ಗಂಡಾಳ್ವಿಕೆಯಲ್ಲಿ ಹೆಣ್ಮಕ್ಕಳ ಬೇಗುದಿ

ಎಚ್.ಆರ್. ನವೀನ್ ಕುಮಾರ್, ಹಾಸನ

ಮನೆಯಿಂದ ಹೊರಹೋಗಿ ದುಡಿಯುತ್ತಿರುವ ಬಹುತೇಕ ಹೆಣ್ಣು ಮಕ್ಕಳು ಕೆಲಸ ಮಾಡುವ ಸ್ಥಳಗಳಲ್ಲಿ ಪ್ರತ್ಯೇಕ ಶೌಚಾಲಯಗಳು ಇರುವುದಿಲ್ಲ, ಇದ್ದರೆ ಅವು ಸ್ವಚ್ಛವಾಗಿರುವುದಿಲ್ಲ, ಅವುಗಳನ್ನು ಬಳಸಿ ರೋಗಗಳನ್ನು ತರಿಸಿಕೊಳ್ಳುವುದಕ್ಕಿಂತ ಹಾಗೆ ಇರುವುದು ಒಳ್ಳೆಯದೆಂದು ನಿರ್ಧರಿಸಿ ಜಲಭಾದೆಯನ್ನು ನಿಯಂತ್ರಿಸಲು ನೀರನ್ನು ಕಡಿಮೆ ಪ್ರಮಾಣದಲ್ಲಿ ಕುಡಿಯುತ್ತಾರೆ. ಇದರಿಂದ ವಿವಿಧ ರೀತಿಯ ಆರೋಗ್ಯದ ಸಮಸ್ಯೆಗಳಾಗುತ್ತವೆ. ಇಷ್ಟು ಮಾತ್ರವಲ್ಲದೆ ಬಹುತೇಕ ಹೆಣ್ಣುಮಕ್ಕಳು ಅನುಭವಿಸುವ ಯೂರಿನ್ ಇನ್ಫೆಕ್ಷನ್ ಸಮಸ್ಯೆಗಳಿಗೆ ಶೌಚಾಲಯದ ಸುತ್ತಲಿನ ಸಮಸ್ಯೆಗಳೇ ಕಾರಣ ಎಂದು. ಗಂಡಾಳ್ವಿಕೆಯಲ್ಲಿ

ಬೆಂಗಳೂರಿನಿಂದ ಹೊರಟ ಸುಖಾಸೀನ ಹವಾನಿಯಂತ್ರಿತ ಖಾಸಗಿ ಬಸ್ಸಿನಲ್ಲಿ ರಾತ್ರಿ 10 ಗಂಟೆಗೆ ಆರಂಭವಾದ ನನ್ನ ಪಯಣ ತಲುಪಬೇಕಾದ ಊರು ತಲುಪಿದ್ದು ಬೆಳಗಿನ ಜಾವ 8 ಗಂಟೆಗೆ. ಈ ಮಧ್ಯದಲ್ಲಿನ ಪಯಣದ ಯಾತನೆ‌ ನರಕ ಸದೃಶವಾಗಿ ಪರಿಣಮಿಸಿತ್ತು.

ಮಧ್ಯರಾತ್ರಿ ಸರಿಯಾಗಿ 12.30 ರ ಆಸುಪಾಸು ನನಗೆ ಜಲಬಾದೆ ಪ್ರಾರಂಭವಾಯಿತು. ಎದ್ದು ನೋಡಿದರೆ ಸುತ್ತಲೂ ಕತ್ತಲೆ. ಎಲ್ಲರೂ ನಿದ್ರಾಸ್ಥಿತಿಯಲ್ಲಿದ್ದಾರೆ. ಕಿಟಕಿಗೆ ಮುಚ್ಚಿದ್ದ ಬಟ್ಟೆ ಸರಿಸಿ ಹೊರಗೆ ಇಣುಕಿದರೆ ನಿರ್ಜನ ಪ್ರದೇಶದ ಹೆದ್ದಾರಿಯಲ್ಲಿ ನಾವಿದ್ದ ಬಸ್ಸು ಶರವೇಗದಲ್ಲಿ ನಡೆದಿತ್ತು.

