್ಷಿತ ವಲಯದಲ್ಲೂ ಸಹ ಹೆಚ್ಚಾಗುತ್ತಿರುವ ಅಸಹಿಷ್ಣುತೆ, ದ್ವೇಷಾಸೂಯೆಗಳನ್ನು ಮರೆತು ಸೌಹಾರ್ದಯುತ ಸಹಬಾಳ್ವೆಯ ಸೇತುವೆಗಳನ್ನು ನಿರ್ಮಿಸುವ ಮೂಲಕ ನಮ್ಮ ನಡುವೆ ನಾವೇ ಕಟ್ಟಿಕೊಂಡಿರುವ ಜಾತಿ-ಮತ-ಧರ್ಮ-ಪಂಥ-ಸಿದ್ಧಾಂತಗಳ ಗೋಡೆಗಳನ್ನು ಕೆಡವಿ, ಹೊಸ ಸಮಾಜವನ್ನು ಕಟ್ಟಲು ಗಾಂಧಿ ಒಬ್ಬ ರಾಯಭಾರಿಯಾಗಿ ಕಾಣುತ್ತಾರೆ. ನಿಷ್ಠುರ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ಗಾಂಧಿ ನಮ್ಮ ನಡುವೆ ನಿಲ್ಲುವುದು ಈ ಕಾರಣಕ್ಕಾಗಿಯೇ. ಭಾರತವನ್ನು ಮತ್ತಷ್ಟು ಸ್ವಚ್ಛಗೊಳಿಸೋಣ, ನಮ್ಮ ಮಿದುಳಿನಲ್ಲಿರುವ ತ್ಯಾಜ್ಯ-ಮಾಲಿನ್ಯಗಳನ್ನು ತೊಡೆದುಹಾಕಲು “ ಮನಸ್ಸು” ಎಂಬ ಪೊರಕೆಯನ್ನು ಬಳಸಿ ಬೌದ್ಧಿಕವಾಗಿ ಸ್ವಚ್ಛ ಭಾರತವನ್ನು ಕಟ್ಟೋಣ. ಗಾಂಧಿ ಶಾಂತಿ ಸಹನೆಯ ಪ್ರವಾದಿಯಾಗಿ ನಮ್ಮೊಡನೆ ಇದ್ದರೆ , ಬೌದ್ಧಿಕ-ಭೌತಿಕ ಸ್ವಚ್ಛತೆ ಸಹಜವಾಗಿ ಮೂಡುತ್ತದೆ.

-೦-೦-೦-

ವಿಡಿಯೋ ನೋಡಿ: ಬಾಪು ಮತ್ತೆ ಮತ್ತೆ ನೀ ನೆನಪಾಗುತ್ತೀದ್ದಿಯಾ – ಕೆ.ಮಹಾಂತೇಶ್‌ರವರ ಕವಿತೆ Janashakthi Media

Donate Janashakthi Media

Leave a Reply

Your email address will not be published. Required fields are marked *