ಗಾಂಧಿ ಹುತಾತ್ಮ ದಿನ | ಸೌಹಾರ್ದ ಕರ್ನಾಟಕದಿಂದ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮಾನವ ಸರಪಳಿ

ಬೆಂಗಳೂರು: ಗಾಂಧಿ ಹುತಾತ್ಮ ದಿನವಾದ ಜನವರಿ 30ರ ಬುಧವಾರ ಸೌಹಾರ್ದ ಪರಂಪರೆಯ ಉಳಿಸುವ, ಬೆಳೆಸುವ ಅಭಿಯಾನ ನಡೆಯಲಿದ್ದು, ಅಂದು ರಾಜ್ಯದಾದ್ಯಂತ ಸೌಹಾರ್ದ ಮಾನವ ಸರಪಳಿ ಮತ್ತು ಸೌಹಾರ್ದ ಸಭೆಗಳು ನಡೆಯಲಿವೆ ಎಂದು ‘ಸೌಹಾರ್ದ ಕರ್ನಾಟಕ’ ಗುರುವಾರ ಇಲ್ಲಿ ತಿಳಿಸಿದೆ. ನಾಡಿನ ಸೌಹಾರ್ದ ಪರಂಪರೆ ಶಾಂತಿ, ಸಾಮರಸ್ಯಗಳನ್ನು ಉಳಿಸ ಬಯಸುವ ಎಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸೌಹಾರ್ದ ಕರ್ನಾಟಕ ಕರೆ ನೀಡಿದೆ.

ಬೆಂಗಳೂರಿನಲ್ಲಿ ಸೌಹಾರ್ದ ಮಾನವ ಸರಪಳಿ ಮತ್ತು ಸೌಹಾರ್ದ ಸಭೆ ಜನವರಿ 30 ರಂದು ಸಂಜೆ 4 ಗಂಟೆಗೆ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿದೆ. 5.15 ರಿಂದ 5.20 ರವರೆಗೆ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಸೌಹಾರ್ದ ಸಭೆಯು ನಡೆಯಲಿದೆ. ಈ ವೇಳೆ ನಾಡಿನ ಹಿರಿಯ ಸಾಹಿತಿಗಳು, ಚಿಂತಕರು, ಜನ ಚಳುವಳಿಯ ಮುಖಂಡರು, ನ್ಯಾಯಾಂಗ, ವಿಜ್ಞಾನ ಮತ್ತಿತರ ಕ್ಷೇತ್ರಗಳ ಪ್ರಮುಖರು, ಸಮಾನ ಮನಸ್ಕರು ಭಾಗವಹಿಸಲಿದ್ದಾರೆ ಎಂದು ಸೌಹಾರ್ದ ಕರ್ನಾಟಕ ಹೇಳಿದೆ.

ಇದನ್ನೂ ಓದಿ: ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ 11ನೇ ಬಾರಿಗೆ ಮುಂದೂಡಿದ ಸುಪ್ರೀಂಕೋರ್ಟ್!

ಬೆಂಗಳೂರಿನ ಸೌಹಾರ್ದ ಕರ್ನಾಟಕದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಮುಖಂಡರು, “ಹಲವು ದಶಕಗಳಿಂದಲೂ ಕರ್ನಾಟಕವನ್ನು `ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಹೆಮ್ಮೆಯಿಂದ ಕರೆಯುತ್ತಾ ಬಂದ ಹಿರಿಮೆಗೆ ಈಗಾಗಲೇ ಗಂಭೀರ ಧಕ್ಕೆ ಬಂದೊದಗಿರುವುದು ನಿಚ್ಚಳವಾಗಿದೆ. ಜನರನ್ನು ಮತಾಂಧತೆಯ ಆಧಾರದಲ್ಲಿ ಜಾತಿ-ಮತಧರ್ಮಗಳ ಹೆಸರಿನಲ್ಲಿ ವಿಭಜಿಸುವ ಶಕ್ತಿಗಳಿಂದ ನಮ್ಮ ಸಾಮಾಜಿಕ ಸೌಹಾರ್ದತೆಗೆ ತೀವ್ರವಾದ ಹಾನಿಯಾಗಿದೆ. ಮತೀಯ ದ್ವೇಷ-ಹಗೆತನದ ಭಾವನೆಗಳು ಸಾಮಾನ್ಯ ಜನರ ಮನಸ್ಸನ್ನು ಆವರಿಸಿಕೊಳ್ಳುತ್ತಿರುವ ವಿಷಮ ಗಳಿಗೆಯಲ್ಲಿ ನಾವು ಹಾದು ಹೋಗುತ್ತಿದ್ದೇವೆ. ದೇವರು, ಮತಧರ್ಮ ಮುಂತಾದವುಗಳನ್ನು ಸಂಕುಚಿತ ಉದ್ದೇಶಗಳಿಗೆ ಎಗ್ಗಿಲ್ಲದೇ ಬಳಸಲಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದರು.