ಎಚ್ಚತ್ತವನಿಗೆ ಮತ್ತೆ ನಿದ್ದೆ ಬರಲಿಲ್ಲ. ಸ್ವಲ್ಪ ಹೊತ್ತಲ್ಲಿ ಎಲ್ಲಿಯಾದರೂ ನಿಲ್ಲಿಸಬಹುದು, ಯಾವುದಾದರೂ ಊರು ಬರಬಹುದೆಂದು‌ ಕಾದೆ. ಗಂಟೆ ಒಂದು ದಾಟಿತು. “ಏನನ್ನಾದರೂ ನಿಯಂತ್ರಿಸು ಆದರೆ ಜಲಬಾದೆಯನ್ನ ಮಾತ್ರ ನಿಯಂತ್ರಿಸಬೇಡ” ಎಂದು ನಮ್ಮ ವೈದ್ಯರು ಹೇಳಿದ ಮಾತು ನೆನಪಾಗಿ ಮಲಗಿದ್ದ ಸೀಟಿನಿಂದ ಎದ್ದು ಕೆಳಗಿಳಿದೆ. ನಾನು ಮಲಗಿದ್ದ ಎರಡು ಸೀಟಿನ‌ ಮುಂದೆಯೇ ಇರುವ ಬಾಗಿಲು ತೆಗೆದರೆ ಡ್ರೈವರ್ ಕ್ಯಾಬಿನ್. ಅಲ್ಲಿಂದ ಮೆಟ್ಟಿಲು ಇಳಿದು ಹೊರಹೋಗಬೇಕು. ಕತ್ತಲೆಯಲ್ಲಿಯೇ ಮೊಬೈಲ್ ಟಾರ್ಚ್ ಹಿಡಿದು ಮೊದಲ ಬಾಗಿಲ ಬಳಿ ಬಂದು ಬಾಗಿಲನ್ನು ಬಡಿದೆ. ಹೆದ್ದಾರಿಯಲ್ಲಿ ವೇಗವಾಗಿ ಹೋಗುತ್ತಿದ್ದ ಈ ಬಸ್ಸಿನ ಶಬ್ದಕ್ಕೆ ನಾನು ಬಡಿದ ಶಬ್ದ ಬಾಗಿಲ ಆಚೆ ದ್ವಾರಪಾಲಕನಂತೆ‌ ಕುಳಿತಿದ್ದ ಕಂಡಕ್ಟರ್‌ಗೆ ಕೇಳಿಸಲಿಲ್ಲ. ಅವನು ನಿದ್ದೆಗೆ ಜಾರಿದ್ದ ಅಂತ ಕಾಣುತ್ತೆ. ಇಷ್ಟಕ್ಕೆ ವಾಪಸ್ ಹೋಗುವ ಸ್ಥಿತಿಯಲ್ಲಿಲ್ಲದ ನಾನು ಮರಳಿ ಯತ್ನವ ಮಾಡುತ್ತಾ ಇನ್ನಷ್ಟು ಜೋರಾಗಿ ಬಾಗಿಲು ಬಡಿಯುತ್ತ ಕೂಗಿದೆ. ಆಗ ಬಾಗಿಲು ತೆರೆಯಿತು.

