ಊರ ಜನರಿಗೆ ಸಂಕಷ್ಟ : ಇದ್ದ 2 ಎಕರೆ ಜಮೀನನ್ನು ಅಡ ಇಟ್ಟ ಬಡ ರೈತ

ಗದಗ : ಸರಕಾರ ಕೋವಿಡ್ ನಿಯಂತ್ರಣಕ್ಕಾಗಿ ಲಾಕ್ಡೌನ್ ಹೆಸರಿನಲ್ಲಿ ಎಲ್ಲವನ್ನೂ ನಿರ್ಬಂಧಿಸಿದೆ. ಗ್ರಾಮೀಣ ಪ್ರದೇಶದ ಜನ ಸಂಕಷ್ಟಗಳ ಮೇಲೆ ಸಂಕಷ್ಟ ಎದುರಿಸುತ್ತಿದ್ದಾರೆ. ಸರಕಾರ ಕೈ ಚೆಲ್ಲಿ ಕುಳಿತಿದೆ. ಯಾರ ಸಹಾಯವೂ ಗ್ರಾಮೀಣ ಪ್ರದೇಶದ ಜನರಿಗೆ ಸಿಗುತ್ತಿಲ್ಲ. ಸರಕರಾದ ಈ ನಡೆ ಒಬ್ಬ ರೈತ ತನ್ನ ಜಮೀನನ್ನು ಅಡ ಇಟ್ಟು ತನ್ನ ಗ್ರಾಮದ ಜನರಿಗೆ ಸಹಾಯ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿದೆ.

ಹೌದು ಇಲ್ಲೊಬ್ಬ ಸಣ್ಣ ರೈತ ತನ್ನ ಜಮೀನನ್ನೇ ಅಡ ಇಟ್ಟು ಅದರಿಂದ ಬಂದ ಹಣದಲ್ಲಿ ನಿರ್ಗತಿಕರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಕುಂದ್ರಳ್ಳಿ ಗ್ರಾಮದ ರೈತ ರಮೇಶ್ ಮುಂದಿನಮನಿ ಅನ್ನುವ ಸಾಮಾನ್ಯ ಯುವರೈತ ಈ ಮಾನವೀತೆಯ ಕಾರ್ಯಕ್ಕೆ ಕೈ ಹಾಕಿದ್ದು ಗ್ರಾಮಸ್ಥರ ಮೆಚ್ಚುಗೆಗೆ ಕಾರಣನಾಗಿದ್ದಾನೆ.

ಎಲ್ಲೆಡೆ ಕೊರೊನಾ ತಾಂಡವ ಹಿನ್ನೆಲೆ ಅದೆಷ್ಟೋ ಬಡ ಕುಟುಂಬಗಳು ದುಡಿಯಲು‌ ಕೆಲಸ ಇಲ್ಲದ ಪರಿಣಾಮ ಜೀವನ ನಿರ್ವಹಣೆ‌ ಕಷ್ಟಕರವಾಗಿದೆ. ತಾನೂ ಕೂಡ ಒಬ್ಬ ಕೂಲಿ ಕಾರ್ಮಿಕನಾಗಿ ಮನಗಂಡಿರೋ ಯುವ ರೈತ ರಮೇಶ ಮುಂದಿನಮನಿ ಗ್ರಾಮದ ಕೂಲಿ ಕಾರ್ಮಿಕರು, ವಿಧವೆಯರು, ಅಂಗವಿಕಲರು ಹಾಗೂ ವೃದ್ಧರಿಗೆ ದಿನಸಿ ಕಿಟ್ ವಿತರಣೆ ಮಾಡಿದ್ದಾನೆ. ಸುಮಾರು 2೦೦ ಕ್ಕೂ ಹೆಚ್ಚು ಕಿಟ್ ತಯಾರಿಸಿ ಹಂಚಿಕೆ ಮಾಡಲಾಗಿದ್ದು ಒಟ್ಟು ಹನ್ನೊಂದು ದಿನಸಿ ಅವಶ್ಯಕ ಸಾಮಾಗ್ರಿಗಳನ್ನೊಳಗೊಂಡ ಆಹಾರದ ಕಿಟ್ ಹಂಚಿಕೆ ಮಾಡಿದ್ದಾನೆ.

