ಗದ್ದಲದಲ್ಲೇ ವ್ಯರ್ಥವಾಯಿತು ಲೋಕಸಭಾ ಅಧಿವೇಶನ: ಜೆಡಿಎಸ್‌ ವರಿಷ್ಠ ಹೆಚ್‌.ಡಿ.ದೇವೇಗೌಡ

ಬೆಂಗಳೂರು: ಲೋಕಸಭೆಯ ಮುಂಗಾರು ಅಧಿವೇಶನವು ಗದ್ದಲದಲ್ಲೇ ವ್ಯರ್ಥವಾಗಿ ಹೋಯಿತು. ಲೋಕಸಭೆಯಲ್ಲಿ ಬಿಜೆಪಿ ಬಹುಮತವಿರು ಪರಿಣಾಮವಾಗಿ  ಗಲಾಟೆಗಳ ನಡುವೆಯೇ ಕೇಂದ್ರ ಸರ್ಕಾರ ಚರ್ಚೆ ಇಲ್ಲದೆ ಮಸೂದೆಗಳನ್ನು ಪಾಸ್ ಮಾಡಿದೆ ಸಂವಿಧಾನ ತಿದ್ದುಪಡಿ ಮಸೂದೆ ಮಾತ್ರ ಮೂರು ಗಂಟೆ ಚರ್ಚೆಗೆ ನಿಗಧಿ ಮಾಡಿದ್ದರು. ನಾನು ಅದರಲ್ಲಿ ಭಾಗವಹಿಸಿದೆ. ಅದನ್ನು ಬಿಟ್ಟು ಯಾವುದರಲ್ಲೂ ನನಗೆ ಮಾತಾಡಲು ಅವಕಾಶವೇ ಸಿಗಲಿಲ್ಲ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಅಧಿವೇಶನದಲ್ಲಿ ಮಾತಾಡಲು ಅವಕಾಶ ಸಿಗಬಹುದು ಅಂತ ಕೊನೆಯವರೆಗೂ ಕಾದೆ ಆದರೆ ದುರಂತ ಅಧಿವೇಶನ ನಡೆಯಲು ಬಿಡಲಿಲ್ಲ ಆಳುವ ಪಕ್ಷ ಮತ್ತು ವಿಪಕ್ಷಗಳ ನಡುವಿನ ತಿಕ್ಕಾಟಕ್ಕೆ ಸದನ ವ್ಯರ್ಥವಾಯಿತು. ಈ ವಿಷಯದಲ್ಲಿ ನನಗೆ ತೀವ್ರ ಅಸಮಾಧಾನವಿದೆ. ಈ ಬಗ್ಗೆ ನಾನು ವಿರೋಧ ಪಕ್ಷಗಳ ನಾಯಕರೊಂದಿಗೂ ಚರ್ಚೆ ಮಾಡಿರುವೆ ಎಂದರು.

ಇದನ್ನು ಓದಿ: ಸೆಪ್ಟೆಂಬರ್ 20ರಿಂದ 30: ದೇಶಾದ್ಯಂತ ಜಂಟಿ ಪ್ರತಿಭಟನಾ ಕಾರ್ಯಾಚರಣೆಗಳು-19 ಪ್ರತಿಪಕ್ಷಗಳ ನಿರ್ಧಾರ