ಕಂಡಕ್ಟರ್ “ಏನ್ ಸರ್ ಏನಾಯ್ತು” ಅಂದ. ನಾನು “ಉಚ್ಚೆ ಹೊಯ್ಯಬೇಕು ಸ್ವಲ್ಪ ಗಾಡಿ ನಿಲ್ಲಿಸ್ಥಿರಾ” ಅಂದೆ. ಅದಕ್ಕೆ ಅವನು “ಹೈವೇಲಿ ನಿಲ್ಲಿಸೋಕೆ ಆಗಲ್ಲ ಮುಂದೆ ಎಲ್ಲಿಯಾದರೂ‌ ನಿಲ್ಲಿಸುತ್ತೇವೆ” ಅಂದ. ಈ ಮಾತುಕೇಳಿ ಬಾದೆ ಮತ್ತಷ್ಟು ಹೆಚ್ಚಾಗಿ ಸಿಟ್ಟು ನೆತ್ತಿಗೇರಿತು. ಅಲ್ಲಪ್ಪಾ 10 ಗಂಟೆಗೆ ಬೆಂಗಳೂರು ಬಿಟ್ಟಮೇಲೆ ಇಲ್ಲಿಯವರೆಗೂ ಒಂದು‌ ಕಡೆನೂ ನೀನು ನಿಲ್ಲಿಸದಿದ್ದರೆ ಹೇಗೆ ಮೊದಲೆ ಎಸಿ ಬಸ್ಸು ಬೇರೆ ಅಂದೆ. ಸ್ವಲ್ಪ ಸಮಯ ಈ ಮಾತುಗಳನ್ನು ಕೇಳಿಸಿಕೊಂಡ ಡ್ರೈವರ್ ಸ್ವಲ್ಪ ಮುಂದೆ ಹೋಗಿ ರಸ್ತೆ ಬದಿಯಲ್ಲಿ ನಿಲ್ಲಿಸಿದ. ಕೂಡಲೇ ನಾನು ಕೆಳಗಿಳಿದು ಸೂಕ್ತ ಜಾಗಕ್ಕಾಗಿ ಕಣ್ಣಾಯಿಸುತ್ತಿದ್ದೆ. ಅಷ್ಟರಲ್ಲಿ ನನ್ನ ಹಾಗೆ, ಬಸ್ಸು‌ ನಿಲ್ಲಿಸುವುದನ್ನೇ ಕಾಯುತ್ತಿದ್ದವರಂತೆ ಇನ್ನೂ 5-6 ಜನ ಬಸ್ಸಿಂದ ಕೆಳಗಿಳಿದು ತಮ್ಮ ಜಲಬಾಧೆಯನ್ನು ತೀರಿಸಿಕೊಂಡರು.