“ದಿನ ನಿತ್ಯದ ದ್ವೇಷ ಭಾಷೆಯಿಂದ ನಮ್ಮ ಸಾಮಾಜಿಕ, ಮತೀಯ ದ್ವೇಷದ ಜೊತೆಗೆ ಅಸ್ಪೃಶ್ಯತೆ, ಜಾತೀಯ ದಮನ, ಮಹಿಳೆಯರ ಮೇಲಿನ ದೌರ್ಜನ್ಯ, ಆರ್ಥಿಕ ಅಸಮಾನತೆಗಳ ತೀವ್ರತೆಯೂ ಸೌಹಾರ್ದದ ವಾತಾವರಣವನ್ನು ಮತ್ತಷ್ಟು ಕಲುಷಿತಗೊಳಿಸುತ್ತಿವೆ. ಇಂತಹ ಸಂದರ್ಭದಲ್ಲಿ ಶತ ಶತಮಾನಗಳ ಇತಿಹಾಸವುಳ್ಳ ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಹಾಗೂ ಜನ ಸಂಸ್ಕೃತಿಯನ್ನು ಗುರುತಿಸಿ ಅದನ್ನು ಮುನ್ನೆಲೆಗೆ ತರುವ ಐತಿಹಾಸಿಕ ಅವಶ್ಯಕತೆ ಉಂಟಾಗಿದೆ” ಎಂದು ವೇದಿಕೆ ಹೇಳಿದೆ.

“ಪ್ರಸ್ತುತ ಸಮಾಜದಲ್ಲಿ ಸ್ನೇಹಪರತೆ, ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಾಳಜಿಯುಳ್ಳವರೆಲ್ಲಾ ಒಂದೆಡೆ ಕಲೆತು, ಕುಳಿತು ಕಾರ್ಯಯೋಜನೆ ರೂಪಿಸಿ, ಸೌಹಾರ್ದತೆಯ ಸಂದೇಶವನ್ನು ಜನರ ನಡುವೆ ನಿರಂತರ ಕೊಂಡೊಯ್ಯುವ ಹಲವು ಕಾರ್ಯಕ್ರಮಗಳನ್ನು ಯೋಜಿಸಲಾಗಿದ್ದು, ಸೌಹಾರ್ದ ಪರಂಪರೆಯ ಉಳಿಸುವ, ಬೆಳೆಸುವ ಅಭಿಯಾನವನ್ನು ನಿರಂತರವಾಗಿ ನಡೆಸಲಾಗುವುದು. ನಮ್ಮ ಜನಜೀವನದಲ್ಲಿ, ಆಚಾರ ವಿಚಾರಗಳಲ್ಲಿ ಹಾಸುಹೊಕ್ಕಾಗಿರುವ ಸೌಹಾರ್ದತೆಯ ಪರಂಪರೆಯನ್ನು ಅರಿಯುವುದು, ಅಂತಹ ಮನೋಭಾವವನ್ನು ಸಮಕಾಲಿಕವಾಗಿ ರೂಪಿಸಲು ಮತ್ತು ಅದನ್ನು ಬಲಪಡಿಸಲು ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ” ಎಂದು ಸೌಹಾರ್ದ ಕರ್ನಾಟಕ ತಿಳಿಸಿದೆ.

