ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ ಬಲಗೊಳ್ಳುತ್ತಿದೆ. ಪಂಜಾಬ್, ಮಹಾರಾಷ್ಟ್ರ, ಉತ್ತರ ಪ್ರದೇಶ, ತೆಲಂಗಾಣ, ಕರ್ನಾಟಕದಲ್ಲಿ ರೈತ- ಕಾರ್ಮಿಕರು ಚಳುವಳಿ ಜೋರಾಗಿ ನಡೆಯುತ್ತಿದೆ. ಸೆಪ್ಟಂಬರ್ 28 ರ ಕರ್ನಾಟಕ ಬಂದ್ ಯಶಸ್ವಿಯಾಗುವ ಮೂಲಕ ರೈತರಿಗೆ ಬಲ ಬಂದಿದ್ದು ಅಕ್ಟೋಬರ್ 02 ರಂದು ಉಪವಾಸ ಸತ್ಯಾಗ್ರಹ ನಡೆಸಲು ರೈತ ಸಂಘಟನೆಗಳು ತೀರ್ಮಾನಿಸಿವೆ.
ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಯ ತಿದ್ದುಪಡಿಗಳು ಹಾಗೂ `ಕೃಷಿ ಉತ್ಪನ್ನ ವಾಣಿಜ್ಯ ಮತ್ತು ಮಾರಾಟ (ಉತ್ತೇಜನ ಮತ್ತು ಬೆಂಬಲ) ಕಾಯ್ದೆ – 2020’, “ಬೆಲೆ ಭರವಸೆ (ಸಶಕ್ತಿಕರಣ ಹಾಗು ಸುರಕ್ಷೆ) ಮತ್ತು ಕೃಷಿ ಸೇವೆಗಳ ಕಾಯ್ದೆ-2020”, “ಅಗತ್ಯ ವಸ್ತುಗಳ ಕಾಯ್ದೆ-2020” “ಕಾರ್ಮಿಕ ವಿರೋಧಿ ಕಾಯ್ದೆ” “ವಿದ್ಯುತ್ ಕಾಯ್ದೆ-2020”ಗಳ ಜಾರಿಯನ್ನು ವಿರೋಧಿಸಿ ಹಾಗೂ ಇವುಗಳನ್ನು ಕೂಡಲೇ ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿ `ಅಕ್ಟೋಬರ್ 2, 2020 ಗಾಂಧಿ ಜಂಯಂತಿ’ ಯನ್ನು ರಾಷ್ಟ್ರವ್ಯಾಪಿ “ಪ್ರತಿಭಟನಾ ಉಪವಾಸ ಸತ್ಯಾಗ್ರಹ”ವಾಗಿ ಸಂಘಟಿಸಬೇಕೆಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್ಸಿಸಿ) ಕೇಂದ್ರ ಸಮಿತಿ ಕರೆ ನೀಡಿದೆ.
ಅಕ್ಟೋಬರ್ 2,2020 ರಂದು `ಪ್ರತಿಭಟನಾ ಉಪವಾಸ ಸತ್ಯಾಗ್ರಹ’ ವನ್ನು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್ಸಿಸಿ) ಕರ್ನಾಟಕ, ರಾಜ್ಯಾದ್ಯಂತ ಎಲ್ಲಾ ತಾಲ್ಲೂಕ/ಜಿಲ್ಲಾ ಕೇಂದ್ರಗಳಲ್ಲಿ ಸಂಘಟಿಸುತ್ತಿದ್ದು ರಾಜ್ಯದ ರೈತರು, ಕೃಷಿ ಕೂಲಿಕಾರರು, ಕಾರ್ಮಿಕರು, ದಲಿತರು, ಮಹಿಳಾ, ವಿದ್ಯಾರ್ಥಿ, ಯುವಜನ ಸಂಘಟನೆಗಳು, ನಾಗರೀಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಬೇಕೆಂದು ಎಐಕೆಎಸ್ಸಿಸಿ ಕೇಂದ್ರ ಸಮಿತಿ ಸದಸ್ಯ ಕೋಡಿಹಳ್ಳಿ ಚಂದ್ರಶೇಖರ್ ಮನವಿ ಮಾಡಿದ್ದಾರೆ.
ರೈತರು, ಕಾರ್ಮಿಕರು ಇತ್ಯಾದಿ ದುಡಿಯುವ ವರ್ಗಗಳ ಪ್ರತಿರೋಧವನ್ನು ಲೆಕ್ಕಿಸದೇ, ಸಂಸದೀಯ ಪ್ರಜಾಪ್ರಬುತ್ವ ನಿಯಮಗಳನ್ನು ಗಾಳಿಗೆ ತೂರಿ, ದೇಶದ ಬಹು ಸಂಖ್ಯಾತರನ್ನು ಬಾದಿಸುವ, ದೇಶದ ಆಹಾರ ಭದ್ರತೆ, ಸ್ವಾವಲಂಬನೆಗೆ, ಸ್ವಾತಂತ್ರ್ಯಕ್ಕೆ ದಕ್ಕೆಯಾಗುವ ಕಾರ್ಪೋರೇಟ್ ಕಂಪನಿಗಳ ಪರವಾದ ಧೋರಣೆಯನ್ನು ಹಿಮ್ಮೆಟ್ಟಿಸಸಲು ದುಡಿಯುವ ವರ್ಗದ ಒಗ್ಗಟ್ಟಿನ ಚಳುವಳಿ ಗಳಿಂದ ಮಾತ್ರ ಸಾಧ್ಯ ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ದೇಶದ ಸ್ವಾತಂತ್ರ್ಯಕ್ಕಾಗಿ, ಸ್ವಾವಲಂಬನೆಗಾಗಿ ತಮ್ಮ ಪ್ರಾಣವನ್ನೆ ಅರ್ಪಿಸಿದ `ರಾಷ್ಟ್ರಪಿತ ಗಾಂಧೀಜಿ’ಯವರ ಜನ್ಮ ದಿನವನ್ನು ಸಾಮ್ರಾಜ್ಯಶಾಹಿಗಳು, ಜಾಗತೀಕ ಬಂಡವಾಳಗಾರರು, ಕಾಪೋರೇಟ್ ಕಂಪನಿಗಳಿಗೆ ಈ ದೇಶವನ್ನು ಮತ್ತೆ ಗುಲಾಮರನ್ನಾಗಿ ಮಾಡುವುದಕ್ಕೆ ಬಿಡುವುದಿಲ್ಲ, ಅಂತಹ ನೀತಿಗಳನ್ನು ಹಿಂಪಡೆಯುವವರಿಗೆ ಈ ಸಂಘರ್ಷ ನಿಲ್ಲುವುದಿಲ್ಲ ಎನ್ನುವ ಪ್ರತಿಜ್ಞೆಯನ್ನು ಮಾಡುವ ಹೋರಾಟವಾಗಿ ಅಕ್ಟೋಬರ್ 2, 2020 `ಪತ್ರಿಭಟನಾ ಉಪ ಸತ್ಯಾಗ್ರಹವನ್ನು ಸಂಘಟಿಸಲಾಗುತ್ತಿದೆ ಎಂದು ಎಐಕೆಎಸ್ಸಿಸಿ ರಾಜ್ಯ ಸಂಚಾಲಕ ಜಿ.ಸಿ. ಬಯ್ಯಾರೆಡ್ಡಿ ತಿಳಿಸಿದ್ದಾರೆ.