ಪೆಟ್ರೊಲ್ ಡಿಸೇಲ್ ಸೇರಿದಂತೆ ಯಾವುದೇ ಜನ ಸಾಮಾನ್ಯರ ಸಮಸ್ಯೆ ಬಗ್ಗೆ ನಾವು ಮಾತಾನಾಡಲು ಆಗಲಿಲ್ಲ ನನ್ನ ಪ್ರಕಾರದಲ್ಲಿ ಈ ಸಲದ ಕಲಾಪ ವ್ಯರ್ಥ. ಈ ನಡವಳಿಕೆಗಳು ರಾಜ್ಯಸಭೆಯ ನಡಾವಳಿಗಳನ್ನು ಇತಿಹಾಸದಲ್ಲಿ ನಾನು ನೋಡಿರಲಿಲ್ಲ. ರಾಜ್ಯಸಭೆಯಲ್ಲಿ ಆಡಳಿತ ಪಕ್ಷ ಹಾಗೂ ನಮ್ಮ ವಿರೋಧ ಪಕ್ಷಗಳ ಸದಸ್ಯರ ವರ್ತನೆ ಬಗ್ಗೆ ನನಗೆ ಅಸಮಾಧಾನ ಇದೆ ಎಂದು ದೇವೇಗೌಡ ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆ ಹಳಿತಪ್ಪಿದಂತಾಗಿದೆ . ಇದನ್ನ ಸರಿ ಮಾಡಬೇಕಾದ್ರೆ ಎಲ್ಲರು ಸೇರಿಯೇ ಮಾಡಬೇಕು . ಇಂತಹ ವರ್ತನೆಗಳು ಸಮಾಜಕ್ಕೆ ಒಳ್ಳೆ ಲಕ್ಷಣ ಅಲ್ಲ . ಟೇಬಲ್‌ಗಳ ಮೇಲೆ ನಿಂತು ಡ್ಯಾನ್ಸ್ ಮಾಡಿದ್ದು ನಾನು ನೋಡಿರಲಿಲ್ಲ. ನಾವು ಮುಂದಿನ ಪೀಳಿಗೆಗೆ ಯಾವ ಮಾರ್ಗದರ್ಶನ ಕೊಡುತ್ತಿದ್ದೇವೆ ಎಂದರು.

ಕೃಷ್ಣ, ಮೇಕೆದಾಟು, ಮಹಾದಾಯಿ ವಿಚಾರ

ನಮ್ಮ ಪಕ್ಷ ನೆಲ, ಜಲ, ಭಾಷೆ ಪರವಾಗಿ ಇದೆ. ನಮ್ಮ ರಾಜ್ಯದ ವಿಚಾರಗಳ ಬಗ್ಗೆ ನಮ್ಮ ಹೋರಾಟ ನಿರಂತರವಾಗಿ ಇರುತ್ತೆ.  ನಮ್ಮ ಪಕ್ಷದ ಚಟುವಟಿಕೆಗಳನ್ನ ಮುಂದುವರೆಸುತ್ತೇವೆ. ಶೀಘ್ರವೇ ಪಕ್ಷದ ನಾಯಕರ ಜೊತೆ ಸಭೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ. ಕೃಷ್ಣ ಮೇಲ್ಡಂಡೆ, ಮೇಕದಾಟು, ಮಹದಾಯಿ ವಿಚಾರವಾಗಿ ಜೆಡಿಎಸ್ ನಿಂದ ಹೋರಾಟ ನಿರಂತರವಾಗಿರುತ್ತದೆ. ನಮ್ಮ ರಾಜ್ಯದ ಹಿತಕ್ಕಾಗಿ ಹೋರಾಟ ಅನಿವಾರ್ಯವಿದೆ. ಪ್ರಾದೇಶಿಕ ಪಕ್ಷವಾಗಿ ನಮ್ಮ ರಾಜ್ಯದ ಹಿತಾಸಕ್ತಿ ಕಾಪಾಡಲು ಹೋರಾಟ ನಡೆಯಲಿದೆ ಎಂದು ಹೇಳಿದರು.

ಕೃಷ್ಣ ಮೇಲ್ಡಂಡೆ ಯೋಜನೆಗೆ ಮೀಸಲಿಟ್ಟ ಹಣದಲ್ಲಿ ಬಹುಭಾಗ ಖರ್ಚು ಮಾಡಿಲ್ಲ. ಅದರಲ್ಲಿ  ಈಗ ಮತ್ತೆ ನಿಗದಿತ ಹಣವನ್ನು ಕಡಿಮೆ ಮಾಡಲಾಗಿದೆ. ಇದಕ್ಕೂ ನ್ಯಾಯ ಸಿಗಬೇಕು. ಮೇಕೆದಾಟು ಮತ್ತು ಮಹದಾಯಿ ವಿಚಾರವಾಗಿ ನಮಗೆ ನ್ಯಾಯ ಸಿಗಬೇಕಾಗಿದೆ. ಇದಕ್ಕಾಗಿ ನಮ್ಮ ಪಕ್ಷ ಹೋರಾಟ ಹಮ್ಮಿಕೊಂಡಿದೆ. ಪಾದಯಾತ್ರೆ ಮೂಲಕ ಹೋರಾಟ ನಡೆಸಲಿದ್ದೇವೆ. ಕಾಂಗ್ರೆಸ್-ಬಿಜೆಪಿಗೆ ಹೋರಾಟ ಮಾಡುವವರಲ್ಲ. ಅವರಿಂದ ಸಮಸ್ಯೆಗಳು ಪರಿಹಾರ ಆಗುವುದಿಲ್ಲ. ಎಲ್ಲರೂ ಸರ್ಕಾರ ಮಾಡುವವರೇ ಆಗಿದ್ದಾರೆ ಎಂದು ಹೇಳಿದರು.

