ಗಾಂಧೀಜಿ ಪ್ರತಿಮೆ : ದೇಹ- ತಲೆ ಭಾಗಕ್ಕೆ ತಾಳೆಯೇ ಇಲ್ಲ – ವಿಕೃತ ಪ್ರತಿಮೆ ನಿರ್ಮಾಣಕ್ಕೆ ಆಕ್ರೋಶ

ಹಾಸನ :  ಹಾಸನದಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿದ್ದ ಗಾಂಧಿ ಭವನದಲ್ಲಿರುವ ಪ್ರತಿಮೆಯನ್ನು ವಿಕೃತವಾಗಿ ನಿರ್ಮಾಣ ಮಾಡುವ ಮೂಲಕ ಗಾಂಧೀಜಿಗೆ ಅವಮಾನ ಮಾಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಎಂ.ಜಿ ರಸ್ತೆಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಗಾಂಧಿ ಭವನವನ್ನು ನಿರ್ಮಾಣಮಾಡಲಾಗಿದೆ.  ದೇಹ ತಲೆ, ದೇಹದ ಭಾಗಗಳಿಗೆ ತಾಳೆಯೇ ಇಲ್ಲದಂತೆ ಮೂರ್ತಿಗಳ ನಿರ್ಮಾಣ ಮಾಡಲಾಗಿದೆ.  ಬೇಕಾಬಿಟ್ಟಿಯಾಗಿ ಕಲಾಕೃತಿಗಳನ್ನ ನಿರ್ಮಿಸಿಲಾಗಿದೆ. ಅನುಭವ ಇಲ್ಲದ ಕಲಾವಿದರಿಂದ ಕಲಾಕೃತಿ ಮಾಡಿಸಲಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಮಹಾತ್ಮ ಗಾಂಧಿ ಅವರನ್ನು ಎಲ್ಲರೂ ಬಳಸುವ ಹಣದಲ್ಲಿ ಮುದ್ರಿಸಿ ಗೌರವಿಸಲಾಗುತ್ತದೆ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅವರ ಫೋಟೋವನ್ನು ಅಳವಡಿಕೆ ಮಾಡಲಾಗುತ್ತದೆ. ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಗಾಂಧೀಜಿಗೆ ಯಾವುದೇ ಕಾರಣಕ್ಕೂ ಅವಮಾನ ಆಗದಂತೆ ದೇಶದಲ್ಲಿ ನಿಗಾವಹಿಸಲಾಗುತ್ತದೆ.  ಆದರೆ, ಹಾಸನ  ನಿರ್ಮಿಸಲಾದ ಸುಮಾರು 20 ಅಡಿ ಎತ್ತರದ ಗಾಂಧಿ ಪ್ರತಿಮೆಯನ್ನು ವಿಕೃತವಾಗಿ ನಿರ್ಮಿಸಲಾಗಿದೆ.

ಇನ್ನು ಗಾಂಧೀಜಿ ಪ್ರತಿಮೆಯಲ್ಲಿ ದೇಹದ ತಲೆ ಭಾಗ ಹಾಗೂ ದೇಹದ ಇತರೆ ಭಾಗಗಳಿಗೆ ತಾಳೆಯೇ ಇಲ್ಲದಂತೆ ಮೂರ್ತಿಯನ್ನು ನಿರ್ಮಾಣ ಮಾಡಲಾಗಿದೆ. ಬೇಕಾಬಿಟ್ಟಿಯಾಗಿ ಕಲಾಕೃತಿಗಳನ್ನ ಅನನುಭವಿ ಕಲಾವಿದರು ನಿರ್ಮಿಸಿದ್ದಾರೆ. ಕೂಡಲೆ ಮಹಾತ್ಮ ಗಾಂಧಿ ಮೂರ್ತಿ ಸರಿಮಾಡಲು ಜನರ ಆಗ್ರಹ ಮಾಡಿದ್ದಾರೆ. ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಬೇಕಿರುವ ಗಾಂಧಿ ಭವನದ ಮುಂದೆ ಇಂತಹ ವಿಕೃತ ಪ್ರತಿಮೆ ನಿರ್ಮಾಣ ಮಾಡಲಾಗಿದ್ದು, ಕೂಡಲೇ ಇಂತಹ ಪ್ರತಿಮೆ ತೆರವುಗೊಳಿಸಿ ಅಥವಾ ಪ್ರತಿಮೆ ಸರಿಪಡಿಸಿ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿಬಾಪುರನ್ನು ಕೊಲ್ಲಲು ಗೋಡ್ಸೆಗೆ ಬಂದೂಕು ಹುಡುಕಲು ಸಾವರ್ಕರ್ ಸಹಾಯ ಮಾಡಿದ್ದರು: ತುಷಾರ್‌ ಗಾಂಧಿ