ಇದನ್ನೂ ಓದಿ: ಮತ್ತೆ ಬಿಜೆಪಿ ಪಾಳಯ ಸೇರಿದ ಕಾಂಗ್ರೆಸ್ ಎಮ್‌ಎಲ್‌ಸಿ ಜಗದೀಶ್ ಶೆಟ್ಟರ್!

ಸೌಹಾರ್ದ ಕರ್ನಾಟಕವು ಕಳೆದ ಒಂದು ತಿಂಗಳಿನಿಂದ ‘ಕರ್ನಾಟಕ ಸೌಹಾರ್ದ ಪರಂಪರೆ’ ಕುರಿತು ಆನ್ ಲೈನ್ ಸರಣಿ ವಿಚಾರ ಉಪನ್ಯಾಸಗಳನ್ನು ನಡೆಸುತ್ತಿದ್ದು, ರಾಜ್ಯದಾದ್ಯಂತ ಹಲವೆಡೆ ಸೌಹಾರ್ದ ಸಾಹಿತ್ಯದ ಓದು ಅಭಿಯಾನ ಆರಂಭಿಸಿದೆ. ಈ ಅಭಿಯಾನಕ್ಕೆ ವ್ಯಾಪಕವಾದ ಆಯಾಮವನ್ನು ತರಲು ‘ಸೌಹಾರ್ದತೆಯ ಪರಂಪರೆ ಮತ್ತು ಸಮಕಾಲೀನತೆ’ ಎಂಬ ಘೋಷ ವಾಕ್ಯದಡಿ ವೇದಿಕೆ ರಾಜ್ಯ ಸಮಾವೇಶವನ್ನು ಜನವರಿ 11ರಂದು ಬೆಂಗಳೂರಿನಲ್ಲಿ ನಡೆಸಲಾಗಿತ್ತು.

ಮಹಾತ್ಮ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜನವರಿ 30 ರಂದು ರಾಜ್ಯದಾದ್ಯಂತ ಬೃಹತ್ ಮಾನವ ಸರಪಳಿ ಹಾಗೂ ಸೌಹಾರ್ದ ಸಭೆಯನ್ನು ಒಳಗೊಂಡಂತೆ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಸೌಹಾರ್ದ ಕರ್ನಾಟಕ ಆಯೋಜಿಸಿದೆ. ಈ ಕಾರ್ಯಕ್ರಮಗಳು ರಾಜ್ಯದಾದ್ಯಂತ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ನಡೆಯಲಿವೆ.

ಪತ್ರಿಕಾಗೋಷ್ಠಿಯಲ್ಲಿ ಸಾಹಿತಿಗಳಾದ ಡಾ.ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ.ಸಿದ್ದರಾಮಯ್ಯ,ಹೋರಾಟಗಾರರಾದ ಮಾವಳ್ಳಿ ಶಂಕರ್, ಡಾ.ಮನೋಹರಚಂದ್ರ ಪ್ರಸಾದ್, ಡಾ.ಎಸ್.ವೈ. ಗುರುಶಾಂತ್, ಪ್ರೊ. ಹೆಚ್.ಎಲ್.ಪುಷ್ಪಾ, ಬಿ.ಎಂ.ಹನೀಫ್, ಬಿ.ರಾಜಶೇಖರಮೂರ್ತಿ ಮತ್ತು ಆರ್.ರಾಮಕೃಷ್ಣ ಇದ್ದರು.

ವಿಡಿಯೊ ನೋಡಿ: ಶ್ರಮಿಕರ ಬದುಕು ಉಳಿಸಿ – ಮೋದಿ ಸರ್ಕಾರದ ವಿರುದ್ಧ ಬೀದಿಗಿಳಿದ ಕಾರ್ಮಿಕರು Janashakthi Media

Donate Janashakthi Media

Leave a Reply

Your email address will not be published. Required fields are marked *