ಗಣರಾಜ್ಯೋತ್ಸವದಂದು ರೈತ, ಕಾರ್ಮಿಕರ ಪರ್ಯಾಯ ಪೆರೇಡ್

ಬೆಂಗಳೂರು; ಜ.15 : ದೆಹಲಿಯ ಗಡಿಯಲ್ಲಿ ಕಳೆದ 50 ದಿನಗಳಿಂದ ಚಾರಿತ್ರಿಕ ಹೋರಾಟ ನಡೆಸುತ್ತಿರುವ ಸುಮಾರು 500 ರೈತ ಸಂಘಟನೆಗಳ ವೇದಿಕೆಯಾಗಿರುವ ‘ಸಂಯುಕ್ತ ಕಿಸಾನ್ ಮೋರ್ಚಾ’ದ ಕರೆಯ ಮೇರೆಗೆ ನವದೆಹಲಿಯನ್ನು ಒಳಗೊಂಡು ದೇಶಾದ್ಯಂತ ಜನವರಿ 26, 2021 ರಂದು ‘ರೈತ-ಕಾರ್ಮಿಕರ ಪರ್ಯಾಯ ಪೆರೇಡ್’ಗಳು ನಡೆಯುತ್ತಿದ್ದು, ಇದರ ಭಾಗವಾಗಿ ಬೆಂಗಳೂರಿನಲ್ಲಿ ಸಹ ಈ ಪೆರೇಡನ್ನು ‘ಸಂಯುಕ್ತ ಹೋರಾಟ-ಕರ್ನಾಟಕ’ ಆಯೋಜಿಸುತ್ತಿದೆ ಎಂದು ಪತ್ರಿಕಾ ಗೋಷ್ಠಿ ಮೂಲಕ ತಿಳಿಸಿದೆ.

ಗಣರಾಜ್ಯೋತ್ಸವದಂದು ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಪರ್ಯಾಯ ಪೆರೇಡ್ ನಡೆಯಲಿದ್ದು, ಗಣತಂತ್ರದ ನಿಜವಾದ ಆಶಯಗಳನ್ನು ಎತ್ತಿ ಹಿಡಿಯುವ ಉದ್ದೇಶದೊಂದಿಗೆ ಜನವರಿ 26, 2021 ರಂದು ಜನ ಗಣರಾಜ್ಯೋತ್ಸವನ್ನು ಬೆಂಗಳೂರಿನಲ್ಲಿ ಸಂಘಟಿಸಲಾಗುತ್ತಿದೆ.

ಒಂದು ಸಾವಿರ ಟ್ಯಾಕ್ಟರ್‌ಗಳು, ಮೂರು ಸಾವಿರ ಕಾರು, ದ್ವಿಚಕ್ರ ವಾಹನಗಳು, ಹದಿನೈದು ಸಾವಿರಕ್ಕೂ ಮೀರಿ ರೈತರು, ದಲಿತರು, ಕಾರ್ಮಿಕರು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರ ಪರ್ಯಾಯ ಪೆರೇಡ್ ನಡೆಯಲಿದ್ದು, ಜನವರಿ 26, 2021ರ ಜನ ಗಣತಂತ್ರದ ಪರೇಡ್’ ಅಂದು ಮಧ್ಯಾಹ್ನ 12:30 ಗಂಟೆಗೆ ಆರಂಭವಾಗಿ ನಗರ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ನಡೆಯುವ ಕೇಂದ್ರೀಯ ‘ರೈತ – ಕಾರ್ಮಿಕ ಪರ್ಯಾಯ ಪೆರೇಡ್’ ನಲ್ಲಿ ರಾಜ್ಯದ ರೈತರು, ದಲಿತರು, ಕಾರ್ಮಿಕರು, ವಿದ್ಯಾರ್ಥಿ, ಯುವಜನ, ಮಹಿಳೆಯರು ಎಲ್ಲಾ ದೇಶಪ್ರೇಮಿಗಳು ಹೆಚ್ಚಿನ ಜನಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕೆಂದು ‘ಸಂಯುಕ್ತ ಹೋರಾಟ-ಕರ್ನಾಟಕ’ ಮನವಿ ಮಾಡಿದೆ.

ರಾಜ್ಯದ ಬಹುತೇಕ ರೈತ ಪರ, ದಲಿತ ಪರ, ಕಾರ್ಮಿಕರ ಪರ, ವಿದ್ಯಾರ್ಥಿ, ಯುವಜನ, ಮಹಿಳಾ ಪರವಾಗಿರುವ ಸಂಘಟನೆಗಳನ್ನು ಒಳಗೊಂಡು ರಚನೆಯಾಗಿದ್ದ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (AIKSCC), ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (JCTU) ದಲಿತ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ವಿವಿಧ ಸಮನ್ವಯ ಸಮಿತಿಗಳನ್ನು ಒಳಗೊಂಡು ದೇಶದ ಸಂದ್ಗಿದ್ದ ಪರಿಸ್ಥಿತಿಯನ್ನು ಎದುರಿಸಲು ರಚನೆಯಾಗಿರುವ ದೇಶ ಪ್ರೇಮಿ ವೇದಿಕೆಯೇ ‘ಸಂಯುಕ್ತ ಹೋರಾಟ-ಕರ್ನಾಟಕ’ ಎನ್ನುವ ವೇದಿಕೆ.

ಈ ವೇದಿಕೆಯು, ಜನವರಿ 26, 2021 ‘ಪರ್ಯಾಯ ಪೆರೇಡ್’ ನ್ನು ಸಂಘಟಿಸುತ್ತಿರುವ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ-ಕಾರ್ಮಿಕ ನೀತಿಗಳನ್ನು ಹಿಮ್ಮೆಟ್ಟಿಸುವಲ್ಲಿ ಮುಂದಿನ ದಿನಗಳಲ್ಲಿ ಒಂದು ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ಪಕ್ಷತೀತವಾಗಿ ರೈತರು, ಕಾರ್ಮಿಕರು ಇತರೆ ದುಡಿಯುವ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಕೆಲಸ ಮಾಡುವುದರ ಜೊತೆಯಲ್ಲಿಯೇ ಸಾಮಾಜಿಕ ನ್ಯಾಯ, ಕೋಮುಸಾಮರಸ್ಯ, ಸಮಾನತೆ, ಪ್ರಜಾಪ್ರಭುತ್ವವನ್ನು ಬಲಗೊಳಿಸಲು ಶ್ರಮಿಸಲಿದೆ. ‘ಸಂಯುಕ್ತ ಹೋರಾಟ-ಕರ್ನಾಟಕ’ದ ಇಂತಹ ಎಲ್ಲಾ ಪ್ರಯತ್ನಗಳಿಗೆ ರಾಜ್ಯದ ಜನತೆ ಬೆಂಬಲವನ್ನು ನೀಡಬೇಕೆಂದು ವಿನಂತಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಬಡಗಲಪುರ ನಾಗೇಂದ್ರ, ಟಿ.ಯಶವಂತ್ ಮದ್ದೂರು, ಗುರುಪ್ರಸಾದ್ ಕೆರಡಗೂಡು, ಮಾವಳ್ಳಿ ಶಂಕರ್, ಎಸ್.ಆರ್. ಹಿರೇಮಠ, ಕೆ.ವಿ. ಭಟ್, ಗೌರಮ್ಮ ಇದ್ದರು.

Donate Janashakthi Media

Leave a Reply

Your email address will not be published. Required fields are marked *