ಹಿರಿಯ ಪತ್ರಕರ್ತ ಸತೀಶ್‌ ಜಿಟಿ ಫೆಸ್ಬುಕ್‌ನಲ್ಲಿ ಬರೆಯುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಹಾಸನದಲ್ಲಿ ಗಾಂಧಿ ಭವನ ಉದ್ಘಾಟನೆಗೆ ತಯಾರಾಗಿದೆ. ಅಲ್ಲಿ ಗಾಂಧಿ‌ ಹಾಗೂ ಅವರ ಸಂಗಾತಿಗಳ ಆಕೃತಿಗಳು ಎದ್ದು‌ ನಿಂತಿವೆ ಕಳೆದ ಎರಡು ಮೂರು ದಿನಗಳಿಂದ ನೋಡಿದವರೆಲ್ಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಾಂಧಿಯಂತೂ ‘ಬಾಡಿ ಬಿಲ್ಡರ್’ ತರಹ ಕಾಣ್ತಾರೆ. ಅವರ ದೇಹ ಹಾಗೂ ರುಂಡಕ್ಕೂ ಸಂಬಂಧವೇ ಇಲ್ಲ. ಉಳಿದ‌‌ ಶಿಲ್ಪಗಳಲ್ಲಿ ಕೆಲವರಂತೂ ಅಂಗ ಊನ ಆದವರಂತೆ ಕಾಣುತ್ತಾರೆ. ದೇಹದ ಅಂಗರಚನೆ ಮೂಲ ಪಾಠಗಳನ್ನೇ ಧಿಕ್ಕರಿಸಿ ಕೆತ್ತನೆ ಮಾಡಿದ್ದಾರೆ. ಶಿಲ್ಪಕಲೆಗೆ ಜಗತ್ತಿನಾದ್ಯಂತ ಹೆಸರಾಗಿರುವ‌ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಹೊಂದಿರುವ ಈ ಜಿಲ್ಲೆಯಲ್ಲಿ ಕಲೆಗೆ ಈ ಗತಿಯೇ ಎಂದು ಹಿರಿಯ ಕಲಾವಿದರು ಟೀಕೆ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ರೈತ ನಾಯಕ ಎಚ್‌ಆರ್‌ ನವೀನ್‌ಕುಮಾರ್‌ ಕೂಡಾ ಆಕ್ರೋಶ ಹೊರಹಾಕಿದ್ದು, ಹಾಸನದಲ್ಲಿ ಉದ್ಘಾಟನೆಗೆ ತಯಾರಾಗಿ ನಿಂತಿರುವ ಗಾಂಧಿ ಭವನದಲ್ಲಿ ಮಹಾತ್ಮ ಗಾಂಧಿಯವರ ಮೂರ್ತಿಗಳನ್ನು ಗಾಂಧಿಗೆ ಅವಮಾನ ಮಾಡುವ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಸಿಮೆಂಟ್ ನಿಂದ ನಿರ್ಮಿಸಿರುವ ಈ ಕಲಾಕೃತಿಗಳಲ್ಲಿ ಯಾವುದರಲ್ಲಿಯೂ ಗಾಂಧಿಯ ಹೋಲಿಕೆ ಇಲ್ಲ. ಬೇಲೂರು, ಹಳೇಬೀಡು, ಶ್ರವಣಬೆಳಗುಳದಂತಹ ಜಗದ್ವಿಖ್ಯಾತ ಶಿಲ್ಪಕಲೆಗಳ ತವರಿನಲ್ಲಿ ಈರೀತಿ ಕಲಾಕೃತಿಗಳ ಅಂದ ಕೆಡಿಸುವುದು ಗಾಂಧಿಜಿಗೂ ಅವಮಾನ, ಹಾಸನ ಜಿಲ್ಲೆಗೂ ಅವಮಾನ. ಕೂಡಲೇ ಭವನದ ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಗೊಳಿಸಬೇಕು ಮತ್ತು ಕೂಡಲೆ ಈ ಎಲ್ಲಾ ಕಲಾಕೃತಿಗಳನ್ನು ತೆರವುಗೊಳಿಸಿ ಅಂದವಾಗಿ ಗಾಂಧಿಜಿಯ ಕಲಾಕೃತಿಗಳನ್ನು ನಿರ್ಮಾಣಮಾಡಬೇಕೆಂದು ಜಿಲ್ಲಾಡಳಿತಕ್ಕೆ ಒತ್ತಾಯವನ್ನು ಮಾಡಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

 

 

Donate Janashakthi Media

Leave a Reply

Your email address will not be published. Required fields are marked *