ಐದೇ ನಿಮಿಷದಲ್ಲಿ ಬಸ್ಸು ಹೊರಟಿತು.. ಮತ್ತೆ ಗಾಡವಾದ ನಿದ್ದೆ… ನಿದ್ದೆಯಲಿರುವಾಗಲೇ ಯಾರೋ ದೂರದಲ್ಲಿ ಕೂಗಿದ ಹಾಗಾಯಿತು. ಎದ್ದು ಕಣ್ಣೊರೆಸಿ‌ ನೋಡಿದರೆ ಒಂದು ಪೆಟ್ರೋಲ್ ಬಂಕ್ ಬಳಿ‌ ಬಸ್ಸು ನಿಂತಿದೆ ಕಂಡಕ್ಟರ್ ಮತ್ತೊಮ್ಮೆ ಕೂಗಿದ “ಯಾರಾದರೂ ಇಂಟ್ರುವಲ್ ಹೋಗೋದಿದ್ರೆ ಹೋಗಬಹುದು, ಮತ್ತೆ ಮಧ್ಯೆ ಎಲ್ಲೂ ನಿಲ್ಲಿಸೊಲ್ಲಾ ನೋಡಿ” ಅಂದ. ಮೊಬೈಲ್ ಆನ್ ಮಾಡಿ ನೋಡಿದರೆ ಸಮಯ ಬೆಳಗಿನ ಜಾವ 4 ಗಂಟೆ. ಈ ಬಸ್ಸಲ್ಲಿದ್ದವರೆಲ್ಲಾ ಒಬ್ಬೊಬ್ಬರಾಗಿ ಇಳಿದರು. ಇಳಿದವರೆಲ್ಲಾ ಶೌಚಾಲಯ ಎಲ್ಲಿದೆ ಎಂದು ಹುಡುಕಾಟ ನಡೆಸಿದ್ದಾರೆ. ಅಲ್ಲೆಲ್ಲಿಯೂ ಶೌಚಾಲಯದ ಕುರುಹಿಲ್ಲ. ಒಂದು ಕುರಿ ಹಳ್ಳಕ್ಕೆ ಬಿದ್ದರೆ ಉಳಿದವೆಲ್ಲಾ ಹಿಂದೆ ಮುಂದೆ ನೋಡದೆ ಅವು ಹಳ್ಳಕ್ಕೆ ಬೀಳುತ್ತವಂತಲ್ಲಾ ಹಾಗಿ ಅಷ್ಟು ಜನ ಏನು ಮಾಡಬೇಕೆಂದು ತೋಚದೆ ಹಿಂದೆ ಮುಂದೆ ನೋಡುತ್ತಿದ್ದಾಗ ದಾರಿ ತೋರುವವನಂತೆ ಒಬ್ಬ ಸ್ವಲ್ಪ ದೂರ ಹೋಗಿ ಮಸುಕಾದ ಜಾಗದಲಿ ಆಬದಿಗೆ ತಿರುಗಿ ನಿಂತ ಉಳಿದ. ಗಂಡಸರೆಲ್ಲಾ ಇದೇ ದಾರಿಯನ್ನು ಅನುಸರಿಸಿದರು. ಆದರೆ ಇಲ್ಲಿ ಸಮಸ್ಯೆ ಇರುವುದು ಹೆಂಗಸರದು, ಗಂಡಸರೇನು ಎಲ್ಲೆಂದರಲ್ಲಿ ಹೋಗಿ ತಮ್ಮ ಜಲಬಾಧೆಯನ್ನು ತೀರಿಸಿಕೊಂಡು ಬಂದರು. ಆದರೆ ಇಲ್ಲಿದ್ದ ಹೆಂಗಸರ ಕಥೆ. ಅವರ ಚಟಪಟಿಕೆ, ಆತಂಕ, ಶೌಚಾಲಯಕ್ಕೆ ಸರಿಯಾದ ಜಾಗವಿಲ್ಲದೆ ಪರದಾಡುತ್ತಿದ್ದ ಅವರ ಸಂಕಟವನ್ನು ಅಕ್ಷರಗಳಲ್ಲಿ ಕಟ್ಟಿಕೊಡಲಾಗದು. ಬೇರೆ ದಾರಿ ಕಾಣದೆ ಗಂಡಸರು ಹೋದ ವಿರುದ್ಧ ದಿಕ್ಕಿಗೆ ಅಲ್ಲಿದ್ದ ನಾಲ್ಕೈದು ಜನ ಹೆಂಗಸರು ಒಟ್ಟಿಗೆ ಮನಸ್ಸಿನಲ್ಲಿ ಬಸ್ಸಿನವರನ್ನು ಬಯ್ದುಕೊಳ್ಳುತ್ತ ಬಯಲಕಡೆ ನಡೆದರು.

ಈ ರೀತಿಯ ದೃಶ್ಯಗಳನ್ನು ನಾನು ಪಯಣಿಸುವ ಸಂದರ್ಭದಲ್ಲಿ ಹಲವು ಬಾರಿ ನೋಡಿದ್ದೇನೆ. ಸಂಬಂಧಪಟ್ಟವರ ಗಮನಕ್ಕೆ ತಂದು ಉತ್ತಮ ಶೌಚಾಲಯಗಳಿರುವ ಕಡೆ ಬ್ರೇಕ್ ಕೊಡ್ರಿ, ನಾವೇನು ಮನುಷ್ಯರಲ್ಲವಾ ಎಂದು ಜಗಳವಾಡಿದ ಉದಾಹರಣೆಗಳು ಇವೆ. ಆದರೆ ಪರಿಸ್ಥಿತಿ ಮಾತ್ರ ಇನ್ನೂ ಹಾಗೆ ಮುಂದುವರೆದಿದೆ.

