ಕೊಡಗು : ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಯನ್ನು ಬೀಳ್ಕೊಡುವ ಕೆಲಸಗಳು ನಡೆಯುತ್ತಿವೆ.
ಈ ಬಾರಿಯ ಮೈಸೂರು ದಸರಾದಲ್ಲಿ ಒಟ್ಟು 8 ಆನೆಗಳು ಪಾಲ್ಗೊಳ್ಳಲಿವೆ. ಗಜಪಡೆಗೆ ಕ್ಯಾಪ್ಟನ್ ಅಭಿಮನ್ಯು. ಉಳಿದಂತೆ ಗೋಪಾಲಸ್ವಾಮಿ, ಕಾವೇರಿ, ಧನಂಜಯ, ಅಶ್ವತ್ಥಾಮ, ಚೈತ್ರಾ, ಲಕ್ಷ್ಮಿ ಮತ್ತು ವಿಕ್ರಮ ಆನೆಗಳು ಪಾಲ್ಗೊಳ್ಳುತ್ತಿವೆ.
ಮೈಸೂರು ದಸರಾದಲ್ಲಿ ಜಂಬೂ ಸವಾರಿಗೆ ಆಯ್ಕೆ ಆಗಿದ್ದ ಕೊಡಗಿನ ಐದು ಆನೆಗಳಿಗೆ ಬೀಳ್ಕೊಡಲಾಗಿದೆ. ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ದುಬಾರೆ ಸಾಕಾನೆ ಶಿಬಿರದಿಂದ ಮೂರು ಆನೆಗಳು ಆಯ್ಕೆ ಆಗಿದ್ದವು. ಪಟ್ಟದ ಆನೆ ವಿಕ್ರಮ ಮತ್ತು ಕಾವೇರಿ ಜೊತೆಗೆ ಧನಂಜಯ ಆನೆಗಳು ಆಯ್ಕೆಯಾಗಿದ್ದವು. ಇನ್ನು ವಿರಾಜಪೇಟೆ ತಾಲ್ಲೂಕಿನ ಮತ್ತಿಗೋಡು ಸಾಕಾನೆ ಶಿಬಿರದಿಂದ ಅಂಬಾರಿ ಹೊರಲಿರುವ ಅಭಿಮನ್ಯು ಆನೆ ಮತ್ತು ಗೋಪಾಲಸ್ವಾಮಿ ಆನೆಗಳು ಆಯ್ಕೆಯಾಗಿವೆ.
ದುಬಾರೆ ಸಾಕಾನೆ ಶಿಬಿರದಲ್ಲಿ ಧನಂಜಯ, ಕಾವೇರಿ ಮತ್ತು ವಿಕ್ರಮ ಆನೆಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬಳಿಕ ಬೀಳ್ಕೊಟ್ಟರು. ಪ್ರತೀ ಬಾರಿ ಜಿಲ್ಲೆಯಿಂದ ಏಳರಿಂದ ಎಂಟು ಆನೆಗಳು ದಸರಾದಲ್ಲಿ ಭಾಗವಹಿಸುತ್ತಿದ್ದವು. ಆದರೆ ಈ ಬಾರಿ ಕೋವಿಡ್ ಸೋಂಕಿರುವ ಹಿನ್ನೆಯಲ್ಲಿ ಕೇವಲ ಐದು ಆನೆಗಳನ್ನು ಮಾತ್ರವೇ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ :90 ಕ್ಕೂ ಹೆಚ್ಚು ದೇವಸ್ಥಾನಗಳ ತೆರವಿಗೆ ಮೈಸೂರು ಮಹಾನಗರ ಪಾಲಿಕೆ ನಿರ್ಧಾರ
ದುಬಾರೆಯ ಸಾಕಾನೆ ಶಿಬಿರದಲ್ಲಿ ಆನೆಗಳಿಗೆ ಸರಳವಾಗಿ ಸಿಂಗಾರ ಮಾಡಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಪ್ರತೀ ಬಾರಿ ದಸರಾಕ್ಕೆ ತೆರಳುವಾಗ ಆನೆಗಳು ಲಾರಿ ಹತ್ತುವಾಗ ಹಿಂದೇಟು ಹಾಕುತ್ತಿದ್ದವು. ನಾ ಹೋಗುವುದಿಲ್ಲ ಎನ್ನೋ ಹಾಗೆ ಹಠಹಿಡಿದು ಲಾರಿ ಏರಲು ಸಾಕಷ್ಟು ಸತಾಯಿಸುತ್ತಿದ್ದವು. ಆದರೆ ಈ ಬಾರಿ ಆನೆಗಳು ಮಾತ್ರ ಯಾವುದೇ ಕಿರಿಕಿರಿ ಮಾಡದೆ ಸಲೀಸಾಗಿ ಲಾರಿ ಏರಿದ್ದು ನೆರದಿದ್ದ ಜನರನ್ನು ಅಚ್ಚರಿಗೊಳಿಸಿತು.
ಇನ್ನೂ ಕೋವಿಡ್ ಸೋಂಕಿನ ಆತಂಕದಿಂದಲೇ ಆನೆಗಳೊಂದಿಗೆ ಕೇವಲ ಮಾವುತರು ಮತ್ತು ಕವಾಡಿಗರಿಗೆ ಮಾತ್ರವೇ ಮೈಸೂರಿಗೆ ತೆರಳಲು ಅವಕಾಶ ನೀಡಲಾಗಿದೆ. ಆದರೆ ಮಾವುತರು ಮತ್ತು ಕವಾಡಿಗರ ಕುಟುಂಬದ ಯಾರಿಗೂ ದಸರಾದಲ್ಲಿ ಭಾಗವಹಿಸಲು ಅವಕಾಶ ನೀಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಆನೆಗಳ ಆಯ್ಕೆ ಹೇಗೆ? ಸಾಮಾನ್ಯವಾಗಿ ದಸರಾ ಬಂದರೆ ಸಾಕು ಅರಣ್ಯ ಇಲಾಖೆಯವರು ಆನೆಗಳನ್ನು ಆಯ್ಕೆ ಮಾಡಿ ಕಳುಹಿಸುತ್ತಾರೆ. ಒಂದು ವರ್ಷದಿಂದಲೇ ಯಾರನ್ನು ದಸರೆಗೆ ಕಳುಹಿಸಬಹುದು ಎನ್ನುವ ಲೆಕ್ಕಾಚಾರ ನಡೆಯುತ್ತದೆ. ಪ್ರತಿ ಶಿಬಿರಕ್ಕೆ ಅಧಿಕಾರಿಗಳು, ವೈದ್ಯರು ತೆರಳಿ ಪರಿಶೀಲನೆ ನಡೆಸುತ್ತಾರೆ. ಆನೆಗಳ ವಯಸ್ಸು, ಅದರ ಆರೋಗ್ಯ, ಚಟುವಟಿಕೆ, ಸ್ವಭಾವ ಎಲ್ಲವನ್ನೂ ಅಳೆದು ತೂಗಿ ಕೊನೆಗೆ ಗಜಪಡೆಯನ್ನು ಆಯ್ಕೆ ಮಾಡಲಾಗುತ್ತದೆ.