ಈತ ಯಾವ ಗ್ರಾ.ಪಂ ಸದಸ್ಯನೂ ಅಲ್ಲ, ತಾ.ಪಂ ಸದಸ್ಯನೂ ಅಲ್ಲ. ಜೊತೆಗೆ ಯಾವುದೇ ರಾಜಕೀಯ ಹಿನ್ನೆಲೆ ಇರುವ ಪ್ರಭಾವಿ ವ್ಯಕ್ತಿಯೂ ಅಲ್ಲ. ಇತ ಸಣ್ಣ ಹಿಡುವಳಿದಾರ ರೈತನಷ್ಟೇ. ದಿನನಿತ್ಯ ಮತ್ತೊಬ್ಬರ ಹತ್ತಿರ ದುಡಿದು ಜೀವನ ನಡೆಸುವ ಗ್ರಾಮದ ಸಾಮಾನ್ಯ ರೈತ.
ತನ್ನ ಗ್ರಾಮದ ಜನರಿಗೆ ಏನಾದರೂ ತನ್ನ ಕೈಲಾದ ಸಹಾಯ ಮಾಡಬೇಕೆನ್ನುವ ಉದ್ದೇಶದಿಂದ ಎರೆಡು ಎಕರೆ ಜಮೀನಿನ ಮೂಲಕ ಸಾಲದ ರೂಪದಲ್ಲಿ ಹಣ ಪಡೆದು ಕಿಟ್ ಹಂಚಿಕೆ ಮಾಡಿದ್ದಾನೆ.

ರಮೇಶ ಅವರಿಗೆ ಎರಡು ಎಕರೆ ಹೊಲ ಇದ್ದು, ಅದನ್ನು  80 ಸಾವಿರ ರೂಪಾಯಿಗೆ ಅಡ ಇಟ್ಟಿದ್ದಾರೆ. ಬಂದ ಹಣದಲ್ಲಿ 40 ಸಾವಿರ ರೂಪಾಯಿಯನ್ನು ಗ್ರಾಮದಲ್ಲಿನ ನಿರ್ಗತಿಕರು, ವಿಧವೆಯರು, ಅಂಗವಿಕಲರು, ವೃದ್ಧರಿಗೆ ದಿನಸಿ ಕಿಟ್ ಹಂಚಲು ಬಳಸಿದ್ದಾರೆ. ಭಾನುವಾರ 200 ಜನರಿಗೆ ದಿನಸಿ ಕಿಟ್ ವಿತರಿಸಿದ್ದಾರೆ.

ದುಡಿಮೆಯಿಲ್ಲದ ಅಸಹಾಯಕತನ ನಾನೂ ಅನುಭವಿಸಿರುವೆ. ನನ್ನಂತೆ ಇರುವವರ ಕಷ್ಟಕ್ಕೆ ಕೈಲಾದಷ್ಟು ಸಹಾಯ ಮಾಡಿದರಾಯಿತು ಎಂದು ಕಿಟ್ ಹಂಚಿದ್ದೇನೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳೇ ನನಗೆ ಸ್ಫೂರ್ತಿ’ ಎಂದು ರಮೇಶ ಹೇಳುತ್ತಾರೆ.

‘ರಮೇಶ ತಾನೇ ಬಡವನಿದ್ದರೂ ಉಳಿದವರಿಗೆ ಸಹಾಯ ಮಾಡಲು ಮುಂದಾಗಿದ್ದಾನೆ. ಗ್ರಾಮದ ಯುವರೈತನ ಮಾನವಿತೆಯ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ ವ್ಯಕ್ತಪಡಿಸಿ ಶ್ರೀಮಂತರು ಸಹ ಇದೇ ರೀತಿ ಮಾನವೀಯತೆಯ ಕಾರ್ಯಕ್ಕೆ ಮುಂದಾಗಲಿ ಎಂದು ಯುವ ರೈತನನ್ನ ಹಾರೈಸಿದ್ದಾರೆ. ಒಬ್ಬ ಬಡ ರೈತ ಇದ್ದ ಜಮೀನನನ್ನು ಅಡ ಇಟ್ಟು ಸಹಾಯ ಮಾಡುವ ಸ್ಥಿತಿಯನ್ನು ಸರಕಾರ ನಿರ್ಮಾಣ ಮಾಡಿದ್ದು ಖೇದಕರ ಸಂಗತಿ. ಒಬ್ಬ ಬಡ ರೈತನಿಗೆ ಇರುವ ಕಾಳಜಿ ಸರಕಾರಕ್ಕೆ ಯಾಕೆ ಇಲ್ಲ?  ಮುಖ್ಯಮಂತ್ರಿ, ಸಚಿವರು ತಮ್ಮ ಸೌಲಭ್ಯಗಳಿಗೆ ಕೊರತೆಯಾದಾಗ ಸಾಲ ಮಾಡಿಯಾದ್ರೂ ಸೌಲಭ್ಯಗಳನ್ನು ಹೆಚ್ಚಿಸಿಕೊಂಡು ಆ ಸಾಲವನ್ನು ಜನರ ಮೇಲೆ ಹಾಕಿ ಶೋಕಿ ಮಾಡಿದ ಘಟನೆಗಳು ಸಾಕಷ್ಟು ಇವೆ.  ಸಾಲ ಮಾಡಿ ಚುನಾವಣೆ ನಡೆಸುವ ಸರಕಾರ / ರಾಜಕಾರಣಿಗಳು ಜನರ ಸಂಕಷ್ಟಕ್ಕೆ ಜೊತೆಯಾಗದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

 

Donate Janashakthi Media

Leave a Reply

Your email address will not be published. Required fields are marked *