ಇದನ್ನೂ ಓದಿ: ಬಯಲಕಡೆ………..!?

ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದರೆ ಕನಿಷ್ಟ‌ ಬಸ್ ನಿಲ್ದಾಣದಲ್ಲಾದರೂ ಇರುವ ಶೌಚಾಲಯಗಳನ್ನು ಬಳಸಬಹುದು. ಆದರೆ ಖಾಸಗಿ ಬಸ್ಸುಗಳಲ್ಲಿನ ರಾತ್ರಿಯಿಡೀ ಪ್ರಯಾಣ ನರಕಸದೃಶ. ಗಂಡಾಳ್ವಿಕೆಯ ಸಮಾಜದಲ್ಲಿ ಲಿಂಗಸಂವೇದನೆ ಕಳೆದುಕೊಂಡವರ ನಡುವೆ ಮಹಿಳೆಯರು ಬದುಕು ಸಾಗಿಸುವುದು ಎಷ್ಟು ಕಷ್ಟ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಇಂತಹದೊಂದು ಘಟನೆ ಸಾಕು.

ಈ ಶೌಚಾಲಯಗಳ ವಿಷಯ ಬಂದರೆ ಇನ್ನೂ ಕೆಲವು ಘಟನೆಗಳು ನೆನಪಿಗೆ ಬರುತ್ತವೆ. ಒಮ್ಮೆ ಸಂಘಟನೆಯ ಸಂಗಾತಿಗಳೆಲ್ಲಾ ಒಂದು ಕಾರ್ಯಕ್ರಮಕ್ಕೆ ಬಳ್ಳಾರಿಗೆ ಹೋಗಿದ್ದೆವು. ಬಸ್ ನಿಲ್ದಾಣದಲ್ಲಿ ಇಳಿದು ಎಲ್ಲರೂ ಶೌಚಾಲಯಕ್ಕೆ ಹೋಗಿ ಬರೋಣ ಎಂದು ಮಾತನಾಡಿಕೊಂಡೆವು. ಅಲ್ಲಿದ್ದ ಶೌಚಾಲಯದ ಮುಂದೆ ಒಂದು ಬೋರ್ಡ್ ಕಾಣಿಸಿತು. ಪುರುಷರ ಮೂತ್ರ ವಿಸರ್ಜನೆ ಉಚಿತ, ಮಹಿಳೆಯರಿಗೆ 5 ರೂ. “ಇದೇನಿದು ಮೂತ್ರ ಎಲ್ಲರದ್ದೂ ಒಂದೇ! ಅದರಲ್ಲಿ‌ ಗಂಡಸರಿಗೆ‌ ಉಚಿತ, ಹೆಂಗಸರಿಗೆ‌ ಶುಲ್ಕ‌ ಇದ್ಯಾವ ನ್ಯಾಯ?” ಎಂದು ನಮ್ಮ ಜೊತೆಯಲ್ಲಿದ್ದ ಮಹಿಳಾ ಸಂಗಾತಿಯೊಬ್ಬರು ಪ್ರಶ್ನಿಸಿದರು.