ಇದನ್ನು ಓದಿ: ಸಂಸತ್ ಕಲಾಪ ಮುಂದೂಡಿಕೆ-ಮಹಿಳಾ ಸದಸ್ಯರ ಮೇಲೆ ಹಲ್ಲೆ: ವಿರೋಧ ಪಕ್ಷಗಳ ಪ್ರತಿಭಟನೆ

ಸಾಂಕೇತಿಕವಾಗಿ ನಾನು ಒಂದು ದಿನ ಹೋರಾಟದಲ್ಲಿ ಭಾಗವಹಿಸುತ್ತೇನೆ. ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಹೋರಾಟ ಮುಂದುವರೆಯುತ್ತೆ ಎಂದ ದೇವೇಗೌಡರು  ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಅಂತಾರೆ. 2023ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ರಾಜ್ಯದಲ್ಲಿ ಹೋರಾಟ ಮಾಡಿ ಪಕ್ಷದ ಅಸ್ಥಿತ್ವ ಉಳಿಸಿಕೊಂಡು ನಾವು ಅಧಿಕಾರಕ್ಕೆ ಬರುತ್ತೇವೆ ಎಂದರು.

ಅಫ್ಘಾನಿಸ್ತಾನ ವಿಚಾರ

ಅಮೆರಿಕಾ ಅಧ್ಯಕ್ಷ ಜೋ ಬೈಡನ್‌ ಘಟನೆ ಬಗ್ಗೆ ಪರಾಮರ್ಶೆ ಮಾಡಿ ಅರ್ಥ ಮಾಡಿ ಸೈನ್ಯವನ್ನು ವಾಪಸ್ಸುಪಡೆಯಬೇಕಿತ್ತು. ನಮ್ಮ ದೇಶದ ಹಿತದೃಷ್ಟಿಯಿಂದ ಮಾಜಿ ಪ್ರಧಾನಿಯಾಗಿ ನಾನು ಈ ಬಗ್ಗೆ ಹೆಚ್ಚು ಮಾತಾಡೊಲ್ಲ. ನನ್ನ ಕಾಲದಲ್ಲಿ ಅಫ್ಘಾನಿಸ್ತಾನ ಪ್ರಧಾನಿಯನ್ನು ತಾಲಿಬಾನ್ ಗಳು ಓಡಿಸೇ ಬಿಟ್ಟಿದ್ದರು. ಬಿನ್ ಲಾಡೆನ್ ನನ್ನು ಒಬಾಮಾ ಸರ್ಕಾರ ಹೊಡೆದು ಹಾಕಿತ್ತು. ಆದಾದ ಬಳಿಕ ಸೇನೆ ಅಲ್ಲಿ ನೆಲೆಸಿತ್ತು. ತಾಲಿಬಾನ್ ಅಲ್ಲಲ್ಲಿ ಇದ್ದರು. ಅಮೇರಿಕಾ ಸೇನೆ ಅಲ್ಲಿಂದ ನಿರ್ಗಮಿಸಿದ ನಂತರ ಪರಿಸ್ಥಿತಿ ಬದಲಾಗಿದೆ. ಇವೆಲ್ಲ ಅಂತಾರಾಷ್ಟ್ರೀಯ ವಿಚಾರಗಳು. ವಿಶ್ವ ಸಂಸ್ಥೆ ಕೂಡಾ ತಾಲಿಬಾನ್ ವಿರುದ್ದ ಪ್ರಬಲವಾಗಿ ವಿರೋಧ ಮಾಡಿದೆ ಎಂದು ಮಾಜಿ ಪ್ರಧಾನ ಮಂತ್ರಿ ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *