ಚಂಡೀಗಡ: ಕೇಂದ್ರ ಬಿಜೆಪಿ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಪ್ರಸಕ್ತ ವರ್ಷದ ಜನವರಿ 26ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿಯನ್ನು ಹಮ್ಮಿಕೊಂಡಿದ್ದರು. ಆ ಸಂದರ್ಭದಲ್ಲಿ ನಡೆದ ಹಿಂಸಾಚಾರದಿಂದ ಗಂಭೀರ ಸ್ವರೂಪದ ಹಾನಿ ಸಂಭವಿಸಿತ್ತು. ಅಂದು ದೆಹಲಿ ಪೊಲೀಸರು ಹಲವರು ರೈತರನ್ನು ಬಂಧಿಸಿದ್ದರು. ಬಂಧನಕ್ಕೊಳಪಟ್ಟ 83 ಮಂದಿಗೆ ₹2 ಲಕ್ಷ ಪರಿಹಾರ ನೀಡಲಾಗುವುದು ಎಂದು ಇದೀಗ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಘೋಷಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಚರಣಜಿತ್ ಸಿಂಗ್ ಛನ್ನಿ ʻʻಮೂರು ಕೃಷಿ ಕಾಯ್ದೆಗಳು ರೈತರ ಪಾಲಿಗೆ ಕರಾಳವಾಗಿದೆ. ಆ ಮೂರು ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ನಮ್ಮ ಪಂಜಾಬ್ ಸರ್ಕಾರದ ಬೆಂಬಲ ಸದಾ ಇರುತ್ತದೆ. ಜನವರಿ 26ರಂದು ರೈತರು ಟ್ರ್ಯಾಕ್ಟರ್ ರ‍್ಯಾಲಿ ನಡೆಸಿದ್ದರು. ಅದಾದ ಬಳಿಕ 83 ರೈತರನ್ನು ದೆಹಲಿ ಪೊಲೀಸರು ಬಂಧಿಸಿದರು. ಆ 83 ಜನರಿಗೆ 2 ಲಕ್ಷ ರೂಪಾಯಿ ಪರಿಹಾರ ನೀಡಲು ನಾವು ನಿರ್ಧರಿಸಿದ್ದೇವೆʼʼ ಎಂದು ಹೇಳಿದ್ದಾರೆ.
ಇದನ್ನು ಓದಿ: 11 ನೇ ಸುತ್ತಿನ ಮಾತುಕತೆಯೂ ವಿಫಲ: 26 ರ ಗಣರಾಜ್ಯೋತ್ಸವ ಟ್ರ್ಯಾಕ್ಟರ್ ಪರೇಡ್ ಗೆ ರೈತರ ಸಿದ್ಧತೆ
‘ನಾವೆಲ್ಲರೂ ಒಟ್ಟಾಗಿ ಪಂಜಾಬ್ ಅನ್ನು ಸಮೃದ್ಧಗೊಳಿಸಬೇಕಾಗಿದೆ. ಪಂಜಾಬ್ ಕೃಷಿ ಪ್ರಧಾನ ರಾಜ್ಯ. ನಮ್ಮದು ಕಾಂಗ್ರೆಸ್ ಸರ್ಕಾರವಾಗಿದ್ದು, ರೈತಪರವಾಗಿದೆ’ ಎಂದು ಚನ್ನಿ ಹೇಳಿದ್ದಾರೆ.
ಗಣರಾಜ್ಯೋತ್ಸವ ದಿನದಂದು ನಡೆದ ರೈತರ ಟ್ರ್ಯಾಕ್ಟರ್ ರ‍್ಯಾಲಿ ಸಂದರ್ಭದಲ್ಲಿ ಕೆಂಪುಕೋಟೆ ಮೇಲೆ ಭಾರತ ಧ್ವಜದೊಂದಿಗೆ ಸಿಖ್ ಧ್ವಜವೂ ಹಾರಾಡಿ, ದೊಡ್ಡ ವಿವಾದವೇ ಸೃಷ್ಟಿಯಾಗಿತ್ತು. ಅಂದು ಪ್ರತಿಭಟನಾ ನಿರತರು ಮತ್ತು ಪೊಲೀಸರ ಮಧ್ಯೆ ಘರ್ಷಣೆ ಸಂಭವಿಸಿತ್ತು. ಹಲವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ತಿಹಾರ್ ಜೈಲಿನಲ್ಲಿ ನಮಗೆ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ಬಂಧಿತರ ಪೈಕಿ ಕೆಲವರು ಆರೋಪಿಸಿದ್ದರು.
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆಗೆ ಮುಂದಾಗಿ 1 ವರ್ಷವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರು ಮತ್ತೊಮ್ಮೆ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ಮುಂದಾಗಿದ್ದಾರೆ. ಅದರಲ್ಲೂ ಈ ಸಲ ವಿಭಿನ್ನತೆ ಇರಲಿದೆ. ನವೆಂಬರ್ 29ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಶುರುವಾಗಲಿದ್ದು, ಅಂದಿನಿಂದಲೂ ಪ್ರತಿದಿನ 500 ರೈತರು ಶಾಂತಿಯುತವಾಗಿ ಸಂಸತ್ತಿನೆಡೆಗೆ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲಿದ್ದಾರೆ.
ಇದನ್ನು ಓದಿ: ಅನ್ನದಾತನ ಪರ್ಯಾಯ ಪರೇಡ್ ಗೆ ವ್ಯಾಪಕ ಬೆಂಬಲ
ರೈತರು ದೇಶದ ವಿವಿದೆಡೆಗಳಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಕಳೆದ ವರ್ಷ ನವೆಂಬರ್ 26ರಿಂದ ದೆಹಲಿ ಗಡಿಗಳಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಅದರಲ್ಲೂ ಪಂಜಾಬ್, ಹರಿಯಾಣ ಭಾಗದ ದೊಡ್ಡ ಪ್ರಮಾಣದ ರೈತರು ಪ್ರತಿಭಟನೆ ಆರಂಭಗೊಂಡ ದಿನದಿಂದಲೂ ಭಾಗವಹಿಸುತ್ತಿದ್ದಾರೆ. ರೈತರ ಹೋರಾಟಕ್ಕೆ ಪಂಜಾಬ್ ಸರ್ಕಾರ ಬೆಂಬಲ ನೀಡುತ್ತಲೇ ಬಂದಿದೆ. ಪಂಜಾಬ್ನಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಹುದ್ದೆಗೆ ಏರಿರುವ ಚರಣಜಿತ್ ಸಿಂಗ್ ಛನ್ನಿ ಕೆಲವೇ ದಿನಗಳ ಹಿಂದೆ ರೈಲ್ವೆ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದ ರೈತರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆಯುವಂತೆ ಆದೇಶ ನೀಡಿದ್ದರು.