ತುಮಕೂರು: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಗೈರು ಹಾಜರಾಗಿದ್ದರು. ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ನೈತಿಕತೆ ಇದ್ದರೆ, ಸಂವಿಧಾನದ ಬಗ್ಗೆ ಗೌರವ ಇದ್ದರೆ, ಸಮಾಜವಾದಿ ನಂಬಿಕೆಗಳಲ್ಲಿ ಆಸಕ್ತಿ ಇದ್ದರೆ ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ದಲಿತ ಮುಖಂಡರು ಒತ್ತಾಯಿಸಿದ್ದಾರೆ.
ದಲಿತ ಮುಖಂಡರು ಮತ್ತು ಸಾರ್ವಜನಿಕರಿಂದ ವ್ಯಾಪಕ ಖಂಡನೆಗೆ ಒಳಗಾಗಿರುವ ಸಚಿವ ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಬಗ್ಗೆ ಅವರಿಗೆ ಬೇಸರವಿರಬಹುದು. ಅವರಿಗೆ ಜಿಲ್ಲಾ ಉಸ್ತುವಾರಿಯನ್ನು ವಹಿಸಬೇಕಿತ್ತು ಎಂಬುದೂ ನಮ್ಮ ಒತ್ತಾಯವೂ ಇದೆ. ಆದರೆ ಈ ವಿಷಯವನ್ನು ಮುಂದಿಟ್ಟುಕೊಂಡು ಸಂವಿಧಾನವನ್ನು ದೇಶಕ್ಕೆ ಅರ್ಪಿಸಿದ ದಿನದಂದೇ ಗಣರಾಜ್ಯೋತ್ಸವ ಕಾರ್ಯಕ್ರಮ ಬಾರದೇ ಇರುವುದು ನೋವು ತಂದಿದೆ ಎಂದು ದಲಿತ ಮುಖಂಡರು ಹೇಳಿದ್ದಾರೆ.
ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕರಾಗಿರುವ ಅವರು ಕಾನೂನು ಸಚಿವರಾಗಿದ್ದಾರೆ. ನೀರಾವರಿ ಸಚಿವರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕೆಲಸ ಮಾಡಿದ್ದರು. ಯಾಕೆ ಗೈರುಹಾಜರಿಯಾಗಿದ್ದಾರೆ ಎಂಬುದನ್ನು ಅಧಿಕಾರಿಗಳನ್ನು ದಲಿತ ಮುಖಂಡರು ಪ್ರಶ್ನಿಸುತ್ತಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಈ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂದು ಅಧಿಕಾರಿಗಳನ್ನು ಕೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಮಹಿಳಾ ಅಧಿಕಾರಿಯೊಬ್ಬರು ಸಚಿವರು ಬೇರೆ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಉದ್ಘಾಟನೆ ಕಾರ್ಯಕ್ರಮ ಎನ್ನುತ್ತಿದ್ದಂತೆಯೇ, ಪ್ರತಿಭಟನಾಕಾರರು ಗಣರಾಜ್ಯೋತ್ಸವಕ್ಕಿಂತ ಉದ್ಘಾಟನೆ ಮುಖ್ಯವಾಯಿತೇ ಎಂದು ಪ್ರಶ್ನಿಸಿದ್ದಾರೆ. ಕಾನೂನು ಸಚಿವರು ಅಂಬೇಡ್ಕರ್ ಬರೆದ ಸಂವಿಧಾನಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಹೇಳಬೇಕಾಗುತ್ತದೆ ಎಂದಿದ್ದಾರೆ. ಅದಕ್ಕೆ ಮಹಿಳಾ ಅಧಿಕಾರಿ ಮೌನಕ್ಕೆ ಜಾರಿದ್ದಾರೆ.
ದೇಶಾದ್ಯಂತ 73ನೇ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಅಂಬೇಡ್ಕರ್ ಜನವರಿ 26ರಂದು ಸಂವಿಧಾನವನ್ನು ದೇಶಕ್ಕೆ ಅರ್ಪಿಸಿದ ದಿನ. ಇಂಥ ಕಾರ್ಯಕ್ರಮಕ್ಕೆ ಸಚಿವ ಮಾಧುಸ್ವಾಮಿ ಬರಬೇಕಿತ್ತು. ನೈತಿಕತೆ ಇದ್ದರೆ, ಸಮಾಜವಾದಿಯಾಗಿದ್ದರೆ, ಸಂವಿಧಾನಕ್ಕೆ ಗೌರವ ಕೊಡುವವರು ಆಗಿದ್ದರೆ, ಕಾನೂನು ಪದವೀಧರರಾಗಿದ್ದರೆ ನೀವು ಸಚಿವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಮತ್ತೊಮ್ಮೆ ಆಗ್ರಹಿಸಿದ್ದಾರೆ.