ಒಳಹೋಗಿ‌ ಬಂದ ಮೇಲೆ ಅವರ ಮುಖದಲ್ಲಿ ಏನೋ ಆತಂಕದ ಭಾವನೆ ಮೂಡಿತ್ತು. ಏನೆಂದು ಆತ್ಮೀಯವಾಗಿ ವಿಚಾರಿಸಿದಾಗ ಅವರೆಂದರು “ಈ ಶೌಚಾಲಯಗಳಲ್ಲಿ ನಾವು ಹಣ ಕೊಟ್ಟು ರೋಗಗಳನ್ನು‌ ತಂದುಕೊಳ್ಳಬೇಕಾಗುತ್ತೆ, ಒಳಗೆ ಸ್ವಲ್ಪವೂ ಸ್ವಚ್ಛವಾಗಿಲ್ಲ. ಅದಕ್ಕೆ ಸಾಮಾನ್ಯವಾಗಿ ಮಹಿಳೆಯರು ಮನೆಯಿಂದ ಹೊರಗೆ ಬಂದರೆ ಸಾರ್ವಜನಿಕ ಶೌಚಾಲಯನ್ನು ಬಳಸಲು ಹಿಂದೆ ಮುಂದೆ ನೋಡುತ್ತಾರೆ ಎಂದರು.

ಹಿಂದೆ ಏಲ್ಲೋ ಓದಿದ ನೆನಪು ಮನೆಯಿಂದ ಹೊರಹೋಗಿ ದುಡಿಯುತ್ತಿರುವ ಬಹುತೇಕ ಹೆಣ್ಣು ಮಕ್ಕಳು ಕೆಲಸ ಮಾಡುವ ಸ್ಥಳಗಳಲ್ಲಿ ಪ್ರತ್ಯೇಕ ಶೌಚಾಲಯಗಳು ಇರುವುದಿಲ್ಲ, ಇದ್ದರೆ ಅವು ಸ್ವಚ್ಛವಾಗಿರುವುದಿಲ್ಲ, ಅವುಗಳನ್ನು ಬಳಸಿ ರೋಗಗಳನ್ನು ತರಿಸಿಕೊಳ್ಳುವುದಕ್ಕಿಂತ ಹಾಗೆ ಇರುವುದು ಒಳ್ಳೆಯದೆಂದು ನಿರ್ಧರಿಸಿ ಜಲಭಾದೆಯನ್ನು ನಿಯಂತ್ರಿಸಲು ನೀರನ್ನು ಕಡಿಮೆ ಪ್ರಮಾಣದಲ್ಲಿ ಕುಡಿಯುತ್ತಾರೆ. ಇದರಿಂದ ವಿವಿಧ ರೀತಿಯ ಆರೋಗ್ಯದ ಸಮಸ್ಯೆಗಳಾಗುತ್ತವೆ. ಇಷ್ಟು ಮಾತ್ರವಲ್ಲದೆ ಬಹುತೇಕ ಹೆಣ್ಣುಮಕ್ಕಳು ಅನುಭವಿಸುವ ಯೂರಿನ್ ಇನ್ಫೆಕ್ಷನ್ ಸಮಸ್ಯೆಗಳಿಗೆ ಶೌಚಾಲಯದ ಸುತ್ತಲಿನ ಸಮಸ್ಯೆಗಳೇ ಕಾರಣ ಎಂದು.

ಗಂಡಾಳ್ವಿಕೆಯ ಈ ಸಮಾಜಕ್ಕೆ, ಮಹಿಳೆಯರಿಗೆ, ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಸ್ವಚ್ಚವಾದ, ಪ್ರತ್ಯೇಕವಾದ, ವ್ಯವಸ್ಥಿತವಾದ ಶೌಚಾಲಯಗಳ ವ್ಯವಸ್ಥೆ ಮಾಡುವ ತಾಯ್ತನ ಬರಲಿ‌…

ವಿಡಿಯೋ ನೋಡಿ: ಅಯ್ಯೋ ಹೊಟ್ಟೆನೋವು| ಹದಿಹರಯದ ಹುಡುಗಿಯರ ಮುಟ್ಟಿನ ಸಮಸ್ಯೆಗಳೇನು? ಡಾ ವೀಣಾ ಎನ್‌ ಸುಳ್ಯ ಹೇಳುವುದೇನು?

Donate Janashakthi Media

Leave a Reply

Your email address will not be published. Required fields are marked *