ಕೊಡಗು : ಕೇರಳ-ಕರ್ನಾಟಕ ಗಡಿಯಲ್ಲಿ ಕೋವಿಡ್ ನೆಗಟಿವ್ ವರದಿ ಕಡ್ಡಾಯ ವಿರೋಧಿಸಿ ತಲಪಾಡಿ, ಕೊಡಗಿನ ಕುಟ್ಟ, ಮಾಕುಟ್ಟ ಮತ್ತು ಕರಿಕೆ ಚೆಕ್ ಪೋಸ್ಟ್ ಗಳಲ್ಲಿ ಆರೋಗ್ಯ ಇಲಾಖೆ ವಿರುದ್ಧ ಜನರು ಪ್ರತಿಭಟನೆ ನಡೆಸಿದರು.
ಕೇರಳದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದಂತೆ ಕೊಡಗು ಕೇರಳ ನಡುವಿನ ಚೆಕ್ ಪೋಸ್ಟ್ ಗಳಲ್ಲಿ ಕೋವಿಡ್ ನೆಗೆಟಿವ್ ವರದಿ ನೀಡಿ ಒಳಗೆ ಬರುವಂತೆ ಕೊಡಗು ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ. ಇದು ಕೊಡಗು ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ಪ್ರಯಾಣಿಕರು ಆಕ್ರೋಶಗೊಳ್ಳುವಂತೆ ಮಾಡಿದೆ.
ಕೊಡಗಿನ ಕುಟ್ಟ, ಮಾಕುಟ್ಟ ಮತ್ತು ಕರಿಕೆ ಚೆಕ್ ಪೋಸ್ಟ್ ಗಳಲ್ಲಿ ಕೋವಿಡ್ ನೆಗೆಟಿವ್ ವರದಿ ತಪಾಸಣೆ ನಿಯಮವನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಆದರೆ ಮೂರು ಚೆಕ್ ಪೋಸ್ಟ್ ಗಳ ಮೂಲಕ ಕರ್ನಾಟಕದ ಗಡಿಭಾಗದ ನೂರಾರು ಜನರು ಹಲವು ವ್ಯವಹಾರಗಳಿಗಾಗಿ ನಿತ್ಯ ಕೇರಳಕ್ಕೆ ಹೋಗಿ ಬರುತ್ತಾರೆ. ಇಂದು ಕೂಡ ಬೆಳಿಗ್ಗೆ ಕೇರಳಕ್ಕೆ ವ್ಯವಹಾರಗಳಿಗೆ ಮತ್ತು ಕೂಲಿಗಾಗಿ ಕೇರಳಕ್ಕೆ ಹೋಗಿರುವ ಜನರು ವಾಪಾಸ್ ಕೊಡಗಿಗೆ ಬರುವ ಸಂದರ್ಭ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ನೆಗೆಟಿವ್ ವರದಿಯನ್ನು ಕೊಡುವಂತೆ ಮತ್ತು ವರದಿ ಇಲ್ಲದಿದ್ದರೆ ಆರ್ ಟಿಸಿಪಿಆರ್ ಟೆಸ್ಟ್ ಗೆ ಸ್ಥಳದಲ್ಲಿಯೇ ಸ್ವ್ಯಾಬ್ ಕೊಡುವಂತೆ ಒತ್ತಾಯಿಸಿದ್ದಾರೆ. ಮಂಗಳೂರಿನಲ್ಲೂ ಇದೇ ರೀತಿ ಪ್ರಯಾಣಿಕರಿಗೆ ತೊಂದರೆ ಕೊಡಲಾಗುತ್ತಿದೆ. ಇದು ಸರಾಯದ ಕ್ರಮವಲ್ಲ ಎಂದು ರಾಜ್ಯ ಸರಕಾರದ ನಿರ್ಧಾರಕ್ಕೆ ವಿರೊಧ ವ್ಯಕ್ತಪಡಿಸಿದ್ದಾರೆ.
ಇದರಿಂದಾಗಿ ನೂರಾರು ವಾಹನಗಳು ರಸ್ತೆಯಲ್ಲಿ ಕಿಲೋಮೀಟರ್ ಗಟ್ಟಲೆ ಸರದಿಯಲ್ಲಿ ನಿಲ್ಲುವಂತೆ ಆಗಿದೆ. ಹೀಗಾಗಿ ಜನರು ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ಥಳಕ್ಕೆ ತಹಶೀಲ್ದಾರ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದ್ದಾರೆ.
ಈ ಹೆಚ್ಚುವರಿ ನಿಯಮಗಳ ಅಳವಡಿಕೆಯಿಂದ ಸಾರ್ವಜನಿಕರಿಗೆ ಮಾತ್ರವಲ್ಲ ವ್ಯಾಪಾರಿಗಳಿಗೆ, ವಾಹನ ಸವಾರರಿಗೆ ವಿದ್ಯಾರ್ಥಿಗಳಿಗೂ ಕೂಡ ತೊಂದರೆ ಉಂಟಾಗಿದೆ. ಕೋವಿಡ್ ಲಾಕ್ ಡೌನ್ ನಿಂದಾಗಿ ಜನರು ಈಗಿನ್ನು ಚೇತರಿಸಿಕೊಳ್ಳುತ್ತಿದ್ದಾರೆ, ಕೆಲಸ ಕಳೆದುಕೊಂಡಿದ್ದ ಉದ್ಯೋಗಿಗಳಿಗೆ ತೊಂದರೆ ಉಂಟಾಗಿದೆ. ಪ್ರಮುಖವಾಗಿ ಈಗಷ್ಟೇ ವಿದ್ಯಾರ್ಥಿಗಳ ಪರೀಕ್ಷೆಗಳು ಆರಂಭಗೊಂಡಿವೆ. ಮತ್ತೆ ಕಾನೂನುಗಳನ್ನು ಜಾರಿಗೊಳಿಸಿದರೆ ಇವರೆಲ್ಲರಿಗೂ ತೊಂದರೆ ಉಂಟಾಗಲಿದೆ ಎಂದು ಆರೋಪಿಸಿದ್ದಾರೆ.